ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿರುವ ಟೀಮ್ ಇಂಡಿಯಾಗೆ ಆಟಗಾರರ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. 3ನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಗಾಯಗೊಂಡಿದ್ದರು. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಪಂದ್ಯದ ವೇಳೆ ಜಡೇಜಾ ಗಾಯಕ್ಕೆ ತುತ್ತಾಗಿದ್ದರು. ಭಾರತದ ಮೊದಲ ಇನಿಂಗ್ಸ್ ವೇಳೆ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುವಾಗ ಎಡಗೈ ಹೆಬ್ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಸ್ಕ್ಯಾನ್ಗಾಗಿ ಕರೆದೊಯ್ಯಲಾಗಿತ್ತು. ಅಲ್ಲದೆ ಗಾಯದ ಗಂಭೀರತೆಯನ್ನು ಪರಿಗಣಿಸಿ ಜಡೇಜಾರನ್ನು ದ್ವಿತೀಯ ಇನಿಂಗ್ಸ್ನಲ್ಲಿ ಫೀಲ್ಡಿಂಗ್ಗೆ ಇಳಿಸಿರಲಿಲ್ಲ.
ಅಲ್ಲದೆ ಅಂತಿಮ ದಿನದ ಬ್ಯಾಟಿಂಗ್ಗೂ ರವೀಂದ್ರ ಜಡೇಜಾ ಅವರು ಕಣಕ್ಕಿಳಿಯಲಿಲ್ಲ. ಇದೀಗ ಜಡೇಜಾ ಅವರ ವೈದ್ಯಕೀಯ ರಿಪೋರ್ಟ್ ಬಂದಿದ್ದು, 6 ವಾರಗಳ ಕಾಲ ವಿಶ್ರಾಂತಿ ಸೂಚಿಸಲಾಗಿದೆ. ಅಂದರೆ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿಯಲಿದ್ದಾರೆ. ಇನ್ನು ಭಾರತ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿರುವ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಕಿಬ್ಬೊಟ್ಟೆಯ ಒತ್ತಡದಿಂದ ಬುಮ್ರಾ ಬಳಲುತ್ತಿದ್ದಾರೆ. ಹೀಗಾಗಿ ಇವರು ಮುಂದಿನ ಟೆಸ್ಟ್ಗೆ ಲಭ್ಯರಿಲ್ಲ ಎಂದು ಪಿಟಿಐಗೆ ಬಿಸಿಸಿಐ ಮೂಲಗಳು ತಿಳಿಸಿವೆ.
ಹೀಗಾಗಿ ಇವರಿಬ್ಬರ ಸ್ಥಾನದಲ್ಲಿ ಯಾರನ್ನು ಕಣಕ್ಕಿಳಿಸುವುದು ಎಂಬ ಚಿಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಶುರುವಾಗಿದೆ. ಜಸ್ಪ್ರೀತ್ ಬುಮ್ರಾ ಸ್ಥಾನದಲ್ಲಿ ಟಿ.ನಟರಾಜನ್ ಅವರಿಗೆ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. ಆದರೆ ಆಲ್ರೌಂಡರ್ ಆಗಿ ತಂಡದಲ್ಲಿದ್ದ ರವೀಂದ್ರ ಜಡೇಜಾ ಅವರ ಬದಲಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆಗೆ ವಾಷಿಂಗ್ಟನ್ ಸುಂದರ್ ಹೆಸರು ಕೇಳಿ ಬರುತ್ತಿದೆ.
ಏಕೆಂದರೆ ಆಸ್ಟ್ರೇಲಿಯಾ ವಿರುದ್ದ ಜಡೇಜಾ ಸ್ಪಿನ್ ಮೋಡಿ ಮೂಲಕ ಕಮಾಲ್ ಮಾಡಿದ್ದರು. ಅವರು ಹೊರಗುಳಿದರೆ ಇತ್ತ ತಂಡದಲ್ಲಿ ಆರ್. ಅಶ್ವಿನ್ ಏಕೈಕ ಸ್ಪಿನ್ನರ್ ಆಗಿ ಉಳಿಯಲಿದ್ದಾರೆ. ಹೀಗಾಗಿ ಗಬ್ಬಾ ಟೆಸ್ಟ್ನಲ್ಲಿ ಅಶ್ವಿನ್ಗೆ ಜೋಡಿಯಾಗಿ ವಾಷ್ಟಿಂಗ್ಟನ್ ಸುಂದರ್ಗೆ ಸ್ಥಾನ ನೀಡುವ ಬಗ್ಗೆ ಚಿಂತಿಸಲಾಗಿದೆ. ಇನ್ನು ವೇಗದ ವಿಭಾಗದಲ್ಲಿ ಮೊಹಮದ್ ಸಿರಾಜ್, ನವದೀಪ್ ಸೈನಿ ಜತೆಗೆ ಶಾರ್ದೂಲ್ ಠಾಕೂರ್ ಅಥವಾ ಟಿ ನಟರಾಜನ್ ಅವರಲ್ಲಿ ಒಬ್ಬರು ಕಣಕ್ಕೆ ಇಳಿಯುವುದು ಬಹುತೇಕ ಖಚಿತ.
ಹಾಗೆಯೇ ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಹಾಗೂ ಸುಂದರ್ ನಡುವೆ ಪೈಪೋಟಿ ಏರ್ಪಟ್ಟಿದೆ. ವಾಷಿಂಗ್ಟನ್ ಸುಂದರ್ ನೆಟ್ ಬೌಲರ್ ಆಗಿ ತಂಡದ ಜೊತೆಗಿದ್ದು, ಹೀಗಾಗಿ ಅವರನ್ನು ಬಳಸಿಕೊಳ್ಳಲು ಅವಕಾಶವಿದೆ. ಹಾಗೆಯೇ ಜಡೇಜಾ ಅವರು ಆಲ್ರೌಂಡರ್ ಆಗಿದ್ದರಿಂದ ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್ಗೆ ಟೀಮ್ ಮ್ಯಾನೇಜ್ಮೆಂಟ್ ಮಣೆ ಹಾಕುವ ಸಾಧ್ಯತೆ ಕೂಡ ಹೆಚ್ಚಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬ್ರಿಸ್ಬೇನ್ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಯುವ ಸ್ಪಿನ್ನರ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ.
ಜನವರಿ 15 ರಿಂದ ಭಾರತ-ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಬಿಸ್ಬೇನ್ನಲ್ಲಿ ಆರಂಭವಾಗಲಿದ್ದು, ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದರಿಂದ ಅಂತಿಮ ಟೆಸ್ಟ್ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ