• Home
 • »
 • News
 • »
 • sports
 • »
 • Jaffer, Venky- ‘ಹಿಂದೂಗಳ ಮಧ್ಯೆ ನಮಾಜ್’ ಹೇಳಿಕೆ ಕೊಟ್ಟ ವಕಾರ್​ಗೆ ಝಾಡಿಸಿದ ವಾಸಿಂ, ವೆಂಕಿ ಮತ್ತಿತರರು

Jaffer, Venky- ‘ಹಿಂದೂಗಳ ಮಧ್ಯೆ ನಮಾಜ್’ ಹೇಳಿಕೆ ಕೊಟ್ಟ ವಕಾರ್​ಗೆ ಝಾಡಿಸಿದ ವಾಸಿಂ, ವೆಂಕಿ ಮತ್ತಿತರರು

ವಕಾರ್ ಯೂನಿಸ್

ವಕಾರ್ ಯೂನಿಸ್

T20 World Cup- Waqar Younis Namaz Controversy: ಮೊಹಮ್ಮದ್ ರಿಜ್ವಾನ್ ಹಿಂದೂಗಳ ಮಧ್ಯೆ ನಮಾಜ್ ಮಾಡಿದ್ದು ನನಗಿಷ್ಟ ಆಯ್ತು ಎಂದ ವಕಾರ್ ಹೇಳಿಕೆ ವ್ಯಾಪಕ ಟೀಕೆ ಬಂದಿದೆ. ವಾಸಿಂ ಜಾಫರ್, ವೆಂಕಟೇಶ್ ಪ್ರಸಾದ್, ಹರ್ಷ ಬೋಗ್ಲೆ ಮೊದಲಾದವರ ಪ್ರತಿಕ್ರಿಯೆ ಇಲ್ಲಿದೆ.

 • Share this:

  ಬೆಂಗಳೂರು, ಅ. 27: ಮೂರು ದಿನಗಳ ಹಿಂದೆ ದುಬೈನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಐತಿಹಾಸಿಕ ಗೆಲುವು ಸಾಧಿಸಿತು. ಭಾರತದ 151 ರನ್ ಮೊತ್ತವನ್ನು ಪಾಕಿಸ್ತಾನ ವಿಕೆಟ್ ನಷ್ಟವಿಲ್ಲದೇ ಚೇಸ್ ಮಾಡಿ ಗೆದ್ದಿತು. ಆ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಅಜೇಯ 79 ರನ್ ಭಾರಿಸಿ ಪಾಕಿಸ್ತಾನಕ್ಕೆ ಸುಲಭ ಗೆಲುವು ದಕ್ಕಲು ಕಾರಣರಾದರು. ಆ ಪಂದ್ಯದಲ್ಲಿ ಪಾಕ್ ಇನ್ನಿಂಗ್ಸ್​ನ ಮಧ್ಯೆ ಮೊಹಮ್ಮದ್ ರಿಜ್ವಾನ್ ಪಿಚ್ ಬಳಿಯೇ ಕೂತು ಕೆಲ ಕ್ಷಣ ನಮಾಜ್ ಮಾಡಿದ್ದರು. ಆ ಫೋಟೋ ತಕ್ಕಮಟ್ಟಿಗೆ ವೈರಲ್ ಆಯಿತು. ಒಂದು ಕ್ರೀಡೆ ನಡೆಯುವಾಗ ಅದರಲ್ಲಿ ಧಾರ್ಮಿಕ ಆಚರಣೆಯನ್ನ ವ್ಯಕ್ತಪಡಿಸುವ ನಡವಳಿಕೆ ಸಾಮಾನ್ಯವಾಗಿ ಇರುವುದಿಲ್ಲ. ನಮಾಜ್ ಸಮಯದಲ್ಲಿ ಮುಸ್ಲಿಮರು ತಾವಿದ್ದಲ್ಲೇ ಕೆಲ ಹೊತ್ತು ಪ್ರಾರ್ಥನೆ ಕೂರುತ್ತಾರೆ. ಹೀಗಾಗಿ, ರಿಜ್ವಾನ್ ನಮಾಜ್ ಮಾಡಿದ್ದರಲ್ಲಿ ತೀರಾ ದೊಡ್ಡ ಅಚ್ಚರಿ ಏನಿರಲಿಲ್ಲ. ಇಷ್ಟೇ ಆಗಿದ್ದರೆ ವಿವಾದ ಆಗುತ್ತಿರಲಿಲ್ಲ. ಆದರೆ, ಕೆಲ ಪಾಕಿಸ್ತಾನಿಗರು ಇದಕ್ಕೆ ಇಸ್ಲಾಮೀ ಬಣ್ಣ ಕೊಟ್ಟು ಕಾಮೆಂಟ್ ಮಾಡಿದ್ದು ಬಹಳ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅದರಲ್ಲೂ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ಹೇಳಿಕೆ ವ್ಯಾಪಕ ಖಂಡನೆಗೆ ಒಳಗಾಗಿದೆ.


  ವಕಾರ್ ಹೇಳಿದ್ಧೇನು?: ಟಿವಿ ಸಂದರ್ಶನವೊಂದರಲ್ಲಿ ವಕಾರ್ ಯೂನಿಸ್ ಅವರು ಭಾರತ-ಪಾಕ್ ಪಂದ್ಯದ ಬಗ್ಗೆ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಈ ವಿವಾದಾತ್ಮಕ ಮಾತುಗಳನ್ನಾಡಿದ್ದರು. “ಸಬ್ಲೆ ಅಚ್ಛೆ ಬಾತ್ ಜೋ ರಿಜ್ವಾನ್ ನೇ ಕೀ, ಉಸ್ನೇ ಗ್ರೌಂಡ್ ಮೇ ಖಡೇ ಹೋಕೆ ನಮಾಜ್ ಪಡಿ, ಹಿಂದೂವೋಂ ಕೆ ಬೀಚ್ ಮೇ… ” (ರಿಜ್ವಾನ್ ಬಗ್ಗೆ ನನಗೆ ಇಷ್ಟವಾಗಿದ್ದು ಏನಂದರೆ, ಅವರು ಮೈದಾನದಲ್ಲಿ ನಮಾಜ್​ಗೆ ಕೂತದ್ದು, ಅದರಲ್ಲೂ ಹಿಂದೂಗಳ ಮಧ್ಯೆ. ಅದು ನನಗೆ ಬಹಳ ಬಹಳ ವಿಶೇಷ ಎನಿಸಿತು) ಎಂದು ವಕಾರ್ ಹೇಳಿಕೆ ಕೊಟ್ಟರೆಂದು ARY News ವೆಬ್​ಸೈಟ್ ವರದಿ ಮಾಡಿತು.  ಸಾಮಾನ್ಯನಲ್ಲ: ವಕಾರ್ ಯೂನಿಸ್ ಒಬ್ಬ ಸಾಮಾನ್ಯ ಕ್ರಿಕೆಟಿಗನಾಗಿರಲಿಲ್ಲ. ಇಮ್ರಾನ್ ಖಾನ್, ವಾಸಿಂ ಅಕ್ರಂ, ಮಿಯಂದಾದ್ ತಲೆಮಾರಿನಲ್ಲಿ ಪಾಕಿಸ್ತಾನದಲ್ಲಿದ್ದ ಕ್ರಿಕೆಟ್ ದಿಗ್ಗಜರ ಪೈಕಿ ಅವರೂ ಒಬ್ಬರು. ವಿಶ್ವದ ಮಹಾನ್ ವೇಗದ ಬೌಲರ್​ಗಳಲ್ಲಿ ಒಬ್ಬರಾಗಿದ್ದರು. ಅಂಥ ಕ್ರಿಕೆಟಿಗನ ಬಾಯಲ್ಲಿ ಮತಾಂಧತೆಯ ಮಾತುಗಳು ಬಂದವೆಂದು ಭಾರತದ ಬಹುತೇಕ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


  ಇದನ್ನೂ ಓದಿ: T20 World Cup- BLMಗೆ ಮಂಡಿಯೂರಲು ಒಪ್ಪದೆ ತಂಡದಿಂದಲೇ ಹೊರನಡೆದ ಡೀಕಾಕ್; ಏನಿದು ಬಿಎಲ್ಎಂ?


  ವಾಸಿಂ ಜಾಫರ್ ಆಕ್ರೋಶ:


  ವಕಾರ್ ಯೂನಿಸ್ ಅವರ ಈ ನಮಾಜ್ ಹೇಳಿಕೆಯನ್ನು ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ತೀವ್ರವಾಗಿ ಖಂಡಿಸಿದ್ದಾರೆ. ವಕಾರ್ ಅವರು ಬಹಳ ಹೀನ ಮಾತುಗಳನ್ನ ಆಡಿದ್ಧಾರೆ ಎಂದು ಜಾಫರ್ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಮುಂಬೈನ ವಾಸಿಂ ಜಾಫರ್ ಅವರು ಟೀಮ್ ಇಂಡಿಯಾದ ಮಾಜಿ ಆಟಗಾರರೂ ಹೌದು. ಭಾರತದ ದೇಶೀಯ ಕ್ರಿಕೆಟ್​ನಲ್ಲಿ ಭಾರೀ ಸಾಧನೆ ಮಾಡಿರುವ ಬ್ಯಾಟರ್ ಕೂಡ ಹೌದು.  ಲಜ್ಜೆಗೆಟ್ಟ ಮನುಷ್ಯ ಎಂದ ವೆಂಕಿ:


  ಕರ್ನಾಟಕ ಕ್ರಿಕೆಟಿಗ ಹಾಗೂ ಪಾಕಿಸ್ತಾನ ವಿರುದ್ಧ ಅನೇಕ ಅವಿಸ್ಮರಣೀಯ ಪಂದ್ಯಗಳಿಗೆ ಕಾರಣರಾಗಿರುವ ವೆಂಕಟೇಶ್ ಪ್ರಸಾದ್ ಬಹಳ ತೀಕ್ಷ್ಣ ಪದಗಳಲ್ಲಿ ವಕಾರ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ಧಾರೆ. “ಒಂದು ಕ್ರೀಡೆಯಲ್ಲಿ ಇಂಥ ಹೇಳಿಕೆ ಕೊಟ್ಟು ಜಿಹಾದಿ ಮನಃಸ್ಥಿತಿಯನ್ನು ಇನ್ನೊಂದು ಎತ್ತರಕ್ಕೆ ತೆಗೆದುಕೊಂಡುಹೋಗಿದ್ದಾರೆ. ಎಂಥ ಲಜ್ಜೆಗೆಟ್ಟ ವ್ಯಕ್ತಿ” ಎಂದು ವೆಂಕಿ ಟ್ವೀಟ್ ಮಾಡಿದ್ದಾರೆ.  ಹರ್ಷ ಬೋಗ್ಲೆ ವ್ಯಗ್ರ:


  “ವಕಾರ್ ಯೂನಿಸ್ ಅವರ ಸ್ತರದ ವ್ಯಕ್ತಿಗೆ ಇಂಥ ಹೇಳಿಕೆ ಕೊಟ್ಟಿರುವುದು ನನಗೆ ಬಹಳ ನಿರಾಶೆ ತಂದಿದೆ. ನಾವು ಇಂಥ ವಿಷಯವನ್ನು ಕಡೆಗಣಿಸಿ ಕೇವಲ ಕ್ರೀಡೆ ಬಗ್ಗೆ ಮಾತ್ರ ಮಾತನಾಡುತ್ತೇವೆ. ಹೀಗಿರುವಾಗ ಅವರಿಂದ ಈ ಮಾತುಗಳನ್ನ ಕೇಳಬೇಕಾಗಿರುವುದು ನಿಜಕ್ಕೂ ಭಯಾನಕ ಎನಿಸುತ್ತದೆ” ಎಂದು ಕ್ರಿಕೆಟ್ ವಿಶ್ಲೇಷಕ, ಕಾಮೆಂಟೇಟರ್ ಹರ್ಷ ಬೋಗ್ಲೆ ತಮ್ಮ ಸುದೀರ್ಘ ಪ್ರತಿಕ್ರಿಯೆಯಲ್ಲಿ ತಿಳಿಸಿದ್ಧಾರೆ.  ಕ್ಷಮೆ ಯಾಚಿಸಿದ ವಕಾರ್:


  ಅಷ್ಟೇ ಅಲ್ಲದೇ ಇನ್ನೂ ಹಲವು ಮಾಜಿ ಕ್ರಿಕೆಟಿಗರು, ಪತ್ರಕರ್ತರು ವಕಾರ್ ಯೂನಿಸ್ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ಧಾರೆ. ಇದೇ ವೇಳೆ, ವಕಾರ್ ಯೂನಿಸ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ಧಾರೆ.  “ಆ ಕ್ಷಣದ ಭಾವೋದ್ವೇಗದಲ್ಲಿ ನಾನು ಕೆಲ ಮಾತುಗಳನ್ನಾಡಿದೆ. ಅನೇಕ ವ್ಯಕ್ತಿಗಳ ಭಾವನೆಗಳಿಗೆ ನೋವು ತರುವ ಉದ್ದೇಶ ನನ್ನದಾಗಿರಲಿಲ್ಲ. ಇದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ… ಬಣ್ಣ, ಜನಾಂಗ, ಧರ್ಮ ಯಾವುದೇ ಇದ್ದರೂ ಕ್ರೀಡೆ ಜನರನ್ನು ಒಗ್ಗೂಡಿಸುತ್ತದೆ” ಎಂದು ವಕಾರ್ ಯೂನಿಸ್ ತಮ್ಮ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

  Published by:Vijayasarthy SN
  First published: