ಭಾರತೀಯರಿಗೆ ಸೋಲಿನ ಕಹಿ ಕಲಿಸಿಕೊಡಬೇಕಿತ್ತು: ಹಳೆಯ ನೆನಪು ಬಿಚ್ಚಿಟ್ಟ ಬಾಂಗ್ಲಾ ಬೌಲರ್

U19 World Cup High Drama: ಹಿಂದಿನ ಅಂಡರ್-19 ವಿಶ್ವಕಪ್ ಫೈನಲ್​ನಲ್ಲಿ ಭಾರತವನ್ನು ಸೋಲಿಸಿದ ಬಳಿಕ ಬಾಂಗ್ಲಾದೇಶದ ಆಟಗಾರರು ಅತಿರೇಕ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿ ವಿವಾದ ಸೃಷ್ಟಿಸಿದ್ದರು. ಆ ರೀತಿಯ ವರ್ತನೆಗೆ ಕಾರಣ ಏನೆಂದು ಅಂದಿನ ಬಾಂಗ್ಲಾ ಆಟಗಾರರೊಬ್ಬರು ಬಿಚ್ಚಿಟ್ಟಿದ್ದಾರೆ.

ಶೋರಿಫುಲ್ ಇಸ್ಲಾಮ್

ಶೋರಿಫುಲ್ ಇಸ್ಲಾಮ್

 • Share this:
  ಕೆರಿಬಿಯನ್ ನಾಡಿನಲ್ಲಿ 2022ರ ಕಿರಿಯರ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಹಾಲಿ ಚಾಂಪಿಯನ್ಸ್ ಬಾಂಗ್ಲಾದೇಶ ತಂಡ ಮತ್ತು ನಾಲ್ಕು ಬಾರಿ ಚಾಂಪಿಯನ್ಸ್ ಭಾರತ ತಂಡಗಳು ಕ್ವಾರ್ಟರ್​ಫೈನಲ್​ನಲ್ಲಿ ಸೆಣಸಲಿವೆ. ಕುತೂಹಲವೆಂದರೆ, ಕಳೆದ ಬಾರಿ ನಡೆದ 2019ರ ಅಂಡರ್-19 ವಿಶ್ವಕಪ್​ನ ಫೈನಲ್​ನಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಗೆದ್ದು ಚಾಂಪಿಯನ್ ಎನಿಸಿತ್ತು. ಈಗ ಭಾರತಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಜ. 29ರಂದು ಈ ಪಂದ್ಯ ನಡೆಯಲಿದೆ. ಇದೇ ವೇಳೆ, ಭಾರತೀಯರಿಗೆ 2019ರ ಫೈನಲ್ ಸೋಲಿನ ರುಚಿ ಬಗ್ಗೆ ಬಾಂಗ್ಲಾದೇಶ ಬೌಲರ್​ವೊಬ್ಬರು ಕುಟುಕಿದ್ದಾರೆ. ವಿಶ್ವಕಪ್ ಶುರುವಾಗುವ ಮುನ್ನ ಶೋರಿಫುಲ್ ಇಸ್ಲಾಮ್ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಮತ್ತೆ ಸದ್ದು ಮಾಡುತ್ತಿದೆ.

  2019ರ ಕಿರಿಯರ ವಿಶ್ವಕಪ್​ನ ಫೈನಲ್​ನಲ್ಲಿ ಭಾರತವನ್ನ ಸೋಲಿಸಿದ್ದ ಬಾಂಗ್ಲಾದೇಶ ತಂಡದ ಆಟಗಾರರು ಬಹಳ ಅವಮಾನಕಾರಿ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಪಂದ್ಯದ ನಂತರ ಇದು ಎರಡೂ ತಂಡಗಳ ಆಟಗಾರರ ಮಧ್ಯೆ ಕಿತ್ತಾಟಕ್ಕೂ ಕಾರಣವಾಯಿತು. ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದ ಐಸಿಸಿ ಭಾರತ ತಂಡದ ಆಕಾಶ್ ಸಿಂಗ್ ಮತ್ತು ರವಿ ಬಿಷ್ಣೋಯ್ ಅವರಿಗೆ ದಂಡ ವಿಧಿಸಿತು. ಹಾಗೆಯೇ ಬಾಂಗ್ಲಾ ಆಟಗಾರರಾದ ಶಮಿಮ್ ಹುಸೇನ್, ರಕಿಬುಲ್ ಹಸನ್ ಮತ್ತು ತೌಹೀದ್ ಹೃದಯ್ ಅವರಿಗೂ ಶಿಕ್ಷೆ ಕೊಡಲಾಯಿತು.

  ಬಾಂಗ್ಲಾ ಆಟಗಾರರ ವರ್ತನೆ ಹಿಂದೆ ಸೇಡು:

  ಅಂದು ಜೂನಿಯರ್ ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ಆಟಗಾರರ ಈ ಅತಿರೇಕದ ಸಂಭ್ರಮಾಚರಣೆ ಹಿಂದಿನ ಕಾರಣವನ್ನು ವೇಗದ ಬೌಲರ್ ಶೋರಿಫುಲ್ ಇಸ್ಲಾಮ್ ಬಿಚ್ಚಿಟ್ಟಿದ್ದಾರೆ. ಆ ವಿಶ್ವಕಪ್​ಗೆ ಮುನ್ನ ಅತ್ತಾಚೆಗಿನ 2018 ಮತ್ತು 2019ರ ಏಷ್ಯಾ ಕಪ್ ಟೂರ್ನಿಗಳಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಜಯಿಸಿತ್ತು. ಆಗ ಭಾರತೀಯ ಆಟಗಾರರು ನಡೆಸಿದ ಸಂಭ್ರಮಾಚರಣೆ ಬಾಂಗ್ಲಾದೇಶಿಗರಿಗೆ ಅತಿರೇಕ ಎನಿಸಿತಂತೆ.

  ಇದನ್ನೂ ಓದಿ: U19 World Cup: ಕ್ವಾರ್ಟರ್​ಫೈನಲ್​ನಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ; 8ರ ಘಟ್ಟ ತಲುಪಿದ ತಂಡಗಳಿವು

  ಭಾರತಕ್ಕೆ ಸೋಲಿನ ರುಚಿ ತೋರಿಸಬೇಕು. ಗೆದ್ದ ತಂಡದ ಆಟಗಾರರು ಅತಿರೇಕವಾಗಿ ಸಂಭ್ರಮಾಚರಣೆ ಮಾಡಿದರೆ ಸೋತ ತಂಡದ ಆಟಗಾರರಿಗೆ ಎಷ್ಟು ಅವಮಾನ ಆಗುತ್ತದೆ ಎಂಬ ಅನುಭವವನ್ನು ಭಾರತೀಯರಿಗೆ ತೋರಿಸಬೇಕು ಎಂಬ ಹಪಾಹಪಿ ಬಾಂಗ್ಲಾ ಜೂನಿಯರ್ ತಂಡದ ಆಟಗಾರರಲ್ಲಿ ಮೂಡಿತ್ತು. ಅದಕ್ಕೆ 2019ರ ವಿಶ್ವಕಪ್​ನಲ್ಲಿ ಅವಕಾಶ ಸಿಕ್ಕಿತು. ಫೈನಲ್​ನಲ್ಲಿ ನಾವು ಭಾರತೀಯರಿಗೆ ಹೊಟ್ಟೆ ಉರಿಯುವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದೆವು ಎಂದು ಆ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ಮಾಡಿದ್ದ ಶೋರಿಫುಲ್ ಇಸ್ಲಾಮ್ ಹೇಳಿದ್ದಾರೆ.

  “ಏಷ್ಯಾ ಕಪ್ ಸೆಮಿಫೈನಲ್ ಮತ್ತು ಏಷ್ಯಾಕ್ ಫೈನಲ್​ನಲ್ಲಿ ಎರಡು ಪಂದ್ಯಗಳನ್ನ ನಾವು ಅತೀ ಕಡಿಮೆ ಅಂತರದಲ್ಲಿ ಸೋತೆವು. ಆ ಸೋಲಿನ ಅನುಭವ ವರ್ಣಿಸಲು ಅಸಾಧ್ಯ…. ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮುನ್ನ ನಮಗೆ ಭಾರತೀಯರು ಹಿಂದೆ ಗೆದ್ದಾಗ ತೋರಿದ್ದ ವರ್ತನೆ ಮತ್ತು ನಾವು ಸೋತಾಗಿನ ಅನುಭವವೇ ರಾಚಿ ಬರುತ್ತಿತ್ತು. ಹಿಂದಿನ ರೀತಿಯ ಫಲಿತಾಂಶ ಪುನಾವರ್ತೆ ಆಗದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿತ್ತು. ಕೊನೆಯ ಎಸೆತದವರೆಗೂ ನಾವು ನಮ್ಮ ಶಕ್ತಿಮೀರಿ ಹೋರಾಡಬೇಕೆಂದು ನಿಶ್ಚಯಿಸಿದೆವು. ಆ ಪಂದ್ಯದಲ್ಲಿ ನಾವು ಗೆದ್ದ ಬಳಿಕ ಭಾರತೀಯ ಆಟಗಾರರ ಕಣ್ಣೆದುರು ಸಂಭ್ರಮಾಚರಣೆ ಮಾಡಿ ಸಂತಸ ಪಟ್ಟೆವು” ಎಂದು ಬಾಂಗ್ಲಾದೇಶದ ಡೈಲಿ ಸ್ಟಾರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಶೋರಿಫುಲ್ ಇಸ್ಲಾಮ್ ಸ್ಮರಿಸಿದ್ದಾರೆ.

  ಇದನ್ನೂ ಓದಿ: IPL ಮೆಗಾ ಹರಾಜಿಗೂ ಮುನ್ನಾ ಶಾಕ್.. ಹರಾಜಿನಿಂದ ದೂರ ಉಳಿದ ಸ್ಟಾರ್ ಆಟಗಾರರು

  ಕಿರಿಯರ ಕ್ರಿಕೆಟ್​ನಲ್ಲಿ ಭಾರತದ ಪ್ರಾಬಲ್ಯ ಅತಿ ಹೆಚ್ಚು ಇದ್ದ ಕಾಲಘಟ್ಟ ಅದು. ಭಾರತಕ್ಕೆ ಸೋಲು ಅಪರೂಪ ಆಗಿತ್ತು. ಹೀಗಾಗಿ, ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿದ ಬಳಿಕ ಭಾರತೀಯ ಆಟಗಾರರು ಜಂಭದಿಂದ ಅತಿರೇಕವಾಗಿ ವರ್ತಿಸಿದ್ದಿರಬಹುದು.

  ಈಗ ಜ. 29ರಂದು 2022ರ ಅಂಡರ್-19 ವಿಶ್ವಕಪ್​ನ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗುತ್ತಿವೆ. ಭಾರತೀಯರು ಹಿಂದಿನ ವಿಶ್ವಕಪ್ ಫೈನಲ್ ಪಂದ್ಯದ ಸೇಡು ತೀರಿಸಿಕೊಳ್ಳುತ್ತಾರಾ, ಅಥವಾ ಬಾಂಗ್ಲಾದೇಶಿಗರು ಭಾರತೀಯರಿಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸುತ್ತಾರಾ ಕಾದುನೋಡಬೇಕು.
  Published by:Vijayasarthy SN
  First published: