VVS Laxman- ದ್ರಾವಿಡ್ ಎನ್​ಸಿಎ ಸ್ಥಾನ ವಿವಿಎಸ್ ಲಕ್ಷ್ಮಣ್​ಗೆ: ಬಿಸಿಸಿಐ ಮೂಲಗಳಿಂದ ಖಚಿತ ಸುದ್ದಿ

National Cricket Academy: ವಿವಿಎಸ್ ಲಕ್ಷ್ಮಣ್ ಅವರು ಎನ್​ಸಿಎ ಮುಖ್ಯಸ್ಥರಾಗುವುದು ಖಚಿತ ಎನ್ನುತ್ತಿವೆ ಬಿಸಿಸಿಐ ಮೂಲಗಳು; ಡಿಸೆಂಬರ್ 4ರೊಳಗೆ ಅಧಿಕೃತವಾಗಿ ನೇಮಕವಾಗುವ ಸಾಧ್ಯತೆ ಇದೆ.

ವಿವಿಎಸ್ ಲಕ್ಷ್ಮಣ್

ವಿವಿಎಸ್ ಲಕ್ಷ್ಮಣ್

 • Share this:
  ಬೆಂಗಳೂರು, ನ. 14: ರಾಹುಲ್ ದ್ರಾವಿಡ್ ಅವರು ಮುಖ್ಯಸ್ಥರಾಗಿ ನಿರ್ವಹಿಸುತ್ತಿದ್ದ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ (National Cricket Academy) ಜವಾಬ್ದಾರಿಯನ್ನ ಇನ್ಮುಂದೆ ವಿವಿಎಸ್ ಲಕ್ಷ್ಮಣ್ (VVS Laxman) ಅವರಿಗೆ ವಹಿಸಲಾಗುತ್ತದೆ. ಬೆಂಗಳೂರಿನಲ್ಲಿರುವ ಎನ್​ಸಿಎಗೆ ವಿವಿಎಸ್ ಲಕ್ಷ್ಮಣ್ ಮುಖ್ಯಸ್ಥರಾಗಲಿದ್ದಾರೆ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ನ್ಯೂಸ್18ಗೆ ಖಚಿತಪಡಿಸಿದ್ದಾರೆ. ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಕೋಚ್ ಆಗಿ (Rahul Dravid Team India Coach) ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ಎನ್​ಸಿಎ ಮುಖ್ಯಸ್ಥ ಸ್ಥಾನ ಖಾಲಿ ಇದೆ. ಈ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಆಯ್ಕೆ ಆಗುವುದು ಖಚಿತ ಎಂಬಂತಹ ಸುದ್ದಿ ಹಲವು ದಿನಗಳಿಂದಲೂ ಇದೆ.

  ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗುತ್ತಾರೆನ್ನುತ್ತಿರುವಂತೆಯೇ ಎನ್​ಸಿಎ ಹುದ್ದೆಗೆ ಮೊದಲ ಕೇಳಿಬಂದದ್ದೇ ವಿವಿಎಸ್ ಲಕ್ಷ್ಮಣ್ ಅವರ ಹೆಸರೇ. ಆದರೆ, ಲಕ್ಷ್ಮಣ್ ಅವರಿಗೆ ಈ ಆಫರ್ ಕೊಟ್ಟಾಗ ಅದನ್ನ ಒಪ್ಪಲು ಮೀನ ಮೇಷ ಎಣಿಸಿದ್ದರಂತೆ. ಹೈದರಾಬಾದ್ ಬಿಟ್ಟು ಬೆಂಗಳೂರಿಗೆ ವರ್ಗವಾಗಬೇಕಾಗಬಹುದು ಎಂಬ ಕಾರಣಕ್ಕೆ ಅವರು ಇದಕ್ಕೆ ಒಪ್ಪಿರಲಿಲ್ಲ. ಯಾಕೆಂದರೆ ಎನ್​ಸಿಎ ಮುಖ್ಯಸ್ಥರಾದರೆ ಅವರು ಬೆಂಗಳೂರಿನಲ್ಲಿ ವರ್ಷಕ್ಕೆ ಕನಿಷ್ಠ 200 ದಿನಗಳಾದರೂ ಇರಬೇಕಾಗುತ್ತದೆ. ಆದರೆ, ಹಲವರ ಮನವೊಲಿಕೆ ಬಳಿಕ ಅವರು ಎನ್​ಸಿಎ ಮುಖ್ಯಸ್ಥರಾಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

  ವಿವಿಎಸ್ ಲಕ್ಷ್ಮಣ್ ಅವರು ಈಗಾಗಲೇ ಸನ್​ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಸ್ಥಾನವನ್ನು ಈಗಾಗಲೇ ತ್ಯಜಿಸಿದ್ದಾರೆ. ಟಿವಿ ಕಾಮೆಂಟರಿಯನ್ನೂ ಬಿಡುತ್ತಿದ್ದಾರೆ. ಪತ್ರಿಕೆಗಳಲ್ಲಿ ಕ್ರಿಕೆಟ್ ಸಂಬಂಧಿತ ಲೇಖನಗಳನ್ನ ಬರೆಯುವುದನ್ನೂ ಬಿಡುತ್ತಿದ್ದಾರೆ. ಎನ್​ಸಿಎ ಹುದ್ದೆ ಅಲಂಕರಿಸಿದರೆ ಹಿತಾಸಕ್ತಿ ದ್ವಂದ್ವ (Conflict of Interest) ಆಗುವ ಹಿನ್ನೆಲೆಯಲ್ಲಿ ಅವರು ಈ ತೀರ್ಮಾನ ಕೈಗೊಂಡಿರುವುದು ತಿಳಿದುಬಂದಿದೆ.

  ಯಾವಾಗ ಅಧಿಕೃತ ಆಯ್ಕೆ?

  ಡಿಸೆಂಬರ್ 4ರಂದು ಬಿಸಿಸಿಐನ ವಾರ್ಷಿಕ ಮಹಾಸಭೆ (AGM- Annual General Meeting) ನಡೆಯಲಿದೆ. ಅಷ್ಟೊರಳಗೆ ವಿವಿಎಸ್ ಲಕ್ಷ್ಮಣ್ ಅವರನ್ನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಅಧಿಕೃತವಾಗಿ ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

  ಇದನ್ನೂ ಓದಿ: T20 World Cup Champions: ಇಲ್ಲಿಯವರೆಗೂ ಟಿ-20 ವಿಶ್ವಕಪ್ ಗೆದ್ದು ಬೀಗಿದ ತಂಡಗಳು ಯಾವುವು?

  ಲಕ್ಷ್ಮಣ್-ದ್ರಾವಿಡ್ ಜೊತೆಯಾಟ ಎಂದರೆ ಕೋಲ್ಕತಾ ಟೆಸ್ಟ್ ನೆನಪು:

  ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಅವರಿಬ್ಬರು ಟೀಮ್ ಇಂಡಿಯಾದಲ್ಲಿ ಅದೆಷ್ಟೋ ಅದ್ಭುತ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಉಲ್ಲೇಖಿಸಬಹುದೆಂದರೆ 2001ರಲ್ಲಿ ಕೋಲ್ಕಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯ. ಅದೊಂದು ಟೆಸ್ಟ್ ಪಂದ್ಯ ಭಾರತೀಯ ಕ್ರಿಕೆಟ್​ಗೆ ತಿರುವು ಕೊಟ್ಟಿತು. ಟೀಮ್ ಇಂಡಿಯಾದ ಹೋರಾಟದ ಕೆಚ್ಚು ಜಗಜ್ಜಾಹೀರಾಗಿತ್ತು. ಅಲ್ಲಿಂದ ಭಾರತಕ್ಕೆ ಕ್ರಿಕೆಟ್ ಜಗತ್ತಿನಲ್ಲಿ ಗೌರವ ಹೆಚ್ಚಾಯಿತು.

  ಲಕ್ಷ್ಮಣ್ ಅಮೋಘ ಆಟ:

  ಆ ಪಂದ್ಯದಲ್ಲಿ ವಿವಿಎಸ್ ಲಕ್ಷ್ಮಣ್ ದ್ವಿಶತಕ ಇಡೀ ಪಂದ್ಯದ ಚಹರೆಯನ್ನೇ ಬದಲಿಸಿತು. ಆಸ್ಟ್ರೇಲಿಯಾದ 445 ರನ್​ಗಳ ಮೊದಲ ಇನಿಂಗ್ಸ್​ಗೆ ಪ್ರತಿಯಾಗಿ ಭಾರತ ಮೊದಲ ಇನ್ನಿಂಗ್ಸಲ್ಲಿ 171 ರನ್ ಗಳಿಸಿ ಫಾಲೋ ಆನ್ ಪಡೆಯಿತು. ಒಂದು ಹಂತದಲ್ಲಿ 113 ರನ್​ಗೆ 8 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಪ್ರತಿಹೋರಾಟ ಆರಂಭಿಸಿದ್ದು ಲಕ್ಷ್ಮಣ್ ಅವರೆಯೇ. ಅವರು ಬಾಲಂಗೋಚಿ ಬ್ಯಾಟುಗಾರರೊಂದಿಗೆ ಆಡಿ ಅರ್ಧಶತಕ ಗಳಿಸಿದ ಪರಿಣಾಮ 171 ರನ್ ಗಳಿಸಿತು.

  ಇದನ್ನೂ ಓದಿ: Miracle- ಮೊಹಮ್ಮದ್ ರಿಜ್ವಾನ್ ಐಸಿಯುನಿಂದ ಚೇತರಿಸಿಕೊಂಡು ಬಂದಿದ್ದೇ ಪವಾಡ ಎಂದ ವೈದ್ಯರು

  ಎರಡನೇ ಇನ್ನಿಂಗ್ಸಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 657 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ 6ನೇ ವಿಕೆಟ್​ಗೆ 376 ರನ್ ಜೊತೆಯಾಟ ಆಡಿದರು. ಭಾರತ ಒಟ್ಟಾರೆ 383 ರನ್ ಮುನ್ನಡೆ ಪಡೆಯಿತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸಲ್ಲಿ 212 ರನ್​ಗೆ ಆಲೌಟ್ ಆಯಿತು. ಇದು ವಿಶ್ವ ಕ್ರಿಕೆಟ್ ಚರಿತ್ರೆಯಲ್ಲಿ ದಾಖಲಾದ ಅವಿಸ್ಮರಣೀಯ ಪಂದ್ಯಗಳಲ್ಲಿ ಒಂದೆನಿಸಿದೆ. ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಕಂಡ ಅದ್ಭುತ ಟೆಸ್ಟ್ ಪಂದ್ಯವೆಂದು ಬಣ್ಣಿತವಾಗಿದೆ.

  ಮತ್ತೊಮ್ಮೆ ದ್ರಾವಿಡ್-ಲಕ್ಷ್ಮಣ್ ಜೊತೆಯಾಟ:

  ಇಂಥ ಅಮೋಘ ಗೆಲುವಿಗೆ ಜೊತೆಯಾಗಿದ್ದ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಇದೀಗ ಕೋಚಿಂಗ್ ಕ್ಷೇತ್ರದಲ್ಲಿ ಜೊತೆಯಾಟ ಆಡಲಿದ್ದಾರೆ. ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮತ್ತು ಎನ್​ಸಿಎ ಮುಖ್ಯಸ್ಥರಾಗಿ ವಿವಿಎಸ್ ಲಕ್ಷ್ಮಣ್ ಇಬ್ಬರೂ ಪೂರಕವಾಗಿ ಕೆಲಸ ಮಾಡಬೇಕಾಗುತ್ತದೆ.

  ಲಕ್ಷ್ಮಣ್​ಗೆ ಗುರುತರ ಹೊಣೆಗಾರಿಕೆ:

  ಭಾರತದ ಕಿರಿಯರ ತಂಡ ಹಾಗೂ ಎ ತಂಡಗಳನ್ನ ಸಜ್ಜುಗೊಳಿಸುವ ಜವಾಬ್ದಾರಿಯೂ ವಿವಿಎಸ್ ಲಕ್ಷ್ಮಣ್​ಗೆ ಇದೆ. ಭವಿಷ್ಯದ ಕ್ರಿಕೆಟಿಗರನ್ನು ಬೆಳೆಸುವ ದೃಷ್ಟಿಯಲ್ಲಿ ಎನ್​ಸಿಎ ಬಹಳ ಮುಖ್ಯ. ಅಲ್ಲದೇ ಆಟಗಾರರ ಪುನಶ್ಚೇತನ ಕಾರ್ಯ, ಆಟದ ಟೆಕ್ನಿಕ್​ಗಳ ತಿದ್ದುವಿಕೆ ಇತ್ಯಾದಿ ಮಹತ್ವದ ಕೆಲಸ ಎನ್​ಸಿಎಯಲ್ಲಿ ನಡೆಯುತ್ತವೆ. ಹೀಗಾಗಿ, ವಿವಿಎಸ್ ಲಕ್ಷ್ಮಣ್ ಅವರಿಗೆ ಸಿಗಲಿರುವುದು ಬಹಳ ಹೊಣೆಗಾರಿಕೆಯ ಜವಾಬ್ದಾರಿ. ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕಿಂತಲೂ ಇದು ಮಹತ್ವದ್ದು ಎನ್ನಲಾಗುತ್ತದೆ.
  Published by:Vijayasarthy SN
  First published: