T20 World Cup- ಭಾರತದ ಆಟಗಾರರಲ್ಲಿ ಮೊದಲ ಬಾರಿಗೆ ಭಯ ಕಂಡೆ: ವಿವಿಎಸ್ ಲಕ್ಷ್ಮಣ್

T20 World Cup- ಪಾಕಿಸ್ತಾನ ವಿರುದ್ಧದ ಸೋಲು ಭಾರತದ ಆಟಗಾರರ ಜಂಘಾಬಲ ಉಡುಗಿಸಿದಂತಿತ್ತು. ಇದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರ ಚಹರೆಯಿಂದಲೇ ಗೊತ್ತಾಗುತ್ತಿತ್ತು. ವಿವಿಎಸ್ ಲಕ್ಷ್ಮಣ್ ಅವರೂ ಈ ಅಂಶವನ್ನು ಗುರುತಿಸಿದ್ದಾರೆ.

ವಿವಿಎಸ್​ ಲಕ್ಷ್ಮಣ್.

ವಿವಿಎಸ್​ ಲಕ್ಷ್ಮಣ್.

 • Share this:
  ನವದೆಹಲಿ: ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಸತತ ಎರಡು ಸೋಲನುಭವಿಸಿ ಟೂರ್ನಿಯಿಂದ ನಿರ್ಗಮನದ ಹಾದಿಯಲ್ಲಿದೆ. ಭಾನುವಾರ ನಡೆದ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಹೀನಾಯ ಸೋಲನುಭವಿಸಿತು. ಈ ಸತತ ಸೋಲುಗಳಿಗೆ ನಾನಾ ಕಾರಣಗಳನ್ನ ನೀಡಲಾಗಿದೆ. ಭಾರತದ ತಂಡಕ್ಕೆ ಧೈರ್ಯದ ಕೊರತೆ ಇತ್ತು ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯಕ್ಕೆ ಪೂರಕವೆಂಬಂತೆ ವಿವಿಎಸ್ ಲಕ್ಷ್ಮಣ್ ಕೂಡ ಭಾರತದ ಪಾಳಯದಲ್ಲಿದ್ದ ಭೀತಿಯನ್ನ ಗುರುತಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾಗೆ ಅವರು ಬರೆದ ಲೇಖನದಲ್ಲಿ ಟೀಮ್ ಇಂಡಿಯಾ ಆಟಗಾರರ ಮನಃಸ್ಥಿತಿಯನ್ನ ಸವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ.

  “ನ್ಯೂಜಿಲೆಂಡ್ ವಿರುದ್ಧ ಭಾರತದ ಬ್ಯಾಟಿಂಗ್ ನಿರಾಸೆಯಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬರುವ ವಿಚಾರ. ಕಳೆದ ಕೆಲ ತಿಂಗಳಲ್ಲಿ ಹಲವು ಬಾರಿ ಭಾರತ ತಂಡ ಸಂಕಷ್ಟದ ಸ್ಥಿತಿಯಿಂದ ಪುಟಿದೆದ್ದು ನಿಂತಿದ್ದ ನಿದರ್ಶನಗಳಿವೆ. ಆ ಸಂದರ್ಭದಲ್ಲಿ ಅದು ಬೇರೆ ಮಾದರಿಯ ಕ್ರಿಕೆಟ್ ಪಂದ್ಯಗಳಿರಬಹುದು. ಆದರೆ, ಭಾರತ ತಂಡ ಆತ್ಮವಿಶ್ವಾಸದಿಂದ ಆಡಬಲ್ಲುದು ಎಂದು ಯಾರಾದರೂ ನಿರೀಕ್ಷಿಸಿರುತ್ತಾರೆ. ಆದರೆ, ಭಾನುವಾರದ ಪಂದ್ಯದಲ್ಲಿ ಆ ಅಂಶ ಟೀಮ್ ಇಂಡಿಯಾದಲ್ಲಿ ಕಾಣೆಯಾಗಿತ್ತು.

  ಎಲ್ಲಾ ಪೂರಕವಾಗಿದ್ದೂ ವಿಫಲವಾಗಿದ್ದು ಆಶ್ಚರ್ಯ:

  ”ವಿಶ್ವಕಪ್​ಗೆ ಮುನ್ನ ಭಾರತಕ್ಕೆ ಪೂರಕವಾದ ಅನೇಕ ಅಂಶಗಳಿದ್ದವು. ಅನುಭವ, ಪ್ರತಿಭೆ, ಹಾಗೂ ಟಿ20 ವಿಶ್ವಕಪ್​ನ ನಿರೀಕ್ಷೆಯ ಅರಿವು ಇವೆಲ್ಲವೂ ಇತ್ತು. ಯುಎಇಯಲ್ಲಿ ಐಪಿಎಲ್ ಪಂದ್ಯಗಳನ್ನ ಆಡಿದ ಅನುಭವ ಇತ್ತು. ಈ ಹಿನ್ನೆಲೆಯಲ್ಲಿ ಭಾರತ ತಂಡದಿಂದ ಇನ್ನೂ ಉತ್ತಮ ಆಟ ಬರುವ ನಿರೀಕ್ಷೆ ಇತ್ತು. ಅದೇನೇ ಸ್ಥಿತಿ ಆದರೂ, ನ್ಯೂಜಿಲೆಂಡ್ ಎಷ್ಟೇ ಉತ್ತಮವಾಗಿ ಬೌಲಿಂಗ್ ಮಾಡಿದರೂ 110 ರನ್ ಮೊತ್ತ ಅಷ್ಟೇ ಗಳಿಸಲು ಸಾಧ್ಯವಾಗಿದ್ದು ಎಂಬುದನ್ನು ಅರಗಿಸಿಕೊಳ್ಳಲು ಆಗುವುದಿಲ್ಲ. ಭಾರತ ತನ್ನ ಇನಿಂಗ್ಸ್ ಆರಂಭಿಸಿದಾಗ ಎಷ್ಟು ಮೊತ್ತ ಗಳಿಸುವ ಗುರಿ ಇತ್ತು ಎಂಬುದನ್ನ ತಿಳಿಯುವ ಕುತೂಹಲ ಇದೆ. ಒಂದೆರಡು ಓವರ್​ಗಳ ಬಳಿಕ ಆರಂಭಿಕ ಬ್ಯಾಟುಗಾರರಿಗೆ ಏನು ಸಂದೇಶ ರವಾನೆಯಾಗಿತ್ತು ಎಂಬುದನ್ನೂ ತಿಳಿದುಕೊಳ್ಳುವ ಇಚ್ಛೆ ಇದೆ” ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

  ಇದನ್ನೂ ಓದಿ: T20 World Cup- ಬಯೋಬಬಲ್ ಉಲ್ಲಂಘಿಸಿದ್ರೆ ಹೀಗಾಗುತ್ತೆ; ಅಂಪೈರ್ ಮೈಕೇಲ್ ಗಫ್​ಗೆ ನಿಷೇಧ

  ಆಟಗಾರರ ಮೊಗದಲ್ಲಿ ಭಯ:

  ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್​ಗಳಿಂದ ಸೋತಿತು. ಬಳಿಕ ನ್ಯೂಜಿಲೆಂಡ್ ತಂಡ ಟೀಮ್ ಇಂಡಿಯಾವನ್ನು 8 ವಿಕೆಟ್​ಗಳಿಂದ ಬಗ್ಗುಬಡಿಯಿತು. ಪಾಕಿಸ್ತಾನದ ಮೇಲೆ ಅನುಭವಿಸಿದ ಹೀನಾಯ ಸೋಲು ಭಾರತದ ಆಟಗಾರರನ್ನ ಕುಗ್ಗಿಸಿದಂತಿತ್ತು. ನ್ಯೂಜಿಲೆಂಡ್ ವಿರುದ್ಧ ಬ್ಯಾಟ್ ಮಾಡುವಾಗ ಆ ಭಯ ಅವರಲ್ಲಿ ಕಾಣುತ್ತಿತ್ತು. ವಿವಿಎಸ್ ಲಕ್ಷ್ಮಣ್ ಕೂಡ ಈ ಭಯವನ್ನು ಗುರುತಿಸಿದ್ಧಾರೆ.

  “ನನಗೆ ನೆನಪಿರುವ ಹಾಗೆ ಬ್ಯಾಟುಗಾರರ ಮೊಗದಲ್ಲಿ ಭಯ ಅಲ್ಲದೇ ಹೋದರೂ ಆತಂಕವನ್ನು ನಾನು ಮೊದಲ ಬಾರಿಗೆ ಗಮನಿಸಿದೆ. ಶಾಟ್ ಹೊಡೆಯುವಾಗ ಅವರಲ್ಲಿ ಗೊಂದಲ ಮತ್ತು ಅನಿಶ್ಚಿತತೆ ಇತ್ತು. ಅವರ ತಪ್ಪು ಶಾಟ್ ಆಯ್ಕೆಗೆ ಅದೇ ಕಾರಣವಿದ್ದಂತಿತ್ತು. ನ್ಯೂಜಿಲೆಂಡ್ ಬೌಲರ್​ಗಳು ಟೈಟ್ ಲೈನ್​ನಲ್ಲಿ ಬೌಲ್ ಮಾಡಿ ಭಾರತದ ಬ್ಯಾಟುಗಾರರನ್ನ ಕಟ್ಟಿಹಾಕಿದ್ದು ಹೌದು. ಆದರೆ, ಇದನ್ನು ಎದುರಿಸಲು ಭಾರತ ಸಿದ್ಧವಾಗಿ ಬಂದಿತ್ತಾದರೂ ಅದು ಆಟದಲ್ಲಿ ವ್ಯಕ್ತವಾಗಲಿಲ್ಲ.

  ಇದನ್ನೂ ಓದಿ: Yuvraj Shock- ದೈವ ನಿರ್ಣಯ; ಯುವರಾಜ್ ಸಿಂಗ್ ಕ್ರಿಕೆಟ್ ಅಖಾಡಕ್ಕೆ ಮರಳಲು ನಿರ್ಧಾರ

  ರನ್ ಗಳಿಸಲು ಸಿಕ್ಸರ್ ಅಷ್ಟೇ ಅಲ್ಲ ಇರುವುದು:

  “ರನ್ ಬರುವುದು ಕಷ್ಟವಾದಾಗ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಮೇಲೆ ಒತ್ತಡ ಹೆಚ್ಚಾಯಿತು. ಗ್ಯಾಪ್​ನಲ್ಲಿ ಹೊಡೆದು ರನ್ ಗಳಿಸುವ ಛಾತಿ ಹೊಂದಿರುವ ವಿರಾಟ್ ಕೊಹ್ಲಿಯ ಪ್ರಯತ್ನ ಭಾನುವಾರ ವಿಫಲವಾಯಿತು. ರಿಷಭ್ ಪಂತ್ ಇನ್ನೂ ಕಲಿಕಾ ಹಂತದಲ್ಲಿದ್ದಾರೆ. ನಿರ್ಭಯವಾಗಿ ಬ್ಯಾಟ್ ಮಾಡುವ ಅವರು ಬೌಲರ್ ಮೇಲೆ ಸಿಕ್ಸರ್ ಮೂಲಕವಷ್ಟೇ ಒತ್ತಡ ಹೇರಲು ಸಾಧ್ಯ ಎಂಬುದನ್ನು ಮನಸಿನಿಂದ ತೆಗೆದುಹಾಕಬೇಕು.

  ಉಳಿದಿರುವ ಪಂದ್ಯಗಳತ್ತ ಗಮನ:

  ”ಸೆಮಿಫೈನಲ್ ತಲುಪಲು ಭಾರತಕ್ಕೆ ತೀರಾ ಅಲ್ಪ ಅವಕಾಶ ಇದೆ. ಉಳಿದಿರುವ ಎಲ್ಲಾ ಮೂರು ಪಂದ್ಯಗಳನ್ನ ದೊಡ್ಡ ಅಂತರದಲ್ಲಿ ಗೆದ್ದು ರನ್ ರೇಟ್ ಉತ್ತಮಪಡಿಸಿಕೊಳ್ಳುವುದು ಬಿಟ್ಟು ಭಾರತಕ್ಕೆ ಅನ್ಯಥಾ ದಾರಿ ಇಲ್ಲ. ಆ ಕೆಲಸ ಅಷ್ಟು ಸುಲಭವಲ್ಲ. ಆದರೆ, ಅಂತರರಾಷ್ಟ್ರೀಯ ಕ್ರೀಡೆಯಲ್ಲಿ ನೀವು ಹಿಂದಿನ ಸಿಹಿ ಕಹಿಯನ್ನ ಮೆಲುಕು ಹಾಕಿಕೊಂಡು ಕೂರಲು ಸಾಧ್ಯವಾಗುವುದಿಲ್ಲ” ಎಂದು ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
  Published by:Vijayasarthy SN
  First published: