ಟಿ20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತ ಯಾಕೆ ಒಮ್ಮೆಯೂ ಸೋತಿಲ್ಲ: ಸೆಹ್ವಾಗ್ ಬಳಿ ಇದೆ ಉತ್ತರ

Virender Sehwag on India vs Pak Match- ಟಿ20 ವಿಶ್ವಕಪ್​ಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 5 ಬಾರಿ ಗೆದ್ದಿದೆ. ಒಮ್ಮೆಯೂ ಸೋತಿಲ್ಲ. ಪಾಕಿಸ್ತಾನಕ್ಕೆ ಯಾಕೆ ಗೆಲ್ಲಲು ಆಗಿಲ್ಲ ಎಂಬ ಪ್ರಶ್ನೆಗೆ ವೀರೂ ಉತ್ತರ ಕೊಡಲು ಯತ್ನಿಸಿದ್ದಾರೆ.

ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್

 • Share this:
  ದುಬೈ, ಅ. 19: ಐಸಿಸಿ ವಿಶ್ವಕಪ್​ಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಹಣೆಬರಹ ಚೆನ್ನಾಗಿದ್ದಂತಿಲ್ಲ. ಇಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಒಮ್ಮೆಯೂ ಗೆದ್ದ ಉದಾಹರಣೆ ಇಲ್ಲ. 12 ಬಾರಿ ಭಾರತಕ್ಕೆ ಪಾಕ್ ಸೋಲೊಪ್ಪಿದೆ. ಟಿ20 ವಿಶ್ವಕಪ್​ಗಳಲ್ಲಿ ಐದು ಬಾರಿ ಭಾರತವನ್ನು ಇದಿರುಗೊಂಡಿರುವ ಪಾಕಿಸ್ತಾನ ಐದು ಬಾರಿಯೂ ಸೋಲಿಗೆ ಶರಣಾಗಿದೆ. ವಿಶ್ವಕಪ್ ಬಿಟ್ಟು ಆಚೆ ಎರಡೂ ತಂಡಗಳ ಗೆಲುವು ಸೋಲು ಗಮನಿಸಿದರೆ ಪಾಕಿಸ್ತಾನವೇ ಹೆಚ್ಚು ಬಾರಿ ಗೆದ್ದಿರುವುದು. ಆದರೆ, ವಿಶ್ವಕಪ್​ನಲ್ಲಿ ಪಾಕಿಸ್ತಾನಕ್ಕೆ ಭಾರತವನ್ನು ಮಣಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ದೊಡ್ಡ ವೇದಿಕೆಯಲ್ಲಿ ಭಾರತವನ್ನು ಮಣಿಸಬೇಕೆಂಬ ಒತ್ತಡ ಪಾಕಿಸ್ತಾನಕ್ಕೆ ವಿಪರೀತವಾಗಿ ಹೇರಿಕೆ ಆಗುತ್ತಿದೆಯಾ? ಅಥವಾ ಬೇರೆ ಏನಾದರೂ ಕಾರಣ ಇದೆಯಾ? ವಿರೇಂದರ್ ಸಿಂಗ್ ಅವರ ಬಳಿ ಉತ್ತರ ಇದ್ದಂತಿದೆ. ಸುದ್ದಿ ಸುದ್ದಿವಾಹಿನಿಯೊಂದರೊಂದಿಗೆ ಮಾತನಾಡುವಾಗ ವೀರೇಂದರ್ ಸೆಹ್ವಾಗ್ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

  ವಿಶ್ವಕಪ್​ನಲ್ಲಿ ಭಾರತವನ್ನು ಈ ಬಾರಿ ಸೋಲಿಸುತ್ತೇವೆ ಎಂದು ಪಾಕಿಸ್ತಾನಿ ನ್ಯೂಸ್ ಆ್ಯಂಕರ್ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ವೀರೇಂದರ್ ಸೆಹ್ವಾಗ್, ಭಾರತದವರು ಮಾತಿಗಿಂತ ಹೆಚ್ಚು ಕೃತಿಗೆ ಗಮನ ಕೊಡುತ್ತಾರೆ. ಹೇಳಿಕೆ ಕೊಡುವುದಕ್ಕಿಂತ ಆಟಕ್ಕೆ ಸಿದ್ಧತೆ ನಡೆಸುವುದು ಮುಖ್ಯ ಎಂದು ಚಾಟಿ ಬೀಸಿದ್ದಾರೆ.

  ಸೂಕ್ಷ್ಮವಾಗಿ ವಿಚಾರ ಬಿಚ್ಚಿಟ್ಟ ಸೆಹ್ವಾಗ್:

  “2011ರ ವಿಶ್ವಕಪ್ ಅಥವಾ 2003ರ ವಿಶ್ವಕಪ್​ಗೆ ಹೋಲಿಸಿದರೆ ನಮ್ಮ ಮೇಲೆ ಒತ್ತಡ ಕಡಿಮೆ ಇದೆ. ಯಾಕೆಂದರೆ ಈ ವಿಶ್ವಕಪ್​ನಲ್ಲಿ ನಾವು ಪಾಕಿಸ್ತಾನಕ್ಕಿಂತ ಉತ್ತಮ ಸ್ಥಿತಿಯಲ್ಲಿದ್ದೇವೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪಂದ್ಯಗಳು ನಡೆಯುವಾಗೆಲ್ಲಾ ಪಾಕಿಸ್ತಾನದ ಕಡೆಯಿಂದ ದೊಡ್ಡ ಹೇಳಿಕೆಗಳು ಬರುತ್ತವೆ. ಉದಾಹರಣೆಗೆ ಅಲ್ಲಿನ ನ್ಯೂಸ್ ಆ್ಯಂಕರ್ ಅವರು ತಮ್ಮ ಶೋನ ಆರಂಭದಲ್ಲಿ ‘ನಾವು ದಿನಾಂಕ ಬದಲಿಸುತ್ತೇವೆ’ ಎಂದು ಹೇಳಿದರು. ಭಾರತದವರು ಇಂಥ ಹೇಳಿಕೆ ಕೊಟ್ಟು ಮೇಲೆ ಏರಬೇಕಾಗಿಲ್ಲ. ನೀವು ಈಗಾಗಲೇ ಮೇಲಿದ್ದೀರೆಂದರೆ ಅಂತಿಮ ಫಲಿತಾಂಶ ಏನು ಎಂಬುದು ನಿಮಗೆ ಗೊತ್ತಿರುತ್ತದೆ” ಎಂದು ಸೂಕ್ಷ್ಮವಾಗಿ ವಿಚಾರ ಬಿಚ್ಚಿಟ್ಟಿದ್ಧಾರೆ ಸೆಹ್ವಾಗ್.

  ಭಾರತದ ಗೆಲುವಿಗೆ ಕಾರಣ

  ಭಾರತ ಒತ್ತಡದ ಸಂದರ್ಭಗಳನ್ನ ಚೆನ್ನಾಗಿ ನಿಭಾಯಿಸುತ್ತದೆ. ಮಾತಿಗಿಂತ ಹೆಚ್ಚು ಸಿದ್ಧತೆ ಇತ್ಯಾದಿಗಳಿಗೆ ಗಮನ ಕೊಡುತ್ತದೆ. ಹೀಗಾಗಿ, ದೊಡ್ಡ ವೇದಿಕೆಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆಲ್ಲುತ್ತಾ ಬಂದಿರಲು ಇದು ಕಾರಣವಾಗಿರಬಹುದು ಎಂಬುದು ಸೆಹ್ವಾಗ್ ಅವರ ಅನಿಸಿಕೆ.

  ಇದನ್ನೂ ಓದಿ: T20 World Cup- ಜೋಗಿಂದರ್​ನಿಂದ ಯೂಸುಫ್​ವರೆಗೂ… 2007ರ ಟಿ20 ವಿಶ್ವಕಪ್ ಗೆದ್ದ ಆಟಗಾರರು ಈಗೇನ್ಮಾಡ್ತಿದಾರೆ?

  ಭಾರತವನ್ನು ಈ ಬಾರಿ ಸೋಲಿಸಲು ಪಾಕಿಸ್ತಾನಕ್ಕೆ ಒಳ್ಳೆಯ ಅವಕಾಶ ಇದೆ:

  ಪಾಕಿಸ್ತಾನ ಈ ಹಿಂದಿನ ವಿಶ್ವಕಪ್​ಗಳಲ್ಲಿ ಏನೆಲ್ಲಾ ಸೋತಿದ್ದರೂ ಈ ಬಾರಿ ಗೆಲುವು ಕಾಣುವ ಉತ್ತಮ ಅವಕಾಶ ಇದೆ ಎಂದು ಭಾರತದ ಮಾಜಿ ಕ್ರಿಕೆಟಿಗರಾದ ಅವರು ಅಭಿಪ್ರಾಯಪಟ್ಟಿದ್ದಾರೆ. “ಸದ್ಯದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಮಾತನಾಡುವುದಾದರೆ ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನಕ್ಕೆ ಗೆಲುವಿನ ಅವಕಾಶ ಹೆಚ್ಚು ಇದೆ. ಪಾಕಿಸ್ತಾನ ತಂಡ 50 ಓವರ್​ಗಳ ಓಡಿಐ ಕ್ರಿಕೆಟ್​ನಲ್ಲಿ ಚೆನ್ನಾಗಿ ಆಡದೇ ಇರಬಹುದು. ಆದರೆ, ಟಿ20 ಕ್ರಿಕೆಟ್​ನಲ್ಲಿ ಭಾರತವನ್ನು ಸೋಲಿಸಬಲ್ಲುದು. ಇಂಥ ಚುಟುಕು ಕ್ರಿಕೆಟ್​ನಲ್ಲಿ ಒಬ್ಬನೇ ಆಟಗಾರ ತಂಡಕ್ಕೆ ಗೆಲುವು ತಂದುಕೊಡಬಲ್ಲ. ಆದರೆ, ಟಿ20 ವಿಶ್ವಕಪ್​ಗಳಲ್ಲಿ ಪಾಕಿಸ್ತಾನಕ್ಕೆ ಒಮ್ಮೆಯೂ ಭಾರತವನ್ನು ಸೋಲಿಸಲು ಯಾಕೆ ಆಗಿಲ್ಲ ಎಂದರೆ ಅಚ್ಚರಿ ಆಗುತ್ತದೆ. ಇದೇ 24ರಂದು ಪಂದ್ಯದ ಫಲಿತಾಂಶ ಏನಾಗುತ್ತದೆ ಕಾದುನೋಡೋಣ” ಎಂದು ವೀರೇಂದರ್ ಸೆಹ್ವಾಗ್ ಹೇಳಿದ್ಧಾರೆ.

  ಈ ವಿಶ್ವಕಪ್​ನಲ್ಲಿ ಸೂಪರ್-12 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿವೆ. ಇದೇ ಅಕ್ಟೋಬರ್ 24ರಂದು ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ. ದುಬೈನಲ್ಲಿ ಈ ಪಂದ್ಯ ನಡೆಯಲಿದೆ.
  Published by:Vijayasarthy SN
  First published: