Virat Kohli: ವಿರಾಟ್ ಕೊಹ್ಲಿಯ ಈ ಇನಿಂಗ್ಸ್ ಟಿ20 ವಿಶ್ವಕಪ್ ಇತಿಹಾಸದ ಅತ್ಯಂತ ಶ್ರೇಷ್ಠ ಕ್ಷಣವೆಂದು ಘೋಷಣೆ
Virat Kohli’s 82 Not Out Innings: 2106ರ ಟಿ20 ವಿಶ್ವಕಪ್ನ ಗ್ರೂಪ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಅಜೇಯ 86 ರನ್ ಗಳಿಸಿದ್ದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಇನ್ನಿಂಗ್ಸ್ ಎಂದು ಜನಸಾಮಾನ್ಯರು ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ಭಾರತ ಟಿ20 ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಅನೇಕ ಅವಿಸ್ಮರಣೀಯ ಇನಿಂಗ್ಸ್ ಆಡಿದ್ದಾರೆ. ಲೆಕ್ಕವಿಡಲು ಕಷ್ಟ ಎನ್ನುವಷ್ಟು ಸಂಖ್ಯೆಯಲ್ಲಿ ಶತಕಗಳನ್ನ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 50 ರನ್ಗೂ ಹೆಚ್ಚು ಸರಾಸರಿ ಹೊಂದಿದ್ದಾರೆ. ಅನೇಕ ವಿಶ್ವದಾಖಲೆಗಳು ಅವರ ಹೆಸರಿನಲ್ಲಿವೆ. ಈಗ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅಮೋಘ ಇನ್ನಿಂಗ್ಸ್ ಆಡಿದವರ ಸಾಲಿನಲ್ಲಿ ವಿರಾಟ್ ಕೊಹ್ಲಿ ಅಗ್ರಗಣ್ಯರಾಗಿದ್ಧಾರೆ. 2016ರ ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಜೇಯ 82 ರನ್ ಗಳಿಸಿದ್ದರು. ಅದು ಟಿ20 ವಿಶ್ವಕಪ್ನ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಇನ್ನಿಂಗ್ಸ್ ಎಂದು ಪರಿಗಣಿತವಾಗಿದೆ. ಐಸಿಸಿ ಟಿ20 ವಿಶ್ವಕಪ್ನ ಅಧಿಕೃತ ಆ್ಯಪ್ನ ಯೂಸರ್ಗಳ ಅಭಿಪ್ರಾಯದ ಮೇರೆಗೆ ವಿರಾಟ್ ಕೊಹ್ಲಿಯ ಈ ಇನ್ನಿಂಗ್ಸನ್ನ ಅಂತಿಮವಾಗಿ ಆಯ್ಕೆ ಮಾಡಲಾಗಿದೆ.
2016ರ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಆಗಿತ್ತು. ಫೈನಲ್ನಲ್ಲಿ ಕಾರ್ಲಸ್ ಬ್ರಾತ್ವೇಟ್ ಅವರು ಅಮೋಘ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್ ವಿರುದ್ಧದ ಆ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಬ್ರೇದ್ವೇಟ್ ಅವರು 24 ರನ್ ಸಿಡಿಸಿ ವಿಂಡೀಸ್ ತಂಡಕ್ಕೆ ರೋಚಕ ಗೆಲುವು ಹಾಗೂ ಕಪ್ ಸಿಗುವಂತೆ ಮಾಡಿದ್ದರು. ಆ ಸ್ಫೋಟಕ ಆಟಕ್ಕಿಂತ ವಿರಾಟ್ ಕೊಹ್ಲಿ 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ ಅಜೇಯ 82 ರನ್ ಅತಿ ಅಮೂಲ್ಯವಾದುದು ಎಂಬುದು ಹೆಚ್ಚು ಮಂದಿಯ ಅಭಿಮತವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ. 68 ಮಂದಿ ವಿರಾಟ್ ಕೊಹ್ಲಿ ಪರ ಯೆಸ್ ಎಂದಿರುವುದು ತಿಳಿದುಬಂದಿದೆ.
ವಿರಾಟ್ ಕೊಹ್ಲಿಯ ಅಜೇಯ 86 ರನ್ ಇನ್ನಿಂಗ್ಸ್ನ ಝಲಕ್ ಇದು:
ಭಾರತದಲ್ಲಿ ನಡೆದ 2016ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 161 ರನ್ ಗುರಿ ಸಿಕ್ಕಿತ್ತು. ಮೊದಲ ಆರು ಓವರ್ನಲ್ಲಿ 37 ರನ್ ಗಳಿಸಿದ ಭಾರತ ತನ್ನ ಇಬ್ಬರು ಆರಂಭಿಕ ಬ್ಯಾಟರ್ಸ್ ಕಳೆದುಕೊಂಡಿತು. ಮೊದಲ ವಿಕೆಟ್ ಬಿದ್ದಾಗ ಕ್ರೀಸ್ಗೆ ಬಂದ ಕೊಹ್ಲಿ ತಮ್ಮ ಆಕರ್ಷಕ ಹೊಡೆತಗಳನ್ನ ಶುರುವಿಟ್ಟಿದ್ದರು. ಆಗ ಕಾಮೆಂಟರಿ ಬಾಕ್ಸ್ನಲ್ಲಿದ್ದ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ನಾಸರ್ ಹುಸೇನ್ ಹೀಗೆ ಹೇಳುತ್ತಾರೆ: “ಸಂದರ್ಭ ದೊಡ್ಡದಾದಷ್ಟೂ ವಿರಾಟ್ ಕೊಹ್ಲಿಯ ರನ್ ಹಸಿವು ಹೆಚ್ಚಾಗುತ್ತದೆ” ಎಂದು ನಾಸರ್ ಹುಸೇನ್ ಹೇಳಿದ ರೀತಿ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಬೆಳೆಯುತ್ತಾ ಹೋಗುತ್ತದೆ.
ಒಂದು ಓವರ್ನಲ್ಲಿ 19 ರನ್: ವಿರಾಟ್ ಕೊಹ್ಲಿ 39 ಬಾಲ್ನಲ್ಲಿ ಅರ್ಧಶತಕ ಗಡಿ ಮುಟ್ಟುತ್ತಾರೆ. ಆಗ ಭಾರತ 21 ಬಾಲ್ನಲ್ಲಿ 45 ರನ್ ಗಳಿಸುವ ಅಗತ್ಯ ಇರುತ್ತದೆ. ಅಷ್ಟರಲ್ಲಿ ಇನ್ನಿಂಗ್ಸ್ ಮೇಲೆ ಹಿಡಿತ ಹೊಂದಿದ್ದ ವಿರಾಟ್ ಕೊಹ್ಲಿ ರನ್ ಗತಿ ಹೆಚ್ಚಿಸುತ್ತಾರೆ. ಜೇಮ್ಸ್ ಫಾಕ್ನರ್ ಅವರ ಒಂದೇ ಓವರ್ನಲ್ಲಿ 19 ರನ್ ಗಳಿಸುವ ಮೂಲಕ ಭಾರತದ ಚೇಸಿಂಗ್ಗೆ ಬಲ ತುಂಬುತ್ತಾರೆ. ಫಾಕ್ನರ್ ಅಷ್ಟೇ ಅಲ್ಲ ಆಸ್ಟ್ರೇಲಿಯಾದ ಬಹುತೇಕ ವೇಗಿಗಳ ಎಸೆತಗಳನ್ನ ಕೊಹ್ಲಿ ಚೆಂಡಾಡುತ್ತಾರೆ.
Virat Kohli’s brilliant 82* against Australia from the 2016 #T20WorldCup has been crowned as our @postpeapp Greatest Moments winner 🏆
ಒಂದೇ ಓವರ್ನಲ್ಲಿ 4 ಫೋರ್: ನೇಥನ್ ಕೌಲ್ಟರ್-ನೈಲ್ ಅವರು ಮಾಡಿದ 19ನೇ ಓವರ್ನಲ್ಲಿ ಕೊಹ್ಲಿ ನಾಲ್ಕು ಬೌಂಡರಿಗಳನ್ನ ಭಾರಿಸಿ ಭಾರತಕ್ಕೆ ಗೆಲುವು ತಂದುಕೊಡುತ್ತಾರೆ. ಕೊಹ್ಲಿ ಅವರದ್ದು ಪರ್ಫೆಕ್ಟ್ ಚೇಸಿಂಗ್ ಮತ್ತು ಪಕ್ಕಾ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಗಿತ್ತು. ಭಾರತ ಐದು ಬಾಲ್ ಇರುವಂತೆ 6 ವಿಕೆಟ್ಗಳಿಂದ ಆಸ್ಟ್ರೇಲಿಯಾವನ್ನ ಬಗ್ಗು ಬಡಿಯುತ್ತದೆ.
ಆ ಪಂದ್ಯ ಗ್ರೂಪ್ನ ಕೊನೆಯ ಪಂದ್ಯವಾಗಿತ್ತು. ಆ ಗೆಲುವು ಭಾರತವನ್ನು ಸೆಮಿಫೈನಲ್ಗೆ ಕಳುಹಿಸಿದರೆ, ಆಸ್ಟ್ರೇಲಿಯಾ ಟೂರ್ನಿಯಿಂದ ನಿರ್ಗಮಿಸಿತು, ಸೆಮಿಫೈನಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋಲೊಪ್ಪಿತು. ಅಂತಿಮವಾಗಿ ವೆಸ್ಟ್ ಇಂಡೀಸ್ ಚಾಂಪಿಯನ್ ಆಯಿತು. ಕಾರ್ಲಸ್ ಬ್ರಾದ್ವೇಟ್ 10 ಬಾಲ್ನಲ್ಲಿ 34 ರನ್ ಗಳಿಸಿ ತಂಡಕ್ಕೆ ಎರಡನೇ ಬಾರಿ ವಿಶ್ವಕಪ್ ದಕ್ಕುವಂತೆ ಮಾಡಿದ್ದರು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ