Virat Kohli: ವಿರಾಟ್ ಕೊಹ್ಲಿ ಸದ್ಯದಲ್ಲೇ ವಿಶ್ವಕಪ್ ಎತ್ತಿ ಹಿಡಿಯಲಿದ್ದಾರೆ: ಮಾಜಿ ಕ್ರಿಕೆಟಿಗನ ಭವಿಷ್ಯ

ವಿರಾಟ್ ಕೊಹ್ಲಿ ಅವರ ನಾಯಕತ್ವದ ಬಗ್ಗೆ ಅಪಸ್ವರ ಕೇಳಿಬರಲು ಮುಖ್ಯ ಕಾರಣ ಐಸಿಸಿ ಪ್ರಶಸ್ತಿ ಗೆಲ್ಲದಿರುವುದು. ಹೌದು, ಭಾರತ ತಂಡವನ್ನು ಕೊಹ್ಲಿ 2017 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2019 ವಿಶ್ವಕಪ್​ನಲ್ಲಿ ಮುನ್ನಡೆಸಿದ್ದರು.

Virat Kohli

Virat Kohli

  • Share this:
    ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯಾದ್ಭುತ ಆಟಗಾರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನಾಯಕತ್ವದ ವಿಚಾರ ಬಂದಾಗ ಹಲವರು ಕೊಹ್ಲಿ ಸಾಮರ್ಥ್ಯದ ವಿರುದ್ಧ ಚಕಾರ ಎತ್ತುತ್ತಾರೆ. ಅದು ಟೀಮ್ ಇಂಡಿಯಾದ ಕಪ್ತಾನಗಿರಿ ಆಗಿರಲಿ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುವ ವಿಷಯದಲ್ಲಿ ಆಗಿರಬಹುದು. ಆದರೆ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ ಎಂಬುದಕ್ಕೆ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ 89 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಕಿಂಗ್ ಕೊಹ್ಲಿ 62 ಮ್ಯಾಚ್​ಗಳಲ್ಲಿ ಜಯ ಸಾಧಿಸಿದ್ದಾರೆ. ಅಂದರೆ ಕೊಹ್ಲಿಯ ವಿನ್ನಿಂಗ್ ಪರ್ಸೆಂಟೇಜ್​ 69.66% ರಷ್ಟಿದೆ. ಅಂದರೆ ಸೀಮಿತ ಓವರ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಯಶಸ್ವಿ ನಾಯಕ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಅವರ ವಿನ್ನಿಂಗ್ ಪರ್ಸೆಂಟೇಜ್​ಗಿಂತ (ಶೇ. 55.00) ಕೊಹ್ಲಿ ಸಾಧನೆ ಉತ್ತಮವಾಗಿದೆ.

    ಅದಾಗ್ಯೂ ವಿರಾಟ್ ಕೊಹ್ಲಿ ಅವರ ನಾಯಕತ್ವದ ಬಗ್ಗೆ ಅಪಸ್ವರ ಕೇಳಿಬರಲು ಮುಖ್ಯ ಕಾರಣ ಐಸಿಸಿ ಪ್ರಶಸ್ತಿ ಗೆಲ್ಲದಿರುವುದು. ಹೌದು, ಭಾರತ ತಂಡವನ್ನು ಕೊಹ್ಲಿ 2017 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2019 ವಿಶ್ವಕಪ್​ನಲ್ಲಿ ಮುನ್ನಡೆಸಿದ್ದರು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದರೂ ಪಾಕ್ ವಿರುದ್ದ ಸೋಲುವ ಮೂಲಕ ಪ್ರಶಸ್ತಿಯಿಂದ ವಂಚಿತರಾಗಿದ್ದರು. ಹಾಗೆಯೇ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿ ಫೈನಲ್​ನಲ್ಲಿ ಸೋಲುವ ಮೂಲಕ ಫೈನಲ್ ಪ್ರವೇಶಿಸುವಲ್ಲಿ ಎಡವಿತ್ತು. ಇತ್ತ ಐಪಿಎಲ್​ನಲ್ಲಿ 13 ವರ್ಷಗಳಿಂದ ಆರ್​ಸಿಬಿ ತಂಡವನ್ನು ಮುನ್ನಡೆಸಿದರೂ ಒಂದು ಬಾರಿ ಕೂಡ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲಾಗಲಿಲ್ಲ. ಈ ಎಲ್ಲಾ ಕಾರಣದಿಂದ ಕೊಹ್ಲಿ ನಾಯಕತ್ವ ಸಾಮರ್ಥ್ಯದ ಬಗ್ಗೆ ಚರ್ಚೆಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ.

    ಆದರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಶೀಘ್ರದಲ್ಲೇ ವಿಶ್ವಕಪ್ ಎತ್ತಿಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಪ್ರತಿಯೊಬ್ಬ ನಾಯಕನಿಗೂ ಪ್ರಮುಖ ಟೂರ್ನಿ ಗೆಲ್ಲಬೇಕೆಂಬ ಕನಸುಗಳಿರುತ್ತವೆ. ಅದು
    2021ರ ವಿಶ್ವಕಪ್‌ ಗೆಲುವು ಮೂಲಕ ನೆರವೇರಲಿದೆ ಭಜ್ಜಿ ತಿಳಿಸಿದ್ದಾರೆ.

    ವಿಶ್ವಕಪ್ ಗೆಲ್ಲುವ ಮೂಲಕ ಕೊಹ್ಲಿ ವಿರಾಟ್ ಕೊಹ್ಲಿಯ ಸಾಧನೆ ಎತ್ತರಕ್ಕೇರುವುದಿಲ್ಲ. ಯಾಕೆಂದರೆ ಅವರು ಈಗಾಗಲೇ ದೊಡ್ಡ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ಇದು ಕೊಹ್ಲಿಯ ಸಾಧನೆ ಜೊತೆ ಮತ್ತೊಂದು ಸಾಧನೆಯಾಗಿ ಸೇರ್ಪಡೆಯಾಗಲಿದೆ. ಅಂದರೆ ವಿಶ್ವಕಪ್ ವಿಜೇತ ನಾಯಕ ಎನಿಸಿಕೊಳ್ಳಲಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದರು.

    ಟೀಮ್ ಇಂಡಿಯಾ ಅತ್ಯುತ್ತಮ ಬಳಗವನ್ನು ಹೊಂದಿದೆ. ಇಂತಹ ಒಂದು ತಂಡವನ್ನು ಹೊಂದಿರುವಾಗ ಟ್ರೋಫಿ ಇಲ್ಲದೆ ಕೊಹ್ಲಿ ತೆರಳುತ್ತಾರೆ ಎಂದೆನಿಸುವುದಿಲ್ಲ. ಅವರು ವಿಶ್ವಕಪ್ ಎತ್ತಿ ಹಿಡಿಯುವ ಕಾಲ ಸನಿಹದಲ್ಲಿದೆ. ಅದು ಮುಂದಿನ ಟಿ20 ವಿಶ್ವಕಪ್ ಆಗಿರಬಹುದು. ಅಥವಾ ಅದರ ನಂತರ ನಡೆಯುವ ಏಕದಿನ ವಿಶ್ವಕಪ್ ಟ್ರೋಫಿ ಆಗಿರಬಹುದು ಎಂದು ಭಜ್ಜಿ ತಿಳಿಸಿದರು.

    ಹರ್ಭಜನ್ ಸಿಂಗ್ ಹೀಗೆ ಹೇಳಲು ಮುಖ್ಯ ಕಾರಣ, ಮುಂದಿನ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಹಾಗೆಯೇ 2023ರ ಏಕದಿನ ವಿಶ್ವಕಪ್ ಟೂರ್ನಿಗೂ ಭಾರತವೇ ಆತಿಥ್ಯವಹಿಸಲಿದೆ. ಹೀಗಾಗಿ ಈ ಎರಡು ಟೂರ್ನಿಗಳಲ್ಲಿ ಒಂದನ್ನಾದರೂ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ತಮ್ಮದಾಗಿಸಿಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
    Published by:zahir
    First published: