ಕೇಪ್ಟೌನ್, ಜ. 14: ಸೌತ್ ಆಫ್ರಿಕಾ ಮತ್ತು ಭಾರತ ನಡುವಿನ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯ ಹಲವು ರೋಚಕತೆಗಳ ಜೊತೆಗೆ ಹೈಡ್ರಾಮಾಗಳಿಗೂ ಸಾಕ್ಷಿಯಾಯಿತು. ನಿನ್ನೆ ಸ್ಟಂಪ್ ಮೈಕ್ ಬಳಿ ವಿರಾಟ್ ಕೊಹ್ಲಿ ಹಾಗೂ ಇತರ ಭಾರತೀಯ ಆಟಗಾರರು ತೋರಿದ ವರ್ತನೆ ವಿವಾದಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಅವರನ್ನ ಐಸಿಸಿ ಅಮಾನತು ಮಾಡಬೇಕು ಎಂದು ಇಂಗ್ಲೆಂಡ್ನ ಮಾಜಿ ಆಟಗಾರ ಮೈಕೇಲ್ ವಾನ್ ಒತ್ತಾಯಿಸಿದ್ದಾರೆ.
ಘಟನೆ ಏನು?: ನಿನ್ನೆ ಪಂದ್ಯದ ಮೂರನೇ ದಿನದ ವೇಳೆ ನಡೆದ ಘಟನೆ ಇದಾಗಿದೆ. ಭಾರತ ಒಡ್ಡಿದ 212 ರನ್ ಗುರಿಯನ್ನು ಚೇಸ್ ಮಾಡುವಾಗ 21ನೇ ಓವರ್ನಲ್ಲಿ ಡೀನ್ ಎಲ್ಗರ್ ಎಲ್ಬಿಡಬ್ಲ್ಯೂ ಆಗಿ ಔಟ್ ಆದರೆಂದು ಅಂಪೈರ್ ತೀರ್ಪು ಕೊಟ್ಟಿದ್ದರು. ಇದನ್ನ ಡೀನ್ ಎಲ್ಗರ್ ರಿವ್ಯೂ ಮಾಡಿದರು. ಆದರೆ, ಥರ್ಡ್ ಅಂಪೈರ್ ಅದು ಔಟ್ ಅಲ್ಲ ಎಂದು ತೀರ್ಪು ಕೊಟ್ಟರು.
ರೀಪ್ಲೇನಲ್ಲಿ ಚೆಂಡು ಡೀನ್ ಎಲ್ಗಾರ್ ಮಂಡಿ ಕೆಳಗೆ ತಾಗಿದ್ದು ಕಾಣಿಸಿತು. ಆದರೆ, ಹಾಕ್ ಐ ವಿಡಿಯೋದಲ್ಲಿ ಚೆಂಡು ಸ್ಟಂಪ್ ಮೇಲೆ ಹಾದು ಹೋಗುವ ಗ್ರಾಫಿಕ್ಸ್ ಬಂತು. ಇದು ವಿರಾಟ್ ಕೊಹ್ಲಿ ಅವರನ್ನ ಕೆರಳಿಸಿತು. ಕೊಹ್ಲಿ ಅಷ್ಟೇ ಅಲ್ಲ ಆರ್ ಅಶ್ವಿನ್ ಮತ್ತು ಕೆಎಲ್ ರಾಹುಲ್ ಅವರೂ ಆ ಸಂದರ್ಭದಲ್ಲಿ ಹತಾಶೆ ವ್ಯಕ್ತಪಡಿಸಿದ್ದು ಕಂಡು ಬಂದಿತು. ಆನ್ಫೀಲ್ಡ್ ಅಂಪೈರ್ ಕೂಡ ಈ ತೀರ್ಪಿಗೆ ಅಚ್ಚರಿ ವ್ಯಕ್ತಪಡಿಸಿದರು.
ಥರ್ಡ್ ಅಂಪೈರ್ ತೀರ್ಪು ಬಂದ ಬಳಿಕ ಬೌಲಿಂಗ್ ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಸ್ಟಂಪ್ ಮೈಕ್ ಬಳಿ ಬಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
“ನಿಮ್ಮ ತಂಡದವರು ಚೆಂಡನ್ನು ಹೊಳಪುಗೊಳಿಸುವಾಗ ಮೊದಲು ಗಮನಿಸಿ. ಬರೀ ಎದುರಾಳಿ ತಂಡದವರ ಮೇಲೆ ಕಣ್ಣಿಡುವುದಲ್ಲ…” ಎಂದು ಸಿಟ್ಟು ತೋರ್ಪಡಿಸಿದರು.
ಕೆಎಲ್ ರಾಹುಲ್ ಕೂಡ ಮಾತಿನ ತಿವಿತ ನೀಡಿದರು. “ಇಡೀ ದೇಶವೇ ಹನ್ನೊಂದು ಆಟಗಾರರ ವಿರುದ್ಧ ಆಡುತ್ತಿದೆ” ಎಂದು ರಾಹುಲ್ ಹೇಳುತ್ತಿದ್ದುದು ಟಿವಿ ವೀಕ್ಷಕರಿಗೂ ಕೇಳಿಸಿತು.
ಈ ವಾಗ್ಬಾಣದ ಪ್ರಯತ್ನಕ್ಕೆ ಆರ್ ಅಶ್ವಿನ್ ಕೂಡ ಜೊತೆ ಸೇರಿದರು. “ನೀವು ಸೂಪರ್ಸ್ಪೋರ್ಟ್ನವರು ಗೆಲ್ಲಲು ಇನ್ನೂ ಉತ್ತಮ ಮಾರ್ಗಗಳನ್ನ ಹುಡುಕಿರಿ” ಎಂದು ಅಶ್ವಿನ್ ಕೂಡ ಸ್ಟಂಪ್ ಮೈಕ್ ಬಳಿ ಬಂದು ಕಿಚಾಯಿಸಿದರು. ಸೂಪರ್ ಸ್ಪೋರ್ಟ್ ಈ ಟೆಸ್ಟ್ ಪಂದ್ಯದ ಅಧಿಕೃತ ಬ್ರಾಡ್ಕ್ಯಾಸ್ಟರ್ ಆಗಿದೆ. ಹಾಕ್ ಐ ವಿಡಿಯೋವನ್ನು ಪ್ರಸ್ತುತಪಡಿಸುವುದು ಬ್ರಾಡ್ಕ್ಯಾಸ್ಟ್ನವರೇ.
ಇದು ಆಗಿದ್ದು ನಿನ್ನೆಯ ದಿನದಾಟದಲ್ಲಿ. ಡೀನ್ ಎಲ್ಗರ್ ಆ ಓವರ್ನಲ್ಲಿ ಬಚಾವಾದರೂ ದಿನಾಂತ್ಯದಲ್ಲಿ ಬುಮ್ರಾ ಎಸೆತಕ್ಕೆ ಬಲಿಯಾಗಿ ಔಟಾದರು. ಆದರೆ, ಇಂದು ಸೌತ್ ಆಫ್ರಿಕಾದ ಬ್ಯಾಟುಗಾರರು ಸರಾಗವಾಗಿ ರನ್ಗಳನ್ನ ಗಳಿಸಿ 212 ರನ್ ಗುರಿಯನ್ನ ಯಶಸ್ವಿಯಾಗಿ ಚೇಸ್ ಮಾಡಿದರು. ಸೌತ್ ಆಫ್ರಿಕಾ ಈ ಪಂದ್ಯ ಗೆದ್ದಿತು. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನ ಸೌತ್ ಆಫ್ರಿಕಾ 2-1ರಿಂದ ಗೆದ್ದಿತು.
ಇದನ್ನೂ ಓದಿ: IND vs SA: ದಕ್ಷಿಣ ಆಫ್ರಿಕಾಗೆ ಸರಣಿ ಜಯ, ಭಾರತಕ್ಕೆ ಐತಿಹಾಸಿಕ ಗೆಲುವಿಲ್ಲದೆ ನಿರಾಸೆ
ವಿರಾಟ್ ಕೊಹ್ಲಿ ಅಮಾನತಿಗೆ ವಾನ್ ಒತ್ತಾಯ:
ಥರ್ಡ್ ಅಂಪೈರ್ ತೀರ್ಪಿನ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ ರೀತಿಗೆ ಕೆಲ ಮಾಜಿ ಕ್ರಿಕೆಟಿಗರು ಬೇಸರಪಟ್ಟಿದ್ದಾರೆ. ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಮೈಕೇಲ್ ವಾನ್ ಕೂಡ ಕೊಹ್ಲಿ ನಡತೆಗೆ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
“ಈ ರೀತಿಯ ಘಟನೆಗಳು ನಡೆಯಬಾರದು. ಐಸಿಸಿ ಮಧ್ಯ ಪ್ರವೇಶಿಸುವುದು ಬಹಳ ಮುಖ್ಯ. ನೀವು ಹತಾಶರಾಗಿದ್ದೀರೋ ಇಲ್ಲವೋ ಅದಲ್ಲ ಮುಖ್ಯ. ಮೈದಾನದಲ್ಲಿ ನಾವಂದುಕೊಂಡಿದ್ದು ಆಗಲಿ ಎಂದು ನಾವೆಲ್ಲಾ ತುದಿಗಾಲಲ್ಲಿ ಇರುವುದು ಸಹಜ. ಹತಾಶೆಗೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಒಬ್ಬ ಕ್ಯಾಪ್ಟನ್ ಆಗಿ ಆ ರೀತಿ ನಡೆದುಕೊಂಡರೆ ಐಸಿಸಿ ಕ್ರಮ ಕೈಗೊಳ್ಳಬೇಕು. ವಿರಾಟ್ ಕೊಹ್ಲಿಗೆ ದಂಡ ಹಾಕಬೇಕು, ಅವರನ್ನ ಸಸ್ಪೆಂಡ್ ಮಾಡಬೇಕು” ಎಂದು ಮೈಕೇಲ್ ವಾನ್ ಪ್ರತಿಕ್ರಿಯಿಸಿದ್ದಾರೆಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ