Indian Cricket- ವಿಶ್ವಕಪ್ ನಂತರದ ಸರಣಿಯಲ್ಲಿ ಭಾರತ ತಂಡದಲ್ಲಿ ಇರಲ್ಲ ಕೊಹ್ಲಿ, ರೋಹಿತ್, ಬುಮ್ರಾ

Rest for Virat Kohli and other Seniors: ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರಿಗೆ ವಿಶ್ವಕಪ್ ಬಳಿಕ ವಿಶ್ರಾಂತಿ ಕೊಡುವ ಸಾಧ್ಯತೆ ಇದೆ. ನ್ಯೂಜಿಲೆಂಡ್ ಸರಣಿ ಬಳಿಕ ನಡೆಯಲಿರುವ ಸೌಥ್ ಆಫ್ರಿಕಾ ಸರಣಿಯಷ್ಟರಲ್ಲಿ ಹಿರಿಯರು ಮಾನಸಿಕವಾಗಿ ಸಜ್ಜಾಗಿರಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

  • Share this:
    ನವದೆಹಲಿ, ಅ. 14: ಸತತ ಕ್ರಿಕೆಟ್ ಆಡುತ್ತಾ ಬಂದಿರುವ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ವಿಶ್ವಕಪ್ ನಂತರವೂ ಬಿಡುವಿಲ್ಲದ ವೇಳಾಪಟ್ಟಿ ಇದೆ. ವಿಶ್ವಕಪ್ ಮುಗಿದ ಒಂದು ವಾರದ ಒಳಗೆಯೇ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ ತವರಿನಲ್ಲಿ ಆರಂಭವಾಗಲಿದೆ. ಬಿಡುವಿಲ್ಲದೆ ಕ್ರಿಕೆಟ್ ಆಡುತ್ತಿರುವ ಹಲವು ಹಿರಿಯ ಕ್ರಿಕೆಟಿಗರಿಗೆ ವಿಶ್ವಕಪ್ ಬಳಿಕ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹೀಗಾಗಿ, ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೆ ಬಹುತೇಕ ಉದಯೋನ್ಮುಖ ಪ್ರತಿಭೆಗಳಿರುವ ತಂಡವನ್ನ ಕಣಕ್ಕಿಳಿಸಲು ಬಿಸಿಸಿಐ ಯೋಜಿಸಿದೆ. ಜೈಪುರ, ರಾಂಚಿ ಮತ್ತು ಕೋಲ್ಕತಾ ನಗರಗಳಲ್ಲಿ ನವೆಂಬರ್ 17, 19 ಮತ್ತು 21ರಂದು ಮೂರು ಟಿ20 ಪಂದ್ಯಗಳು ನ್ಯೂಜಿಲೆಂಡ್ ವಿರುದ್ಧ ಭಾರತ ಆಡಲಿದೆ. ಅದಾದ ಬಳಿಕ ಕಾನಪುರದಲ್ಲಿ ನವೆಂಬರ್ 2ರಂದು ಮತ್ತು ಮುಂಬೈನಲ್ಲಿ ಡಿಸೆಂಬರ್ 3ರಂದು ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ.

    ನ್ಯೂಜಿಲೆಂಡ್ ವಿರುದ್ಧದ ಮೂರು ಟಿ20 ಕ್ರಿಕೆಟ್ ಪಂದ್ಯಗಳಿಗೆ ಮಾತ್ರ ಹಿರಿಯ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗುತ್ತದಾ? ಅಥವಾ ಟೆಸ್ಟ್ ಪಂದ್ಯಗಳಿಗೂ ಈ ಆಟಗಾರರಿಗೆ ವಿಶ್ರಾಂತಿ ಕೊಡಲಾಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ, ಟಿ20 ಪಂದ್ಯಗಳಿಗೆ ಹಿರಿಯ ಕ್ರಿಕೆಟಿಗರಿಗೆ ರೆಸ್ಟ್ ಕೊಡುವುದು ನಿಶ್ಚಿತ ಎನ್ನಲಾಗಿದೆ. ಐಪಿಎಲ್​ಗೆ ಮುನ್ನ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಹಿರಿಯ ಕ್ರಿಕೆಟಿಗರಿರುವ ಭಾರತ ತಂಡವನ್ನ ಕಳುಹಿಸಲಾಗಿತ್ತು. ಅದೇ ವೇಳೆಯಲ್ಲಿ ಶ್ರೀಲಂಕಾದಲ್ಲಿ ನಡೆದ ಚುಟುಕು ಕ್ರಿಕೆಟ್​ನ ಸರಣಿಗೆ ಎರಡನೇ ಸ್ತರದ ಟೀಮ್ ಇಂಡಿಯಾವನ್ನು ಕಳುಹಿಸಲಾಗಿತ್ತು. ಅದರಲ್ಲಿ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದರು. ಈಗಲೂ ಕೂಡ ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೆ ಅದೇ ಪ್ರಯೋಗ ಮಾಡುವ ಸಾಧ್ಯತೆ ಇದೆ.

    ಐಪಿಎಲ್ ಸ್ಟಾರ್​ಗಳಿಗೆ ಮಣೆ: ಐಪಿಎಲ್​ನಲ್ಲಿ ಮಿಂಚಿದ ಯುವ ಪ್ರತಿಭೆಗಳನ್ನ ಗುರುತಿಸಿ ಈ ಮೂರು ಟಿ20 ಪಂದ್ಯಗಳಿಗೆ ಭಾರತ ತಂಡದಲ್ಲಿ ಆಯ್ಕೆ ಮಾಡಲಾಗುತ್ತದೆ. ಋತುರಾಜ್ ಗಾಯಕ್ವಡ್, ಹರ್ಷಲ್ ಪಟೇಲ್, ಅವೇಶ್ ಖಾನ್, ವೆಂಕಟೇಶ್ ಅಯ್ಯರ್ ಮೊದಲಾದ ಐಪಿಎಲ್ ಸ್ಟಾರ್​ಗಳು ಈ ಕಿರುಕ್ರಿಕೆಟ್ ಸರಣಿಯಲ್ಲಿ ಆಡುವ ಸುಯೋಗ ಪಡೆಯಬಹುದು.

    ಸೌಥ್ ಆಫ್ರಿಕಾ ಸರಣಿಗೆ ಸಜ್ಜಾಗಿರಬೇಕು:

    ಟೀಮ್ ಇಂಡಿಯಾದ ಬಹುತೇಕ ಆಟಗಾರರು ಕಳೆದ ನಾಲ್ಕು ತಿಂಗಳಲ್ಲಿ ಬಯೋಬಬಲ್​ಗಳಲ್ಲೇ ಇರುವಂತಾಗಿದೆ. ಇದರಿಂದ ಹೈರಾಣಗೊಂಡಿರುವ ಈ ಆಟಗಾರರು ಭಾರತಕ್ಕೆ ಮರಳಿದ ಬಳಿಕ ವಿಶ್ರಾಂತಿ ಪಡೆಯುವುದು ಅತಿ ಅಗತ್ಯ ಆಗಿದೆ. ನ್ಯೂಜಿಲೆಂಡ್ ಸರಣಿ ಬಳಿಕ ಸೌಥ್ ಆಫ್ರಿಕಾಗೆ ಭಾರತ ಡಿಸೆಂಬರ್ ಅಂತ್ಯದಲ್ಲಿ ಪ್ರವಾಸ ಹೋಗಲಿದೆ. ಅಷ್ಟರಲ್ಲಿ ಎಲ್ಲಾ ಹಿರಿಯ ಕ್ರಿಕೆಟಿಗರು ಮಾನಸಿಕವಾಗಿ ಸಿದ್ಧವಾಗಿರಬೇಕು ಎಂಬುದು ಬಿಸಿಸಿಐನ ಆಶಯವಾಗಿದೆ. ಹೀಗೆಂದು ಬಿಸಿಸಿಐನ ಆಯ್ಕೆ ಸಮಿತಿಗೆ ಆಪ್ತವಾಗಿರುವ ಮೂಲವೊಂದು ಹೇಳಿದ್ಧಾಗಿ ಪಿಟಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: Rahul Dravid- ವಿಶ್ವಕಪ್ ನಂತರ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಹಂಗಾಮಿ ಕೋಚ್?

    ರೋಹಿತ್​ಗೆ ವಿಶ್ರಾಂತಿ ಅನಿಶ್ಚಿತ:

    ಈ ಮೂಲ ಹೇಳುವ ಪ್ರಕಾರ, ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ಸಿಗುವುದು ನಿಶ್ಚಿತವಾಗಿದೆ. ಆದರೆ, ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವ ತ್ಯಜಿಸಲಿರುವುದರಿಂದ ಯಾರಿಗೆ ಕ್ಯಾಪ್ಟನ್ಸಿ ಸಿಗುತ್ತೆ ಎಂಬುದು ಇನ್ನೂ ಗೊತ್ತಿಲ್ಲ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಅವರೇ ಮುಂದಾಳತ್ವ ವಹಿಸಬೇಕೆಂದು ಬಿಸಿಸಿಐ ಸೂಚಿಸುತ್ತಾ, ಅಥವಾ ರೋಹಿತ್​ಗೂ ವಿಶ್ರಾಂತಿ ಕೊಟ್ಟು ಕೆಎಲ್ ರಾಹುಲ್ ಅವರಿಗೆ ಕ್ಯಾಪ್ಟನ್ಸಿ ಹೊಣೆ ಕೊಡುತ್ತಾ ಕಾದು ನೋಡಬೇಕು.
    Published by:Vijayasarthy SN
    First published: