ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಂತಹ ಶ್ರೇಷ್ಠ ಆಟಗಾರನನ್ನು ನಾನೆಂದೂ ನೋಡಿಲ್ಲ...ಹೀಗೆ ಹೇಳಿದ್ದು ಮತ್ಯಾರೂ ಅಲ್ಲ. ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್. ಆಸೀಸ್ ವಿರುದ್ಧದ ಏಕದಿನ, ಟಿ20 ಹಾಗೂ ಟೆಸ್ಟ್ ಪಂದ್ಯಗಳಿಗಾಗಿ ಈಗಾಗಲೇ ಕೊಹ್ಲಿ ನೇತೃತ್ವದ ಭಾರತ ತಂಡ ಕಾಂಗರೂ ನಾಡಿಗೆ ಪ್ರಯಾಣ ಬೆಳೆಸಿದೆ. ಅತ್ತ ಹೈ ವೊಲ್ಟೇಜ್ ಪಂದ್ಯಗಳಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಪ್ರತಿಷ್ಠಿತ ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿಯಲಿ ನಿರ್ಧರಿಸಿದ್ದಾರೆ. ಅವರ ಕೊಹ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಹೀಗಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಮಾತ್ರ ಲಭ್ಯರಿರಲಿದ್ದು, ಉಳಿದ ಮೂರು ಪಂದ್ಯಗಳಿಗೆ ಗೈರಾಗಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಲ್ಯಾಂಗರ್, ವಿರಾಟ್ ಕೊಹ್ಲಿ ಅವರು ಅತ್ಯಂತ ಶ್ರೇಷ್ಠ ಆಟಗಾರ. ಅವರ ಅನುಪಸ್ಥಿತಿ ಟೆಸ್ಟ್ ಸರಣಿ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದಿದ್ದಾರೆ. ಅಲ್ಲದೆ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್. ನನ್ನ ಜೀವನದಲ್ಲಿ ಅವರಂತಹ ಆಟಾಗಾರನನ್ನು ನೋಡಿಲ್ಲ. ಈ ಹಿಂದೆಯೂ ನಾನು ಇದೇ ಮಾತು ಹೇಳಿದ್ದೆ ಎಂದು ಲ್ಯಾಂಗರ್ ಹೇಳಿದರು.
ಅವರ ಬ್ಯಾಟಿಂಗ್, ಆಟದ ಬಗ್ಗೆಗಿರುವ ಉತ್ಸಾಹ, ಮೈದಾನದಲ್ಲಿ ಅವರಿಗೆ ಇರುವಂತಹ ಸ್ನೇಹಿತರು ಇವೆಲ್ಲವೂ, ಅವರ ಶ್ರೇಷ್ಠತೆಯನ್ನು ಪ್ರತಿಬಿಂಭಿಸುತ್ತದೆ ಎಂದು ತಿಳಿಸಿದ ಜಸ್ಟಿನ್ ಲ್ಯಾಂಗರ್, ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಭಾರತಕ್ಕೆ ಹಿಂತಿರುಗುತ್ತಿರುವುದು ಕೂಡ ಅವರ ಮೇಲಿನ ಗೌರವವನ್ನು ಹೆಚ್ಚಿಸಿದೆ ಎಂದರು.
ಇದೇ ವೇಳೆ ಕೊಹ್ಲಿ ಮೂರು ಟೆಸ್ಟ್ಗಳಿಂದ ಹೊರಗುಳಿಯುತ್ತಿರುವುದು ನಿಮಗೆ ಸಂತೋಷ ನೀಡಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಲ್ಯಾಂಗರ್, ಚಾಂಪಿಯನ್ ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್ ಆಟಗಾರರನ್ನು ಉಲ್ಲೇಖಿಸಿ, ಇದು ಒಂದಾರ್ಥದಲ್ಲಿ ಡಸ್ಟಿನ್ ಮಾರ್ಟಿನ್ ಅವರನ್ನು ರಿಚ್ಮಂಡ್ನಿಂದ ಹೊರಗೆ ಕರೆದೊಯ್ಯುವಂತಿದೆ ಎಂದರು. ಈ ಮೂಲಕ ಕೊಹ್ಲಿ ಜೊತೆಗಿನ ಸೆಣಸಾಟವನ್ನು ಎದುರು ನೋಡಿದ್ದೆವು ಎಂದು ಆಸೀಸ್ ಕೋಚ್ ಪರೋಕ್ಷವಾಗಿ ತಿಳಿಸಿದರು.
ಇನ್ನು ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಇರಲಿ ಅಥವಾ ಇಲ್ಲದೆ ಇರಲಿ. ನಾವಂತು ಒಂದು ಸೆಕೆಂಡ್ ಕೂಡ ಸಂತೃಪ್ತರಾಗಲು ಸಿದ್ಧರಿಲ್ಲ. ಏಕೆಂದರೆ ಬೇಸಿಗೆಯಲ್ಲಿ ಎಚ್ಚರಿಕೆಯಿಂದ ಆಡಬೇಕು. ಇದಕ್ಕಾಗಿ ಸಕಲ ತಯಾರಿಯೊಂದು ಕಾಯುತ್ತಿದ್ದೇವೆ ಎಂದು ಜಸ್ಟಿನ್ ಲ್ಯಾಂಗರ್ ತಿಳಿಸಿದರು.
ಆಸ್ಟ್ರೇಲಿಯಾ ಹಾಗೂ ಭಾರತದ ನಡುವಣ ಮೊದಲ ಏಕದಿನ ಪಂದ್ಯ 27 ರಿಂದ ಆರಂಭವಾಗಲಿದ್ದು, ಉಳಿದೆರಡು ಮ್ಯಾಚ್ಗಳು ನವೆಂಬರ್ 29 ಹಾಗೂ ಡಿಸೆಂಬರ್ 2 ರಂದು ನಡೆಯಲಿದೆ. ಹಾಗೆಯೇ ಮೊದಲ ಟಿ20 ಪಂದ್ಯ ಡಿಸೆಂಬರ್ 4 ರಂದು ನಡೆಯಲಿದ್ದು, ಡಿಸೆಂಬರ್ 6 ಮತ್ತು 8 ರಂದು 2ನೇ ಮತ್ತು 3ನೇ ಟಿ20 ಪಂದ್ಯ ಜರುಗಲಿದೆ.
ಇನ್ನು ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಈ ಮ್ಯಾಚ್ನಲ್ಲಿ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್ ಬ್ರಿಸ್ಬೇನ್ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಮೂರು ಟೆಸ್ಟ್ನಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ