2011ರ ವಿಶ್ವಕಪ್​ ಸಚಿನ್​ಗಾಗಿ, 2019 ಎಂಎಸ್​ಡಿಗಾಗಿ!; ಗ್ರೇಟ್​ ಫಿನಿಶರ್ ವಿದಾಯಕ್ಕೆ​ ಕೊಹ್ಲಿಯಿಂದ ಮಾಸ್ಟರ್​ ಪ್ಲಾನ್?

ICC World cup 2019: ಈ ಮೊದಲು ಕ್ರೀಡಾಂಗಣದಲ್ಲಿ ಸಚಿನ್​ ಎನ್ನುವ ಕೂಗು ಜೋರಾಗಿತ್ತು. ಅವರು ಬ್ಯಾಟ್ ಬೀಸಿದರೆ ಸಾಕು ಎಲ್ಲರೂ ಹರ್ಷೋದ್ಘಾರ ವ್ಯಕ್ತಪಡಿಸುತ್ತಿದ್ದರು. ಈ ಜಾಗವನ್ನು ತುಂಬಿದ ಭಾರತದ ಏಕೈಕ ಆಟಗಾರನೆಂದರೆ ಧೋನಿ.

Rajesh Duggumane | news18
Updated:July 4, 2019, 1:06 PM IST
2011ರ ವಿಶ್ವಕಪ್​ ಸಚಿನ್​ಗಾಗಿ, 2019 ಎಂಎಸ್​ಡಿಗಾಗಿ!; ಗ್ರೇಟ್​ ಫಿನಿಶರ್ ವಿದಾಯಕ್ಕೆ​ ಕೊಹ್ಲಿಯಿಂದ ಮಾಸ್ಟರ್​ ಪ್ಲಾನ್?
ಧೋನಿ-ಸಚಿನ್​
  • News18
  • Last Updated: July 4, 2019, 1:06 PM IST
  • Share this:
ಅದು 2011ರ ವಿಶ್ವಕಪ್​ ಮಹಾ ಸಮರ. 'ಗಾಡ್ ಆಫ್​ ಕ್ರಿಕೆಟ್' ಎನಿಸಿಕೊಂಡಿದ್ದ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಅವರ 6ನೇ ಹಾಗೂ ಕೊನೆಯ ವಿಶ್ವಕಪ್​ ಟೂರ್ನಿ ಅದಾಗಿತ್ತು. ಅದೃಷ್ಟ ಎಂಬಂತೆ ಈ ಟೂರ್ನಿ ಭಾರತದಲ್ಲೇ ಆಯೋಜನೆಯಾಗಿತ್ತು. ಅದಾಗಲೇ ಭಾರತದ ನಾಯಕ ಧೋನಿಯಿಂದ ಸಿಕ್ಸರ್​ ಸಿಂಗ್ ಯುವರಾಜ್ ತನಕ ಎಲ್ಲಾ ಆಟಗಾರರು 'ಈ ಭಾರಿಯ ವಿಶ್ವಕಪ್​ ಅನ್ನು ನೆಚ್ಚಿನ ಆಟಗಾರ ಸಚಿನ್​ಗಾಗಿ ನಾವು ಗೆದ್ದೆ ಗೆಲ್ಲುತ್ತೇವೆ' ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಹೇಳಿದಂತೆ ಅದನ್ನು ಸಾಧಿಸಿಯೂ ತೋರಿಸಿದ್ದು ಇಂದು ಇತಿಹಾಸ.

2011ರ ವಿಶ್ವಕಪ್​ ಗೆದ್ದ ನಂತರ ಎಲ್ಲಾ ಆಟಗಾರರು ವಿಶ್ವಕಪ್​ ಜೊತೆಗೆ ಸಚಿನ್​ ತೆಂಡೂಲ್ಕರ್ ಅವರನ್ನು ತಮ್ಮ ಹೆಗಲ ಮೇಲೆ ಎತ್ತಿಕೊಂಡು ಮುಂಬೈನ ವಾಂಖೇಡೆಯ ಇಡೀ ಕ್ರಿಡಾಂಗಣವನ್ನು ಒಂದು ಸುತ್ತು ಹಾಕಿ ಸಂಭ್ರಮಿಸಿದ್ದರು. ನೋಡುಗರ ಕಣ್ಣಂಚಿನಲ್ಲೂ ಈ ದೃಶ್ಯ ಒಂದು ಹನಿ ನೀರು ಜಿನುಗುವಂತೆ ಮಾಡಿದ್ದು ಸುಳ್ಳಲ್ಲ. ಭಾಗಶಃ ಇಂತಹ ಅಪರೂಪದ ಸನ್ನಿವೇಶವನ್ನು ಯಾವ ಕ್ರಿಕೆಟ್​ ಪ್ರೇಮಿಯೂ ಈವರೆಗೆ ಮರೆತಿರಲಾರ. ಅಲ್ಲದೆ ವಿಶ್ವದ ಯಾವ ಕ್ರಿಕೆಟ್ ಆಟಗಾರನಿಗೂ ಇಂತಹ ಹೃದಯಸ್ಪರ್ಶಿ ವಿದಾಯವನ್ನು ತಂಡದ ಸಹ ಆಟಗಾರರು ನೀಡಲು ಸಾಧ್ಯವೇ ಇಲ್ಲ ಎನ್ನುವಂತಿತ್ತು ಆ ದೃಶ್ಯ.

ಆದರೆ, ಇದೀಗ ಅಂತಹದ್ದೇ ಒಂದು ಸನ್ನಿವೇಶಕ್ಕೆ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್​ ಧೋನಿ ಸಾಕ್ಷಿಯಾಗಲಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ: ಧೋನಿಯ ನಿವೃತ್ತಿ ದಿನಾಂಕ ಫಿಕ್ಸ್..?


28 ವರ್ಷಗಳ ಬಳಿಕ ಭಾರತದ ವಿಶ್ವಕಪ್ ಕನಸು ನನಸು ಮಾಡಿದ್ದ ಹಾಗೂ ಭಾರತಕ್ಕೆ ಎಡರೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ವಿಶ್ವದ ಗ್ರೇಟ್ ಫಿನಿಶರ್​ಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಧೋನಿಗೆ ಇಂತಹದ್ದೇ ಹೃದಯಸ್ಪರ್ಶಿ ವಿದಾಯ ನೀಡಲು ನಾಯಕ ವಿರಾಟ್​ ಕೊಹ್ಲಿ ಸಹ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಕೊಹ್ಲಿಯ ಇಂತಹ ನಿರ್ಧಾರದ ಹಿಂದೆ ಕಾರಣವೂ ಇದೆ.

ಮಹೇಂದ್ರ ಸಿಂಗ್ ಧೋನಿ ಈ ಹಿಂದೆ ಯಾರೂ ಊಹಿಸದ ರೀತಿಯಲ್ಲಿ ಮೂರು ಮಾದರಿಯ ಕ್ರಿಕೆಟ್​ನ ನಾಯಕತ್ವಕ್ಕೆ ಏಕಾಏಕಿ ದಿಢೀರನೇ ನಿವೃತ್ತಿ ಘೋಷಿಸಿದ್ದರು. ಧೋನಿ ನಿವೃತ್ತಿಯ ನಂತರ ಈ ಸ್ಥಾನ ವಿರಾಟ್​ ಕೊಹ್ಲಿಗೆ ಅನಾಯಾಸವಾಗಿ ಒಲಿದುಬಂದಿತ್ತು. ಕೊಹ್ಲಿಗೆ ನಾಯಕ ಪಟ್ಟ ದೊರೆತಿದ್ದರು ಕಳೆದ ಮೂರು ವರ್ಷದಿಂದ ಅವರ ಬೆನ್ನಿಗೆ ನಿಂತು ನಾಯಕತ್ವದ ಒಂದೊಂದೆ ಪಟ್ಟುಗಳನ್ನು ತಂತ್ರಗಳನ್ನು ಹೇಳಿಕೊಟ್ಟು ಬೆಳೆಸಿದ್ದು, ಕೊಹ್ಲಿಯ ಈಗಿನ ಎಲ್ಲಾ ಸಾಧನೆಗಳ ಹಿಂದೆ ಇರುವುದು ಇದೇ ಮಹೇಂದ್ರ ಸಿಂಗ್ ಧೋನಿ ಎಂಬ ಶಕ್ತಿ ಎಂಬುದು ಇಂದು ಗುಟ್ಟಾಗೇನು ಉಳಿದಿಲ್ಲ.ಧೋನಿ ನಾಯಕತ್ವಕ್ಕೆ ವಿದಾಯ ನೀಡಿದಂತೆ ಟೆಸ್ಟ್​ ಕ್ರಿಕೆಟ್​ಗೂ ಧಿಢೀರೆಂದು ವಿದಾಯ ಘೋಷಿಸಿದ್ದರು. ಹೀಗೆ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡುವುದು ಅವರಿಗೆ ಹೊಸತೇನಲ್ಲ.

ಇದೀಗ ವಿಶ್ವಕಪ್​ ನಂತರ ಏಕದಿನ ಹಾಗೂ ಟಿ-20 ಮಾದರಿ ಕ್ರಿಕೆಟ್​ನಿಂದಲೂ ಅವರ ಅವರು ನಿವೃತ್ತಿ ಪಡೆಯಲಿದ್ದಾರೆ ಎಂಬ ಗಾಳಿ ಮಾತುಗಳು ಹರಿದಾಡುತ್ತಿವೆ. ಅಸಲಿಗೆ ಈ ಗಾಳಿ ಮಾತುಗಳು ಬಿಸಿಸಿಐ ಕಚೇರಿಯಿಂದಲೇ ಹೊರಬೀಳುತ್ತಿರುವುದು ಧೋನಿ ವಿದಾಯ ಕುರಿತ ಅನುಮಾನಕ್ಕೆ ಪುಷ್ಠಿ ನೀಡುವಂತಿದೆ. ಅಲ್ಲದೆ ಕೆಲವು ಹಿರಿಯ ಆಟಗಾರರು ಧೋನಿ ನಿವೃತ್ತಿಗೆ ಇದು ಸೂಕ್ತ ಸಮಯ ಎನ್ನುತ್ತಿದ್ದಾರೆ. ಹೀಗಾಗಿ ಅಚ್ಚರಿಯ ಬೆಳವಣಿಗೆಯಲ್ಲಿ ಧೋನಿ ತಮ್ಮ ಕ್ರಿಕೆಟ್​ ವೃತ್ತಿ ಜೀವನಕ್ಕೆ ಇದೇ ಟೂರ್ನಿಯಲ್ಲಿ ಪೂರ್ಣ ವಿರಾಮ ಇಟ್ಟರೂ ಅಚ್ಚರಿ ಇಲ್ಲ.

ಕ್ರಿಕೆಟ್ ಪಂಡಿತರು ಭಾರತದ ಕ್ರಿಕೆಟ್​ ಇತಿಹಾಸವನ್ನು ಸಾಮಾನ್ಯವಾಗಿ ಮೂರು ಪರ್ವಗಳಾಗಿ ವಿಂಗಡಿಸಿದ್ದಾರೆ. ಭಾರತ ಕ್ರಿಕೆಟ್ ಸಾಮರ್ಥ್ಯವನ್ನು ಮೊದ ಮೊದಲು ಇಡೀ ವಿಶ್ವಕ್ಕೆ ಪರಿಚಯಿಸಿದ ಕಪಿಲ್ ದೇವ್, ಭಾರತವನ್ನು ಕ್ರಿಕೆಟ್​ ರಂಗದಲ್ಲಿ ಉತ್ತುಂಗಕ್ಕೆ ಕರೆದೊಯ್ದ ಸಚಿನ್ ತೆಂಡೂಲ್ಕರ್ ಹಾಗೂ ಭಾರತ ಕ್ರಿಕೆಟ್​ಗೆ ಹೊಸ ರೂಪ ನೀಡಿ ಎರಡು ವಿಶ್ವಕಪ್ ಗೆದ್ದ, ಟೆಸ್ಟ್​ನಲ್ಲಿ ಅಗ್ರಸ್ಥಾನಕ್ಕೇರಿ ಸಾಧನೆ ಮಾಡಿದ ಮಹೇಂದ್ರ ಸಿಂಗ್ ಧೋನಿ ಪರ್ವ.

ಅದೊಂದು ಕಾಲವಿತ್ತು. ಸಚಿನ್ ಬ್ಯಾಟ್​ ಹಿಂದು ಅಂಗಳಕ್ಕೆ ನಡೆದರೆ ಎಲ್ಲೆಡೆ ಸಚಿನ್​.. ಸಚಿನ್​.. ಸಚಿನ್​...ಎಂಬ ಘೋಷವಾಕ್ಯದ ಹೊರತಾಗಿ ಬೇರೇನು ಕೇಳಿಸುತ್ತಿರಲಿಲ್ಲ. ಭಾರತದಲ್ಲಿ ಸಚಿನ್ ನಂತರ ಮತ್ತೆ ಇಂತಹ ಘೋಷವಾಕ್ಯಕ್ಕೆ ಅಭಿಮಾನಿಗಳ ಪ್ರೀತಿಗೆ ಪಾತ್ರವಾದ ಮತ್ತೊಬ್ಬ ಆಟಗಾರ ಎಂದರೆ ಮಹೇಂದ್ರ ಸಿಂಗ್ ಧೋನಿ. ಸಚಿನ್.. ಸಚಿನ್.. ಸಚಿನ್.. ಎನ್ನುತ್ತಿದ್ದ ಅದೇ ಪ್ರೇಕ್ಷಕರ ಗ್ಯಾಲರಿಗಳು ಇಂದು ಧೋನಿ...ಧೋನಿ...ಧೋನಿ.. ಎನ್ನುತ್ತಿವೆ.

ವಿಶ್ವ ಕ್ರಿಕೆಟ್​ ಕಂಡ ಚಾಣಾಕ್ಷ ನಾಯಕನಾಗಿ, ಅತ್ಯುತ್ತಮ ವಿಕೆಟ್ ಕೀಪರ್​ ಆಗಿ, ವಿಶ್ವದ ಗ್ರೇಟ್ ಫಿನಿಶರ್ ಆಗಿ, ಇಡೀ ವಿಶ್ವ ಹಾಗೂ ಭಾರತ ಕ್ರಿಕೆಟ್ ಕ್ಷೇತ್ರಕ್ಕೆ ಧೋನಿ ನೀಡಿರುವ ಕೊಡುಗೆ ಅಪಾರ. ತಮ್ಮ ತಾಳ್ಮೆಯ ನಾಯಕತ್ವ ಗುಣದಿಂದಲೇ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಇಂತಹ ಮಹಾನ್ ಆಟಗಾರನಿಗೆ ಸಚಿನ್ ಅವರಿಗೆ ನೀಡಿದಂತಹ ವಿದಾಯ ನೀಡಿದರೆ ತಪ್ಪೇನು? ಎಂಬುದು ಅವರ ಅಭಿಮಾನಿಗಳ ಮನದಾಸೆ. ಇದಕ್ಕೆ ನಾಯಕ ವಿರಾಟ್​ ಕೊಹ್ಲಿಯೂ ಮನಸ್ಸು ಮಾಡಿದ್ದು, ಇದೀಗ ತಂಡದ ಎಲ್ಲಾ ಆಟಗಾರರು 2011 ವಿಶ್ವಕಪ್ ಸಚಿನ್​ಗಾಗಿ,  2019 ವಿಶ್ವಕಪ್ ಧೋನಿಗಾಗಿ ಎನ್ನುತ್ತಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ ಸೆಮಿ ಫೈನಲ್​ ಪ್ರವೇಶಿಸಲು ಪಾಕ್​ಗೆ ಇನ್ನೂ ಇದೆ ಅವಕಾಶ​?; ನ್ಯೂಜಿಲೆಂಡ್​​ಗೆ ಕಾಡಿದ ಆತಂಕ

2019 ವಿಶ್ವಕಪ್​ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಬಲಾಢ್ಯ ತಂಡಗಳ ಎದುರು ಗೆದ್ದು ಬೀಗಿದೆ. ಜುಲೈ 6ರಿಂದ ವಿಶ್ವಕಪ್​ ಸೆಮಿಫೈನಲ್​ ಆರಂಭವಾಗಲಿದೆ. ಈಗಾಗಲೇ ಸೆಮಿಫೈನಲ್​ ಪ್ರವೇಶಿಸಿರುವ ಭಾರತ ವಿಶ್ವಕಪ್ ಫೈನಲ್ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ವಿಶ್ವ ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದರೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದೂ ಮರೆಯದ 1983 ಹಾಗೂ 2011ರ ದೃಶ್ಯಗಳು ಧೋನಿಯ ವಿದಾಯದೊಂದಿಗೆ ಮತ್ತೊಮ್ಮೆ ಕಣ್ಣೆದುರು ಮರು ಚಿತ್ರಿತವಾದರೆ ಅಚ್ಚರಿಯಿಲ್ಲ.

First published: July 4, 2019, 1:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading