ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಭಾರತ ಹೀನಾಯ ಸೋಲಿನ ಬಳಿಕ ಮತ್ತೊಮ್ಮೆ ವಿರಾಟ್ ಕೊಹ್ಲಿ ನಾಯಕತ್ವದ ಚರ್ಚೆಗಳು ಶುರುವಾಗಿವೆ. ಟೆಸ್ಟ್ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸತತ ನಾಲ್ಕು ಸೋಲುಗಳನ್ನು ಅನುಭವಿಸಿದ್ದು, ಹೀಗಾಗಿ ಕೊಹ್ಲಿ ಕಪ್ತಾನಗಿರಿ ಬಗ್ಗೆ ಪ್ರಶ್ನೆಗಳೆದ್ದಿವೆ. ಈ ಬಗ್ಗೆ ಚರ್ಚೆಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್, ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ನಲ್ಲೂ ಸೋತರೆ ಕೊಹ್ಲಿ ನಾಯಕನಾಗಿ ಉಳಿಯುವುದಿಲ್ಲ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಪನೇಸರ್, ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಆದರೆ ಇತ್ತೀಚಿನ ದಿನಗಳಲ್ಲಿ ತಂಡವು ಅವರ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಇದಕ್ಕೆ ಸಾಕ್ಷಿಯೇ ಕೊನೆಯ ನಾಲ್ಕು ಟೆಸ್ಟ್ ಪಂದ್ಯಗಳ ಫಲಿತಾಂಶ. ನನ್ನ ಪ್ರಕಾರ, ಕೊಹ್ಲಿ ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅದೇ ಅಜಿಂಕ್ಯ ರಹಾನೆ ನಾಯಕನಾಗಿ ಆಸ್ಟ್ರೇಲಿಯಾದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಈಗಾಗಲೇ ರೋಹಿತ್ ಶರ್ಮ ಅವರನ್ನು ನಾಯಕನಾಗಿಸಲು ಒಂದು ವರ್ಗ ಸಿದ್ಧವಾಗಿದೆ. ಹೀಗಿರುವಾಗ ಕೊಹ್ಲಿ ಇನ್ನೊಂದು ಪಂದ್ಯ ಸೋತರೆ ನೈತಿಕ ಹೊಣೆ ಅವರೇ ನಾಯಕತ್ವ ತೊರೆಯಲಿದ್ದಾರೆ ಎಂದು ಭಾವಿಸುತ್ತೇನೆ ಎಂದು ಮಾಂಟಿ ಪನೇಸರ್ ತಿಳಿಸಿದ್ದಾರೆ.
ಅತ್ತ ವಿರಾಟ್ ಕೊಹ್ಲಿ ಟೆಸ್ಟ್ನಲ್ಲಿ ಉತ್ತಮ ಫಾರ್ಮ್ ಮುಂದುವರೆಸಿದ್ದು, ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 74 ರನ್ ಬಾರಿಸಿದ್ದರೆ, ಇಂಗ್ಲೆಂಡ್ ವಿರುದ್ದದ 2ನೇ ಇನಿಂಗ್ಸ್ನಲ್ಲಿ 72 ರನ್ಗಳ ಉತ್ತಮ ಕಾಣಿಕೆ ನೀಡಿದ್ದರು. ಇದಾಗ್ಯೂ ಕೊಹ್ಲಿ ತಂಡದ ಒಟ್ಟಾರೆ ಪ್ರದರ್ಶನ ಉತ್ತಮವಾಗಿ ಮೂಡಿಬರುತ್ತಿಲ್ಲ ಎಂಬ ಚಿಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಇದೆ.
ಇನ್ನು ಚೆನ್ನೈನಲ್ಲೇ ನಡೆಯಲಿರುವ 2ನೇ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವ ಸೂಚನೆ ಕೂಡ ಇದ್ದು, ಅದರಂತೆ ಇಶಾಂತ್ ಸ್ಥಾನದಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಶಾದಾಬ್ ನದೀಮ್ ಸ್ಥಾನದಲ್ಲಿ ಕುಲ್ದೀಪ್ ಯಾದವ್ ಕಣಕ್ಕಿಳಿಯುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ