ನವದೆಹಲಿ, ಡಿ. 14: ಸೌತ್ ಆಫ್ರಿಕಾ
(South Africa) ಪ್ರವಾಸದಲ್ಲಿ ನಿಗದಿಯಾಗಿರುವ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ
(Virat Kohli) ಹಿಂದಕ್ಕೆ ಸರಿದಿದ್ದಾರೆ. ಜನವರಿ 19ರಿಂದ ನಡೆಯುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ತಾನು ಅಲಭ್ಯನಿದ್ದೇನೆ ಎಂದು ಕೊಹ್ಲಿ ತಿಳಿಸಿದ್ದಾರೆ. ವೈಯಕ್ತಿಕ ಕಾರಣಕ್ಕೆ ಕಿರು ಅವಧಿಗೆ ವಿರಾಮ ತೆಗೆದುಕೊಳ್ಳುವುದಾಗಿ ಅವರು ಬಿಸಿಸಿಐಗೆ ತಿಳಿಸಿದ್ಧಾರೆನ್ನಲಾಗಿದೆ. ಆದರೆ, ಏಕದಿನ ಕ್ರಿಕೆಟ್ ಸರಣಿಗೆ ಮುನ್ನ ನಡೆಯುವ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಡಲಿದ್ಧಾರೆ.
ಸೌತ್ ಆಫ್ರಿಕಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸುವ ವೇಳೆ ಬಿಸಿಸಿಐ ಏಕದಿನ ಮತ್ತು ಟಿ20 ತಂಡಗಳಿಗೆ ರೋಹಿತ್ ಶರ್ಮಾ ಅವರೇ ನಾಯಕ ಎಂದು ಘೋಷಿಸಿತ್ತು. ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ಅವರನ್ನ ಕ್ಯಾಪ್ಟನ್ ಆಗಿ ಮುಂದುವರಿಸಲಾಗಿದೆ. ಟಿ20 ವಿಶ್ವಕಪ್ಗೆ ಮುನ್ನ ವಿರಾಟ್ ಕೊಹ್ಲಿ ಅವರು ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವ ಬಿಡುವುದಾಗಿ ಹೇಳಿದ್ದರು. ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಕೊಹ್ಲಿ ವಿರಾಮ ತೆಗೆದುಕೊಂಡಿದ್ದರು. ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಿದ್ದರು.
ನಿನ್ನೆಯಷ್ಟೇ ರೋಹಿತ್ ಶರ್ಮಾ ಅವರು ನೆಟ್ ಪ್ರಾಕ್ಟೀಸ್ ಮಾಡುವಾಗ ಕೈಗೆ ಗಾಯ ಮಾಡಿಕೊಂಡಿದ್ದು, ಸೌತ್ ಆಫ್ರಿಕಾ ಎದುರಿನ ಟೆಸ್ಟ್ ಸರಣಿಗೆ ಅಲಭ್ಯರಿದ್ಧಾರೆ ಎಂದು ವರದಿಗಳು ಹೇಳಿವೆ. ಆದರೆ, ಏಕದಿನ ಸರಣಿಯಷ್ಟರಲ್ಲಿ ಅವರು ಚೇತರಿಸಿಕೊಂಡು ಸೌತ್ ಆಫ್ರಿಕಾಗೆ ತೆರಳುವ ನಿರೀಕ್ಷೆ ಇದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬಹಳ ಸಂಶಯಾಸ್ಪದವಿರುವುದು ಮೇಲ್ನೋಟಕ್ಕೆ ತೋರುತ್ತಿದೆ. ಅವರಿಬ್ಬರ ಮಧ್ಯೆ ವೈಯಕ್ತಿಕ ಭಿನ್ನಾಭಿಪ್ರಾಯ ಬಹಳ ದಿನದಿಂದ ಇದೆ ಎಂದು ಮೂಲಗಳು ಹೇಳುತ್ತವೆ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹಿಂದಕ್ಕೆ ಸರಿದಿದ್ದರಬಹುದು ಎಂಬ ಸಂದೇಹ ವ್ಯಕ್ತವಾಗಿದೆ.
ಇದನ್ನೂ ಓದಿ: ಭಾರತಕ್ಕೆ ಶಾಕ್; ರೋಹಿತ್ ಶರ್ಮಾಗೆ ಗಂಭೀರ ಗಾಯ; ಸೌತ್ ಆಫ್ರಿಕಾ ಟೆಸ್ಟ್ ಸರಣಿಗೆ ಅಲಭ್ಯ
ಹಿಂದೆಯೂ ಇಂಥ ನಿದರ್ಶನಗಳಿವೆ:
ಟೀಮ್ ಇಂಡಿಯಾದಲ್ಲಿ ಈ ಹಿಂದೆಯೂ ಆಟಗಾರರ ನಡುವಿನ ವೈಮನಸ್ಸು, ಶೀತಲ ಸಮರ ಇದ್ದೇ ಇತ್ತು ಎಂದು ಬಲ್ಲವರು ಹೇಳುತ್ತಾರೆ. ಹಿಂದೆ ಕಪಿಲ್ ದೇವ್ ಮತ್ತು ಸುನೀಲ್ ಗವಾಸ್ಕರ್ ಮಧ್ಯೆ ಇದೇ ರೀತಿ ಭಿನ್ನಾಭಿಪ್ರಾಯಗಳಿದ್ದವೆನ್ನಲಾಗಿದೆ. ನಂತರದ ಕಾಲಘಟ್ಟದಲ್ಲಿ ಮೊಹಮ್ಮದ್ ಅಜರುದ್ದೀನ್ ಮತ್ತು ಸಚಿನ್ ತೆಂಡೂಲ್ಕರ್ ಮಧ್ಯೆ; ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಮಧ್ಯೆ; ಎಂಎಸ್ ಧೋನಿ ಮತ್ತು ವಿರೇಂದರ್ ಸೆಹ್ವಾಗ್ ಮಧ್ಯೆ ಈ ರೀತಿಯ ವೈಯಕ್ತಿಕ ಪ್ರತಿಷ್ಠೆ ವಿಚಾರಗಳು ಕಾಣಿಸಿಕೊಳ್ಳುತ್ತಿದ್ದವು. ಭಾರತದ ಹಿರಿಯ ಆಟಗಾರರನ್ನ ಧೋನಿ ನಿರ್ಲಕ್ಷಿಸುತ್ತಿದ್ದರು ಎಂಬ ಮಾತುಗಳಂತೂ ದಟ್ಟವಾಗಿ ಕೇಳಿಬರುತ್ತಿದ್ದವು.
ಇವೇನೇ ಇದ್ದರೂ ಅಂತಿಮವಾಗಿ ಮೈದಾನಕ್ಕೆ ಕಾಲಿಟ್ಟರೆ ಎಲ್ಲರೂ ಒಂದು ತಂಡವಾಗಿ ಆಡುತ್ತಿದ್ದುದು ಹೌದು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಧ್ಯೆ ಏನೇ ಇದ್ದಿರಬಹುದಾದರೂ ಇದೂವರೆಗೂ ಆಟದ ವಿಚಾರಕ್ಕೆ ಬಂದರೆ ಯಾವ ಆಟಗಾರನೂ ಸ್ವಾರ್ಥಿಯಾಗಿರುವುದು ಕಂಡುಬಂದಿಲ್ಲ ಎಂದು ಮೂಲಗಳು ಹೇಳುತ್ತವೆ.
ಇದನ್ನೂ ಓದಿ: ರೋಹಿತ್ ಶರ್ಮಾ ಓಡಿಐ ಟೀಮ್ಗೂ ಕ್ಯಾಪ್ಟನ್; ದಕ್ಷಿಣ ಆಫ್ರಿಕಾ ಸರಣಿಗೆ ಟೆಸ್ಟ್ ತಂಡ ಪ್ರಕಟ
ಬಿಸಿಸಿಐ ಕ್ರಮ ತೆಗೆದುಕೊಳ್ಳಲಿ:
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಮೂಡಿರಬಹುದಾದ ಬಿರುಕು ಕೇವಲ ತಾತ್ಕಾಲಿಕವಾಗಿ ಮಾತ್ರ ಇರಲಿ. ಇಬ್ಬರು ಅದ್ಭುತ ಕ್ರಿಕೆಟಿಗರು ವೈಯಕ್ತಿಕ ಜಿದ್ದಾಜಿದ್ದಿಗೆ ಬಿದ್ದರೆ ಅದು ತಂಡದ ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಇಂಥದ್ದಕ್ಕೆ ಬಿಸಿಸಿಐ ಯಾವತ್ತೂ ನೀರೆರೆದು ಪೋಷಿಸಬಾರದು. ಅಗತ್ಯ ಕ್ರಮ ಕೈಗೊಂಡು ಆಟಗಾರರ ನಡುವೆ ಬಾಂಧವ್ಯ ವೃದ್ಧಿಸುವ ಕೆಲಸ ಮಾಡಲಿ ಎಂಬುದು ಕ್ರಿಕೆಟ್ ಪ್ರೇಮಿಗಳ ಆಶಯ.
(ಮಾಹಿತಿ ಮೂಲ: ಟೈಮ್ಸ್ ಆಫ್ ಇಂಡಿಯಾ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ