Virat Kohli- ಮೊದಲ ಟೆಸ್ಟ್ ಡ್ರಾ ಆದರೂ ಮುಂದಿನ ಪಂದ್ಯಗಳಿಗೆ ಕ್ಯಾಪ್ಟನ್ ಕೊಹ್ಲಿಗೆ ಸಿಕ್ಕಿತು ಸೂತ್ರ

ನಾಲ್ವರು ವೇಗದ ಬೌಲರ್ಸ್ ಹಾಗೂ ಒಬ್ಬ ಸ್ಪಿನ್ನರ್ ಎಂಬ ಬೌಲಿಂಗ್ ಸೂತ್ರದೊಂದಿಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನ ಆಡಿಸಲಾಗಿತ್ತು. ಅದೀಗ ಯಶಸ್ವಿಯಾದಂತಿದೆ. ಇದೇ ಸಂಯೋಜನೆ ಇಂಗ್ಲೆಂಡ್ ವಿರುದ್ಧದ ಮುಂದಿನ ಪಂದ್ಯಗಳಲ್ಲೂ ಇರುವ ಸಾಧ್ಯತೆ ಇದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಲಂಡನ್: ಇಂಗ್ಲೆಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ನಿನ್ನೆ ಮಳೆಯಿಂದಾಗಿ ವಾಶ್ ಔಟ್ ಆಯಿತು. ಭಾರತದ ಗೆಲುವು ಬಹುತೇಕ ನಿಶ್ಚಿತ ಎಂಬಂತಿದ್ದ ಸ್ಥಿತಿಯಲ್ಲಿ ಆತಿಥೇಯರಿಗೆ ಮಳೆರಾಯ ಆಪದ್ಬಾಂಧವನಾಗಿ ಬಂದಿದ್ದ. ಪಂದ್ಯದ ಬಹುತೇಕ ಭಾಗ ಭಾರತದ ಹಿಡಿತದಲ್ಲೇ ಇತ್ತು. ಹೀಗಾಗಿ, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೂ ಭಾರತೀಯ ಆಟಗಾರರ ಆತ್ಮವಿಶ್ವಾಸ ಮಾತ್ರ ಗೆಲುವು ಪಡೆದಷ್ಟೇ ಹೆಚ್ಚಾಗಿದೆ. ಪಂದ್ಯದ ನಾಲ್ಕನೇ ದಿನ ಭಾರತ ತನ್ನ ಎರಡನೇ ಇನ್ನಿಂಗ್ಸ್ ಆಡಿದ ರೀತಿಯೇ ಆಟಗಾರರ ಆತ್ಮವಿಶ್ವಾಸಕ್ಕೆ ಕೈಕನ್ನಡಿಯಂತಿತ್ತು. ಪಂದ್ಯದ ಬಳಿಕ ನಿನ್ನೆ ವಿರಾಟ್ ಕೊಹ್ಲಿ ತಮ್ಮ ತಂಡದ ಆಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಮುಂದಿನ ಪಂದ್ಯಗಳಿಗೆ ತಂಡದ ಸ್ವರೂಪ ಹೇಗಿರಬೇಕೆಂಬ ಸೂತ್ರ ತನಗೆ ಸಿಕ್ಕಿರುವುದನ್ನು ಕೊಹ್ಲಿ ಹೇಳಿಕೊಂಡರು. ಮೊದಲ ಟೆಸ್ಟ್​ನಲ್ಲಿ ಇದ್ದ ಆಟಗಾರರ ಸಂಯೋಜನೆಯೇ ಉಳಿದ ಪಂದ್ಯಗಳಿಗೂ ಇರಲಿದೆ ಎಂದು ಕೊಹ್ಲಿ ಹೇಳಿದ್ದಾರೆ. ಅಂದರೆ ಭಾರತದ ತಂಡದಲ್ಲಿ ನಾಲ್ವರು ವೇಗದ ಬೌಲರ್​ಗಳು ಹಾಗೂ ಒಬ್ಬ ಸ್ಪಿನ್ನರ್ ಇರಲಿದ್ದಾರೆ. ಮೊದಲ ಟೆಸ್ಟ್​​ನಲ್ಲಿ ಬ್ಯಾಟಿಂಗ್​ನಲ್ಲಿ ಭರ್ಜರಿಯಾಗಿ ಆಡಿದ್ದ ರವೀಂದ್ರ ಜಡೇಜಾ ಅವರು ಸ್ಪಿನ್ನರ್ ಹಾಗು ಆಲ್​ರೌಂಡರ್ ಆಗಿ ಮುಂದಿನ ಪಂದ್ಯಗಳಲ್ಲೂ ಆಡುವ ನಿರೀಕ್ಷೆ ಇದೆ.

ಡ್ರಾ ಆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಎಲ್ಲಾ ನಾಲ್ವರು ವೇಗದ ಬೌಲರ್​ಗಳು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್​ನಲ್ಲಿ ಕೆ ಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿ ಫಾರ್ಮ್​ ಕಂಡುಕೊಂಡಿದ್ಧಾರೆ. ಭಾರತಕ್ಕೆ 95 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ದೊರಕಲು ರಾಹುಲ್ ಜೊತೆಗೆ ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ಕೂಡ ಕಾರಣ. ಹಾಗೆಯೇ, ಬಾಲಂಗೋಚಿಗಳ ಕೊಡುಗೆ ಕ್ಯಾಪ್ಟನ್ ಕೊಹ್ಲಿಗೆ ಸಮಾಧಾನ ತಂದಿದೆ. ಮೊದಲ ಇನ್ನಿಂಗ್ಸ್​ನ ಒಂದು ಹಂತದಲ್ಲಿ ನಮಗೆ 40 ರನ್​ಗಳ ಲೀಡ್ ಸಿಗಬಹುದು ಎಂದೆಣಿಸಿದ್ದೆವು. ಆದರೆ, ಮೊಹಮ್ಮದ್ ಶಮಿ, ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರು ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಕಾರಣಕ್ಕೆ ಭಾರತಕ್ಕೆ ದೊಡ್ಡ ಮೊತ್ತದ ಮುನ್ನಡೆ ಸಿಕ್ಕಿತು ಎಂದು ಕೊಹ್ಲಿಯೇ ಹೇಳಿಕೊಂಡರು..

ಇದನ್ನೂ ಓದಿ: Neeraj Chopra: ಚಿನ್ನ ಗೆದ್ದ ನೀರಜ್​ಗೆ ಬಹುಮಾನಗಳ ಸುರಿಮಳೆ; ಚೋಪ್ರಾಗೆ ಸಿಕ್ಕ ನಗದು ಪುರಸ್ಕಾರಗಳೆಷ್ಟು ಗೊತ್ತಾ?

ನಿನ್ನೆ ನಾಟಿಂಗ್ ಹ್ಯಾಂನಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 183 ರನ್​ಗೆ ಅಂತ್ಯವಾಯಿತು. ಇದಕ್ಕೆ ಪ್ರತಿಯಾಗಿ ಭಾರತದ ಮೊದಲ ಇನ್ನಿಂಗ್ಸ್ 278 ರನ್​ವರೆಗೂ ಮುಂದುವರಿಯಿತು. 95 ರನ್​ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆಡಿದ ಇಂಗ್ಲೆಂಡ್ 303 ರನ್ ಗಳಿಸಿ ಭಾರತದ ಗೆಲುವಿಗೆ 209 ರನ್ ಗುರಿ ನೀಡಿತು. ಪಂದ್ಯದ ಆರಂಭದಲ್ಲಿ ಬೌಲರ್​ಗಳಿಗೆ ಹೆಚ್ಚು ಅನುಕೂಲಕರವಾಗಿದ್ದ ಈ ಪಿಚ್​ನಲ್ಲಿ ಕೊನೆಯ ಎರಡು ಮೂರು ದಿನ ಬ್ಯಾಟುಗಾರರಿಗೆ ಸಹಾಯಕವಾಗುವ ನಿರೀಕ್ಷೆ ಇತ್ತು. ಹೀಗಾಗಿ, ಭಾರತಕ್ಕೆ 209 ರನ್​ಗಳ ಗುರಿ ಕಷ್ಟಸಾಧ್ಯವಾಗಿರಲಿಲ್ಲ. ಪಂದ್ಯದ ಕೊನೆಯ ದಿನ ಮಳೆಯು ಭಾರತದ ಗೆಲುವಿಗೆ ಅಡ್ಡಿಯಾಗಿದ್ದು ಹೌದು. ಭಾರತದ ಪರ ಜಸ್​ಪ್ರೀತ್ ಬುಮ್ರಾ ಒಟ್ಟಾರೆ 10 ವಿಕೆಟ್ ಪಡೆದು ಬ್ಯಾಟಿಂಗ್​ನಲ್ಲೂ ಮಿಂಚಿದರು. ಕೆಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ಬುಮ್ರಾ ಈ ಮೂವರು ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪ್ರಮುಖ ಸ್ಟಾರ್​ಗಳಾಗಿ ಪರಿಣಮಿಸಿದರು.

ಇಂಗ್ಲೆಂಡ್ ಮತ್ತು ಭಾರತದ ಟೆಸ್ಟ್ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿವೆ. ಇದೀಗ ಎರಡನೇ ಟೆಸ್ಟ್ ಪಂದ್ಯ ಆ. 12ರಂದು ಲಂಡನ್ ನಗರದ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಇನ್ನೂ ಮೂರು ಪಂದ್ಯಗಳು ಲಂಡನ್​ನ ದಿ ಓವಲ್, ಲೀಡ್ಸ್ ಮತ್ತು ಮ್ಯಾಂಚೆಸ್ಟರ್​ನಲ್ಲಿ ನಡೆಯಲಿವೆ.

ಇದನ್ನೂ ಓದಿ: Explainer: ಭಾರತೀಯ ಕ್ರೀಡೆಯಲ್ಲಿ ಧ್ಯಾನ್ ಚಂದ್‌ ಮಹತ್ವವೇನು? ಅವರ ಕೊಡುಗೆಗಳೇನು?

ಸ್ಕೋರು ವಿವರ:

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 65.4 ಓವರ್ 183/10
(ಜೋ ರೂಟ್ 64, ಜಾನಿ ಬೇರ್​ಸ್ಟೋ 29, ಸ್ಯಾಮ್ ಕುರನ್ 27, ಜ್ಯಾಕ್ ಕ್ರಾಲೀ 27, ಡಾಮ್ ಸಿಬ್ಲೇ 18 ರನ್ – ಜಸ್​ಪ್ರೀತ್ ಬುಮ್ರಾ 46/4, ಮೊಹಮ್ಮದ್ ಶಮಿ 28/3, ಶಾರ್ದೂಲ್ ಠಾಕೂರ್ 41/2)

ಭಾರತ ಮೊದಲ ಇನ್ನಿಂಗ್ಸ್ 84.5 ಓವರ್ 278/10
(ಕೆಎಲ್ ರಾಹುಲ್ 84, ರವೀಂದ್ರ ಜಡೇಜಾ 56, ರೋಹಿತ್ ಶರ್ಮಾ 36, ಜಸ್​ಪ್ರೀತ್ ಬುಮ್ರಾ 28, ರಿಷಭ್ ಪಂತ್ 25, ಮೊಹಮ್ಮದ್ ಶಮಿ 13 ರನ್ – ಓಲೀ ರಾಬಿನ್ಸನ್ 85/5, ಜೇಮ್ಸ್ ಆಂಡರ್ಸನ್ 54/4)

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್  85.5 ಓವರ್ 303/10
(ಜೋ ರೂಟ್ 109, ಸ್ಯಾಮ್ ಕುರನ್ 32, ಜಾನಿ ಬೇರ್​ಸಟೋ 30, ಡಾಮ್ ಸಿಬ್ಲೇ 28, ಡ್ಯಾನ್ ಲಾರೆನ್ಸ್ 25, ಜೋಸ್ ಬಟ್ಲರ್ 17, ರೋರೀ ಬರ್ನ್ಸ್ 18, ಓಲೀ ರಾಬಿನ್ಸನ್ 15 ರನ್ – ಜಸ್​ಪ್ರೀತ್ ಬುಮ್ರಾ 64/5, ಶಾರ್ದೂಲ್ ಠಾಕೂರ್ 37/2, ಮೊಹಮ್ಮದ್ ಸಿರಾಜ್ 84/2)

ಭಾರತ ಎರಡನೇ ಇನ್ನಿಂಗ್ಸ್ 14 ಓವರ್ 52/1
(ಕೆಎಲ್ ರಾಹುಲ್ 26, ರೋಹಿತ್ ಶರ್ಮಾ ಅಜೇಯ 12, ಚೇತೇಶ್ವರ್ ಪೂಜಾರ ಅಜೇಯ 12 ರನ್)
Published by:Vijayasarthy SN
First published: