Virat Kohli: ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಅರ್ಧದಲ್ಲೇ ವಿರಾಟ್ ಕೊಹ್ಲಿ ವಾಪಾಸ್..?

ಏಕದಿನ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 9.10 ಕ್ಕೆ ಆರಂಭವಾಗಲಿದ್ದು, ಹಾಗೆಯೇ ಟಿ20 ಪಂದ್ಯಗಳು ಮಧ್ಯಾಹ್ನ 1.40 ಕ್ಕೆ ನಡೆಯಲಿದೆ. ಇನ್ನು ಡೇ-ನೈಟ್​ ಟೆಸ್ಟ್ ಪಂದ್ಯ ಬೆಳಿಗ್ಗೆ 9.30 ರಿಂದ ಆರಂಭವಾದರೆ, ಉಳಿದೆರೆಡು ಟೆಸ್ಟ್​ ಪಂದ್ಯಗಳು ಮುಂಜಾನೆ 5 ಕ್ಕೆ ಶುರುವಾಗಲಿದೆ.

Virat Kohli

Virat Kohli

 • Share this:
  ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾ ಸಜ್ಜಾಗಿ ನಿಂತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನವೆಂಬರ್ 10 ರಂದು ಮುಕ್ತಾಯಗೊಳ್ಳಲಿದ್ದು, ಅದರ ಬೆನ್ನಲ್ಲೇ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಸೀಸ್​ ವಿರುದ್ಧ ಸರಣಿಗಾಗಿ ಪ್ರಯಾಣ ಬೆಳೆಸಲಿದೆ. ಈ ಸರಣಿಯಲ್ಲಿ ಭಾರತ 4 ಟೆಸ್ಟ್, 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ. ಆದರೀಗ ಬಿಸಿಸಿಐ ಮೂಲಗಳಿಂದ ಹೊರಬಿದ್ದಿರುವ ಮಾಹಿತಿ ಪ್ರಕಾರ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅರ್ಧದಲ್ಲೇ ವಾಪಾಸಾಗುವ ಸಾಧ್ಯತೆಯಿದೆ.

  ಹೌದು, ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಕಾರಣ ಇದೇ ಸಮಯದಲ್ಲಿ ಕೊಹ್ಲಿ ತಂದೆಯಾಗುವ ಶುಭ ಸೂಚನೆ ಸಿಕ್ಕಿರುವುದು. ಕೊಹ್ಲಿ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಹೆರಿಗೆ ದಿನಾಂಕ ಜನವರಿಯಲ್ಲಿ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಪತ್ನಿ ಜೊತೆಗಿರಲು ಕೊಹ್ಲಿ ಭಾರತಕ್ಕೆ ಮರಳುವ ಸಾಧ್ಯತೆಯಿದೆ.

  ಡಿಸೆಂಬರ್ 3ನೇ ವಾರದಲ್ಲಿ ಟೆಸ್ಟ್ ಪಂದ್ಯಗಳು ಆರಂಭವಾಗಲಿದ್ದು, ಇದಕ್ಕೂ ಮುನ್ನ ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗುತ್ತಿದೆ.  ಬಿಸಿಸಿಐ ಆಟಗಾರರ ಕುಟುಂಬಕ್ಕೂ ಆದ್ಯತೆ ನೀಡುತ್ತದೆ. ಒಂದು ವೇಳೆ ಕೊಹ್ಲಿ, ಕುಟುಂಬದೊಂದಿಗೆ ಸಮಯ ಕಳೆಯಬಕೆಂದು ಬಯಸಿದ್ದೇ ಆದಲ್ಲಿ ಅವರಿಗೆ ಮರಳುವ ಅವಕಾಶ ನೀಡಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಒಂದು ವೇಳೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿದರೆ, ಟೆಸ್ಟ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಇದಾಗ್ಯೂ ಕೆಲ ಮೂಲಗಳ ಪ್ರಕಾರ ಕೊಹ್ಲಿ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.

  ಇನ್ನು ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ. ಹಾಗೆಯೇ ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್​ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್​ ಬ್ರಿಸ್ಬೇನ್​ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ.

  ಏಕದಿನ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 9.10 ಕ್ಕೆ ಆರಂಭವಾಗಲಿದ್ದು, ಹಾಗೆಯೇ ಟಿ20 ಪಂದ್ಯಗಳು ಮಧ್ಯಾಹ್ನ 1.40 ಕ್ಕೆ ನಡೆಯಲಿದೆ. ಇನ್ನು ಡೇ-ನೈಟ್​ ಟೆಸ್ಟ್ ಪಂದ್ಯ ಬೆಳಿಗ್ಗೆ 9.30 ರಿಂದ ಆರಂಭವಾದರೆ, ಉಳಿದೆರೆಡು ಟೆಸ್ಟ್​ ಪಂದ್ಯಗಳು ಮುಂಜಾನೆ 5 ಕ್ಕೆ ಶುರುವಾಗಲಿದೆ.

  ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾದ ಟೀಮ್ ಇಂಡಿಯಾ

  ಟಿ20 ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹರ್, ವರುಣ್ ಚಕ್ರವರ್ತಿ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಜಸ್​ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ

  ಏಕದಿನ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಶುಭ್​ಮನ್ ಗಿಲ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದುಲ್ ಠಾಕೂರ್

  ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪ ನಾಯಕ), ಹನುಮ ವಿಹಾರಿ, ಶುಭ್​ಮನ್ ಗಿಲ್, ವೃದ್ಧಿಮಾನ್ ಸಾಹ, ರಿಷಭ್ ಪಂತ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್

  ಇದನ್ನೂ ಓದಿ: IPL 2020: ಇಲ್ಲಿವರೆಗೂ ಈತ ಹೇಳಿದ ಭವಿಷ್ಯ ನಿಜವಾಗಿದೆ: ಈ ಬಾರಿ ಕಪ್ ಗೆಲ್ಲುವ ತಂಡವನ್ನೂ ತಿಳಿಸಿದ್ದಾನೆ..!
  Published by:zahir
  First published: