Interesting Facts- ಮೂರು ಮಾದರಿ ಕ್ರಿಕೆಟ್​ನಲ್ಲಿ 50 ಗೆಲುವು ಕಂಡ ವಿಶ್ವದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ

Big Stats and Milestones in IND vs NZ Test Series- ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಟಗಾರರಿಂದ ಹಲವು ದಾಖಲೆಗಳು, ಮೈಲಿಗಲ್ಲುಗಳು ಸೃಷ್ಟಿಯಾಗಿವೆ. ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
    ಮುಂಬೈ, ಡಿ. 6: ನ್ಯೂಜಿಲೆಂಡ್ ವಿರುದ್ಧ ಭಾರತ ಟಿ20 ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಟೆಸ್ಟ್ ಸರಣಿಯನ್ನೂ ಗೆದ್ದಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ನಲ್ಲಿ ಹಾಗೂ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿದೆ. ಈ ವೇಳೆ ಹಲವು ದಾಖಲೆ, ಮೈಲಿಗಲ್ಲುಗಳು ಸೃಷ್ಟಿಯಾಗಿವೆ. ಅದರಲ್ಲಿ ವಿರಾಟ್ ಕೊಹ್ಲಿ ಅವರ ಸ್ಪೆಷಲ್ ಫಿಫ್ಟಿ ದಾಖಲೆ, ಅಶ್ವಿನ್ ಅವರ ಮೈಲಿಗಲ್ಲು ಮೊದಲಾದವು ಇವೆ. ಅವುಗಳತ್ತ ಒಂದು ನೋಟ.

    ವಿರಾಟ್ ಕೊಹ್ಲಿ ಫಿಫ್ಟಿ ದಾಖಲೆ:

    ಭಾರತದ ವಿರಾಟ್ ಕೊಹ್ಲಿ ಹಲವು ದಾಖಲೆಗಳ ಸರದಾರ. ವಿಶ್ವದ ಅತ್ಯುತ್ತಮ ಕ್ರಿಕೆಟಿಗ ಎಂದು ಹಲವರು ಪರಿಗಣಿಸುತ್ತಾರೆ. ಟಿ20, ಏಕದಿನ ಮತ್ತು ಟೆಸ್ಟ್ ಈ ಮೂರು ಮಾದರಿಯ ಕ್ರಿಕೆಟ್​ನಲ್ಲಿ 50ಕ್ಕೂ ಹೆಚ್ಚು ರನ್​ಗಳ ಸರಾಸರಿ ಹೊಂದಿದ್ದಾರೆ. ವಿಶ್ವದ ಕೆಲವೇ ಆಟಗಾರರು ಈ ದಾಖಲೆ ಹೊಂದಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಇನ್ನೂ ವಿಶೇಷ 50ರ ದಾಖಲೆ ಹೊಂದಿದ್ಧಾರೆ. ಅದೆಂದರೆ, ಮೂರು ಮಾದರಿಯ ಕ್ರಿಕೆಟ್​ನಲ್ಲಿ ಅವರು 50ಕ್ಕೂ ಹೆಚ್ಚು ಪಂದ್ಯಗಳನ್ನ ಗೆದ್ದಿದ್ದಾರೆ. ನಾಯಕನಾಗಿ ಅಥವಾ ಆಟಗಾರನಾಗಿ ಅವರು ಪ್ರತೀ ಮಾದರಿ ಕ್ರಿಕೆಟ್​ನಲ್ಲೂ ಟೀಮ್ ಇಂಡಿಯಾದ 50ಕ್ಕೂ ಹೆಚ್ಚು ಗೆಲುವುಗಳಲ್ಲಿ ಭಾಗಿಯಾಗಿದ್ದಾರೆ.

    ಭಾರತದ ಅತಿದೊಡ್ಡ ಅಂತರದ ಟೆಸ್ಟ್ ಗೆಲುವು:

    ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ 372 ರನ್​ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿತು. ಇದು ಭಾರತ ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಿಸಿರುವ ಅತಿದೊಡ್ಡ ಗೆಲುವಾಗಿದೆ. 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 337 ರನ್​ಗಳ ಅಂತರದಿಂದ ಗೆಲುವು ಸಾಧಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

    ಭಾರತದಲ್ಲಿ ಆರ್ ಅಶ್ವಿನ್ 300ನೇ ವಿಕೆಟ್ ಮೈಲಿಗಲ್ಲು:

    ಭಾರತದ ಆರ್ ಅಶ್ವಿನ್ ಮುಂಬೈ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಕಿತ್ತರು. ಈ ಮೂಲಕ ಅವರು ಭಾರತದ ನೆಲದಲ್ಲಿ 300 ಟೆಸ್ಟ್ ವಿಕೆಟ್ ಮೈಲಿಗಲ್ಲು ತಲುಪಿದರು. ಅನಿಲ್ ಕುಂಬ್ಳೆ ಬಳಿಕ ಈ ಸಾಧನೆ ಮಾಡಿದ ಏಕೈಕ ಭಾರತೀಯ ಬೌಲರ್ ಅವರು. ಅನಿಲ್ ಕುಂಬ್ಳೆ ತಮ್ಮ ವೃತ್ತಿಜೀವನದಲ್ಲಿ ಭಾರತದ ನೆಲದಲ್ಲಿ 350 ಟೆಸ್ಟ್ ವಿಕೆಟ್ ಪಡೆದಿದ್ದಾರೆ. ಆರ್ ಅಶ್ವಿನ್ ಅವರು ಒಟ್ಟಾರೆ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: R Ashwin- ಮುಂಬೈ ಟೆಸ್ಟ್​ನಲ್ಲಿ ಆರ್ ಅಶ್ವಿನ್ ಬರೆದ ದಾಖಲೆಗಳಿವು

    ಎಜಾಜ್ ಪಟೇಲ್ ದಾಖಲೆ ಮತ್ತು ಮೈಲಿಗಲ್ಲು:

    ಭಾರತ ಮೂಲದ ನ್ಯೂಜಿಲೆಂಡ್ ಸ್ಪಿನ್ ಬೌಲರ್ ಎಜಾಜ್ ಪಟೇಲ್ ಅವರು ಒಂದೇ ಇನ್ನಿಂಗ್ಸಲ್ಲಿ 10 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎನಿಸಿದರು. ಮುಂಬೈ ಪಂದ್ಯದಲ್ಲಿ ಒಟ್ಟಾರೆ ಅವರು 225 ರನ್​​ಗೆ 14 ವಿಕೆಟ್ ಪಡೆದರು. ಸೋತ ಪಂದ್ಯದಲ್ಲಿ ಬೌಲರ್​ವೊಬ್ಬ ಸಾಧಿಸಿದ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಇದಕ್ಕೂ ಮುನ್ನ ಜಾವಗಲ್ ಶ್ರೀನಾಥ್ ಅವರ ಹೆಸರಲ್ಲಿ ಇಂಥದ್ದೊಂದು ದಾಖಲೆ ಇತ್ತು. 1999ರಲ್ಲಿ ಪಾಕಿಸ್ತಾನ ವಿರುದ್ಧ ಜಾವಗಲ್ ಶ್ರೀನಾಥ್ 132 ರನ್​ಗೆ 13 ವಿಕೆಟ್ ಪಡೆದಿದ್ದರು. ಆ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು.

    ಭಾರತದಲ್ಲಿ ಒಮ್ಮೆಯೂ ಟೆಸ್ಟ್ ಸರಣಿ ಗೆಲ್ಲದ ನ್ಯೂಜಿಲೆಂಡ್:

    ನ್ಯೂಜಿಲೆಂಡ್ ತಂಡಕ್ಕೆ ಭಾರತದಲ್ಲಿ ಇದೂವರೆಗೆ ಒಮ್ಮೆಯೂ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಅವೆರಡು ತಂಡಗಳ ಮಧ್ಯೆ ಭಾರತದಲ್ಲಿ ನಡೆದ 12ನೇ ಟೆಸ್ಟ್ ಸರಣಿ. ಆದರೆ, ನ್ಯೂಜಿಲೆಂಡ್​ಗೆ ಗೆಲುವಿನ ಭಾಗ್ಯ ಸಿಕ್ಕಿಲ್ಲ. ಕುತೂಹಲವೆಂದರೆ 1988ರ ಬಳಿಕ ನ್ಯೂಜಿಲೆಂಡ್ ತಂಡ ಭಾರತದಲ್ಲಿ ಒಂದೂ ಟೆಸ್ಟ್ ಪಂದ್ಯ ಗೆದ್ದಿಲ್ಲ. ಅಂದರೆ, ಕಳೆದ 33 ವರ್ಷಗಳಿಂದ ಕಿವೀಸ್ ಪಡೆಗೆ ಭಾರತದ ನೆಲದಲ್ಲಿ ಟೆಸ್ಟ್ ಗೆಲುವು ಗಗನಕುಸುಮವಾಗಿದೆ.

    ಇದನ್ನೂ ಓದಿ: Interesting Facts- 25ನೇ ವಯಸ್ಸಲ್ಲಿ ವೇಗದ ಬೌಲಿಂಗ್ ಬಿಟ್ಟು ಸ್ಪಿನ್ನರ್ ಆಗಿದ್ದ ಎಜಾಜ್ ಪಟೇಲ್

    ಅತಿ ಕಡಿಮೆ ಮೊತ್ತಕ್ಕೆ ನ್ಯೂಜಿಲೆಂಡ್ ಆಲೌಟ್:

    ಮುಂಬೈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸಲ್ಲಿ ಕೇವಲ 62 ರನ್​ಗೆ ಆಲೌಟ್ ಆಯಿತು. ಇದು ಯಾವುದೇ ತಂಡ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದಲ್ಲಿ ಗಳಿಸಿದ ಅತಿ ಕಡಿಮೆ ಮೊತ್ತವಾಗಿದೆ. ಭಾರತದ ವಿರುದ್ಧ ಯಾವುದೇ ತಂಡ ಗಳಿಸಿದ ಅತಿ ಕಡಿಮೆ ಮೊತ್ತವೂ ಆಗಿದೆ.
    Published by:Vijayasarthy SN
    First published: