T20 World Cup- ವಿಶ್ವಕಪ್ ತಂಡದಲ್ಲಿ ಚಾಹರ್, ಭುವಿ, ಅಶ್ವಿನ್ ಸೇರ್ಪಡೆಗೆ ಕೊಹ್ಲಿ ಕೊಟ್ಟ ಕಾರಣಗಳಿವು

Virat Kohli Explains- ಐಪಿಎಲ್​ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರಲು ವಿಫಲರಾಗಿರುವ ಆರ್ ಅಶ್ವಿನ್, ರಾಹುಲ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಅವರನ್ನ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲು ಏನು ಕಾರಣ ಎಂಬ ಸಂಗತಿಯನ್ನ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
    ದುಬೈ: ಈ ಐಪಿಎಲ್​ನಲ್ಲಿ ಯುಜವೇಂದ್ರ ಚಹಲ್ ಆರ್​ಸಿಬಿ ತಂಡದ ಸೆಕೆಂಡ್ ಬೆಸ್ಟ್ ಬೌಲರ್. ಆದರೆ, ಟಿ20 ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಅವರನ್ನ ಆಯ್ಕೆ ಮಾಡಿಲ್ಲ. ಈ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಐಪಿಎಲ್​ನಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡದ ರಾಹುಲ್ ಚಾಹರ್ ಅವರನ್ನ ವಿಶ್ವಕಪ್​ಗೆ ಆಯ್ಕೆ ಮಾಡಲಾಗಿದೆ. ಅದ್ಭುತವಾಗಿ ಬೌಲಿಂಗ್ ಮಾಡುತ್ತಿರುವ ಚಹಲ್ ಅವರನ್ನ ಕೈಬಿಡಲಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿರುವುದುಂಟು. ಆರ್ ಅಶ್ವಿನ್ ಬದಲಾದರೂ ಯುಜವೇಂದ್ರ ಚಹಲ್ ಅವರನ್ನ ಸೇರಿಸಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯವೂ ಇದೆ. ಚಹಲ್ ಯಾಕೆ ವಿಶ್ವಕಪ್​ಗೆ ಆಯ್ಕೆ ಆಗಿಲ್ಲ ಎನ್ನುವುದಕ್ಕೆ ಖುದ್ದು ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರೇ ಉತ್ತರ ಕೊಟ್ಟಿದ್ಧಾರೆ.

    ರಾಹುಲ್ ಚಾಹರ್ ಮತ್ತು ಯುಜವೇಂದ್ರ ಚಹಲ್ ಅವರಲ್ಲಿ ಯಾರನ್ನ ಆಯ್ಕೆ ಮಾಡಬೇಕು ಎಂದು ನಿರ್ಧರಿಸುವುದು ಬಹಳ ಕಷ್ಟಕರ ಸವಾಲಾಗಿತ್ತು ಎಂದು ಹೇಳುವ ವಿರಾಟ್ ಕೊಹ್ಲಿ, ನಿರ್ದಿಷ್ಟ ಅವಧಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಕಾರಣಕ್ಕೆ ಚಾಹರ್ ಅವರನ್ನ ಆಯ್ಕೆ ಮಾಡಲಾಯತು ಎಂದಿದ್ಧಾರೆ.

    “ರಾಹುಲ್ ಚಾಹರ್ ಅವರನ್ನ ಆಯ್ಕೆ ಮಾಡಲು ಕಾರಣ ಇದೆ. ಕಳೆದ ಒಂದೆರಡು ವರ್ಷಗಳಲ್ಲಿ ಅವರು ಬಹಳ ಉತ್ತಮವಾಗಿ ಬೌಲಿಂಗ್ ಮಾಡಿದ್ಧಾರೆ. ಅವರ ಬೌಲಿಂಗ್​ನಲ್ಲಿ ವೇಗ ಇದೆ.

    ”ಶ್ರೀಲಂಕಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ರಾಹುಲ್ ಚಾಹರ್ ಉತ್ತಮ ಪ್ರದರ್ಶನ ನೀಡಿದ್ದರು. ಆ ಪಂದ್ಯಗಳಲ್ಲಿ ಕ್ಲಿಷ್ಟ ಸಂದರ್ಭಗಳಲ್ಲಿ ಅವರು ಬೌಲಿಂಗ್ ಮಾಡಿದ್ದರು… ಟಿ20 ವಿಶ್ವಕಪ್ ಸಾಗುತ್ತಾ ಹೋದಂತೆ ಇಲ್ಲಿಯ ಪಿಚ್​ಗಳು ನಿಧಾನಗೊಳ್ಳುತ್ತಾ ಹೋಗುತ್ತವೆ. ಐಪಿಎಲ್​ನ ಕೊನೆ ಕೊನೆಯ ಪಂದ್ಯಗಳಲ್ಲಿ ನೀವು ಗಮನಿಸಿದಂತೆ ವೇಗವಾಗಿ ಬಾಲ್ ಎಸೆಯಬಲ್ಲ ಸ್ಪಿನ್ನರ್​ಗಳು ಹೆಚ್ಚು ಪರಿಣಾಮಕಾರಿ ಎನಿಸಿದ್ದಾರೆ. ಈ ವಿಚಾರದಲ್ಲಿ ರಾಹುಲ್ ಆಯ್ಕೆ ಸಮಂಜಸ ಎನಿಸುತ್ತದೆ.

    ಇದನ್ನೂ ಓದಿ: IPL 2021- ಹರ್ಷಲ್​ಗೆ ಅತಿ ಹೆಚ್ಚು ಪ್ರಶಸ್ತಿ; ಐಪಿಎಲ್ 2021ರ ಎಲ್ಲಾ ಅವಾರ್ಡ್ ವಿಜೇತರ ಪಟ್ಟಿ

    “ರಾಹುಲ್ ಚಾಹರ್ ಲೆಗ್ ಸ್ಪಿನ್ನರ್ ಆದ್ದರಿಂದ ವಿಕೆಟ್ ಪಡೆಯುವ ಅವಕಾಶ ಕೊಡುವ ಪ್ರದೇಶಗಳನ್ನ ಗುರಿಯಾಗಿಸಿ ಬೌಲಿಂಗ್ ಮಾಡಬಲ್ಲರು. ಪಂದ್ಯದ ಯಾವುದೇ ಹಂತದಲ್ಲೂ ಅವರು ವಿಕೆಟ್ ಪಡೆಯಬಲ್ಲರು. ಚಹಲ್ ಬದಲು ರಾಹುಲ್ ಅವರನ್ನ ಸೇರಿಸಿಕೊಳ್ಳಲು ಈ ಅಂಶವೇ ಮುಖ್ಯವಾಯಿತು. ಚಹಲ್ ಅವರ ಆಯ್ಕೆ ಆಗಿಲ್ಲ ಎಂದರೆ ಅದು ಅವರ ಕಳಪೆ ಸಾಧನೆಯಿಂದಲ್ಲ… ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ತಂಡವನ್ನ ರಚಿಸಬೇಕಾಗುತ್ತದೆ. ಎಲ್ಲರನ್ನೂ ಸೇರಿಸಿಕೊಳ್ಳಲು ಆಗುವುದಿಲ್ಲ” ಎಂದು ವಿರಾಟ್ ಕೊಹ್ಲಿ ಹೇಳಿದ್ಧಾರೆ.

    ಭುವನೇಶ್ವರ್ ಬಗ್ಗೆ:

    ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಪರಿಣಾಮಕಾರಿ ಎನಿಸುವುದು ಅವರ ಸ್ವಿಂಗ್ ಎಸೆತ. ಆದರೆ, ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಭುವಿಗೆ ಚೆಂಡನ್ನು ಸ್ವಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದರೂ ಅವರನ್ನ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿರುವುದಕ್ಕೆ ಅವರ ಅನುಭವ ಮತ್ತು ಎಕನಾಮಿ ರೇಟ್ ಕಾರಣ ಎಂಬುದು ಕೊಹ್ಲಿ ಅನಿಸಿಕೆ.

    “ಭುವನೇಶ್ವರ್ ಕುಮಾರ್ ಅವರ ಎಕನಾಮಿ ರೇಟ್ ಬಹಳ ಚೆನ್ನಾಗಿದೆ. ಒತ್ತಡದ ಸಂದರ್ಭದಲ್ಲಿ ಅನುಭವ ನೆರವಿಗೆ ಬರುತ್ತದೆ. ಆರ್​ಸಿಬಿ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಆಡಿದ ಕೊನೆಯ ಲೀಗ್ ಪಂದ್ಯದಲ್ಲಿ ಇದು ವೇದ್ಯವಾಗಿದೆ. ಎಬಿಡಿಯಂಥ ಸ್ಫೋಟಕ ಬ್ಯಾಟರ್ ಕ್ರೀಸ್​ನಲ್ಲಿದ್ದರೂ ಅವರು ಬೌಲಿಂಗ್ ಮಾಡಿ ಪಂದ್ಯವನ್ನ ಗೆಲ್ಲಿಸಿದ್ದರು. ಭುವಿ ಅವರ ಅನುಭವ ಚೆನ್ನಾಗಿದೆ” ಎಂದು ಕೊಹ್ಲಿ ವಿಶ್ಲೇಷಿಸಿದ್ಧಾರೆ.

    ಇದನ್ನೂ ಓದಿ: CSK Success Secret- ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿಗೆ ಕಾರಣವಾದ ಅಂಶಗಳು

    ಆರ್ ಅಶ್ವಿನ್ ಆಯ್ಕೆ ಬಗ್ಗೆ:

    ಆರ್ ಅಶ್ವಿನ್ ಇತ್ತೀಚೆಗೆ ಚುಟುಕು ಕ್ರಿಕೆಟ್​ನಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದಾರೆ. ಕಳೆದ ಎರಡು ಐಪಿಎಲ್ ಟೂರ್ನಿಗಳನ್ನ ನೋಡಿದರೆ ಇದು ಗೊತ್ತಾಗುತ್ತದೆ. ಪೊಲಾರ್ಡ್ ಅವರಂಥ ಪವರ್ ಹಿಟ್ಟರ್ಸ್​ಗೆ ಅವರು ಹೆಚ್ಚು ಬೌಲಿಂಗ್ ಮಾಡಿದ್ಧಾರೆ. ಅಶ್ವಿನ್ ಯಾವ ಬ್ಯಾಟರ್​ಗೂ ಹೆದರುವುದಿಲ್ಲ. ಅಶ್ವಿನ್ ಅವರಿಗೆ ಆತ್ಮವಿಶ್ವಾಸ ಬಹಳ ಇದೆ. ಅವರ ವೇಗ ಮತ್ತು ವೇರಿಯೇಶನ್ ಮೇಲೆ ಅವರಿಗೆ ಹಿಡಿತ ಇದೆ. ಅಶ್ವಿನ್ ಒಬ್ಬ ಒಳ್ಳೆಯ ಫಿಂಗರ್ ಸ್ಪಿನ್ ಬೌಲರ್ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
    Published by:Vijayasarthy SN
    First published: