Virat Kohli- ಟಿ20 ವಿಶ್ವಕಪ್ ಬಳಿಕ ನಾಯಕತ್ವದಿಂದ ಇಳಿಯಲಿರುವ ವಿರಾಟ್ ಕೊಹ್ಲಿ

T20 Captaincy- ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ಬಳಿಕ ಟಿ20 ಟೀಮ್ ಇಂಡಿಯಾದ ಕ್ಯಾಪ್ಟನ್ಸಿ ಬಿಟ್ಟುಕೊಟ್ಟು ಬ್ಯಾಟ್ಸ್ಮನ್ ಆಗಿ ಮುಂದುವರಿಯಲಿದ್ದಾರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡಗಳಿಗೆ ಅವರ ನಾಯಕತ್ವ ಮುಂದುವರಿಯಲಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ಬೆಂಗಳೂರು, ಸೆ. 16: ಭಾರತ ಕ್ರಿಕೆಟ್ ತಂಡದಲ್ಲಿ ಸ್ಪ್ಲಿಟ್ ಕ್ಯಾಪ್ಟನ್ನಿ (Split Captaincy in Team India) ಪ್ರಯೋಗ ಆಗಲಿದೆ ಎಂದು ದಟ್ಟವಾಗಿ ಹರಡಿದ್ದ ಸುದ್ದಿ ಈಗ ನಿಜವಾಗಿದೆ. ಎಲ್ಲಾ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡಗಳ ನಾಯಕರಾಗಿರುವ ವಿರಾಟ್ ಕೊಹ್ಲಿ (Virat Kohli) ಇದೀಗ ಎರಡು ಮಾದರಿ ಕ್ರಿಕೆಟ್ ತಂಡಗಳಿಗೆ ಮಾತ್ರ ನಾಯಕರಾಗಿ ಮುಂದುವರಿಯಲಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ (T20 World Cup) ಬಳಿಕ ಅವರು ಭಾರತ ಟಿ20 ತಂಡದ ನಾಯಕಸ್ಥಾನದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ. ತಮ್ಮ ಈ ನಿರ್ಧಾರವನ್ನು ಅವರು ಟ್ವಿಟ್ಟರ್ ಮೂಲಕ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಅವರು ಭಾರತ ಟಿ20 ತಂಡದ ಬ್ಯಾಟ್ಸ್​ಮನ್ ಆಗಿ ಮುಂದುವರಿಯಲಿದ್ದಾರೆ. ಇದೇ ವೇಳೆ ಅವರು ಏಕದಿನ ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್ ತಂಡಗಳ ನಾಯಕತ್ವದ ಜವಾಬ್ದಾರಿ ಹೊರುವುದು ಮುಂದುವರಿಯಲಿದೆ.

  ಮೂರು ಮಾದರಿ ಕ್ರಿಕೆಟ್​ನ ಭಾರತ ತಂಡಗಳ ನಾಯಕನಾಗಿ ಕೆಲಸ ಮಾಡುವುದು ಬಹಳ ತ್ರಾಸದಾಯಕವಾಗಿದೆ. ಕಳೆದ 8-9 ವರ್ಷಗಳಿಂದ ವರ್ಕ್​ಲೋಡ್ ಹೆಚ್ಚಾಗಿದೆ. ಟೆಸ್ಟ್ ಕ್ರಿಕೆಟ್ ಮತ್ತು ಓಡಿಐ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸುವುದರತ್ತ ಎಲ್ಲಾ ಗಮನ ಕೊಡಬೇಕೆಂದು ನನಗೆ ಅನಿಸಿತು. ಅದಕ್ಕೆ ಟಿ20 ಕ್ಯಾಪ್ಟನ್ಸಿಯಿಂದ ಹಿಂದಕ್ಕೆ ಸರಿದು ಬ್ಯಾಟ್ಸ್​ಮನ್ ಆಗಿ ಮಾತ್ರ ಇರಲಿದ್ದೇನೆ ಎಂದು ಅವರು ಹೇಳಿದ್ದಾರೆ. ಮೂಲಗಳ ಪ್ರಕಾರ ಟಿ20 ಭಾರತ ತಂಡದ ನಾಯಕತ್ವವು ರೋಹಿತ್ ಶರ್ಮಾ ಹೆಗಲಿಗೆ ವಹಿಸುವ ಸಾಧ್ಯತೆ ಇದೆ.

  ವಿರಾಟ್ ಕೊಹ್ಲಿ ಭಾರತ ಕ್ಷೇತ್ರದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಏಕದಿನ ಕ್ರಿಕೆಟ್​ನಲ್ಲಿ ಅವರು 95 ಪಂದ್ಯಗಳಲ್ಲಿ ನಾಯಕರಾಗಿದ್ದಾರೆ. ಅದರಲ್ಲಿ 65ರಲ್ಲಿ ಭಾರತ ಗೆದ್ದಿದೆ. ಟಿ20 ಕ್ರಿಕೆಟ್​ನಲ್ಲಿ ಅವರ ನಾಯಕತ್ವದಲ್ಲಿ ಆಡಿರುವ 45 ಪಂದ್ಯಗಳಲ್ಲಿ 27ರಲ್ಲಿ ಗೆಲುವು ಸಿಕ್ಕಿದೆ. ಏಕದಿನ ಮತ್ತು ಟೆಸ್ಟ್ ಕ್ಯಾಪ್ಟನ್ಸಿಗೆ ಹೋಲಿಸಿದರೆ ಟಿ20 ತಂಡದ ನಾಯಕನಾಗಿ ಅವರ ಸಾಧನೆ ತುಸು ಹಿಂದುಳಿದಿದೆ. ಮೇಲಾಗಿ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಅವರ ನಾಯಕತ್ವದಲ್ಲಿ ಆರ್​ಸಿಬಿ ತಂಡ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಬಹುತೇಕ ಪ್ರತೀ ಋತುವಿನಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಇದೂ ಕೂಡ ವಿರಾಟ್ ಕೊಹ್ಲಿ ನಿರ್ಧಾರಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ. ಇನ್ನು, ಈಗ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್​ಗೆ ಗಮನ ಕೊಡುವ ದೃಷ್ಟಿಯಿಂದ ಟಿ20 ತಂಡದ ನಾಯಕತ್ವ ಕೈಬಿಡಲಿದ್ಧಾರೆ. ತಮ್ಮ ಆಪ್ತ ವರ್ಗದವರ ಜೊತೆ ಸಮಾಲೋಚನೆ ಮಾಡಿ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆನ್ನಲಾಗಿದೆ..

  ವಿರಾಟ್ ಕೊಹ್ಲಿ ಹೇಳಿದ್ದೇನು?  “ಭಾರತವನ್ನು ಪ್ರತಿನಿಧಿಸುವುದಲ್ಲದೇ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಸಾಗಿದ ನನ್ನ ಪ್ರಯಾಣದಲ್ಲಿ ನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ತಂಡದ ಆಟಗಾರರು, ಸಪೋರ್ಟ್ ಸ್ಟಾಫ್, ಆಯ್ಕೆ ಸಮಿತಿ, ಕೋಚ್​ಗಳು ಹಾಗೂ ಭಾರತದ ಗೆಲುವಿಗೆ ಹರಸಿದ ಪ್ರತಿಯೊಬ್ಬ ಭಾರತೀಯ, ಇವರಾರೂ ಇಲ್ಲದೇ ನನಗೆ ಸಾಧನೆ ಮಾಡಲು ಆಗುತ್ತಿರಲಿಲ್ಲ.

  ಇದನ್ನೂ ಓದಿ: T20 World Cup- ಭಾರತಕ್ಕೆ ಮತ್ತೆ ಆ ಸೋಲಿನ ರುಚಿ ತೋರಿಸ್ತೇವೆ: ಪಾಕ್ ವೇಗದ ಬೌಲರ್ ಹಸನ್ ಅಲಿ

  “ನಮಗೆ ಇರುವ ಕೆಲಸದ ಹೊರೆಯನ್ನ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಎಲ್ಲಾ 3 ಮಾದರಿಯ ಕ್ರಿಕೆಟ್​ನಲ್ಲಿ ಆಡುತ್ತಾ ಹಾಗೂ ನಾಯಕನಾಗಿ ಕರ್ತವ್ಯ ನಿಭಾಯಿಸುವ ಅಪರಿಮಿತ ಹೊರೆ ನನ್ನ ಹೆಗಲಿಗೆ ಇತ್ತು. ಈ ಹಿನ್ನೆಲೆಯಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸುವುದರತ್ತ ಸಂಪೂರ್ಣ ಗಮನ ಕೊಡುವುದು ಅಗತ್ಯವಿದೆ ಎನಿಸುತ್ತದೆ. ಟಿ20 ನಾಯಕನಾಗಿ ನಾನು ಎಲ್ಲವನ್ನೂ ಕೊಟ್ಟಿದ್ದೇನೆ. ಈಗ ಟಿ20 ತಂಡದಲ್ಲಿ ಬ್ಯಾಟ್ಸ್​ಮನ್ ಆಗಿ ಮುಂದುವರಿಯುತ್ತೇನೆ.

  ಈ ನಿರ್ಧಾರಕ್ಕೆ ಬರಲು ಸಾಕಷ್ಟು ಸಮಯ ಹಿಡಿಯಿತು. ನನ್ನ ಆಪ್ತರು, ರವಿ ಭಾಯ್ (ರವಿ ಶಾಸ್ತ್ರಿ) ಮತ್ತು ರೋಹಿತ್ ಅವರ ಜೊತೆ ಸಾಕಷ್ಟು ಚರ್ಚೆ ಮಾಡಿದ ಬಳಿಕ ಟಿ20 ವಿಶ್ವಕಪ್ ಬಳಿಕ ಟಿ20 ಕ್ಯಾಪ್ಟನ್ಸಿಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಕಾರ್ಯದರ್ಶಿ (ಬಿಸಿಸಿಐ) ಜಯ್ ಶಾ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಆಯ್ಕೆಗಾರರ ಜೊತೆಯೂ ಮಾತನಾಡಿದ್ದೇನೆ. ಭಾರತ ಕ್ರಿಕೆಟ್ ಹಾಗೂ ಭಾರತ ತಂಡಕ್ಕೆ ನನ್ನ ಸೇವೆ ಮುಂದುವರಿಯುತ್ತದೆ” ಎಂದು ವಿರಾಟ್ ಕೊಹ್ಲಿ ತಮ್ಮ ಹೇಳಿಕೆಯಲ್ಲಿ ಬರೆದಿದ್ದಾರೆ.
  Published by:Vijayasarthy SN
  First published: