ವಿರಾಟ್ ವಿವಾದ: ಸೌರವ್ ಗಂಗೂಲಿ ವಿವರಣೆ ಕೊಡಬೇಕು ಎಂದ ಮಾಜಿ ಕ್ರಿಕೆಟಿಗ ಮದನ್ ಲಾಲ್

Madan Lal on Virat Controversy: ವಿರಾಟ್ ಕೊಹ್ಲಿ ಅವರಿಂದ ಓಡಿಐ ತಂಡದ ನಾಯಕತ್ವ ಹಿಂಪಡೆದ ವಿಚಾರವನ್ನು ಬಿಸಿಸಿಐ ಉತ್ತಮವಾಗಿ ನಿಭಾಯಿಸಬೇಕಿತ್ತು. ಈಗ ಬಿಸಿಸಿಐ ಅಧ್ಯಕ್ಷ ಗಂಗೂಲಿ ವಿವರಣೆ ಕೊಟ್ಟು ವಿವಾದ ಶಮನ ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ಮದನ್ ಲಾಲ್ ಅಭಿಪ್ರಾಯಪಟ್ಟಿದ್ಧಾರೆ.

ಸೌರವ್ ಗಂಗೂಲಿ

ಸೌರವ್ ಗಂಗೂಲಿ

 • Share this:
  ನವದೆಹಲಿ, ಡಿ. 18: ವಿರಾಟ್ ಕೊಹ್ಲಿ (Virat Kohli) ಟಿ20 ತಂಡದ ನಾಯಕತ್ವದಿಂದ ಹಿಂದೆ ಸರಿದದ್ದು; ಅದರ ಬೆನ್ನಲ್ಲೇ ಏಕದಿನ ತಂಡದ ನಾಯಕತ್ವವನ್ನೂ ಕಳೆದುಕೊಂಡಿದ್ದು; ಕ್ಯಾಪ್ಟನ್ಸಿ ನಷ್ಟಕ್ಕೆ ವಿರಾಟ್ ಕೊಹ್ಲಿ ಕಾರಣ ಎಂದು ಗಂಗೂಲಿ (Sourav Ganguly) ಪರೋಕ್ಷವಾಗಿ ಹೇಳಿದ್ದು; ತನಗೆ ಮುಂಚಿತವಾಗಿ ತಿಳಿಸದೆಯೇ ನಾಯಕತ್ವ ಕಸಿದುಕೊಳ್ಳಲಾಗಿದೆ ಎಂದು ಕೊಹ್ಲಿ ಹೇಳಿದ್ದು, ಇವೆಲ್ಲವೂ ಟೀಮ್ ಇಂಡಿಯಾವನ್ನ ಗೊಂದಲದ ಗೂಡಾಗಿಸಿದೆ. ವಿರಾಟ್ ಕೊಹ್ಲಿ ನಾಯಕತ್ವ ವಿವಾದದ ವಿಚಾರವನ್ನು ಬಿಸಿಸಿಐ ಸರಿಯಾಗಿ ನಿರ್ವಹಿಸಬೇಕಿತ್ತು ಎಂದು ಮಾಜಿ ಕ್ರಿಕೆಟಿಗ ಮದನ್ ಲಾಲ್ (Madan Lal) ಅಭಿಪ್ರಾಯಪಟ್ಟಿದ್ದಾರೆ. ಗಂಗೂಲಿ ಅವರು ಒಂದ ಸ್ಪಷ್ಟೀಕರಣ ಹೇಳಿಕೆ ಕೊಟ್ಟು ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

  “ಇದು ಯಾವುದೇ ವಿವಾದದ ಸಂಗತಿ ಅಲ್ಲ, ಅಭಿಪ್ರಾಯಕ್ಕೆ ಸಂಬಂಧಿಸಿದ್ದಾಗಿದೆ. ಈ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಹುದಾಗಿತ್ತು. ವಿರಾಟ್ ಕೊಹ್ಲಿಗೆ ಸೌರವ್ ಗಂಗೂಲಿ ಏನು ಹೇಳಿದ್ದರೆಂಬುದು ನನಗೆ ಗೊತ್ತಿಲ್ಲ. ಹೀಗಾಗಿ, ಅದರ ಬಗ್ಗೆ ನಾನು ಏನೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.

  ”ಆದರೆ, ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಒಂದು ವಿವರಣೆ ಕೊಟ್ಟರೆ ಇಡೀ ವಿವಾದಕ್ಕೆ ತೆರೆ ಎಳೆಯಬಹುದು. ಮುಂಬರಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ ಬಹಳ ಮುಖ್ಯವಾಗಿದ್ದು, ಅದರತ್ತ ನಮ್ಮ ಗಮನ ನೆಟ್ಟಿರಬೇಕು. ಆ ದೃಷ್ಟಿಯಿಂದ ಕೊಹ್ಲಿ ನಾಯಕತ್ವ ವಿವಾದಕ್ಕೆ ಅಂತ್ಯಹಾಡುವುದು ಒಳ್ಳೆಯದು” ಎಂದು ಮದನ್ ಲಾಲ್ ಅವರು ಹೇಳಿದರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

  ಇದನ್ನೂ ಓದಿ: ಕೊಹ್ಲಿ ವಿವಾದ ವಿಚಾರ: ಗವಾಸ್ಕರ್ ಸಲಹೆ; ಕೊನೆಗೂ ಮೌನಮುರಿದ ಸೌರವ್ ಗಂಗೂಲಿ

  ಕೊಹ್ಲಿಯೂ ಗೊಂದಲ ಬಗೆಹರಿಸಿಕೊಳ್ಳಬೇಕು:

  ಬಿಸಿಸಿಐ ಜೊತೆಗೆ ತನಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅವನ್ನು ವಿರಾಟ್ ಕೊಹ್ಲಿ ನಿವಾರಿಸಿಕೊಳ್ಳಬೇಕು ಎಂದು ಈ ಹಿಂದೆ ಸುನೀಲ್ ಗವಾಸ್ಕರ್ ಕೊಟ್ಟಿದ್ದ ಸಲಹೆಯನ್ನ ಮದನ್ ಲಾಲ್ ಸ್ವಾಗತಿಸಿದ್ಧಾರೆ.

  “ಗವಾಸ್ಕರ್ ಹೇಳಿದ್ದು ಸರಿಯಾಗಿದೆ. ಮ್ಯಾನೇಜ್ಮೆಂಟ್ ಜೊತೆ ಯಾವುದೇ ವಿಚಾರ ಇದ್ದರೂ ವಿರಾಟ್ ಕೊಹ್ಲಿ ಬಗೆಹರಿಸಿಕೊಳ್ಳಬೇಕು. ಇದೇನೂ ದೊಡ್ಡ ವಿಚಾರವಲ್ಲ. ಆಯ್ಕೆಗಾರರು ಈ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಬೇಕಿತ್ತು ಎಂಬುದು ನನ್ನ ಭಾವನೆ. ವಿವಾದಗಳಾಗದಂತೆ ಎಚ್ಚರ ವಹಿಸುವುದು ಆಯ್ಕೆಗಾರರ ಜವಾಬ್ದಾರಿ. ವಿರಾಟ್ ಕೊಹ್ಲಿಯನ್ನ ಓಡಿಐ ನಾಯಕತ್ವದಿಂದ ಕೆಳಗಿಳಿಸುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಯ್ಕೆಗಾರರು ಅವರೊಂದಿಗೆ ಮಾತನಾಡಿದ್ದರಾ ಎಂಬುದು ನನಗೆ ಖಚಿತವಾಗಿ ಗೊತ್ತಿಲ್ಲ” ಎಂದು ಮದನ್ ಲಾಲ್ ಹೇಳಿದ್ದಾರೆ.

  ಏನಿದು ವಿವಾದ?:

  ಟಿ20 ವಿಶ್ವಕಪ್ ಮತ್ತು ಐಪಿಎಲ್ ಎರಡನೇ ಲೆಗ್ ಪಂದ್ಯಾವಳಿಗೂ ಮುನ್ನ ವಿರಾಟ್ ಕೊಹ್ಲಿ ಅವರು ತಾನು ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವವನ್ನು ತ್ಯಜಿಸುತ್ತೇನೆ. ಬ್ಯಾಟಿಂಗ್​ನತ್ತ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಆದರೆ, ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದರು. ಟಿ20 ವಿಶ್ವಕಪ್ ಬಳಿಕ ವಿರಾಮ ತೆಗೆದುಕೊಂಡ ಅವರು ಭಾರತದಲ್ಲಿ ನಡೆದ ನ್ಯೂಜಿಲೆಂಡ್ ಸರಣಿಯಲ್ಲಿ ಆಡಲಿಲ್ಲ. ರೋಹಿತ್ ಶರ್ಮಾ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕರಾದರು.

  ಇದನ್ನೂ ಓದಿ: ವಿರಾಟ್ ಕೊಹ್ಲಿ ನೀಡಿದ್ದ ಆವತ್ತಿನ ಒಂದು ಹೇಳಿಕೆ ಯಡವಟ್ಟಾಗಿರಬಹುದು: ಗವಾಸ್ಕರ್

  ಅದಾದ ಬಳಿಕ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಆಯ್ಕೆಗಾರರು ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದರು. ಟಿ20 ಮತ್ತು ಓಡಿಐ ಎರಡೂ ತಂಡಗಳಿಗೆ ರೋಹಿತ್ ಶರ್ಮಾ ಅವರನ್ನ ನಾಯಕರಾಗಿ ಆರಿಸಲಾಗಿದೆ ಎಂದು ತಿಳಿಸಿತು. ವಿರಾಟ್ ಕೊಹ್ಲಿ ಅವರು ಟೆಸ್ಟ್ ತಂಡದ ನಾಯಕರಾಗಿ ಮುಂದುವರಿದಿದ್ದರು.

  ಗಂಗೂಲಿ ಹೇಳಿಕೆ:

  ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಕೊಹ್ಲಿ ನಾಯಕತ್ವ ವಿಚಾರವಾಗಿ ಒಂದು ಹೇಳಿಕೆ ನೀಡಿದರು. ಟಿ20 ನಾಯಕತ್ವ ಬಿಡಬೇಡಿ ಎಂದು ಕೊಹ್ಲಿಗೆ ತಾನು ವೈಯಕ್ತಿಕವಾಗಿ ತಿಳಿಸಿದ್ದೆ. ಆದರೂ ಅವರು ಕೇಳದೇ ನಾಯಕತ್ವ ಬಿಡುವುದಾಗಿ ಘೋಷಣೆ ಮಾಡಿದರು. ಟಿ20 ಮತ್ತು ಓಡಿಐ ಎರಡು ತಂಡಗಳಿಗೆ ಬೇರೆ ಬೇರೆ ನಾಯಕರಾದರೆ ಚೆನ್ನಾಗಿರುವುದಿಲ್ಲ. ಒಬ್ಬರೇ ನಾಯಕರಿದ್ದರೆ ಉತ್ತಮ ಎಂಬುದು ಬಿಸಿಸಿಐ ಚಿಂತನೆ ಆಗಿತ್ತು. ಹೀಗಾಗಿ, ರೋಹಿತ್ ಶರ್ಮಾ ಅವರಿಗೆ ಎರಡೂ ತಂಡಗಳ ನಾಯಕತ್ವ ವಹಿಸಲಾಯಿತು ಎಂದು ಗಂಗೂಲಿ ಸ್ಪಷ್ಟಪಡಿಸಿದರು.

  ಇದನ್ನೂ ಓದಿ: ರೋಹಿತ್ ಜೊತೆ ಮುನಿಸು ಇಲ್ಲ ಅಂತ ನಂಗೂ ಹೇಳಿ ಹೇಳಿ ಸಾಕಾಗಿದೆ: ವಿರಾಟ್ ಕೊಹ್ಲಿ

  ಕೊಹ್ಲಿ ಪತ್ರಿಕಾಗೋಷ್ಠಿ:

  ಮೊನ್ನೆಮೊನ್ನೆ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿ ನಡೆಸಿ ಸೌರವ್ ಗಂಗೂಲಿ ಹೇಳಿಕೆಯನ್ನ ಪರೋಕ್ಷವಾಗಿ ಅಲ್ಲಗಳೆದರು.

  ತಾನು ಟಿ20 ತಂಡದ ನಾಯಕತ್ವ ಬಿಡುವಾಗ ಯಾರೂ ಬೇಡ ಎನ್ನಲಿಲ್ಲ. ಓಡಿಐ ನಾಯಕತ್ವವನ್ನು ತನ್ನಿಂದ ಕಸಿದುಕೊಳ್ಳುವಾಗ ಕೇವಲ ಒಂದೂವರೆ ತಾಸು ಮೊದಲು ತನಗೆ ಮಾಹಿತಿ ನೀಡಿದರು. ಅದಕ್ಕಿಂತ ಮುನ್ನ ಯಾರೂ ತನ್ನೊಂದಿಗೆ ಚರ್ಚಿಸಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದರು. ಕೊಹ್ಲಿ ಜೊತೆ ತಾನು ಮಾತನಾಡಿದ್ದೆ ಎಂದು ಗಂಗೂಲಿ ನೀಡಿದ್ದ ಹೇಳಿಕೆಗೆ ಕೊಹ್ಲಿ ನೇರ ಟಾಂಟ್ ಕೊಟ್ಟಂತಿತ್ತು.

  ಈಗ ಗಂಗೂಲಿ ಹೇಳುವುದೇನು?:

  ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಸಂಗತಿ ಬಗ್ಗೆ ಗಂಗೂಲಿ ಸ್ಪಂದಿಸಿದ್ದು, ತಾನು ಈ ಸಂದರ್ಭದಲ್ಲಿ ಏನೂ ಹೇಳುವುದಿಲ್ಲ. ಬಿಸಿಸಿಐ ಈ ವಿಚಾರವನ್ನು ನಿರ್ವಹಿಸುತ್ತದೆ ಎಂದಷ್ಟೇ ತಿಳಿಸಿದ್ದಾರೆ.
  Published by:Vijayasarthy SN
  First published: