ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಫಲಿತಾಂಶವನ್ನು ಟೀಮ್ ಇಂಡಿಯಾ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣ ಕೂಡ ಇದೆ. ಹೌದು, 2013 ರ ಬಳಿಕ ಟೀಮ್ ಇಂಡಿಯಾ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಅದರಲ್ಲೂ ವಿರಾಟ್ ಕೊಹ್ಲಿ ನಾಯಕನಾದ ಬಳಿಕ ಐಸಿಸಿ ಪ್ರಶಸ್ತಿ ಭಾರತಕ್ಕೆ ಮರೀಚಿಕೆಯಾಗಿದೆ.
ನಾಯಕನಾಗಿ ಕೊಹ್ಲಿ ಐಸಿಸಿ ಟೂರ್ನಿಗಳಾದ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ ಟ್ರೋಫಿ ಸೇರಿ ಮೂರೂ ಟೂರ್ನಿಗಳಲ್ಲಿ ಕೊನೆ ಹಂತದಲ್ಲಿ ಎಡವಿದ್ದಾರೆ. ಇದೀಗ ಟೆಸ್ಟ್ ಚಾಂಪಿಯನ್ ಶಿಪ್ ರೂಪದಲ್ಲಿ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲೋ ಅವಕಾಶ ಕ್ಯಾಪ್ಟನ್ ಕೊಹ್ಲಿ ಮುಂದಿದೆ. ಕಿವೀಸ್ ಪಡೆಯನ್ನ ಮಣಿಸಿ ಚೊಚ್ಚಲ ಐಸಿಸಿ ಟ್ರೋಫಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ ವಿರಾಟ್ ಕೊಹ್ಲಿ.
ಒಂದು ವೇಳೆ ಟೀಮ್ ಇಂಡಿಯಾ ಫೈನಲ್ನಲ್ಲಿ ಎಡವಿದರೆ, ಮತ್ತೊಮ್ಮೆ ಕೊಹ್ಲಿ ನಾಯಕತ್ವದ ಬಗ್ಗೆ ಟೀಕೆಗಳು ಮೂಡಿ ಬರುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಈ ಹಿಂದೆ 2019ರ ಏಕದಿನ ವಿಶ್ವಕಪ್ ಸೋಲಿನ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಹೀಗಾಗಿ ಈ ಬಾರಿ ಐಸಿಸಿ ಪ್ರಶಸ್ತಿ ಗೆಲ್ಲಲೇಬೇಕೆಂಬ ಇರಾದೆಯಲ್ಲಿದ್ದಾರೆ ಟೀಮ್ ಇಂಡಿಯಾ ನಾಯಕ.
ಹಾಗೆಯೇ ನಾಯಕನಾಗಿ ಎದುರಾಳಿ ಕಿವೀಸ್ಗೆ ರಣತಂತ್ರ ಹೆಣೆಯಬೇಕಾದ ಜವಾಬ್ದಾರಿ ಒಂದೆಡೆಯಾದ್ರೆ, ಬ್ಯಾಟ್ಸ್ಮನ್ ಆಗಿ ತಂಡಕ್ಕೆ ಅತ್ಯುತ್ತಮ ಕಾಣಿಕೆ ನೀಡುವ ಸವಾಲು ಕೂಡ ಕೊಹ್ಲಿ ಮುಂದಿದೆ. ಹೌದು, ಕೊಹ್ಲಿ ಬ್ಯಾಟ್ನಿಂದ ಶತಕ ಮೂಡಿಬಂದು ವರ್ಷಗಳೇ ಕಳೆದಿವೆ. ಹೀಗಾಗಿ ಕಿವೀಸ್ ವಿರುದ್ದ ಶತಕ ಸಿಡಿಸಿ ಹೊಸ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕೊಹ್ಲಿ ಬ್ಯಾಟ್ನಿಂದ ಒಂದು ಶತಕ ಮೂಡಿಬಂದರೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ನಾಯಕನಾಗಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ಕೊಹ್ಲಿ ಪಾಲಾಗಲಿದೆ. ಹೀಗಾಗಿ ಶತಕದೊಂದಿಗೆ ಐಸಿಸಿ ಟ್ರೋಫಿ ಗೆಲ್ಲಲಿ ಎಂಬುದು ಕೊಹ್ಲಿ ಅಭಿಮಾನಿಗಳ ಪ್ರಾರ್ಥನೆ. ಆದರೆ ಕಿವೀಸ್ ವೇಗಿಗಳನ್ನು ಎದುರಿಸುವುದು ಕೂಡ ಕೊಹ್ಲಿಗೆ ಅಷ್ಟು ಸುಲಭವಲ್ಲ. ಏಕೆಂದರೆ ಅಂತರಾಷ್ಟ್ರೀಯ ಕೆರಿಯರ್ನಲ್ಲಿ ಈವರೆಗೆ 10 ಬಾರಿ ಟಿಮ್ ಸೌಥಿಗೆ ಕಿಂಗ್ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ.
ಸೌಥಿ ಮಾತ್ರವಲ್ಲದೆ ಟ್ರೆಂಟ್ ಬೋಲ್ಟ್ಗೆ 2019ರ ಬಳಿಕ 6 ಇನಿಂಗ್ಸ್ನಲ್ಲಿ ಕೊಹ್ಲಿ 4 ಬಾರಿ ಔಟಾಗಿದ್ದಾರೆ. ಹೀಗಾಗಿ ಟ್ರೋಫಿ ಗೆಲ್ಲುವ ಸವಾಲಿನೊಂದಿಗೆ ವಿರಾಟ್ ಕೊಹ್ಲಿ ಕ್ರೀಸ್ ಕಚ್ಚಿ ನಿಲ್ಲುವುದು ಕೂಡ ದೊಡ್ಡ ಸವಾಲೇ ಆಗಲಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಕೊಹ್ಲಿ ಹೇಗೆ ಬ್ಯಾಟಿಂಗ್ ಮಾಡಲಿದ್ದಾರೆ ಅನ್ನೋದು ಕುತೂಹಲ. ಅದರೊಂದಿಗೆ ಚೊಚ್ಚಲ ಐಸಿಸಿ ಟ್ರೋಫಿಗೆ ಟೀಮ್ ಇಂಡಿಯಾ ನಾಯಕ ಮುತ್ತಿಡಲಿದ್ದಾರಾ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ