2008ರಲ್ಲಿ RCB ತಂಡಕ್ಕೆ ಆಯ್ಕೆಯಾದ ಅವಿಸ್ಮರಣೀಯ ದಿನದ ಬಗ್ಗೆ Virat Kohli ಹೇಳಿದ್ದು ಹೀಗೆ

RCB And Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ವಿರಾಟ್ ಅವರನ್ನು 12 ಲಕ್ಷ ರೂಪಾಯಿ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ತದನಂತರ ವಿರಾಟ್ ಅವರು ಪ್ರತಿ ಐಪಿಎಲ್ ಸರಣಿಗಳಲ್ಲೂ ಆರ್‌‌‌ಸಿಬಿ ತಂಡವನ್ನೇ ಪ್ರತಿನಿಧಿಸುತ್ತ ಬಂದಿದ್ದಾರೆಂಬುದು ವಿಶೇಷ.

ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ

  • Share this:
ಇಂದು ವಿಶ್ವ ಕ್ರಿಕೆಟ್ (cricket) ಜಗತ್ತಿನಲ್ಲಿ ವಿರಾಟ್ ಕೊಹ್ಲಿ (Virat kohli) ಹೆಸರು ಸಾಕಷ್ಟು ಚಿರಪರಿಚಿತವಾಗಿದೆ. ಕ್ರಿಕೆಟ್ ಜಗತ್ತಿನಲ್ಲಿ ದಂತಕಥೆ ಎನಿಸಿರುವ ದಿಗ್ಗಜರ ಪೈಕಿ ವಿರಾಟ್ ಕೊಹ್ಲಿ ಹೆಸರು ಸಹ ಒಂದಾಗಿದೆ. ಐಪಿಎಲ್ (IPL) ವಿಷಯಕ್ಕೆ ಬಂದರೆ ವಿರಾಟ್ ಕೊಹ್ಲಿ ಹಾಗೂ ಆರ್‌‌‌‍ಸಿಬಿ (RCB)  ತಂಡದ ಮಧ್ಯೆ ಅದೇನೋ ಅವಿನಾಭಾವ ಸಂಬಂಧವಿದೆ. ಆರ್‌‌‌‍ಸಿಬಿ ಎಂದರೆ ಸಾಕು ಕ್ರಿಕೆಟ್ ಪ್ರಿಯರ ಮನದಲ್ಲಿ ಮೊಟ್ಟ ಮೊದಲು ಮೂಡುವ ವ್ಯಕ್ತಿ ವಿರಾಟ್ ಕೊಹ್ಲಿ ಎಂದರೂ ತಪ್ಪಾಗಲಾರದು.

ಇತ್ತೀಚೆಗೆ ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಡರ್-19 ಆಟಗಾರರ ಆಯ್ಕೆಯ ಸಂದರ್ಭಕ್ಕೆ ಸಂಬಂಧಿಸಿದಂತೆ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಸರಣಿಯ ಚೊಚ್ಚಲ ಆವೃತ್ತಿಯಲ್ಲಿ ಆಡಲು ಆಯ್ದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರ ಹೆಸರನ್ನು ಅಂಡರ್-19 ಆಟಗಾರರ ಪಟ್ಟಿಯಲ್ಲಿ ಹೆಸರಿಸಲಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಆರ್‌‌‌‍ಸಿಬಿ ತಂಡದ ದಂತಕಥೆ ಎನಿಸಿರುವ ಕೊಹ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿರುವಂತೆ ಆಟಗಾರರ ಪಟ್ಟಿಯಲ್ಲಿ ಅವರ ಹೆಸರಿದ್ದಿದ್ದು ಅವರ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರಿತ್ತು, ಆದರೆ ಅಂದು ಇದರ ಮಹತ್ವವನ್ನು ಅರಿತಿರಲಿಲ್ಲ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ವಿರಾಟ್ ಕೊಹ್ಲಿ ಅವರು ಪ್ರಪ್ರಥಮವಾಗಿ ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌‌‌‍ಸಿಬಿ ತಂಡವನ್ನು 2008ರಲ್ಲಿ ಸೇರಿದ್ದರು. ಅಂದಿನಿಂದ ಇಂದಿನವರೆಗೂ ಅವರು ಅದೇ ತಂಡದಲ್ಲಿ ಮುಂದುವರೆದಿದ್ದು ಯಾವುದೇ ಹರಾಜಿನಲ್ಲಿ ಭಾಗಿಯಾಗಲೇ ಇಲ್ಲ.

ಇದನ್ನೂ ಓದಿ: ಇಂದು `ಹಿಟ್​ಮ್ಯಾನ್’​ ಜೊತೆ ಓಪನಿಂಗ್​ಗೆ ಬರ್ತಿರೋದು ಇವ್ರೇ.. ಟೆನ್ಶನ್​ ಬೇಡ ಚಿಂದಿ ಉಡಾಯಿಸ್ತಾನೆ ಎಂದ ಫ್ಯಾನ್ಸ್​!

ಇತ್ತೀಚೆಗೆ ವಿರಾಟ್ ಅವರು ಪೋಡ್ ಕಾಸ್ಟ್ ನಿರೂಪಕರಾದ ದಾನಿಶ್ ಸೇಟ್ ಅವರೊಂದಿಗೆ ಸಂಭಾಷಣೆ ನಡೆಸುತ್ತ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. "ಆರ್‌‌‌‍ಸಿಬಿ ನನ್ನನ್ನು ಆಯ್ಕೆ ಮಾಡಿತು, ನನಗನಿಸುತ್ತದೆ ಇದೊಂದು ನನ್ನ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿದ ಕ್ಷಣವಾಗಿತ್ತು. ಅಂದು ಬಹುಶಃ ಇದರ ಬಗ್ಗೆ ನನಗೆ ಅರಿವಾಗಿರಲಿಲ್ಲ. ಆದರೆ, ಇಂದು ಆ ದಿನಗಳನ್ನು ನೆನೆಸಿಕೊಂಡಾಗ ಇದಿಲ್ಲದಿದ್ದರೆ ಪರಿಸ್ಥಿತಿಯು ಇಂದಿನ ನನ್ನ ಸ್ಥಿತಿಗಿಂತ ಭಿನ್ನವಾಗಿರುತ್ತಿತ್ತು. ಖಂಡಿತ ಇಂದಿನ ನನ್ನ ಈ ಸ್ಥಿತಿಗಿಂತ ಬೇರೆ ಯಾವ ಪರಿಸ್ಥಿತಿಯೂ ನನಗೆ ಬೇಕಾಗಿಲ್ಲ" ಎಂದು ವಿರಾಟ್ ಅವರು ಹೇಳುತ್ತಾರೆ.

ಈ ಸಂದರ್ಭದಲ್ಲಿ ಅವರು ಹೇಗೆ ಮೊದಲು ಅಂದು ಡೆಲ್ಲಿ ಡೇರ್ ಡೆವಿಲ್ಸ್ ಎಂದು ಕರೆಯಲ್ಪಡುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಹುತೇಕವಾಗಿ ವಿರಾಟ್ ಅವರನ್ನು ಆಯ್ಕೆ ಮಾಡಿ ಅಂತಿಮ ಹಂತದಲ್ಲಿ ಎಡಗೈ ವೇಗಿಯಾದ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ನೆನಪನ್ನು ಮೆಲುಕಿ ಹಾಕಿದ್ದಾರೆ.

ಈ ಬಗ್ಗೆ ಅವರು "ಅಂದು ಸಂಭಾಷಣೆಯಲ್ಲಿ, ಡೆಲ್ಲಿ ತಂಡವು ನನ್ನನ್ನು ಆಯ್ಕೆ ಮಾಡಿಕೊಳ್ಳಲು ಉತ್ಸುಕವಾಗಿದೆ ಎಂದು ಜನರಿಂದ ಕೇಳಲ್ಪಟ್ಟೆ. ಆದರೆ ಅವರ ಕಾರ್ಯವೈಖರಿ ಹೇಗಿತ್ತೆಂದರೆ ಕೊನೆಯಲ್ಲಿ ಅವರು ನನ್ನ ಬದಲು ಎಡಗೈ ವೇಗಿಯಾಗಿದ್ದ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಿಕೊಂಡರು. ಪ್ರದೀಪ್ ಅವರು ಒಬ್ಬ ಅದ್ಭುತ ಬೌಲರ್, ಆ ಸಮಯದಲ್ಲಿ ಅಂಡರ್-19 ಆಟಗಾರರಲ್ಲಿ ಅವರು ತಂಡದ ಅತ್ಯುತ್ತಮ ವೇಗಿಯಾಗಿದ್ದರು. ದೆಹಲಿ ತಂಡಕ್ಕೆ ತನ್ನ ಬಲವರ್ಧನೆಗಾಗಿ ಒಬ್ಬ ಅತ್ಯುತ್ತಮ ವೇಗಿಯ ಅವಶ್ಯಕತೆಯಿತ್ತು, ಹಾಗಾಗಿ ಅವರು ಅವನನ್ನು ಆಯ್ಕೆ ಮಾಡಿಕೊಂಡರು" ಎಂದು ಪ್ರತಿಕ್ರಯಿಸಿದ್ದಾರೆ.

ತಂಡಗಳು ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ದೆಹಲಿಗೆ ಪ್ರಥಮ ಅವಕಾಶವಿತ್ತು ಹಾಗೂ ಅವರು ಪ್ರದೀಪ್ ಅನ್ನು ಆಯ್ಕೆ ಮಾಡಿಕೊಂಡರು. ತದನಂತರ ಆರ್‌‌‌‌‌‍ಸಿಬಿ ತಂಡದವರು ವಿರಾಟ್‌ನನ್ನು ಆಯ್ಕೆ ಮಾಡಿಕೊಂಡರು. ಅದಾದ ಮೇಲೆ ಆಗಿರುವುದೆಲ್ಲ ಇತಿಹಾಸ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಐಪಿಎಲ್ ಹರಾಜು ಆಗುವ ಕೆಲ ಸಮಯದ ಮುಂಚೆಯೇ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಅಂಡರ್-19 ಪಂದ್ಯಾವಳಿಯಲ್ಲಿ ಗೆಲುವಿನ ದಡದತ್ತ ಕೊಂಡೊಯ್ದಿದ್ದರು. ಐಪಿಎಲ್‌ಗಾಗಿ ಆಟಗಾರರ ಹೆಸರುಗಳನ್ನು ಪಟ್ಟಿ ಮಾಡಿದ್ದ ಸಂದರ್ಭದಲ್ಲಿ ವಿರಾಟ್ ಅವರು ಮಲೇಷಿಯಾದಲ್ಲಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿರಾಟ್ ನಮಗೆಲ್ಲ ಇಷ್ಟು ಚಿಕ್ಕ ವಯಸ್ಸಿನಲ್ಲೇ ಎಷ್ಟು ದೊಡ್ಡ ಮೊತ್ತ ಕೊಟ್ಟು ಪಡೆಯುತ್ತಿರುವುದರ ಬಗ್ಗೆ ಅಚ್ಚರಿಯಾಗಿತ್ತೆಂದಿದ್ದಾರೆ.

ಇದನ್ನೂ ಓದಿ: ಈ ಸೀಸನ್​ ಸಖತ್​ ಡಲ್​ ಹೊಡೆದ ರೆಕಾರ್ಡ್ ಬ್ರೇಕರ್​ ಪರ್ದೀಪ್​.. ಇವ್ರ ದಾಖಲೆ ಮುರಿಯೋಕೆ ಕಾಯ್ತಿದ್ದಾರೆ 3 ಪ್ಲೇಯರ್ಸ್​!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ವಿರಾಟ್ ಅವರನ್ನು 12 ಲಕ್ಷ ರೂಪಾಯಿ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ತದನಂತರ ವಿರಾಟ್ ಅವರು ಪ್ರತಿ ಐಪಿಎಲ್ ಸರಣಿಗಳಲ್ಲೂ ಆರ್‌‌‌ಸಿಬಿ ತಂಡವನ್ನೇ ಪ್ರತಿನಿಧಿಸುತ್ತ ಬಂದಿದ್ದಾರೆಂಬುದು ವಿಶೇಷ. ಇನ್ನೇನು ಐಪಿಎಲ್ 2022 ಹರಾಜು ಆಗಬೇಕಾಗಿದ್ದು ಇತ್ತೀಚಿಗಷ್ಟೆ ನಾಯಕತ್ವದಿಂದ ಕೆಳಗಿಳಿದಿರುವ ವಿರಾಟ್ ಅವರನ್ನು ಈಗಲೂ ಆರ್‌‌‌ಸಿಬಿ ತಂಡವು 15 ಕೋಟಿ ರೂಪಾಯಿ ನೀಡಿ ತನ್ನ ತಂಡದಲ್ಲೇ ಇರಿಸಿಕೊಂಡಿದೆ.
Published by:Sandhya M
First published: