ದೆಹಲಿಯ ಪಾಲಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಮುಂಬೈ ಮುಖಾಮುಖಿಯಾಗಿದೆ. ಟಾಸ್ ಸೋತರು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಮುಂಬೈ ಆರಂಭಿಕ ಆಟಗಾರ ಪೃಥ್ವಿ ಶಾ ಅವರ ಭರ್ಜರಿ ಶತಕದ ನೆರವಿನಿಂದ 322 ರನ್ಗಳನ್ನು ಕಲೆಹಾಕಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ರವಿಕುಮಾರ್ ಸಮರ್ಥ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ 5 ಓವರ್ನಲ್ಲಿ ಪ್ರಸಿಧ್ದ್ ಕೃಷ್ಣ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಒಂದೆಡೆ ಯಶಸ್ವಿ ಜೈಸ್ವಾಲ್ (6) ಹಾಗೂ ಆದಿತ್ಯ ತಾರೆ (16) ಬೇಗನೆ ನಿರ್ಗಮಿಸಿದರೂ, ಮತ್ತೊಂದೆಡೆ ಪೃಥ್ವಿ ಶಾ ಅಬ್ಬರಿಸಲಾರಂಭಿಸಿದ್ದರು.
ಮೂರನೇ ವಿಕೆಟ್ಗೆ ಶಂಸ್ ಮುಲಾನಿ (45) ಜೊತೆಗೂಡಿ 159 ರನ್ ಜೊತೆಯಾಟವಾಡಿದ ಪೃಥ್ವಿ ಶಾ ಕರ್ನಾಟಕ ಬೌಲರುಗಳನ್ನು ಚೆಂಡಾಡಿದರು. ಅಲ್ಲದೆ ಬಿರುಸಿನ ಶತಕ ಪೂರೈಸಿದರು ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದರು. ಕೇವಲ 122 ಎಸೆತಗಳನ್ನು ಎದುರಿಸಿದ ಪೃಥ್ವಿ ಶಾ 165 ರನ್ ಬಾರಿಸಿದರು. ಈ ವೇಳೆ ಯುವ ದಾಂಡಿಗನ ಬ್ಯಾಟ್ನಿಂದ ಸಿಡಿದದ್ದು 7 ಸಿಕ್ಸರ್ ಹಾಗೂ 17 ಬೌಂಡರಿಗಳು.
ಇತ್ತ ಶಂಸ್ ಮುಲಾನಿ (45) ಗೌತಮ್ಗೆ ವಿಕೆಟ್ ಒಪ್ಪಿಸಿ ಹೊರನಡೆಯುತ್ತಿದ್ದಂತೆ ಅತ್ತ ಪೃಥ್ವಿ ಶಾ (165) ವೈಶಾಖ್ಗೆ ವಿಕೆಟ್ ನೀಡಿ ತಮ್ಮ ಸ್ಪೋಟಕ ಇನಿಂಗ್ಸ್ ಅಂತ್ಯಗೊಳಿಸಿದರು. ಆದರೆ ಅದಾಗಲೇ ಪೃಥ್ವಿ ಶಾ ಮುಂಬೈ ಸ್ಕೋರ್ ಅನ್ನು 40 ಓವರ್ನಲ್ಲಿ 243 ರನ್ಗೆ ತಂದು ನಿಲ್ಲಿಸಿದ್ದರು. ಇನ್ನು ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶಿವಂ ದುಬೆ 27 ರನ್‌ಗಳ ಕೊಡುಗೆ ನೀಡಿದರೆ, ಅಮನ್ ಹಕೀಂ ಖಾನ್ 25 ರನ್ ಬಾರಿಸಿದರು. ಆದರೆ ನಂತರ ಬಂದ ಬ್ಯಾಟ್ಸ್ಮನ್ಗಳನ್ನು ಬೇಗನೆ ಪೆವಿಲಿಯನ್ ಕಡೆ ಕಳುಹಿಸುವಲ್ಲಿ ಯಶಸ್ವಿಯಾದ ಕರ್ನಾಟಕ ಅಂತಿಮವಾಗಿ ಮುಂಬೈ ತಂಡವನ್ನು 49.2 ಓವರ್ನಲ್ಲಿ 322 ರನ್ಗೆ ಆಲೌಟ್ ಮಾಡಿತು.
ಕರ್ನಾಟಕ ತಂಡದ ಪರವಾಗಿ ವೈಶಾಕ್ ವಿಜಯ್ ಕುಮಾರ್ 4 ವಿಕೆಟ್ ಪಡೆದು ಮಿಂಚಿದರೆ, ಪ್ರಸಿಧ್ಧ್ ಕೃಷ್ಣ 3 ವಿಕೆಟ್ ಉರುಳಿಸಿದರು. ಇನ್ನು ರೋನಿತ್ ಮೋರೆ, ಶ್ರೇಯಸ್ ಗೋಪಾಲ್ ಹಾಗೂ ಕೃಷ್ಣಪ್ಪ ಗೌತಮ್ ತಲಾ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ