ಬೆಂಗಳೂರು (ಅ. 23): ವಿಜಯ್ ಹಜಾರೆ ಟ್ರೋಫಿ ಅಂತಿಮ ಹಂತಕ್ಕೆ ಬಂದುತಲುಪಿದೆ. ಇಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ಆತಿಥೇಯ ಕರ್ನಾಟಕ ತಂಡ ಛತ್ತೀಸ್ಗಢವನ್ನು ಎದುರಿಸಲಿದೆ. ಇನ್ನೊಂದು ಸೆಮೀಸ್ನಲ್ಲಿ ಗುಜರಾತ್ ಹಾಗೂ ತಮಿಳುನಾಡು ನಡುವೆ ಜೆಸಿಎ ಕ್ರೀಡಾಂಗಣದಲ್ಲಿ ಫೈಟ್ ನಡೆಯಲಿದೆ.
ತವರಿನಲ್ಲಿ ಕರ್ನಾಟಕ ಎಲ್ಲರಿಗಿಂತಲೂ ಬಲಿಷ್ಠವಾಗಿದೆ. ಲೀಗ್ನಲ್ಲಿ ಕರ್ನಾಟಕ ಅದ್ಭುತ ಪ್ರದರ್ಶನ ನೀಡಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿನಯ್ ಕುಮಾರ್ ನೇತೃತ್ವದ ಪುದುಚೇರಿ ತಂಡವನ್ನು ಸೋಲಿಸಿ ಸೆಮೀಸ್ಗೆ ಮಗ್ಗೆಯಿಟ್ಟಿತ್ತು. ಇದೀಗ ಫೈನಲ್ಗೇರಲು ಛತ್ತೀಸ್ಗಢವನ್ನು ಎದುರಿಸಲು ಪಾಂಡೆ ಪಡೆ ತಯಾರಿ ನಡೆಸಿದೆ.
ಇನ್ನು ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್ ಸೇರ್ಪಡೆಯಾಗಿರುವುದು ಆನೆಬಲ ಬಂದಂತಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಿನ್ನೆಗೆ ಮುಕ್ತಾಯಗೊಂಡ ಹಿನ್ನಲೆ ಮಯಾಂಕ್ ಇಂದು ರಾಜ್ಯ ತಂಡ ಸೇರಿಕೊಳ್ಳಲಿದ್ದಾರೆ. ಟೆಸ್ಟ್ನಲ್ಲಿ ದ್ವಿಶತಕ ಸಿಡಿಸಿ ಭರ್ಜರಿ ಫಾರ್ಮ್ನಲ್ಲಿರುವ ಅಗರ್ವಾಲ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಕರ್ನಾಟಕ ಲೀಗ್ನಲ್ಲಿ ಈವರೆಗೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲುಂಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ಓಪನರ್ಗಳಾದ ಕೆ ಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ. ನಾಯಕ ಮನೀಶ್ ಪಾಂಡೆ, ರೋಹನ್ ಕದಮ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ.
ಇತ್ತ ಬೌಲಿಂಗ್ನಲ್ಲೂ ರಾಜ್ಯ ತಂಡ ಬಲಿಷ್ಠವಾಗಿದೆ. ರೋನಿತ್ ಮೋರೆ, ಕೃಷ್ಣಪ್ಪ ಗೌತಮ್, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್ರಂತಹ ಅನುಭವಿ ಆಟಗಾರರನ್ನು ಹೊಂದಿದೆ.
ಎರಡನೇ ಸೆಮಿ ಫೈನಲ್ನಲ್ಲಿ ಗುಜರಾತ್ ಹಾಗೂ ತಮಿಳುನಾಡು ಮುಖಾಮುಖಿ ಆಗುತ್ತಿದೆ. ತಮಿಳುನಾಡು ಪರ ಆರ್ ಅಶ್ವಿನ್ ಸೆಮಿಫೈನಲ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಸೆಮೀಸ್ನಲ್ಲಿ ಗೆದ್ದ ತಂಡ ಅಕ್ಟೋಬರ್ 25 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಹೋರಾಟ ನಡೆಸಲಿದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ