ನವದೆಹಲಿಮಾ. 11): ಐವತ್ತು ಓವರ್ ಪಂದ್ಯಗಳ ವಿಜಯ್ ಹಜಾರೆ ಕ್ರಿಕೆಟ್ ಟ್ರೋಫಿಯ ಸೆಮಿಫೈನಲ್ ಪಂದ್ಯಗಳು ಇಂದು ನಡೆಯುತ್ತಿವೆ. ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಲು ಮೊದಲ ಸೆಮಿಫೈನಲ್ನಲ್ಲಿ ಗುಜರಾತ್ ಮತ್ತು ಉತ್ತರ ಪ್ರದೇಶ ತಂಡಗಳು ಎದುರುಬದುರಾದರೆ, ಎರಡನೇ ಸೆಮಿಫೈನಲ್ನಲ್ಲಿ ಕರ್ನಾಟಕ ಮತ್ತು ಮುಂಬೈ ಹಣಾಹಣಿ ನಡೆಸುತ್ತಿವೆ. ಎರಡೂ ಪಂದ್ಯಗಳೂ ದೆಹಲಿಯಲ್ಲೇ ನಡೆಯಲಿವೆ. ಗುಜರಾತ್ ಮತ್ತು ಉತ್ತರ ಪ್ರದೇಶ ನಡುವಿನ ಸೆಮಿಫೈನಲ್ ಪಂದ್ಯ ಮಾತ್ರ ಟಿವಿಯಲ್ಲಿ ನೇರ ಪ್ರಸಾರವಾಗುತ್ತಿದೆ.
ಕರ್ನಾಟಕ ಮತ್ತು ಮುಂಬೈ ನಡುವಿನ ಪಂದ್ಯ ಬಹಳ ಕುತೂಹಲ ಮೂಡಿಸಿದೆ. ಎರಡೂ ಕೂಡ ಬಲಿಷ್ಠ ತಂಡಗಳಾಗಿವೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಈವರೆಗೆ ಇವು ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ತಲಾ ಎರಡೆರಡು ಬಾರಿ ಗೆದ್ದು ಸಮಬಲ ತೋರಿವೆ. ಈ ಸಾಲಿನ ಟೂರ್ನಿಯಲ್ಲಿ ಇವು ಅತ್ಯುತ್ತಮ ಪ್ರದರ್ಶನ ನೀಡಿವೆ. ಮುಂಬೈ ಕ್ವಾರ್ಟರ್ಫೈನಲ್ವರೆಗಿನ ಎಲ್ಲಾ ಆರು ಪಂದ್ಯಗಳನ್ನ ಜಯಿಸಿದೆ. ಕರ್ನಾಟಕ ತಂಡ ಗ್ರೂಪ್ ಸ್ಟೇಜ್ನಲ್ಲಿ ಉತ್ತರ ಪ್ರದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದು ಬಿಟ್ಟರೆ ಉಳಿದಂತೆ ಭರ್ಜರಿ ಗೆಲುವುಗಳನ್ನ ಕಂಡಿದೆ.
ಕರ್ನಾಟಕ ಮತ್ತು ಮುಂಬೈನ ಬ್ಯಾಟಿಂಗ್ ಪಡೆ ಬಲಿಷ್ಠವಾಗಿವೆ. ಆದರೆ, ಬೌಲಿಂಗ್ನಲ್ಲಿ ಕರ್ನಾಟಕದವರು ಹೆಚ್ಚು ಸಮರ್ಥರಿದ್ದಾರೆ. ಬ್ಯಾಟ್ಸ್ಮನ್ಗಳಾದ ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ಮನೀಶ್ ಪಾಂಡೆ, ಕೆ ಗೌತಮ್, ಕರುಣ್ ನಾಯರ್ ಅವರಿಂದ ಕರ್ನಾಟಕದ ಬ್ಯಾಟಿಂಗ್ ಪಡೆ ಪ್ರಬಲವಾಗಿದೆ. ಸಮರ್ಥ್ ಮತ್ತು ಪಡಿಕ್ಕಲ್ ಅದ್ಭುತ ಫಾರ್ಮ್ನಲ್ಲಿದ್ಧಾರೆ. ಪಡಿಕ್ಕಲ್ ಅವರಂತೂ ಈ ಟೂರ್ನಿಯಲ್ಲಿ ಸತತ ನಾಲ್ಕು ಶತಕ ಭಾರಿಸಿ ಮಿಂಚಿದ್ದಾರೆ. ಇವರ ಈ ಫಾರ್ಮ್ ಮುಂಬೈ ವಿರುದ್ಧದ ಪಂದ್ಯದಲ್ಲೂ ಮುಂದುವರಿದರೆ ಕರ್ನಾಟಕಕ್ಕೆ ಗೆಲುವು ಹೆಚ್ಚು ಕಷ್ಟವಾಗುವುದಿಲ್ಲ.
ಇದನ್ನೂ ಓದಿ: Team India: ಮತ್ತೊಮ್ಮೆ ರೆಟ್ರೊ ಲುಕ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ..!
ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಕೃಷ್ಣ ಮತ್ತು ರೋನಿತ್ ಮೋರೆ ಒಳ್ಳೆಯ ಫಾರ್ಮ್ನಲ್ಲಿದ್ದಾರೆ. ಕೆ ಗೌತಮ್, ವಿ ವೈಶಾಖ್, ಶ್ರೇಯಸ್ ಗೋಪಾಲ್ ಅವರೂ ಕೂಡ ಉತ್ತಮ ಬೌಲಿಂಗ್ ಮಾಡಬಲ್ಲರು.
ಮುಂಬೈ ತಂಡದ ಬ್ಯಾಟಿಂಗ್ ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್ ಅವರ ನೇತೃತ್ವದಲ್ಲಿ ಉತ್ತಮವಾಗಿದೆ. ಆದರೆ, ಬೌಲಿಂಗ್ ತುಸು ದುರ್ಬಲವಾಗಿದೆ. ಈ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಕರ್ನಾಟಕಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ. ಟಾಸ್ ಗೆದ್ದಿರುವ ಕರ್ನಾಟಕ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ