ವಿಜಯ್ ಹಝಾರೆ ಟೂರ್ನಿಯಲ್ಲಿ ಕರ್ನಾಟಕದ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಅವರ ಅಬ್ಬರ ಮುಂದುವರೆದಿದೆ. ಕಳೆದ ಮೂರು ಇನಿಂಗ್ಸ್ಗಳಲ್ಲಿ ಭರ್ಜರಿ ಶತಕ ಬಾರಿಸಿದ್ದ ಪಡಿಕ್ಕಲ್ ಕೇರಳ ವಿರುದ್ಧ ಇಂದು ನಡೆದ ಕ್ವಾಟರ್ಫೈನಲ್ ಪಂದ್ಯದಲ್ಲೂ ಆಕರ್ಷಕ ಸೆಂಚುರಿ ಬಾರಿಸಿ ಮಿಂಚಿದ್ದಾರೆ. ಇನ್ನು ಪಡಿಕ್ಕಲ್ಗೆ ಸಾಥ್ ನೀಡಿದ ನಾಯಕ ರವಿಕುಮಾರ್ ಸಮರ್ಥ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಮಿಂಚಿದರು. ಇವರಿಬ್ಬರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು ಕೇರಳ ವಿರುದ್ಧ 80 ರನ್ಗಳ ಜಯ ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದೆ.
ದೆಹಲಿಯ ಪಾಲಂ ಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಕಣಕ್ಕಳಿದ ಬ್ಯಾಟಿಂಗ್ ರವಿಕುಮಾರ್ ಸಮರ್ಥ್ ಹಾಗೂ ದೇವದತ್ ಪಡಿಕ್ಕಲ್ ಕರ್ನಾಟಕಕ್ಕೆ ಭರ್ಜರಿ ಆರಂಭ ಒದಗಿಸಿದರು. ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾದ ನಾಯಕ ಸಮರ್ಥ್ ಕೇರಳ ಬೌಲರುಗಳ ಬೆವರಿಳಿಸಿದರು. ಶ್ರೀಶಾಂತ್, ಬಾಸಿಲ್ ಥಂಪಿಯಂತಹ ಸ್ಟಾರ್ ಬೌಲರುಗಳನ್ನು ಟಾರ್ಗೆಟ್ ಮಾಡಿದ ಸಮರ್ಥ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ತಲುಪಿಸಿದರು.
ಮತ್ತೊಂದೆಡೆ ರಕ್ಷಣಾತ್ಮಕ ಆಟದೊಂದಿಗೆ ಇನಿಂಗ್ಸ್ ಕಟ್ಟಿದ ದೇವದತ್ ಪಡಿಕ್ಕಲ್ ನಾಯಕನಿಗೆ ಉತ್ತಮ ಸಾಥ್ ನೀಡಿದರು. ಪರಿಣಾಮ ಮೊದಲ ವಿಕೆಟ್ಗೆ 249 ರನ್ಗಳು ಮೂಡಿಬಂತು. ಈ ನಡುವೆ ಪಡಿಕ್ಕಲ್ 119 ಎಸೆತಗಳನ್ನು ಎದುರಿಸಿ 2 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ ಶತಕ ಪೂರೈಸಿದರು. ಇದರೊಂದಿಗೆ ಈ ಬಾರಿಯ ವಿಜಯ್ ಹಝಾರೆ ಟೂರ್ನಿಯಲ್ಲಿ ಸತತ ನಾಲ್ಕನೇ ಶತಕ ಬಾರಿಸಿದ ಆಟಗಾರ ಎನಿಸಿಕೊಂಡರು. ಅಲ್ಲದೆ 101 ರನ್ಗಳಿಸಿ ಬಾಸಿಲ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಪಂದ್ಯಕ್ಕೆ ಮೊದಲು ಪಡಿಕ್ಕಲ್ ಒರಿಸ್ಸಾ ವಿರುದ್ಧ 152, ಕೇರಳ ವಿರುದ್ಧ ಅಜೇಯ 126 ಮತ್ತು ರೇಲ್ವೇಸ್ ವಿರುದ್ಧ ಅಜೇಯ 145 ಬಾರಿಸಿದ್ದರು.
ಇನ್ನು ಪಡಿಕ್ಕಲ್ ನಿರ್ಗಮನದ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಸಮರ್ಥ್ 22 ಬೌಂಡರಿ ಹಾಗೂ 3 ಸಿಕ್ಸರ್ಗಳೊಂದಿಗೆ ಗಮನ ಸೆಳೆದರು. ಅಲ್ಲದೆ ಕೇವಲ 158 ಎಸೆತಗಳಲ್ಲಿ 192 ರನ್ ಸಿಡಿಸುವ ಮೂಲಕ ಕರ್ನಾಟಕ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಆದರೆ ದ್ವಿಶತಕದ ಸಮೀಪದಲ್ಲಿದ್ದ ಸಮರ್ಥ್ (192) ಬಾಸಿಲ್ಗೆ ವಿಕೆಟ್ ಒಪ್ಪಿಸುವ ಮೂಲಕ ಡಬಲ್ ಸೆಂಚುರಿ ಅವಕಾಶವನ್ನು ತಪ್ಪಿಸಿಕೊಂಡರು.
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮನೀಷ್ ಪಾಂಡೆ 20 ಎಸೆತಗಳಲ್ಲಿ 34 ರನ್ ಬಾರಿಸುವ ಮೂಲಕ ಅಂತಿಮವಾಗಿ ತಂಡದ ಮೊತ್ತವನ್ನು 50 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 338 ರನ್ಗೆ ತಂದು ನಿಲ್ಲಿಸಿದರು.
ಈ ಬೃಹತ್ ಗುರಿ ಬೆನ್ನತ್ತಿದ ಕೇರಳ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕರ್ನಾಟಕದ ಬೌಲರುಗಳು ಯಶಸ್ವಿಯಾದರು. ತಂಡದ ಮೊತ್ತ 15 ಆಗುವಷ್ಟರಲ್ಲಿ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ, ರೋಹನ್ರನ್ನು ರೋನಿತ್ ಮೋರೆ ಪೆವಿಲಿಯನ್ಗೆ ಕಳಹಿಸಿದರು. ಈ ಹಂತದಲ್ಲಿ ವತ್ಸಲ್ ಗೋವಿಂದ್ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಕರ್ನಾಟಕದ ಬೌಲರುಗಳನ್ನು ಆತ್ಮವಿಶ್ವಾಸದಿಂದಲೇ ಎದುರಿಸಿದ ವತ್ಸಲ್, 96 ಎಸೆತಗಳಲ್ಲಿ 92 ರನ್ ಬಾರಿಸಿದರು. ಆದರೆ ಶತಕದ ಸಮೀಪದಲ್ಲಿ ರೋನಿತ್ ಮೋರೆಗೆ ವಿಕೆಟ್ ಒಪ್ಪಿಸಿ ನಡೆದರು.
ಒಂದೆಡೆ ಸತತ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಯುವ ದಾಂಡಿಗ ಮೊಹಮ್ಮದ್ ಅಜರುದ್ದೀನ್ ಅಬ್ಬರಿಸಲಾರಂಭಿಸಿದರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಜರ್ 5 ಭರ್ಜರಿ ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಾಯದಿಂದ ಕೇವಲ 34 ಎಸೆತಗಳಲ್ಲಿ 52 ರನ್ ಚಚ್ಚಿದರು. ಒಂದು ಹಂತದಲ್ಲಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಅಜರ್ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಹೋಗಿ ಸ್ಟಂಪ್ ಆಗಿ ಹೊರನಡೆದರು.
ಅಜರ್ ವಿಕೆಟ್ ಒಪ್ಪಿಸುವುದರೊಂದಿಗೆ ಕೇರಳದ ಸೆಮಿ ಫೈನಲ್ ಆಸೆ ಕಮರಿತು. ಇನ್ನು ಕೊನೆಯ ಹಂತದಲ್ಲಿ ಬೌಲಿಂಗ್ಗೆ ಇಳಿದ ರೋನಿತ್ ಮೋರೆ ಮತ್ತೆರಡು ವಿಕೆಟ್ ಉರುಳಿಸಿ ಕರ್ನಾಟಕವನ್ನು ಜಯ ಸಮೀಪಕ್ಕೆ ತಂದು ನಿಲ್ಲಿಸಿದರು. ಕೃಷ್ಣಪ್ಪ ಗೌತಮ್, ಜಲಜ್ ಸಕ್ಸೇನಾ (24) ವಿಕೆಟ್ ಪಡೆಯುವುದರೊಂದಿಗೆ ಕೇರಳ ತಂಡವು 43.4 ಓವರ್ನಲ್ಲಿ 258 ರನ್ಗಳಿಗೆ ಸರ್ವಪತನ ಕಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ