ಬೆಂಗಳೂರು: ಸೋಲಿನೊಂದಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ನಿರಾಸೆಯ ಆರಂಭ ಪಡೆದಿದ್ದ ಕರ್ನಾಟಕ ಕ್ರಿಕೆಟ್ ತಂಡ ಇದೀಗ ನಾಕೌಟ್ ಹಂತಕ್ಕೆ ಏರುವಲ್ಲಿ ಯಶಸ್ವಿಯಾಗಿದೆ. ಸತತ ನಾಲ್ಕು ಪಂದ್ಯಗಳನ್ನ ಗೆಲ್ಲುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಿನ್ನೆ ರೈಲ್ವೇಸ್ ವಿರುದ್ಧ ಭರ್ಜರಿ ಗೆಲುವು ಪಡೆದು ರನ್ ಸರಾಸರಿ ಆಧಾರದ ಮೇಲೆ ಸಿ ಗುಂಪಿನಿಂದ ಕರ್ನಾಟಕ ಅಗ್ರ ಸ್ಥಾನ ಪಡೆದು ಮುಂದಿನ ಹಂತಕ್ಕೆ ಅಡಿ ಇಟ್ಟಿದೆ. ನಿನ್ನೆ ಇ ಗುಂಪಿನ ಕೊನೆಯ ಸುತ್ತಿನ ಪಂದ್ಯದಲ್ಲಿ ರೈಲ್ವೇಸ್ ತಂಡದ 284 ರನ್ ಮೊತ್ತವನ್ನು ಕರ್ನಾಟಕ ಒಂದೂ ವಿಕೆಟ್ ನಷ್ಟವಿಲ್ಲದೇ 41ನೇ ಓವರ್ನಲ್ಲೇ ಗೆಲುವು ಸಾಧಿಸಿತು. ಅದರ ಪರಿಣಾಮವಾಗಿ ಉತ್ತರ ಪ್ರದೇಶ ಮತ್ತು ಕೇರಳ ತಂಡಗಳಿಗಿಂತ ಕರ್ನಾಟಕದ ರನ್ ರೇಟ್ ಉತ್ತಮಗೊಂಡಿತು. ಒಂದು ವೇಳೆ ಅಲ್ಪ ಎಸೆತಗಳ ಅಂತರದಲ್ಲಿ ಕರ್ನಾಟಕ ಗೆದ್ದಿದ್ದರೂ ಅಗ್ರಸ್ಥಾನ ಕೈತಪ್ಪುವ ಸಾಧ್ಯತೆ ಇತ್ತು. ಆದರೆ, ರವಿಕುಮಾರ್ ಸಮರ್ಥ್ ಮತ್ತು ದೇವದತ್ ಪಡಿಕ್ಕಲ್ ಅಂಥ ಯಾವುದೇ ಸಂದರ್ಭ ಎದುರಾಗದಂತೆ ನೋಡಿಕೊಂಡರು.
ಆರ್ ಸಮರ್ಥ್ ಮತ್ತು ಪಡಿಕ್ಕಲ್ ಇಬ್ಬರೂ ಭರ್ಜರಿ ಶತಕ ಭಾರಿಸಿ ಅಜೇಯರಾಗಿಯೇ ಉಳಿದು ತಂಡದ ಗೆಲುವನ್ನು ಖಾತ್ರಿ ಪಡಿಸಿದ್ದಲ್ಲದೇ, ಅತ್ಯವಶ್ಯಕವಾಗಿದ್ದ ರನ್ ಗತಿಯನ್ನೂ ಹೆಚ್ಚಿಸಿ ತಂಡವನ್ನ ನಾಕೌಟ್ ಹಂತ ಪ್ರವೇಶಿಸುವಂತೆ ಖಚಿಪಡಿಸಿದರು. ರವಿಕುಮಾರ್ ಸಮರ್ಥ್ 118 ಎಸೆತದಲ್ಲಿ ಅಜೇಯ 130 ರನ್ ಭಾರಿಸಿದರೆ, ದೇವದತ್ ಪಡಿಕ್ಕಲ್ 125 ಬಾಲ್ನಲ್ಲಿ ಅಜೇಯ 145 ರನ್ ಚಚ್ಚಿದರು. ಪಡಿಕ್ಕಲ್ ಅವರ ಇನ್ನಿಂಗ್ಸಲ್ಲಿ 9 ಸಿಕ್ಸರ್ಗಳೂ ಒಳಗೊಂಡಿದ್ದವು. ಇದಕ್ಕೂ ಮುನ್ನ ಪ್ರಥಮ್ ಸಿಂಗ್ ಅವರ ಅಮೋಘ ಶತಕದ ನೆರವಿನಿಂದ ರೈಲ್ವೇಸ್ ತಂಡ ನಿಗದತಿ 50 ಒವರ್ನಲ್ಲಿ 284 ರನ್ ಗಳಿಸಿ ಕರ್ನಾಟಕಕ್ಕೆ ಚಾಲೆಂಜಿಂಗ್ ಟಾರ್ಗೆಟ್ ನೀಡಿತು. ಆದರೆ, ಕರ್ನಾಟಕದ ಬ್ಯಾಟುಗಾರರು ಬಹಳ ಯೋಜಿತವಾಗಿ ಗುರಿ ಚೇಸ್ ಮಾಡಿ ತಂಡವನ್ನು ನಾಕೌಟ್ ಹಂತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ಭಾರತ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಿದರೆ ಏಷ್ಯಾ ಕಪ್ ಮುಂದೂಡಿಕೆ..!
ಉತ್ತರ ಪ್ರದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯಗಳಲ್ಲಿ ಒಡಿಶಾ, ಕೇರಳ, ಬಿಹಾರ ಮತ್ತು ರೈಲ್ವೇಸ್ ತಂಡಗಳನ್ನ ಸುಲಭವಾಗಿ ಮಣಿಸಿ ಅಂಕಗಳ ಜೊತೆಗೆ ರನ್ ರೇಟ್ ಭದ್ರಪಡಿಸಿಕೊಂಡಿತು. ಇ ಗುಂಪಿಯನಲ್ಲಿ ಕರ್ನಾಟಕದ ನಂತರ ಸ್ಥಾನದಲ್ಲಿ ಉತ್ತರ ಪ್ರದೇಶವಿದ್ದು, ಕ್ವಾರ್ಟರ್ ಫೈನಲ್ ತಲುಪುವ ಅವಕಾಶ ಇನ್ನೂ ಜೀವಂತವಾಗಿದೆ. ಕರ್ನಾಟಕ ಮತ್ತು ಉತ್ತರ ಪ್ರದೇಶದಷ್ಟೇ 16 ಪಾಯಿಂಟ್ ಹೊಂದಿರುವ ಕೇರಳ ತಂಡದ ರನ್ ರೇಟ್ ತುಸು ಕಡಿಮೆ ಇದ್ದು 3ನೇ ಸ್ಥಾನಕ್ಕೆ ಕುಸಿದಿದೆ. ಎ ಗುಂಪಿನಿಂದ ಗುಜರಾತ್, ಬಿ ಗುಂಪಿನಿಂದ ಆಂಧ್ರ ಪ್ರದೇಶ ತಂಡಗಳು ಕರ್ನಾಟಕದ ಜೊತೆ ಎಂಟರ ಹಂತ ಪ್ರವೇಶಿಸಿವೆ.
ಇಂದು ಎಲೈಟ್ ವಿಭಾಗದ ಡಿ, ಇ ಗುಂಪು ಹಾಗೂ ಪ್ಲೇಟ್ ಗುಂಪಿನ ಅಂತಿಮ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಇಂದು ಕ್ವಾರ್ಟರ್ಫೈನಲ್ ಪ್ರವೇಶಿಸುವ ಉಳಿದ 5 ತಂಡಗಳು ಯಾವುವು ಎಂಬುದು ಸ್ಪಷ್ಟಗೊಳ್ಳಲಿದೆ.
ಮಾರ್ಚ್ 8 ಮತ್ತು 9ರಂದು ಕ್ವಾರ್ಟರ್ಫೈನಲ್ ಪಂದ್ಯಗಳು ನಡೆಯಲಿವೆ. ಮಾರ್ಚ್ 11ರಂದು ಸೆಮಿಫೈನಲ್ ಹಾಗೂ ಮಾರ್ಚ್ 14ರಂದು ಫೈನಲ್ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: Chris Gayle: ಕ್ರಿಸ್ ಗೇಲ್ ಆಯ್ಕೆ ಮಾಡಿದ ಟಾಪ್ 3 ಟಿ20 ಬ್ಯಾಟ್ಸ್ಮನ್ಗಳು ಇವರೇ..!
ಸ್ಕೋರು ವಿವರ:
ರೈಲ್ವೇಸ್ 50 ಓವರ್ 284/9
(ಪ್ರಥಮ್ ಸಿಂಗ್ 129, ಅರಿಂಧಮ್ ಘೋಷ್ 36, ಅಮಿತ್ ಮಿಶ್ರಾ ಅಜೇಯ 25, ಸೌರಭ್ ಸಿಂಗ್ 20 ರನ್ – ಶ್ರೇಯಸ್ ಗೋಪಾಲ್ 41/3, ಜೆ ಸುಚಿತ್ 72/2)
ಕರ್ನಾಟಕ 40.3 ಓವರ್ 285/0
(ದೇವದತ್ ಪಡಿಕ್ಕಲ್ ಅಜೇಯ 145, ರವಿಕುಮಾರ್ ಸಮರ್ಥ್ ಅಜೇಯ 130 ರನ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ