Vijay Hazare Trophy: ವಿಜಯ್ ಹಜಾರೆ ಟ್ರೋಫಿ- ಹಿಮಾಚಲ ನೂತನ ಚಾಂಪಿಯನ್ಸ್; ತಮಿಳುನಾಡಿಗೆ ನಿರಾಸೆ

Himachal Pradesh beat Tamil Nadu: ರಿಷಿ ಧವನ್ ನಾಯಕತ್ವದ ಹಿಮಾಚಲಪ್ರದೇಶ ಮೊತ್ತಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ಆಗಿದೆ. ಇಂದು ನಡೆದ ಫೈನಲ್​ನಲ್ಲಿ ತಮಿಳುನಾಡನ್ನು 11 ರನ್​ಗಳಿಂದ ಹಿಮಾಚಲ ಸೋಲಿಸಿತು.

ಹಿಮಾಚಲಪ್ರದೇಶ ಕ್ರಿಕೆಟ್ ತಂಡದ ಆಟಗಾರರು

ಹಿಮಾಚಲಪ್ರದೇಶ ಕ್ರಿಕೆಟ್ ತಂಡದ ಆಟಗಾರರು

  • Share this:
    ಜೈಪುರ್, ಡಿ. 26: ಶುಭಮ್ ಅರೋರಾ (Shubham Arora) ಅವರ ಅಮೋಘ ಶತಕ ಹಾಗೂ ನಾಯಕ ರಿಷಿ ಧವನ್ (Rishi Dhawan) ಅವರ ಆಲ್​ರೌಂಡ್ ಆಟದ ನೆರವಿನಿಂದ ಹಿಮಾಚಲಪ್ರದೇಶ (Himachal Pradesh) ಇಂದು ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಫೈನಲ್​ನಲ್ಲಿ ತಮಿಳುನಾಡನ್ನು ಸೋಲಿಸಿತು. ಗೆಲ್ಲಲು 315 ರನ್​ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಹಿಮಾಚಲ ಪ್ರದೇಶ 48ನೇ ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿದ್ದಾಗ ಮಂದ ಬೆಂಕಿನ ಕಾರಣಕ್ಕೆ ಅಂಪೈರ್​ಗಳು ಆಟ ನಿಲ್ಲಿಸಿದರು. ಆ ಸಂದರ್ಭದಲ್ಲಿ ಹಿಮಾಚಲ ತಂಡ 15 ಎಸೆತದಲ್ಲಿ 16 ರನ್ ಗಳಿಸುವ ಅಗತ್ಯತೆ ಇದು. ಪಂದ್ಯ ಸ್ಥಗಿತಗೊಂಡ ನಂತರ ವಿಜೆಡಿ ನಿಯಮದ ಅನುಸಾರ ಹಿಮಾಚಲ ಪ್ರದೇಶ ತಂಡವನ್ನು 11 ರನ್​ಗಳಿಂದ ವಿಜಯಶಾಲಿ ಎಂದು ಘೋಷಿಸಲಾಯಿತು.

    ವಿಜಯ್ ಹಜಾರೆ ಟ್ರೋಫಿಯ ರೌಂಡ್ ರಾಬಿನ್ ಪಂದ್ಯಾವಳಿ ಶುರುವಾಗಿದ್ದು 2002ರಿಂದ. ಈ ಬಾರಿ ನಡೆದದ್ದು 20ನೇ ಆವತ್ತಿ. ಹಿಮಾಚಲ ಪ್ರದೇಶ ಇದೇ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಎತ್ತಿಹಿಡಿದಿದೆ. ಐದು ಬಾರಿ ಚಾಂಪಿಯನ್ಸ್ ತಮಿಳುನಾಡು ತಂಡ ಆರನೇ ಬಾರಿ ಪ್ರಶಸ್ತಿ ಗೆಲ್ಲುವ ಪ್ರಯತ್ನ ಸಫಲವಾಗಲಿಲ್ಲ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡ ಆರಂಭಿಕ ಆಘಾತ ಅನುಭವಿಸಿತು. 40 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ದಿನೇಶ್ ಕಾರ್ತಿಕ್, ಬಾಬಾ ಇಂದ್ರಜಿತ್, ಶಾರುಕ್ ಖಾನ್ ಮತ್ತು ನಾಯಕ ವಿಜಯ್ ಶಂಕರ್ ಉತ್ತಮವಾಗಿ ಆಡಿದ್ದರಿಂದ ತಮಿಳುನಾಡು 314 ರನ್​ಗಳ ದೊಡ್ಡ ಮೊತ್ತ ಕಲೆಹಾಕಲು ಶಕ್ಯವಾಯಿತು. ದಿನೇಶ್ ಕಾರ್ತಿಕ್ ಅಮೋಘ ಶತಕ ಭಾರಿಸಿದರು. 103 ಎಸೆತದಲ್ಲಿ 116 ರನ್ ಚಚ್ಚಿದ ಅವರ ಇನ್ನಿಂಗ್ಸಲ್ಲಿ 7 ಸಿಕ್ಸರ್​ಗಳೂ ಒಳಗೊಂಡಿದ್ದವು.

    ಬಾಬಾ ಇಂದ್ರಜಿತ್ ಮತ್ತು ದಿನೇಶ್ ಕಾರ್ತಿಕ್ 5ನೇ ವಿಕೆಟ್​ಗೆ 202 ರನ್​ಗಳ ಜೊತೆಯಾಟ ಆಡಿದ್ದು ತಮಿಳುನಾಡಿನ ಇನ್ನಿಂಗ್ಸ್​ಗೆ ಪುಷ್ಟಿ ಸಿಕ್ಕಿತು. ಶಾರುಕ್ ಖಾನ್ 21 ಬಾಲ್​ನಲ್ಲಿ 42 ರನ್ ಗಳಿಸಿದರು.

    ಇದನ್ನೂ ಓದಿ: Rahul Dravid: ಕೊಹ್ಲಿ ವಿವಾದ ವಿಚಾರ ಕೆದಕಿದಾಗ ರಾಹುಲ್ ದ್ರಾವಿಡ್ ಕೊಟ್ಟ ಉತ್ತರ ಇದು

    ಅದ್ಭುತ ಚೇಸಿಂಗ್ ಹೆಣೆದ ಹಿಮಾಚಲ:

    ಬೃಹತ್ ಮೊತ್ತದ ಚೇಸ್ ಮಾಡಿದ ಹಿಮಾಚಲ ಪ್ರದೇಶದ ಇನ್ನಿಂಗ್ಸ್ ಪರಿಪಕ್ವವಾಗಿತ್ತು. ಶುಭಮ್ ಅರೋರಾ, ಅಮಿತ್ ಕುಮಾರ್ ಮತ್ತು ನಾಯಕ ರಿಷಿ ಧವನ್ ಅವರು ಯೋಜಿತವಾಗಿ ಚೇಸಿಂಗ್ ನಡೆಸಿದರು. ಶುಭಮ್ ಅರೋರಾ 131 ಬಾಲ್​ನಲ್ಲಿ ಅಜೇಯ 136 ರನ್ ಗಳಿಸಿದರು. ಅಮಿತ್ ಕುಮಾರ್ 79 ಬಾಲ್​ನಲ್ಲಿ 74 ರನ್ ಗಳಿಸಿದರು. ಆರನೇ ಕ್ರಮಾಂಕದಲ್ಲಿ ಬ್ಯಾಟ್​ಗೆ ಬಂದ ರಿಷಿ ಧವನ್ 23 ಬಾಲ್​ನಲ್ಲಿ ಅಜೇಯ 42 ರನ್ ಗಳಿಸಿದರು.

    ಇದನ್ನೂ ಓದಿ: PKL 8: ಸಚಿನ್ ವಿಟ್ಲ, ವೇಗದ ಬೌಲರ್ ಆಗಿದ್ದವ ತೊಡೆ ತಟ್ಟಿ ಕಬಡ್ಡಿ ಆಟಗಾರನಾದ ಕಥೆ

    ಸ್ಕೋರು ವಿವರ:

    ತಮಿಳುನಾಡು 49.4 ಓವರ್ 314/10
    (ದಿನೇಶ್ ಕಾರ್ತಿಕ್ 116, ಬಾಬಾ ಇಂದ್ರಜಿತ್ 80, ಶಾರುಕ್ ಖಾನ್ 42, ವಿಜಯ್ ಶಂಕರ್ 22, ಆರ್ ಸಾಯಿಕಿಶೋರ್ 18 ರನ್- ಪಂಕಜ್ ಜಸ್ವಾಲ್ 59/4, ರಿಷಿ ಧವನ್ 62/3)

    ಹಿಮಾಚಲಪ್ರದೇಶ 47.3 ಓವರ್ 299/4
    (ಶುಭಮ್ ಅರೋರಾ ಅಜೇಯ 136, ಅಮಿತ್ ಕುಮಾರ್ 74, ರಿಷಿ ಧವನ್ ಅಜೇಯ 42, ಪ್ರಶಾಂತ್ ಚೋಪ್ರಾ 21, ನಿಖಿಲ್ ಗಂಗಟಾ 18 ರನ್)

    ವಿಜೆಡಿ ನಿಯಮದ ಪ್ರಕಾರ ಹಿಮಾಚಲ ಪ್ರದೇಶಕ್ಕೆ 11 ರನ್ ಗೆಲುವು
    Published by:Vijayasarthy SN
    First published: