ಈ ಬೃಹತ್ ಟಾರ್ಗೆಟ್ ಬೆನ್ನತ್ತಿದ ಮುಂಬೈಗೆ ನಾಯಕ ಪೃಥ್ವಿ ಶಾ ಸಿಡಿಲಬ್ಬರದ ಆರಂಭ ಒದಗಿಸಿದರು. ಜೈಸ್ವಾಲ್ (29) ಜೊತೆಗೂಡಿ ಇನಿಂಗ್ಸ್ ಆರಂಭಿಸಿದ ಪೃಥ್ವಿ ಉತ್ತರ ಪ್ರದೇಶ ಬೌಲರುಗಳ ಬೆಂಡೆತ್ತಿದರು.
ವಿಜಯ್ ಹಜಾರೆ ಟ್ರೋಫಿ 2020-21ರ ಸಾಲಿನ ಚಾಂಪಿಯನ್ ತಂಡವಾಗಿ ಮುಂಬೈ ಹೊರಹೊಮ್ಮಿದೆ. ದೆಹಲಿಯ ಪಾಲಂ ಸ್ಡೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ದ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮುಂಬೈ 4ನೇ ಬಾರಿ ಟ್ರೋಫಿಗೆ ಮುತ್ತಿಕ್ಕಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಉತ್ತರ ಪ್ರದೇಶ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಆರಂಭಿಕರಾಗಿ ಕಣಕ್ಕಿಳಿದ ಮಾಧವ್ ಕೌಶಿಕ್ ಹಾಗೂ ಸಮರ್ಥ್ ಸಿಂಗ್ ಉತ್ತರ ಪ್ರದೇಶಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 122 ರನ್ಗಳ ಜೊತೆಯಾಟವಾಡಿದ ಈ ಜೋಡಿ ಬೃಹತ್ ಮೊತ್ತ ಪೇರಿಸಲು ಭದ್ರ ಬುನಾದಿ ಹಾಕಿಕೊಟ್ಟರು. ಈ ವೇಳೆ ಸಮರ್ಥ್ (55) ರನ್ಗಳಿಸಿ ಔಟಾದರು. ಇದರ ಬೆನ್ನಲ್ಲೇ ಕರ್ಣ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ಇನ್ನು ಪ್ರಿಯಂ ಗರ್ಗ್ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಆದರೆ ಮತ್ತೊಂದು ತುದಿಯಲ್ಲಿ ರನ್ ಕಲೆಹಾಕುತ್ತಾ ಹೋದ ಮಾಧವ್ ಕೌಶಿಕ್ ಶತಕ ಪೂರೈಸಿದರು. ಅದರಲ್ಲೂ ಅಕ್ಷದೀಪ್ ನಾಥ್ (50/40 ಎಸೆತ) ಜೊತೆಗೂಡಿ ಅಂತಿಮ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೊನೆಯ ಓವರ್ವರೆಗೂ ಅಜೇಯರಾಗಿ ಉಳಿದ ಮಾಧವ್ ಕೌಶಿಕ್ 4 ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 156 ಎಸೆತಗಳಲ್ಲಿ 158 ರನ್ ಬಾರಿಸಿದರು. ಪರಿಣಾಮ ಉತ್ತರ ಪ್ರದೇಶ ತಂಡದ ಮೊತ್ತವು ನಿಗದಿತ 50 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 312 ಕ್ಕೆ ಬಂದು ನಿಂತಿತು.
ಈ ಬೃಹತ್ ಟಾರ್ಗೆಟ್ ಬೆನ್ನತ್ತಿದ ಮುಂಬೈಗೆ ನಾಯಕ ಪೃಥ್ವಿ ಶಾ ಸಿಡಿಲಬ್ಬರದ ಆರಂಭ ಒದಗಿಸಿದರು. ಜೈಸ್ವಾಲ್ (29) ಜೊತೆಗೂಡಿ ಇನಿಂಗ್ಸ್ ಆರಂಭಿಸಿದ ಪೃಥ್ವಿ ಉತ್ತರ ಪ್ರದೇಶ ಬೌಲರುಗಳ ಬೆಂಡೆತ್ತಿದರು. ಪರಿಣಾಮ ಮೊದಲ ವಿಕೆಟ್ ಪತನವಾಗುವ ವೇಳೆಗೆ 9.1 ಓವರ್ನಲ್ಲಿ ಮುಂಬೈ ಮೊತ್ತವು 89 ಆಗಿತ್ತು. ಕೇವಲ 39 ಎಸೆತಗಳನ್ನು ಎದುರಿಸಿದ ಪೃಥ್ವಿ ಶಾ 4 ಸಿಕ್ಸರ್ 10 ಬೌಂಡರಿಗಳೊಂದಿಗೆ 73 ರನ್ ಬಾರಿಸಿ ಭದ್ರ ಬುನಾದಿ ಹಾಕಿ ವಿಕೆಟ್ ಒಪ್ಪಿಸಿದರು.
ಇದರ ಬಳಿಕ ಕ್ರೀಸ್ಗಿಳಿದ ಆದಿತ್ಯ ತಾರೆ ಕೂಡ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಪರಿಣಾಮ ಮೈದಾನದ ಮೂಲೆ ಮೂಲೆಗೂ ಫೋರ್ಗಳ ಸುರಿಮಳೆಯಾಯಿತು. ಈ ನಡುವೆ ಯಶಸ್ವಿ ಜೈಸ್ವಾಲ್ ವಿಕೆಟ್ ನೀಡಿ ನಿರ್ಗಮಿಸಿದರು. ಆದರೆ ಆದಿತ್ಯ ತಾರೆಯ ಆರ್ಭಟವನ್ನು ತಡೆಯಲು ಉತ್ತರ ಪ್ರದೇಶದ ಬೌಲರುಗಳಿಗೆ ಸಾಧ್ಯವಾಗಲಿಲ್ಲ.
— Mumbai Cricket Association (MCA) (@MumbaiCricAssoc) March 14, 2021
ನಾಲ್ಕನೇ ವಿಕೆಟ್ಗೆ ಶಂಸ್ ಮುಲಾನಿ (36) ಜೊತೆ ಆದಿತ್ಯ ತಾರೆ ಇನಿಂಗ್ಸ್ ಕಟ್ಟಿದರೆ, ಐದನೇ ವಿಕೆಟ್ನಲ್ಲಿ ಶಿವಂ ದುಬೆ (42/28 ಎಸೆತ) ಜೊತೆಗೂಡಿದರು. ಅತ್ತ ಆದಿತ್ಯ ತಾರೆ ಶತಕವನ್ನು ಪೂರೈಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 107 ಎಸೆತಗಳನ್ನು ಎದುರಿಸಿ ಆದಿತ್ಯ ತಾರೆ 18 ಬೌಂಡರಿಗಳೊಂದಿಗೆ 118 ರನ್ ಬಾರಿಸಿದರು. ಇದರೊಂದಿಗೆ ಮುಂಬೈ ಕೇವಲ 41.3 ಓವರ್ನಲ್ಲಿ 315 ರನ್ಗಳನ್ನು ಬಾರಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ 4ನೇ ಬಾರಿ ವಿಜಯ್ ಹಜಾರೆ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತು.
Published by:zahir
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ