ದೆಹಲಿಯ ಪಾಲಂ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ದ ಮುಂಬೈ ತಂಡವು 72 ರನ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ರವಿಕುಮಾರ್ ಸಮರ್ಥ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ 5 ಓವರ್ನಲ್ಲಿ ಪ್ರಸಿಧ್ದ್ ಕೃಷ್ಣ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಒಂದೆಡೆ ಯಶಸ್ವಿ ಜೈಸ್ವಾಲ್ (6) ಹಾಗೂ ಆದಿತ್ಯ ತಾರೆ (16) ಬೇಗನೆ ನಿರ್ಗಮಿಸಿದರೂ, ಮತ್ತೊಂದೆಡೆ ಮುಂಬೈ ನಾಯಕ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್ ನಡೆಸಿದರು.
ಮೂರನೇ ವಿಕೆಟ್ಗೆ ಶಂಸ್ ಮುಲಾನಿ ಜೊತೆಗೂಡಿ 159 ರನ್ ಜೊತೆಯಾಟವಾಡಿದ ಪೃಥ್ವಿ ಶಾ ಕರ್ನಾಟಕ ಬೌಲರುಗಳನ್ನು ಚೆಂಡಾಡಿದರು. ಅಲ್ಲದೆ ಸ್ಪೋಟಕ ಸೆಂಚುರಿ ಪೂರೈಸಿದರು. ಕೇವಲ 122 ಎಸೆತಗಳನ್ನು ಎದುರಿಸಿದ ಪೃಥ್ವಿ ಶಾ 165 ರನ್ ಬಾರಿಸಿದರು. ಈ ವೇಳೆ ಯುವ ದಾಂಡಿಗನ ಬ್ಯಾಟ್ನಿಂದ ಸಿಡಿದದ್ದು 7 ಸಿಕ್ಸರ್ ಹಾಗೂ 17 ಬೌಂಡರಿಗಳು.
ಇತ್ತ ಶಂಸ್ ಮುಲಾನಿ 45 ರನ್ಗಳಿಸಿ ಗೌತಮ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದರ ಬೆನ್ನಲ್ಲೇ 165 ರನ್ಗಳಿಸಿದ್ದ ಪೃಥ್ವಿ ಶಾ ವೈಶಾಖ್ಗೆ ವಿಕೆಟ್ ನೀಡಿ ತಮ್ಮ ಸ್ಪೋಟಕ ಇನಿಂಗ್ಸ್ ಅಂತ್ಯಗೊಳಿಸಿದರು. ಆದರೆ ಅದಾಗಲೇ ಪೃಥ್ವಿ ಶಾ ಮುಂಬೈ ಸ್ಕೋರ್ ಅನ್ನು 40 ಓವರ್ನಲ್ಲಿ 243 ರನ್ಗೆ ತಂದು ನಿಲ್ಲಿಸಿದ್ದರು. ಇನ್ನು ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶಿವಂ ದುಬೆ 27 ರನ್‌ಗಳ ಕೊಡುಗೆ ನೀಡಿದರೆ, ಅಮನ್ ಹಕೀಂ ಖಾನ್ 25 ರನ್ ಬಾರಿಸಿದರು. ಆದರೆ ನಂತರ ಬಂದ ಬ್ಯಾಟ್ಸ್ಮನ್ಗಳನ್ನು ಬೇಗನೆ ಪೆವಿಲಿಯನ್ ಕಡೆ ಕಳುಹಿಸುವಲ್ಲಿ ಯಶಸ್ವಿಯಾದ ಕರ್ನಾಟಕ ಅಂತಿಮವಾಗಿ ಮುಂಬೈ ತಂಡವನ್ನು 49.2 ಓವರ್ನಲ್ಲಿ 322 ರನ್ಗೆ ಆಲೌಟ್ ಮಾಡಿತು.
323 ರನ್‌ಗಳ ಬೃಹತ್ ಗುರಿಯನ್ನು ಪಡೆದ ಕರ್ನಾಟಕ ಆರಂಭಿಕ ಆಘಾತಕ್ಕೆ ಒಳಗಾಯಿತು. ತಂಡದ ನಾಯಕ ರವಿಕುಮಾರ್ ಸಮರ್ಥ್ ಕೇವಲ 8 ರನ್ಗಳಿಸಿ 2ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮುಂಬೈ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ಪಡಿಕ್ಕಲ್ ಅರ್ಧಶತಕ ಪೂರೈಸಿದರು.
69 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ 64 ರನ್ಗಳಿಸಿದ್ದ ಪಡಿಕ್ಕಲ್, ಪ್ರಶಾಂತ್ ಸೋಲಂಕಿ ಎಸೆತವನ್ನು ಗುರುತಿಸುವಲ್ಲಿ ಎಡವಿ ಕ್ಲೀನ್ ಬೌಲ್ಡ್ ಆದರು. ಮತ್ತೊಂದೆಡೆ ಸಿದ್ದಾರ್ಥ್ 9 ರನ್, ಮನೀಷ್ ಪಾಂಡೆ 1 ರನ್ಗಳಿಸಿ ಬೇಗನೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ 5ನೇ ವಿಕೆಟ್ಗೆ ಜೊತೆಗೂಡಿದ ಕರುಣ್ ನಾಯರ್ ಹಾಗೂ ಶ್ರೇಯಸ್ ಗೋಪಾಲ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಸೂಚನೆ ನೀಡಿದ್ದರು.
ಆದರೆ 29 ರನ್ಗಳಿಸಿದ್ದ ಕರುಣ್ ನಾಯರ್ ವಿಕೆಟ್ನ್ನು ಶಂಸ್ ಮುಲಾನಿ ಪಡೆದರೆ, 33 ರನ್ ಬಾರಿಸಿದ ಶ್ರೇಯಸ್ ಗೋಪಾಲ್ ವಿಕೆಟ್ನ್ನು ಜೈಸ್ವಾಲ್ ಉರುಳಿಸಿದರು. ಇದೇ ವೇಳೆ ಕ್ರೀಸ್ಗಿಳಿದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಶರತ್ ಬಿರುಸಿನ ಆಟ ಪ್ರದರ್ಶಿಸಿದರು. ಕೇವಲ 39 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ನೊಂದಿಗೆ 61 ಚಚ್ಚಿ ಗೆಲುವಿನ ಆಸೆ ಚಿಗುರಿಸಿದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಶಂಸ್ ಮುಲಾನಿ ಭರತ್ ವಿಕೆಟ್ ಪಡೆಯುವ ಮೂಲಕ ಮುಂಬೈ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮ ಹಂತದಲ್ಲಿ ಕೃಷ್ಣಪ್ಪ ಗೌತಮ್ 28 ರನ್ಗಳಿಸಿ ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ