ಕಿರಿಯರ ವಿಶ್ವಕಪ್ ಟೀಮ್​ನಲ್ಲಿ ರಾಯಚೂರಿನ ವೇಗಿ, ಬೆಂಗಳೂರಿನ ಸ್ಪಿನ್ನರ್

ರಾಯಚೂರಿನವರಾದ ವಿದ್ಯಾಧರ್ ಪಾಟೀಲ್ ಅವರ ತಂದೆ ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದಾರೆ. ವಿದ್ಯಾಧರ್ ಅವರು ಭಾರತದ ಕಿರಿಯರ ತಂಡದಲ್ಲಿ ಸ್ಥಾನ ಪಡೆದ ರಾಯಚೂರಿನ ಎರಡನೇ ಕ್ರಿಕೆಟಿಗರಾಗಿದ್ದಾರೆ. ಕರ್ನಾಟಕದ ಮಾಜಿ ಕ್ಯಾಪ್ಟನ್ ಹಾಗೂ ಈಗಿನ ಕ್ರಿಕೆಟ್ ಕೋಚ್ ಆಗಿರುವ ಯೆರೇಗೌಡ್ ಅವರು ಒಮ್ಮೆ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದರು.

ಹುಬ್ಬಳ್ಳಿ ಟೈಗರ್ಸ್ ನೆಟ್ ಸೆಷೆನ್​ನಲ್ಲಿ ವಿದ್ಯಾಧರ್ ಪಾಟೀಲ್

ಹುಬ್ಬಳ್ಳಿ ಟೈಗರ್ಸ್ ನೆಟ್ ಸೆಷೆನ್​ನಲ್ಲಿ ವಿದ್ಯಾಧರ್ ಪಾಟೀಲ್

  • News18
  • Last Updated :
  • Share this:
ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ 19 ವರ್ಷ ವಯೋಮಾನದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಆಟಗಾರರ ತಂಡದಲ್ಲಿ ಕರ್ನಾಟಕ ಇಬ್ಬರು ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್ ಆಲ್​ರೌಂಡರ್ ಶುಭಾಂಗ್ ಹೆಗಡೆ ಹಾಗೂ ವೇಗದ ಬೌಲರ್ ವಿದ್ಯಾಧರ್ ಪಾಟೀಲ್ ಅವರು ವಿಶ್ವಕಪ್ ಆಡುವ ಭಾರತ ತಂಡದಲ್ಲಿದ್ಧಾರೆ.

ಈ ಇಬ್ಬರೂ ಆಟಗಾರರು ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ಆಡಿದ ಅನುಭವಿಗಳಾಗಿದ್ದಾರೆ. ಬೆಂಗಳೂರಿನವರಾದ ಶುಭಾಂಗ್ ಹೆಗಡೆ ಅವರು ಬೆಳಗಾವಿ ಪ್ಯಾಂಥರ್ಸ್ ತಂಡದ ಪರ ಆಡಿದವರು. ಕರ್ನಾಟಕ ರಾಜ್ಯ ತಂಡದ ಪರವಾಗಿಯೂ ಅವರು ಒಮ್ಮೆ ಆಡಿದ್ಧಾರೆ. ಎಡಗೈ ಲೆಗ್ ಸ್ಪಿನ್ನರ್ ಆಗಿರುವ ಇವರು ಬ್ಯಾಟಿಂಗ್​ನಲ್ಲೂ ಪ್ರತಿಭೆ ಹೊಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಆಫ್ಘಾನಿಸ್ತಾನದ ಅಂಡರ್-19 ತಂಡದ ವಿರುದ್ಧ ನಡೆದ ಮೂರು ಯುವ ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ತಂಡದ ಗೆಲುವಿನಲ್ಲಿ ಶುಭಾಂಗ್ ಹೆಗ್ಡೆ ಪಾತ್ರವೂ ಮಹತ್ತರವಾದುದು.

ಇದನ್ನೂ ಓದಿ: ಅಂಡರ್-19 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ರನ್ ಮೆಷಿನ್ ಪ್ರಿಯಂ ಗರ್ಗ್ ಕ್ಯಾಪ್ಟನ್; ದಾಖಲೆವೀರ ಜೈಸ್ವಾಲ್, ಕರ್ನಾಟಕ ಕುಡಿ ಶುಭಾಂಗ್​ಗೆ ಸ್ಥಾನ

ಇನ್ನು, ರಾಯಚೂರಿನ ವಿದ್ಯಾಧರ್ ಪಾಟೀಲ್ ಅಪ್ಪಟ ವೇಗದ ಬೌಲರ್ ಆಗಿದ್ದಾರೆ. ಹುಬ್ಬಳ್ಳಿ ಟೈಗರ್ಸ್ ತಂಡದ ಬೌಲಿಂಗ್ ಬೆನ್ನೆಲುಬಾಗಿ ಇವರಿದ್ದರು. ಆಫ್ಘನ್ ವಿರುದ್ಧದ ಸರಣಿಯಲ್ಲೂ ಶುಭಾಂಗ್​ರಂತೆ ವಿದ್ಯಾಧರ್ ಕೂಡ ಗಮನ ಸೆಳಯುವಂಥ ಪ್ರದರ್ಶನ ನೀಡಿದ್ದರು. ಕೆಲ ತಿಂಗಳ ಹಿಂದೆ ಇಂಗ್ಲೆಂಡ್​ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡಿದ್ದರು.

ರಾಯಚೂರಿನವರಾದ ವಿದ್ಯಾಧರ್ ಪಾಟೀಲ್ ಅವರ ತಂದೆ ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದಾರೆ. ವಿದ್ಯಾಧರ್ ಅವರು ಭಾರತದ ಕಿರಿಯರ ತಂಡದಲ್ಲಿ ಸ್ಥಾನ ಪಡೆದ ರಾಯಚೂರಿನ ಎರಡನೇ ಕ್ರಿಕೆಟಿಗರಾಗಿದ್ದಾರೆ. ಕರ್ನಾಟಕದ ಮಾಜಿ ಕ್ಯಾಪ್ಟನ್ ಹಾಗೂ ಈಗಿನ ಕ್ರಿಕೆಟ್ ಕೋಚ್ ಆಗಿರುವ ಯೆರೇಗೌಡ್ ಅವರು ಒಮ್ಮೆ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದರು.

ಕಿರಿಯರ ವಿಶ್ವಕಪ್​ಗೆ ಹೆಜ್ಜೆ ಹಾಕಿರುವ ವಿದ್ಯಾಧರ್ ಪಾಟೀಲ್ ಮತ್ತು ಶುಭಾಂಗ್ ಹೆಗ್ಡೆ ಅವರಿಗೆ ಭವಿಷ್ಯದಲ್ಲಿ ಟೀಮ್ ಇಂಡಿಯಾ ಬಾಗಿಲು ತೆರೆಯುವ ನಿರೀಕ್ಷೆ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: ಖುಷಿಯಲ್ಲಿದೆ ಆರ್​ಸಿಬಿ; ಅಪ್ಪಟ ಕನ್ನಡಿಗ ದೇವದತ್ ಪಡಿಕ್ಕಲ್ ಎಂಬ ನವತಾರೆಯ ಉದಯ

ಜನವರಿ 17ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಈ ಕಿರಿಯರ ವಿಶ್ವಕಪ್ ನಡೆಯಲಿದೆ. ಪ್ರಿಯಾಂಕ್ ಗರ್ಗ್ ನಾಯತ್ವದ ಭಾರತ ಅಂಡರ್-19 ತಂಡ ಈ ವಿಶ್ವಕಪ್​ನಲ್ಲಿ ಎ ಗುಂಪಿನಲ್ಲಿದೆ. ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಜಪಾನ್ ತಂಡ ಭಾರತದೊಂದಿಗೆ ಈ ಗುಂಪಿನಲ್ಲಿವೆ. ಫೆ. 9ರಂದು ಫೈನಲ್ ಪಂದ್ಯ ನಡೆಯಲಿದೆ.

ವಿಶ್ವಕಪ್​ಗೆ ಭಾರತ ಅಂಡರ್-19 ತಂಡ:

ಪ್ರಿಯಂ ಗರ್ಗ್(ನಾಯಕ), ಧ್ರುವ್ ಜುರೆಲ್(ಉಪನಾಯಕ-ವಿಕೆಟ್​ಕೀಪರ್), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ದಿವ್ಯಾಂಶ್ ಸಕ್ಸೇನಾ, ಶಾಶ್ವತ್ ರಾವತ್, ದಿವ್ಯಾಂಶ್ ಜೋಷಿ, ಶುಭಾಂಗ್ ಹೆಗ್ಡೆ, ರವಿ ಬಿಷ್ಣೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೇಕರ್, ಕುಮಾರ್ ಕುಶಾಗ್ರ(ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ, ವಿದ್ಯಾಧರ್ ಪಾಟೀಲ್.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: