Ball of the Century- ಎಲ್ಲಿ ಬಿತ್ತು ಎಲ್ಲಿ ಹೋಯ್ತು..! ಶಿಖಾಳ ಸ್ವಿಂಗ್ ಬಾಲ್​ಗೆ ಬೆರಗಾದ ಆಸ್ಟ್ರೇಲಿಯನ್ನರು

Shikha Pandey- ಭಾರತ ಮಹಿಳಾ ತಂಡದ ವೇಗದ ಬೌಲರ್ ಶಿಖಾ ಪಾಂಡೆ ಅವರ ಆಫ್ ಕಟರ್ ಬಾಲ್​ಗೆ ಆಸ್ಟ್ರೇಲಿಯಾದ ಅಲೈಸಾ ಹೀಲಿ ಕ್ಲೀನ್ ಬೌಲ್ಡ್ ಆದರು. ಆಫ್ ಸೈಡ್ ಆಚೆ ಬಿದ್ದ ಚೆಂಡು ತೀವ್ರ ಟರ್ನ್ ಪಡೆದು ಬೇಲ್ ಉರುಳಿಸಿತು. ಇದು ಶತಮಾನದ ಬಾಲ್ ಎಂದು ವಾಸಿಂ ಜಾಫರ್ ಬಣ್ಣಿಸಿದ್ಧಾರೆ.

ಶಿಖಾ ಪಾಂಡೆ

ಶಿಖಾ ಪಾಂಡೆ

 • Share this:
  ಕರಾರ: ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್ ರಾಜ್ಯದ ಕರಾರ ಓವಲ್​ನಲ್ಲಿ ಇಂದು ನಡೆದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಭಾರತದ ವಿರುದ್ಧ 4 ವಿಕೆಟ್​ಗಳಿಂದ ರೋಚಕ ಗೆಲುವು ಪಡೆಯಿತು. ಆದರೆ, ಈ ಜಯಕ್ಕಾಗಿ ಕಾಂಗರೂಗಳ ಪಡೆ ಹರಸಾಹಸವಂತೂ ಪಡಬೇಕಾಯಿತು. 119 ರನ್​ಗಳ ಗುರಿಯನ್ನ ಬೆನ್ನತ್ತುವ ಹಾದಿಯಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ಸ್ ಭಾರತದ ಪ್ರಬಲ ಬೌಲಿಂಗ್ ದಾಳಿಯನ್ನ ಎದುರಿಸುವಷ್ಟರಲ್ಲಿ ಹೈರಾಣಾಗಿ ಹೋಗಿದ್ದರು. ಭಾರತದ ವೇಗದ ಬೌಲರ್ ಶಿಖಾ ಪಾಂಡೆ ಅವರ ಒಂದು ಬಾಲ್ ಅಂತೂ ಆಸ್ಟ್ರೇಲಿಯನ್ನರನ್ನ ಕಂಗೆಡಿಸಿತ್ತು.

  ಆಸ್ಟ್ರೇಲಿಯಾದ ಇನ್ನಿಂಗ್ಸ್ ಶುರುವಾದ ಎರಡನೇ ಎಸೆತದಲ್ಲೇ ಅಲೈಸಾ ಹೀಲಿ ಅವರು ಕ್ಲೀನ್ ಬೌಲ್ಡ್ ಆದರು. ಶಿಖಾ ಪಾಂಡೆ ಎಸೆದ ಆಫ್​ಕಟರ್​ಗೆ ಹೀಲಿ ಬಳಿ ಉತ್ತರವೇ ಇರಲಿಲ್ಲ. ಸ್ಪಿನ್ ಬಾಲ್ ರೀತಿ ಸ್ವಿಂಗ್ ಆದ ಆ ಚೆಂಡು ಸೀದಾ ಬೇಲ್ ಎಗರಿಸಿತು. ಆಫ್​ಸೈಡ್​ಆಚೆ ಬಿದ್ದು ಕಟ್ ಆದ ಈ ಚೆಂಡನ್ನ ಎದುರಿಸಲು ಯಾವ ಬ್ಯಾಟರ್​ಗೂ ಅಸಾಧ್ಯದ ಮಾತೇ. ಬ್ಯಾಟರ್ ಅಲೈಸಾ ಹೀಲಿ ಈ ಬಾಲ್​ನ ಇನ್​ಸ್ವಿಂಗ್ ಕಂಡು ಕಕ್ಕಾಬಿಕ್ಕಿಯಾಗಿದ್ದಂತೂ ಹೌದು. ಆಸ್ಟ್ರೇಲಿಯಾ ಕ್ರಿಕೆಟ್​ನ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಇದರ ವಿಡಿಯೋ ಹಾಕಿ ಆಶ್ಚರ್ಯ ವ್ಯಕ್ತಪಡಿಸಲಾಯಿತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಹಳಷ್ಟು ವೈರಲ್ ಆಗಿದೆ.




  ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಅವರು ಶಿಖಾ ಎಸೆದ ಆ ಚೆಂಡನ್ನ ಶತಮಾನದ ಬಾಲ್ ಎಂದು ಬಣ್ಣಿಸಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ವಿಶ್ವದ ಅತ್ಯಂತ ವೇಗದ ಮಹಿಳಾ ಬೌಲರ್ ಆಗಿದ್ದ ಝೂಲನ್ ಗೋಸ್ವಾಮಿ ಅವರು ನಿವೃತ್ತರಾದ ಬಳಿಕ ಶಿಖಾ ಪಾಂಡೆ ಅವರಂತಹ ಉದಯೋನ್ಮುಖ ವೇಗದ ಬೌಲರ್​ಗಳು ಫಾಸ್ಟ್ ಬೌಲಿಂಗ್ ನೊಗ ಹೊತ್ತಿದ್ದಾರೆ. ಭಾರತದಲ್ಲಿ ಪ್ರತಿಭೆಗಳಿಗೆ ಬರ ಇಲ್ಲ ಎಂಬುದಕ್ಕೆ ಶಿಖಾ ನಿದರ್ಶನವಾಗಿದ್ದಾರೆ.

  ಭಾರತದ ಬೌಲರ್​ಗಳ ಉಜ್ವಲ ಪ್ರದರ್ಶನದ ನಡುವೆಯೂ ಇವತ್ತಿನ ಪಂದ್ಯದಲ್ಲಿ ಭಾರತೀಯರು ಸೋಲನುಭವಿಸಿದರು. ಶಿಖಾ ಪಾಂಡೆ ಮೊದಲ ಸ್ಪೆಲ್​ನಲ್ಲಿ ಉತ್ತಮ ಫಲ ಕಂಡರೂ ಎರಡನೇ ಸ್ಪೆಲ್ ಭಾರತದ ಗೆಲುವಿನ ಹಾದಿಗೆ ಮಾರಕವಾಯಿತು. 18 ಬಾಲ್​ನಲ್ಲಿ 25 ರನ್ ಬೇಕಿದ್ದಾಗ 18ನೇ ಓವರ್ ಅನ್ನು ಶಿಖಾ ಅವರೇ ಮಾಡಿದ್ದರು. ಆ ಓವರ್​ನಲ್ಲಿ ಆಸ್ಟ್ರೇಲಿಯಾ 11 ರನ್ ಗಳಿಸಿತು. ಅದು ಆಸೀಸ್ ಚೇಸಿಂಗ್​ಗೆ ಪುಷ್ಟಿ ನೀಡಿತ್ತು. ರೇಣುಕಾ ಸಿಂಗ್ ಅವರ ಮುಂದಿನ ಓವರ್​ನಲ್ಲಿ 13 ರನ್​ಗಳು ಬಂದು ಆಸ್ಟ್ರೇಲಿಯನ್ನರ ಗೆಲುವನ್ನ ಖಾತ್ರಿಗೊಳಿಸಿತು.

  ಇದನ್ನೂ ಓದಿ: IPL 2021- ಐಪಿಎಲ್​ನಲ್ಲಿ ಭರ್ಜರಿ ಆಟದ ಮೂಲಕ ಟೀಮ್ ಇಂಡಿಯಾ ಕದ ತಟ್ಟಿದ್ದಾರೆ ಈ ಆಟಗಾರರು

  ಇದಕ್ಕೆ ಮುನ್ನ ಟಾಸ್ ಸೋತು ಭಾರತ ಮೊದಲು ಬ್ಯಾಟ್ ಮಾಡಿತು. ನಾಯಕಿ ಹರ್ಮಾನ್​ಪ್ರೀತ್ ಕೌರ್ ಹೊರತುಪಡಿಸಿ ಉಳಿದ ಅಗ್ರಪಂಕ್ತಿಯ ಬ್ಯಾಟರ್ಸ್ ಒಂದಂಕಿ ಸ್ಕೋರನ್ನೂ ಗಳಿಸಲು ಶಕ್ಯರಾಗಲಿಲ್ಲ. ನಾಯಕಿ ಕೌರ್, ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಾಕರ್ ಈ ಮೂವರು ಮಾತ್ರವೇ ಎರಡಂಕಿ ಸ್ಕೋರ್ ಗಡಿ ದಾಟಿದ್ದು. ಪೂಜಾ ವಸ್ತ್ರಾಕರ್ ಅವರು ಅಜೇಯ 37 ರನ್ ಗಳಿಸಿದರು. ಒಂದು ಹಂತದಲ್ಲಿ ನೂರು ರನ್ ಒಳಗೆ ಆಲೌಟ್ ಆಗುವ ಭೀತಿಯಲ್ಲಿದ್ದ ಭಾರತ ತಂಡಕ್ಕೆ ಪೂಜಾ ವಸ್ತ್ರಾಕರ್ ಚೇತರಿಕೆ ನೀಡಿದರು. ಸ್ಕೋರು 118 ರನ್ ವರೆಗೆ ಹಿಗ್ಗುವಂತೆ ಮಾಡಿದರು. ಪೂಜಾ ವಸ್ತ್ರಾಕರ್ ಅವರು 37 ರನ್ ಗಳಿಸಲು ತೆಗೆದುಕೊಂಡಿದ್ದು ಕೇವಲ 26 ಎಸೆತ ಮಾತ್ರ. ದೀಪ್ತಿ ಶರ್ಮಾ ಕೂಡ 19 ಬಾಲ್​ನಲ್ಲಿ 16 ರನ್ ಗಳಿಸಿ ಗಮನ ಸೆಳೆದರು. ಪೂಜಾ ವಸ್ತ್ರಾಕರ್ ಅವರು ಕೊನೆಯ ವಿಕೆಟ್​ಗೆ ರಾಜೇಶ್ವರಿ ಗಾಯಕ್ವಾಡ್ ಜೊತೆ 37 ರನ್​ಗಳ ಮುರಿಯದ ಜೊತೆಯಾಟ ಆಡಿದರು. ಈ ಜೊತೆಯಾಟದಲ್ಲಿ ರಾಜೇಶ್ವರಿ ಒಂದೂ ರನ್ ಗಳಿಸಲಿಲ್ಲ. ಜೊತೆಯಾಟದಲ್ಲಿ ಬಂದ ಬಹುಪಾಲು ರನ್ ಪೂಜಾ ವಸ್ತ್ರಾಕರ್ ಶಾಟ್​ಗಳಿಂದಲೇ ಬಂದವು.

  ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ 3 ಏಕದಿನ ಪಂದ್ಯ, ಒಂದು ಟೆಸ್ಟ್ ಪಂದ್ಯ ಹಾಗು 2 ಟಿ20 ಪಂದ್ಯ ಆಡಿದೆ. ಏಕದಿನ ಕ್ರಿಕೆಟ್ ಸರಣಿಯನ್ನ ಆಸ್ಟ್ರೇಲಿಯಾ 2-1ರಿಂದ ಗೆದ್ದುಕೊಂಡಿತು. ಮೊದಲ ಪಂದ್ಯವನ್ನ ಆತಿಥೇಯರು ಸುಲಭವಾಗಿ ಗೆದ್ದರು. ಎರಡನೇ ಪಂದ್ಯದಲ್ಲಿ ಭಾರತದ ಮಹಿಳೆಯರು ಗೆಲುವಿನಂಚಿಗೆ ಬಂದು ಎಡವಿದರು. ತೇವಾಂಶದ ಕಾರಣ ಚೆಂಡಿನ ಬಿಗಿ ಹಿಡಿತ ಕಷ್ಟವಾದ ಹಿನ್ನೆಲೆಯಲ್ಲಿ ಕರಾರುವಾಕ್ ಬೌಲಿಂಗ್ ಮಾಡಲು ಸಾಧ್ಯವಾಗದೇ ಎರಡನೇ ಪಂದ್ಯ ಸೋತಿತು. ಆದರೆ, ಮೂರನೇ ಪಂದ್ಯದಲ್ಲಿ ಭಾರತೀಯರು ದಾಖಲೆಯ ಮೊತ್ತವನ್ನು ಚೇಸ್ ಮಾಡಿ ಗೆದ್ದು ಬೀಗಿದರು. ನಂತರ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಮಳೆಯ ಅಡಚಣೆ ನಡುವೆ ಭಾರತೀಯರೇ ಪಾರಮ್ಯ ಮೆರೆದರು. ಸಮಯ ಸಾಕಾಗದ್ದರಿಂದ ಆಸ್ಟ್ರೇಲಿಯನ್ನರು ಸೋಲಿನ ದವಡೆಯಿಂದ ಪಾರಾಗಿ ಡ್ರಾ ಮಾಡಿಕೊಂಡರು. ನಂತರ ಮೊದಲ ಟಿ20 ಪಂದ್ಯದಲ್ಲಿ ಭಾರತೀಯರು ಉತ್ತಮ ಮೊತ್ತದತ್ತ ಸಾಗುತ್ತಿರುವಾಗಲೀ ಮಳೆ ಬಂದು ಪಂದ್ಯ ಸ್ಥಗಿತಗೊಂಡಿತ್ತು. ಈಗ ಎರಡನೇ ಪಂದ್ಯವನ್ನ ಆಸ್ಟ್ರೇಲಿಯಾ ರೋಚಕವಾಗಿ ಗೆದ್ದಿದೆ. ಸೋಮವಾರ ಮೂರನೇ ಟಿ20 ಪಂದ್ಯ ನಡೆಯಲಿದೆ. ಆದರೆ, ಏಕದಿನ ಮತ್ತು ಟಿ20 ಸರಣಿ ಪಂದ್ಯಗಳನ್ನ ಒಟ್ಟು ಸೇರಿಸಿ ಈ ಭಾರತ-ಆಸ್ಟ್ರೇಲಿಯಾ ಸರಣಿಯಲ್ಲಿ ಆಸ್ಟ್ರೇಲಿಯಾ ವಿಜೇತವಾಗಿದೆ.
  Published by:Vijayasarthy SN
  First published: