RCB Training Session- ವಿಶ್ವದ ಅತ್ಯಂತ ಜನಪ್ರಿಯ ಫುಟ್ಬಾಲ್ ಆಟಗಾರ ಗೋಲು ಗಳಿಸಿದಾದ ಸಂಭ್ರಮಿಸಿದ ರೀತಿಯಲ್ಲೇ ಆರ್ಸಿಬಿ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಸಂಭ್ರಮಾಚರಣೆ ಮಾಡಿ ಆರ್ಸಿಬಿ ಅಭಿಮಾನಿಗಳ ಜೊತೆಗೆ ಮ್ಯಾಂಚೆಸ್ಟರ್ ಯುನೈಟೆಡ್ ಅಭಿಮಾನಗಳ ಮನಗೆದ್ದಿದ್ದಾರೆ.
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಅವರು ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರ ಫ್ಯಾನ್ ಎಂಬುದು ಬಹಳ ಮಂದಿಗೆ ಗೊತ್ತು. ಅವರ ನಾಯಕತ್ವದ ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ತಂಡದ ಉದಯೋನ್ಮುಖ ಪ್ರತಿಭೆ ಕನ್ನಡಿಗ ದೇವದತ್ ಪಡಿಕ್ಕಲ್ (Devdutt Padikkal) ಕೂಡ ರೊನಾಲ್ಡೊ ಫ್ಯಾನ್ ಅದಂತಿದೆ. ಯುಎಇಯಲ್ಲಿ ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಆರ್ಸಿಬಿ ಸಿದ್ಧತೆ ನಡೆಸುವ ವೇಳೆ ದೇವದತ್ ಪಡಿಕ್ಕಲ್ ಫುಟ್ಬಾಲ್ ಆಡಿದ್ದಾರೆ. ಈ ವೇಳೆ ಅವರು ಕ್ರಿಸ್ಟಿಯಾನೋ ರೊನಾಲ್ಡೊ ಅವರ ಸಂಭ್ರಮದ ಶೈಲಿಯನ್ನ (Winning Celebration) ಅನುಕರಿಸಿದ್ದಾರೆ. ಈ ದೃಶ್ಯವನ್ನು ಆರ್ಸಿಬಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. “ಡಿಡಿಪಿ (ದೇವದತ್ ಪಡಿಕ್ಕಲ್) ಯಾವ ಫುಟ್ಬಾಲ್ ಆಟಗಾರನ ಫ್ಯಾನ್ ಹೇಳಿ” ಎಂದು ಕ್ಯಾಪ್ಷನ್ ಹಾಕಿದೆ. ಬಹುತೇಕ ಆರ್ಸಿಬಿ ಅಭಿಮಾನಿಗಳು ಸರಿಯಾಗಿ ಅಂದಾಜಿಸಿ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರು ಬರೆದಿದ್ಧಾರೆ.
ಇನ್ನು, ದೇವದತ್ ಪಡಿಕ್ಕಲ್ ಅವರು ಆರ್ಸಿಬಿಯಲ್ಲಿರುವ ಕರ್ನಾಟಕ ರಾಜ್ಯದ ಏಕೈಕ ಆಟಗಾರನೆನಿಸಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಇತ್ತೀಚೆಗೆ ರನ್ ಮೆಷಿನ್ ಎನಿಸಿರುವ ಪಡಿಕ್ಕಲ್ ಅವರು ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿಯ ಬ್ಯಾಟಿಂಗ್ಗೆ ಬಲ ತುಂಬಿದ್ದಾರೆ. ಕೆಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಕ್ರಿಕೆಟ್ ಆಟಗಾರರು ಅಭ್ಯಾಸ ನಡೆಸುವಾಗ ಫುಟ್ಬಾಲ್ ಆಡುವುದು ಸಾಮಾನ್ಯ. ತಂಡಗಳ ತರಬೇತಿ ಸಮಯದಲ್ಲಿ ಫಿಟ್ನೆಸ್ಗಾಗಿ ಫುಟ್ಬಾಲ್ ಅಡುವುದನ್ನು ನೋಡಿರುತ್ತೇವೆ. ಒಬ್ಬೊಬ್ಬರಿಗೂ ಕೆಲ ಫುಟ್ಬಾಲ್ ಆಟಗಾರರು ಫೇವರಿಟ್ ಎನಿಸುತ್ತಾರೆ. ಕೆಲವರಿಗೆ ಲಯೋನೆಲ್ ಮೆಸ್ಸಿ ಪ್ರಿಯರಾದರೆ, ರೊನಾಲ್ಡೋ ಇನ್ನೂ ಕೆಲವರಿಗೆ ಇಷ್ಟವಾಗಿರುತ್ತಾರೆ.
ಪೋರ್ಚುಗಲ್ ದೇಶದ ಕ್ರಿಸ್ಟಿಯಾನೋ ರೊನಾಲ್ಡೊ ಸದ್ಯ ವಿಶ್ವದ ಸರ್ವಶ್ರೇಷ್ಠ ಫುಟ್ಬಾಲ್ ಆಟಗಾರನೆಂದು ಹಲವರಿಂದ ಪರಿಗಣಿತರಾಗಿದ್ದಾರೆ. ಅಂತರರಾಷ್ಟ್ರೀಯ ಫುಟ್ಬಾಲ್ನಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಆಟಗಾರ ಅವರಾಗಿದ್ದಾರೆ. ಕ್ಲಬ್ ಟೂರ್ನಿಗಳಲ್ಲಿ ಅವರ ಹೆಸರು ಇನ್ನೂ ಫೇಮಸ್. ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ನಲ್ಲಿ ಅವರು ಮೊದಲಿಗೆ ಖ್ಯಾತನಾಮರಾದರು. ಬಳಿಕ ಸ್ಪೇನ್ ದೇಶದ ರಿಯಲ್ ಮ್ಯಾಡ್ರಿಡ್ ಕ್ಲಬ್ನಲ್ಲಿ ಅವರ ಹೆಸರು ಉಚ್ಛ್ರಾಯ ಹಂತಕ್ಕೆ ಹೋಯಿತು. ಅಲ್ಲಿ ಅವರ ಎದುರಾಳಿಯಾಗಿ ಬಾರ್ಸಿಲೋನಾದ ಲಯೋನೆಲ್ ಮೆಸ್ಸಿ ಇದ್ದದ್ದು ಅವರಿಂದ ಅತ್ಯುತ್ತಮ ಪ್ರದರ್ಶನ ಬರಲು ಕಾರಣವಾಗಿದ್ದಿರಬಹುದು. ರಿಯಲ್ ಮ್ಯಾಡ್ರಿಡ್ನಿಂದ ಅವರು ಫ್ರಾನ್ಸ್ ದೇಶದ ಜುವೆಂಟಸ್ ಕ್ಲಬ್ಗೆ ಮಾರಾಟವಾದರು. ಈಗ ಮತ್ತೆ ಮ್ಯಾಂಚೆಸ್ಟರ್ ಯುನೈಟೆಡ್ಗೆ ಅವರು ಮರಳಿದ್ದಾರೆ. ಪ್ರತೀ ಬಾರಿಯೂ ಅವರು ಒಂದು ಕ್ಲಬ್ನಿಂದ ಇನ್ನೊಂದು ಕ್ಲಬ್ಗೆ ದಾಖಲೆಯ ಮೊತ್ತಕ್ಕೆ ಮಾರಾಟವಾಗುತ್ತಾ ಬಂದಿದ್ಧಾರೆ. 15 ಮಿಲಿಯನ್ ಯೂರೋ ಹಣ ಕೊಟ್ಟು ಮ್ಯಾಂಚೆಸ್ಟರ್ ಯುನೈಟೆಡ್ನವರು ರೊನಾಲ್ಡೋರನ್ನ ತಂದಿದ್ದಾರೆ. ಅಂದರೆ 130 ಕೋಟಿ ರೂಪಾಯಿಗೂ ಹೆಚ್ಚು ಬೆಲೆಗೆ ರೊನಾಲ್ಡೊ ಮಾರಾಟವಾಗಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೋ ಹೆಸರಿನಲ್ಲಿ ದಾಖಲೆಗಳ ದೊಡ್ಡ ಪಟ್ಟಿಯೇ ಇದೆ. ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಅವರಾಗಿದ್ದಾರೆ. ಅತಿ ಹೆಚ್ಚು ಬಾರಿ ಗೋಲು ಗಳಿಸಿಲು ನೆರವಾದ (ಅಸಿಸ್ಟ್) ದಾಖಲೆಯೂ ಅವರಿಗೆ ಇದೆ. ಕ್ಲಬ್ ಟೂರ್ನಿಗಳಲ್ಲೂ ಅವರು ಬಹಳ ದೊಡ್ಡ ದೊಡ್ಡ ದಾಖಲೆಗಳನ್ನ ನಿರ್ಮಿಸಿದ್ಧಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ