Vasudeo Paranjape- ರೋಹಿತ್, ವೆಂಗ್ಸರ್ಕರ್, ಗವಾಸ್ಕರ್​ರಂಥ ಶ್ರೇಷ್ಠರಿಗೆ ಗುರುವಂತಿದ್ದ ವಾಸುದೇವ್ ಪರಾಂಜಪೆ

ಮುಂಬೈ ಕ್ರಿಕೆಟ್ ಲೋಕದಲ್ಲಿ ಬಹಳ ಚಿರಪರಿಚಿತರಾಗಿದ್ದ ವಾಸುದೇವ್ ಪರಾಂಜಪೆ ಅವರು ಅನೇಕ ಖ್ಯಾತನಾಮ ಮುಂಬೈ ಕ್ರಿಕೆಟಿಗರನ್ನ ಉನ್ನತ ಸ್ಥಾನಕ್ಕೇರಲು ಶಕ್ತ ತುಂಬಿದ್ಧಾರೆ. 83ನೇ ವಯಸ್ಸಿನಲ್ಲಿ ಇವರು ಕೊನೆಯುಸಿರೆಳೆದಿದ್ದಾರೆ.

ವಾಸುದೇವ್ ಪರಾಂಜಪೆ ಜೊತೆ ಸುನೀಲ್ ಗವಾಸ್ಕರ್

ವಾಸುದೇವ್ ಪರಾಂಜಪೆ ಜೊತೆ ಸುನೀಲ್ ಗವಾಸ್ಕರ್

 • News18
 • Last Updated :
 • Share this:
  ಮುಂಬೈ: ಮುಂಬೈ ಕ್ರಿಕೆಟ್​ನ ದ್ರೋಣ ಎಂದೇ ಕರೆಯಬಹುದಾದ ವಾಸುದೇವ್ ಪರಾಂಜಪೆ ತಮ್ಮ 83ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ವಾಸು ಎಂದೇ ಖ್ಯಾತರಾಗಿದ್ದ ಪರಾಂಜಪೆ ಅವರು ಭಾರತ ತಂಡದಲ್ಲಿ ಅವರು ಸ್ಥಾನ ಪಡೆಯದಿದ್ದರೂ ಅಂತರರಾಷ್ಟ್ರೀಯ ಕ್ರಿಕೆಟ್ ಲೋಕದಲ್ಲಿ ಮಿಂಚಿದ ಮುಂಬೈನ ಅನೇಕ ಕ್ರಿಕೆಟಿಗರಿಗೆ ಮೆಂಟರ್ ಆಗಿದ್ದರು. ಬ್ಯಾಟಿಂಗ್ ಕಲೆಯನ್ನು ಸಿದ್ಧಿಸಿಕೊಂಡಿದ್ದ ಅವರು ಸುನೀಲ್ ಗವಾಸ್ಕರ್, ಸಂಜಯ್ ಮಂಜ್ರೇಕರ್, ದಿಲೀಪ್ ವೆಂಗ್ಸರ್ಕರ್, ರೋಹಿತ್ ಶರ್ಮಾ ಮೊದಲಾದ ಮುಂಬೈ ಮೂಲದ ಕ್ರಿಕೆಟಿಗರಿಗೆ ಸೂಕ್ಷ್ಮ ಬ್ಯಾಟಿಂಗ್ ತಂತ್ರಗಾರಿಕೆಗಳನ್ನ ತಿಳಿಸಿಕೊಟ್ಟು ಉನ್ನತ ಮಟ್ಟಕ್ಕೆ ಏರಲು ಸಹಕಾರಿಯಾಗಿದ್ದರು. ಬೇರೆ ದೇಶಗಳ ಕೆಲ ಕ್ರಿಕೆಟಿಗರು ಮುಂಬೈಗೆ ಬಂದು ಇವರಿಂದ ಬ್ಯಾಟಿಂಗ್ ಸಲಹೆ ಪಡೆದು ಹೋಗುತ್ತಿದ್ದರಂತೆ. ಅಂಥವರಲ್ಲಿ ಇಂಗ್ಲೆಂಡ್​ನ ಬ್ಯಾಟುಗಾರ ಎಡ್ ಸ್ಮಿತ್ ಕೂಡ ಒಬ್ಬರು.

  ಇಷ್ಟೆಲ್ಲಾ ದೊಡ್ಡ ಮಂದಿಗೆ ಗುರುವಂತಿದ್ದ ವಾಸುದೇವ್ ಪರಾಂಜಪೆ ಅವರು ಅಚ್ಚರಿ ಎಂಬಂತೆ ಭಾರತ ತಂಡದಲ್ಲಿ ಸ್ಥಾನ ಪಡೆಯಲೇ ಇಲ್ಲ. ಇವರ ಜೊತೆ ಆಡಿದ್ದ ಸುನೀಲ್ ಗವಾಸ್ಕರ್ ಅವರು ಅಂದಿನ ಕಾಲಘಟ್ಟದಲ್ಲಿ ಭಾರತೀಯ ಕ್ರಿಕೆಟ್​ನ ಅನಭಿಷಿಕ್ತ ದೊರೆಯಂತೆ ಬೆಳೆದರು. ಈ ಬೆಳವಣಿಗೆಯಲ್ಲಿ ವಾಸು ಪಾತ್ರ ಬಹಳ ಮುಖ್ಯವಿತ್ತು. ಕುತೂಹಲವೆಂದರೆ ವಾಸುದೇವ್ ಪರಾಂಜಪೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದಿರಲಿ, ಪ್ರಥಮ ದರ್ಜೆ ಪಂದ್ಯಗಳನ್ನೂ ಆಡಿದ್ದು ಕಡಿಮೆಯೇ. ಮುಂಬೈ ಮತ್ತು ಬರೋಡಾ ರಣಜಿ ತಂಡಗಳಲ್ಲಿ ಕಾಣಿಸಿಕೊಂಡಿದ್ದ ವಾಸು ಅವರು ಒಟ್ಟೂ ಆಡಿದ್ದು 29 ಫಸ್ಟ್ ಕ್ಲಾಸ್ ಪಂದ್ಯಗಳನ್ನ ಮಾತ್ರ.

  ಅದೇನೇ ಇದ್ದರೂ ಇವರ ಕ್ರಿಕೆಟ್ ಕಲೆ ಎಂದು ಅವಗಹಣೆಗೆ ಒಳಗಾಗಲಿಲ್ಲ. ಮುಂಬೈನ ಕ್ಲಬ್ ಕ್ರಿಕೆಟ್​ ಟೂರ್ನಿಗಳಲ್ಲಿ ಇವರ ಹೆಸರು ಬಹಳ ಚಿರಪರಿಚಿತ. ದಾದರ್ ಯೂನಿಯನ್ ತಂಡದ ನಾಯಕರಾಗಿ ಇವರು ಅನೇಕ ಟ್ರೋಫಿಗಳನ್ನ ಎತ್ತಿಹಿಡಿದ್ದಾರೆ. ದಿಲೀಪ್ ವೆಂಗ್ಸರ್ಕರ್, ಸಾಂದೀಪ್ ಪಾಟೀಲ್, ಸುನೀಲ್ ಗವಾಸ್ಕರ್ ಮೊದಲಾದವರೆಲ್ಲರೂ ವಿವಿಧ ಕ್ಲಬ್​ಗಳಲ್ಲಿ ಕಾಂಗ ಲೀಗ್, ಪುರುಷೋತ್ತಮ್ ಶೀಲ್ಡ್, ಕಾಮ್ರೇಡ್ ಶೀಲ್ಡ್, ತಾಲಿಮ್ ಶೀಲ್ಡ್ ಮೊದಲಾದ ಟೂರ್ನಿಗಳಲ್ಲಿ ಆಡುತ್ತಿದ್ದವರು. ಆಗೆಲ್ಲಾ ವಾಸುದೇವ್ ಪರಾಂಜಪೆ ಎಂದರೆ ಅಪ್ರತಿಮ ಕ್ರಿಕೆಟ್ ಬ್ರೇನ್ ಎಂದೇ ಹೇಳಲಾಗುತ್ತಿತ್ತು. ಯಾರಿಗೇ ಬ್ಯಾಟಿಂಗ್ ಸಮಸ್ಯೆ ಬಂದರೆ ಸಲಹೆಗೆ ಓಡೋಡಿ ಬರುತ್ತಿದ್ದುದು ಇವರ ಬಳಿಯೇ ಅಂತೆ.

  ಇದನ್ನೂ ಓದಿ: Tokyo Paralympics- ಜಾವೆಲಿನ್ ಪಟು ಸುಮಿತ್ ಅಂತಿಲ್​ಗೆ ಚಿನ್ನದ ಪದಕ ಮತ್ತು ವಿಶ್ವದಾಖಲೆ

  ಸುನೀಲ್ ಗವಾಸ್ಕರ್ ಅವರು ವಾಸುದೇವ್ ಪರಾಂಜಪೆ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್​ನಿಂದ ತನಗೆ ಸಿಕ್ಕಿರುವುದಕ್ಕಿಂತ ಹೆಚ್ಚಿನದನ್ನು ಅವರು ಆ ಕ್ರೀಡೆಗೆ ಕೊಟ್ಟಿದ್ದಾರೆ ಎಂದು ವಾಸು ಬಗ್ಗೆ ಸುನೀಲ್ ಗವಾಸ್ಕರ್ ಹೇಳಿದ್ದಾರೆ. ವಾಸುದೇವ್ ಪರಾಂಜಪೆ ಬಗ್ಗೆ ರೋಹಿತ್ ಶರ್ಮಾ ಹೇಳುವ ಮಾತುಗಳು ಕುತೂಹಲಕಾರಿ. “ವಿಭಿನ್ನ ಸಂದರ್ಭದಲ್ಲಿ ಬ್ಯಾಟಿಂಗ್ ಹೇಗೆ ಮಾಡಬೇಕು ಎಂಬುದನ್ನು ಅವರಿಂದ ತಿಳಿದುಕೊಂಡೆ. ಯಾವುದೇ ಎರಡು ಸನ್ನಿವೇಶ ಒಂದೇ ರೀತಿ ಇರುವುದಿಲ್ಲ. ಗೇಮ್ ಅನ್ನು ಅರಿಯಲು ಪ್ರಯತ್ನಿಸಿ. ನೀವು ಎಲ್ಲಿದ್ದೀರಿ, ತಂಡಕ್ಕೆ ಏನು ಮಾಡಬಲ್ಲಿರಿ, ತಂಡದಲ್ಲಿ ಯಾವ ಪರಿಸ್ಥಿತಿಯಲ್ಲಿದ್ದೀರಿ ಎಂಬುದನ್ನು ಅರಿತುಕೊಳ್ಳಿ. ಈ ವಿಷಯಗಳನ್ನ ನೀವು ಈಗಲೇ ಕಲಿತುಕೊಳ್ಳಬೇಕು. ಬಾಂಬೆ ಅಥವಾ ಭಾರತ ತಂಡಕ್ಕೆ ಆಯ್ಕೆಯಾದ ಬಳಿಕ ಕಲಿಯುವಂಥ ವಿಷಯವಲ್ಲ” ಎಂದು ರೋಹಿತ್ ಶರ್ಮಾ ವೃತ್ತಿಜೀವನದ ಆರಂಭದಲ್ಲೇ ಸಲಹೆಗಳನ್ನ ವಾಸು ಅವರು ಕೊಟ್ಟಿದ್ದರಂತೆ.

  ವಾಸುದೇವ್ ಪರಾಂಜಪೆ ಅವರ ಮಗ ಜತಿನ್ ಪರಾಂಜಪೆ ಕೂಡ ಕ್ರಿಕೆಟಿಗರಾಗಿದ್ದು, ಭಾರತ ತಂಡದಲ್ಲಿ ಕೆಲ ಪಂದ್ಯಗಳನ್ನ ಆಡಿದ್ಧಾರೆ. ಇತ್ತೀಚೆಗಷ್ಟೇ ಅವರು ತಮ್ಮ ತಂದೆ ವಾಸುದೇವ್ ಪರಾಂಜಪೆ ಬಗ್ಗೆ “ಕ್ರಿಕೆಟ್ ದ್ರೋಣ” ಎಂಬ ಪುಸ್ತಕ ಬರೆದಿದ್ದಾರೆ.
  Published by:Vijayasarthy SN
  First published: