ಮೆಲ್ಬೋರ್ನ್, ಜ. 18: ಭಾರತ ಮೂಲದ ಕ್ರಿಕೆಟಿಗ ಉನ್ಮುಕ್ತ್ ಚಂದ್ ಹಾಗು ಕಿರಿಯರ ವಿಶ್ವಕಪ್ ವಿಜೇತ ತಂಡದ ಕ್ಯಾಪ್ಟನ್ ಆಗಿದ್ದ ಉನ್ಮುಕ್ತ್ ಚಂದ್ ಹೊಸ ಇತಿಹಾಸ ಬರೆದಿದ್ದಾರೆ. ಆಸ್ಟ್ರೇಲಿಯಾದ ಪ್ರತಿಷ್ಠಿತ ಬಿಗ್ ಬ್ಯಾಷ್ ಲೀಗ್ನಲ್ಲಿ ಆಡಿದ್ಧಾರೆ. ಲೀಗ್ನಲ್ಲಿ ಮೆಲ್ಬೋರ್ನ್ ರೆನಿಗೇಡ್ಸ್ ತಂಡದ 13ನೇ ಪಂದ್ಯದಲ್ಲಿ ಉನ್ಮುಕ್ತ್ ಚಂದ್ ಆಡಿದ್ಧಾರೆ. ಪುರುಷರ ಬಿಗ್ ಬ್ಯಾಷ್ ಲೀಗ್ನಲ್ಲಿ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿದ್ದಾರೆ. ಮಹಿಳಾ ಬಿಗ್ ಬ್ಯಾಷ್ ಲೀಗ್ನಲ್ಲಿ ಆರೇಳು ಭಾರತೀಯ ಆಟಗಾರ್ತಿಯರು ಈ ವರ್ಷ ಆಡಿ ಹೊಸ ಇತಿಹಾಸ ಬರೆದಿದ್ದರು. ಆದರೆ, ಪುರುಷರ ಬಿಬಿಎಲ್ನಲ್ಲಿ ಇದೂವರೆಗೆ ಯಾವೊಬ್ಬ ಭಾರತೀಯ ಕ್ರಿಕೆಟಿಗ ಆಡಿದ್ದಿಲ್ಲ. ಉನ್ಮುಕ್ತ್ ಹೊಸ ಆರಂಭ ಮಾಡಿದ್ದಾರೆ.
ಉನ್ಮುಕ್ತ್ ಚಂದ್ ಭಾರತೀಯ ಕ್ರಿಕೆಟಿಗರೆನಿಸಿದರೂ ಹಾಲಿ ಅವರು ಅಮೆರಿಕನ್ ಕ್ರಿಕೆಟಿಗರಾಗಿದ್ಧಾರೆ. ಅವಕಾಶ ಅರಸಿ ವರ್ಷದ ಹಿಂದೆ ದೂರದೂರಾದ ಅಮೆರಿಕಕ್ಕೆ ವಲಸೆ ಹೋದ ಅವರು ಅಲ್ಲಿ ಕ್ರಿಕೆಟ್ ವೃತ್ತಿಜೀವನ ಮುಂದುವರಿಸಿದ್ದಾರೆ.
ಈ ಸೀಸನ್ನ ಬಿಗ್ ಬ್ಯಾಷ್ ಲೀಗ್ನಲ್ಲಿ ಮೆಲ್ಬೋರ್ನ್ ರೆನಿಗೇಡ್ಸ್ ತಂಡಕ್ಕೂ ಆಯ್ಕೆ ಆಗಿದ್ದರು. ಆದರೆ, ಟೂರ್ನಿ ಅಂತಿಮ ಹಂತಕ್ಕೆ ಬಂದರೂ ಉನ್ಮುಕ್ತ್ ಚಂದ್ಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಉನ್ಮುಕ್ತ್ ಒಂದು ವಾರದ ಹಿಂದೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. “ರಜೆಯ ಮೇಲೆ ಬಂದಂತೆ ಅನಿಸುತ್ತಿದೆ. ಥ್ಯಾಂಕ್ಸ್ ಮೆಲ್ಬೋರ್ನ್” ಎಂದು ಮಾರ್ಮಿಕವಾಗಿ ಮತ್ತು ವ್ಯಂಗ್ಯವಾಗಿ ಮೆಲ್ಬೋರ್ನ್ ರೆನಿಗೇಡ್ಸ್ ತಂಡದ ಮ್ಯಾನೇಜ್ಮೆಂಟನ್ನು ತಿವಿದಿದ್ದರು.
ಇದಾಗಿ ಒಂದು ವಾರಕ್ಕೆ, ಅಂದರೆ ಇಂದು ಮೆಲ್ಬೋರ್ನ್ ರೆನಿಗೇಡ್ಸ್ ತಂಡ ಉನ್ಮುಕ್ತ್ ಚಂದ್ ಅವರಿಗೆ ಇಂದಿನ ಪಂದ್ಯದಲ್ಲಿ ಆಡಲು ಅವಕಾಶ ಕೊಟ್ಟಿದೆ. ಇಂದು ಹೋಬರ್ಟ್ ಹುರಿಕೇನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಅವರು ಆಡಿದರು. ಆದರೆ, ಕೇವಲ 6 ರನ್ ಮಾತ್ರ ಗಳಿಸಲು ಶಕ್ಯರಾದರು. ಗೆಲ್ಲಲು 183 ರನ್ ಗುರಿ ಪಡೆದು ರೆನಿಗೇಡ್ಸ್ ತಂಡದ ನಾಯಕ ಆರೋನ್ ಫಿಂಚ್, ಜೇಮ್ಸ್ ಸೇಯ್ಮೋರ್ ಮತ್ತು ಶೌನ್ ಮಾರ್ಷ್ ಅವರು ಉತ್ತಮ ಆರಂಭ ಹಾಕಿಕೊಟ್ಟರೂ ಉನ್ಮುಕ್ತ್ ಚಂದ್ ಆದಿಯಾಗಿ ಮಿಡ್ಲ್ ಆರ್ಡರ್ ಬ್ಯಾಟುಗಾರರು ಸಮರ್ಪಕವಾಗಿ ಬ್ಯಾಟಿಂಗ್ ನಡೆಸದ ಪರಿಣಾಮ ಸೋಲುಂಟಾಯಿತು.
ಇದನ್ನೂ ಓದಿ: IPL 2022: ಆರ್ಸಿಬಿ, ಅಹ್ಮದಾಬಾದ್ ತಂಡಗಳಿಗೆ ಅಯ್ಯರ್, ಹಾರ್ದಿಕ್ ಕ್ಯಾಪ್ಟನ್ಸ್?
ನಾಳೆ ಸಿಡ್ನಿ ಥಂಡರ್ ವಿರುದ್ಧ ಪಂದ್ಯ ಇದೆ. ಇದು ಮೆಲ್ಬೋರ್ನ್ ರೆನಿಗೇಡ್ಸ್ ತಂಡಕ್ಕೆ ಕೊನೆಯ ಪಂದ್ಯವಾಗಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ರೆನಿಗೇಡ್ಸ್ ತಂಡಕ್ಕೆ ಈ ಪಂದ್ಯದಲ್ಲಿ ಗೆದ್ದರಾಗಲಿ ಅಥವಾ ಸೋತರಾಗಲೀ ಏನೂ ಪರಿಣಾಮ ಆಗದು. ಅದು ಟೂರ್ನಿಯಿಂದ ಹೊರಬಿದ್ದಾಗಿದೆ. ಉನ್ಮುಕ್ತ್ ಚಂದ್ ಅವರು ಆ ಪಂದ್ಯದಲ್ಲಿ ಆಡುವ ಅವಕಾಶ ಪಡೆದು ಬ್ಯಾಟಿಂಗ್ನಲ್ಲಿ ಮಿಂಚುತ್ತಾರಾ ನೋಡಬೇಕು.
ದೆಹಲಿ ಮೂಲದವರಾದ ಉನ್ಮುಕ್ತ್ ಚಂದ್ ಅಂಡರ್-19 ಕ್ರಿಕೆಟ್ನಲ್ಲಿ ಭಾರೀ ಭರವಸೆ ಮೂಡಿಸಿದ ಕ್ರಿಕೆಟಿಗ. ಕಿರಿಯರ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ನಾಯಕರಾಗಿದ್ದವರು. ಚಾಂಪಿಯನ್ ಆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕವನ್ನು ಭಾರಿಸಿ ಭಾರತದ ಭವಿಷ್ಯದ ಕ್ರಿಕೆಟ್ ತಾರೆ ಎಂದು ಪರಿಗಣಿತವಾದವರು. ಆದರೆ, ಕಿರಿಯರ ಕ್ರಿಕೆಟ್ ಆಚೆ ಅವರು ಹೆಚ್ಚು ಯಶಸ್ಸು ಕಾಣಲೇ ಇಲ್ಲ. ಐಪಿಎಲ್ನಲ್ಲಿ ಮೂರು ತಂಡಗಳಲ್ಲಿ ಆಡಿದರೂ ಎಲ್ಲಿಯೂ ಗಮನ ಸೆಳೆಯುವಂಥ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಭಾರತದ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 67 ಪಂದ್ಯಗಳನ್ನ ಆಡಿದ ಉನ್ಮುಕ್ತ್ ಚಂದ್ ಅವರು 3379 ರನ್ ಗಳಿಸಿದ್ದಾರೆ. ಆದರೆ, ಅಲ್ಲಿಯೂ ಅವರಿಗೆ ಸ್ಥಾನ ಉಳಿಸಿಕೊಳ್ಳಲು ಕಷ್ಟ ಎನ್ನುವಂಥ ಸ್ಥಿತಿ ಇತ್ತು. ತಮ್ಮ ವೃತ್ತಿಜೀವನ ಆರಕ್ಕೇರುತ್ತಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಅವರು ಅವಕಾಶಗಳನ್ನ ಹುಡುಕುತ್ತ ಅಮೆರಿಕಕ್ಕೆ ವಲಸೆ ಹೋದರು. ಅಲ್ಲಿಯ ವೃತ್ತಿಪರ ಕ್ರಿಕೆಟ್ನಲ್ಲಿ ಅವರು ಆಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ