ಚೆನ್ನೈ: ನಿನ್ನೆ ಐಪಿಎಲ್ 2021 ಟೂರ್ನಿಯ ಮೂರನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿ ಕೆಕೆಆರ್ ರೋಚಕ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಮಿಂಚಿದ ಐದಾರು ಆಟಗಾರರಲ್ಲಿ ಇಬ್ಬರು ಕನ್ನಡಿಗರಿದ್ದಾರೆ. ಮನೀಶ್ ಪಾಂಡೆ ವೀರೋಚಿತ ಬ್ಯಾಟಿಂಗ್ ಪ್ರದರ್ಶನವು ಹೈದರಾಬಾದ್ಗೆ ಗೆಲುವಿನ ದಡ ಮುಟ್ಟಿಸಲು ವಿಫಲವಾಯಿತು. ಕೋಲ್ಕತಾ ತಂಡದ ಬೌಲರ್ ಆಗಿ ಪ್ರಸಿದ್ಧ ಕೃಷ್ಣ ತಮ್ಮ ತಂಡದ ಗೆಲುವಿನ ರೂವಾರಿಗಳಲ್ಲಿ ಒಬ್ಬರೆನಿಸಿದರು. ಪ್ರಸಿದ್ಧ್ ಕೃಷ್ಣ 4 ಓವರ್ನಲ್ಲಿ 35 ರನ್ನಿತ್ತು 2 ವಿಕೆಟ್ ಪಡೆದರು. ಎರಡೂ ಕೂಡ ಬಹಳ ಪ್ರಮುಖವಾದ ವಿಕೆಟ್ಗಳಾಗಿದ್ದವು. ಎಂಥ ದೊಡ್ಡ ಗುರಿಗಳನ್ನ ಚೇಸ್ ಮಾಡಬಲ್ಲ ಡೇವಿಡ್ ವಾರ್ನರ್ ಅವರ ವಿಕೆಟ್ ಕಿತ್ತು ಕೆಕೆಆರ್ ಗೆಲುವಿನ ದಾರಿಯನ್ನ ಆರಂಭದಲ್ಲೇ ಸುಗಮಗೊಳಿಸಿದವರು ಪ್ರಸಿದ್ಧ ಕೃಷ್ಣ.
ನಂತರ 16ನೇ ಓವರ್ನಲ್ಲಿ ಆಫ್ಘನಿಸ್ತಾನದ ಬ್ಯಾಟ್ಸ್ಮನ್ ಮೊಹಮ್ಮದ್ ನಬಿ ಅವರ ವಿಕೆಟ್ ಪಡೆದು ಎಸ್ಆರ್ಎಚ್ಗೆ ಶಾಕ್ ಕೊಟ್ಟರು. ಮೊಹಮ್ಮದ್ ನಬಿ ಆಟಕ್ಕೆ ಕುದುರಿಕೊಂಡು ಆಗಷ್ಟೇ ಡೇಂಜರಸ್ ಆಗುವ ಸನ್ನಾಹದಲ್ಲಿದ್ದರು. ಅವರ ವಿಕೆಟ್ ಕೂಡ ಕೆಕೆಆರ್ ಗೆಲುವಿಗೆ ಪ್ರಮುಖವಾಗಿತ್ತು.
ಅತ್ತ, ಜಾನ್ ಬೇರ್ಸ್ಟೋ ಜೊತೆ ಅದ್ಭುತ ಜೊತೆಯಾಟದಲ್ಲಿ ಭಾಗಿಯಾದವರು ಕನ್ನಡಿಗ ಮನೀಶ್ ಪಾಂಡೆ. ಬೇರ್ಸ್ಟೋ ನಿರ್ಗಮನದ ಬಳಿಕ ಮನೀಶ್ ಪಾಂಡೆ ಬಹುತೇಕ ಏಕಾಂಗಿ ಹೋರಾಟ ನಡೆಸಿದ್ದರು. ಬಹಳ ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಅವರು ಒಂದು ಹಂತದಲ್ಲಿ ತಂಡವನ್ನು ಸುಲಭವಾಗಿ ಗುರಿಮುಟ್ಟಿಸುವ ಸುಳಿವು ನೀಡಿದ್ದರು.
ಈ ವೇಳೆ, ಪ್ರಸಿದ್ಧ್ ಕೃಷ್ಣ ಅವರ ನಾಲ್ಕೂ ಓವರ್ಗಳಲ್ಲಿ ಮನೀಶ್ ಪಾಂಡೆ ಮುಖಾಮುಖಿಯಾಗಿದ್ದರು. ಈ ವೇಳೆ ಈ ಇಬ್ಬರು ಆಟಗಾರರ ನಡುವಿನ ಬಾಲ್ ಬ್ಯಾಟ್ ಸಮರ ಬಹಳ ಮಜವಾಗಿತ್ತು. ಪ್ರಸಿದ್ಧ್ ಕೃಷ್ಣ ತಮ್ಮ ಶಾರ್ಟ್ ಬಾಲ್ಗಳಿಂದ ಪಾಂಡೆಯನ್ನು ಕಂಗೆಡಿಸಿದರು. ಈ ವೇಳೆ ಕೆಲ ಬಾರಿ ಅವರು ಸ್ಲೆಡ್ಜಿಂಗ್ ಕೂಡ ಮಾಡಿದರು. ಕರ್ನಾಟಕ ರಣಜಿ ತಂಡಕ್ಕೆ ಪ್ರಸಿದ್ಧ್ ಕೃಷ್ಣ ಪದಾರ್ಪಣೆ ಮಾಡಿದಾಗ ತಂಡದ ಕ್ಯಾಪ್ಟನ್ ಆಗಿದ್ದವರು ಮನೀಶ್ ಪಾಂಡೆ. ಈಗ ಇವರಿಬ್ಬರ ಈ ರೋಚಕ ಕದನ ಕುತೂಹಲಕಾರಿಯಾಗಿತ್ತು. ಪ್ರಸಿದ್ಧ್ ಕೃಷ್ಣ ಅವರ ನಾಲ್ಕು ಓವರ್ಗಳಲ್ಲಿ 10 ಎಸೆಗಳನ್ನ ಎದುರಿಸಿದ ಮನೀಶ್ ಪಾಂಡೆ 11 ರನ್ ಮಾತ್ರ ಗಳಿಸಿದ್ದರು.
ಇದನ್ನೂ ಓದಿ: IPL 2021: SRH ವಿರುದ್ಧ ಗೆದ್ದು ಬೀಗಿದ KKR
ಕುತೂಹಲವೆಂದರೆ, ಮನೀಶ್ ಪಾಂಡೆಯನ್ನು ಪ್ರಸಿದ್ಧ್ ಕೃಷ್ಣ ಸೆಡ್ಜ್ ಮಾಡಿದ ಘಟನೆಯನ್ನು ಗಮನಿಸಿ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಟ್ವೀಟ್ ಮಾಡಿದ್ದರು. “…ಹುಷಾರು ಕಣಪ್ಪ, ಆಮೇಲ್ ಮನೀಶ್ ಇಲ್ಲಿ ನಿನ್ನ ಕರ್ನಾಟಕ ಟೀಮ್ ಇಂದ ಡ್ರಾಪ್ ಮಾಡಿದ್ರೆ ಕಷ್ಟ” ಎಂದು ತಮಾಷೆ ಮಾಡಿದ್ದರು.
Hahaha !! Prasidh sledging Karnataka captain Manish. Husharu kanappa Amele Manish Illi ninna Karnataka team inda drop madidre kasta @prasidh43 @im_manishpandey 😂 #IPL2021 #KKRvsSRH
— ದೊಡ್ಡ ಗಣೇಶ್ | Dodda Ganesh (@doddaganesha) April 11, 2021
ಕೆಕೆಆರ್ ವರ್ಸಸ್ ಎಸ್ಆರ್ಎಚ್ ನಡುವಿನ ಈ ಪಂದ್ಯದಲ್ಲಿ 80 ರನ್ ಗಳಿಸಿ ಕೆಕೆಆರ್ಗೆ ಒಳ್ಳೆಯ ಮೊತ್ತ ಕಲೆಹಾಕಲು ಕಾರಣರಾಗಿದ್ದ ನಿತೀಶ್ ರಾಣಾ ಅವರು ಪಂದ್ಯ ಶ್ರೇಷ್ಠರೆನಿಸಿದರು. ಈ ಪಂದ್ಯದಲ್ಲಿ ಗೆಲ್ಲಲು 188 ರನ್ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ 177 ರನ್ ಮಾತ್ರ ಗಳಿಸಲು ಶಕ್ಯವಾಯಿತು. ಮನೀಶ್ ಪಾಂಡೆ ಫಸ್ಟ್ ಡೌನ್ ಬಂದು ಆಟಕ್ಕೆ ಕುದುರಿಕೊಂಡಿದ್ದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಆಗಲಿಲ್ಲ. ಆಂಡ್ರೆ ರಸೆಲ್ ಅವರ ವೈಡ್ ಬೌಲಿಂಗ್ ತಂತ್ರವನ್ನು ಎದುರಿಸಲು ಸಾಧ್ಯವಾಗಲಿಲ್ಲ. ಮೇಲಾಗಿ ತೇವಾಂಶ ಕೂಡ ಕೊನೆಕೊನೆಯಲ್ಲಿ ಹೈದರಾಬಾದ್ ಬ್ಯಾಟ್ಸ್ಮನ್ಗೆ ಕಷ್ಟ ಕೊಟ್ಟಿತ್ತು. ಇವತ್ತು ನಡೆಯುವ ನಾಲ್ಕನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಹಣಾಹಣಿ ನಡೆಸಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ