Team India: ಏಕಕಾಲದಲ್ಲಿ ನಾಲ್ವರು ಗಾಯಾಳು: ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರು..!

ಜನವರಿ 15 ರಿಂದ ಭಾರತ-ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಬಿಸ್ಬೇನ್​ನಲ್ಲಿ ಆರಂಭವಾಗಲಿದ್ದು, ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದರಿಂದ ಅಂತಿಮ ಟೆಸ್ಟ್ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ.

Team India

Team India

 • Share this:
  ಆಸ್ಟ್ರೇಲಿಯಾ ಟೆಸ್ಟ್​ ಸರಣಿಯಲ್ಲಿರುವ ಟೀಮ್ ಇಂಡಿಯಾಗೆ ಆಟಗಾರರ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಸರಣಿ ಆರಂಭಕ್ಕೂ ಮುನ್ನ ಇಶಾಂತ್ ಶರ್ಮಾ ಹಾಗೂ ರೋಹಿತ್ ಶರ್ಮಾ ಸೀಮಿತ ಓವರ್​ಗಳಿಂದ ಹೊರಗುಳಿದಿದ್ದರು. ಇದಾದ ಬಳಿಕ ಟೆಸ್ಟ್​ ಸರಣಿಯಲ್ಲಿ ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಗಾಯಗೊಂಡು ಹೊರನಡೆದಿದ್ದರು. ಇನ್ನು ಅಭ್ಯಾಸದ ಪಂದ್ಯದ ವೇಳೆ ಕೆಎಲ್ ರಾಹುಲ್ ಸಹ ಗಾಯಗೊಂಡು ಭಾರತಕ್ಕೆ ವಾಪಾಸಾಗಿದ್ದರು.

  ಇನ್ನು 3ನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ಆಲ್​ರೌಂಡರ್ ರವೀಂದ್ರ ಜಡೇಜಾ ಕೂಡ ಗಾಯಗೊಂಡಿದ್ದರು. ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ​ ಪಂದ್ಯದ ವೇಳೆ ಜಡೇಜಾ ಗಾಯಕ್ಕೆ ತುತ್ತಾಗಿದ್ದರು. ಭಾರತದ ಮೊದಲ ಇನಿಂಗ್ಸ್​ ವೇಳೆ ಮಿಚೆಲ್ ಸ್ಟಾರ್ಕ್​ ಎಸೆತದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುವಾಗ ಎಡಗೈ ಹೆಬ್ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಸ್ಕ್ಯಾನ್‌ಗಾಗಿ ಕರೆದೊಯ್ಯಲಾಗಿತ್ತು. ಅಲ್ಲದೆ ಗಾಯದ ಗಂಭೀರತೆಯನ್ನು ಪರಿಗಣಿಸಿ ಜಡೇಜಾರನ್ನು ದ್ವಿತೀಯ ಇನಿಂಗ್ಸ್‌ನಲ್ಲಿ ಫೀಲ್ಡಿಂಗ್​ಗೆ ಇಳಿಸಿರಲಿಲ್ಲ.

  ಅಲ್ಲದೆ ಅಂತಿಮ ದಿನದ ಬ್ಯಾಟಿಂಗ್​ಗೂ ರವೀಂದ್ರ ಜಡೇಜಾ ಅವರು ಕಣಕ್ಕಿಳಿಯಲಿಲ್ಲ. ಇದೀಗ ಜಡೇಜಾ ಅವರ ವೈದ್ಯಕೀಯ ರಿಪೋರ್ಟ್ ಬಂದಿದ್ದು, 6 ವಾರಗಳ ಕಾಲ ವಿಶ್ರಾಂತಿ ಸೂಚಿಸಲಾಗಿದೆ. ಅಂದರೆ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿಯಲಿದ್ದಾರೆ.

  ಇದೀಗ ಭಾರತ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿರುವ ಯಾರ್ಕರ್ ಕಿಂಗ್ ಜಸ್​ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದಿಂದ ಹೊರಬಿದ್ದಿದ್ದಾರೆ. ಕಿಬ್ಬೊಟ್ಟೆಯ ಒತ್ತಡದಿಂದ ಬುಮ್ರಾ ಬಳಲುತ್ತಿದ್ದಾರೆ. ಹೀಗಾಗಿ ಇವರು ಮುಂದಿನ ಟೆಸ್ಟ್​ಗೆ ಲಭ್ಯರಿಲ್ಲ ಎಂದು ಪಿಟಿಐಗೆ ಬಿಸಿಸಿಐ ಮೂಲಗಳು ತಿಳಿಸಿವೆ.

  ಇನ್ನು ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನ ಸ್ನಾಯು ಸೆಳೆತದ ನಡುವೆಯೂ ವಿಹಾರಿ ಸುದೀರ್ಘ‌ ಬ್ಯಾಟಿಂಗ್‌ ನಡೆಸಿ ಭಾರತವನ್ನು ಸೋಲಿನಿಂದ ಪಾರುಮಾಡಿದ್ದರು. ಆದರೆ, ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಕ್ಕೆ ಇವರು ಲಭ್ಯರಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಇಂಜುರಿಯಿಂದ ಬಳಲುತ್ತಿದ್ದ ಕಾರಣ ಪಂದ್ಯದ ಬಳಿಕ ಅವರನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲಾಗಿದೆ. ಈ ವರದಿ ಬಂದ ಬಳಿಕವಷ್ಟೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

  ಹಾಗೆಯೇ ಅಭ್ಯಾಸ ವೇಳೆ ಮಯಾಂಕ್ ಅಗರ್ವಾಲ್ ಸಹ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸದ್ಯ ಅವರ ಸ್ಕ್ಯಾನಿಂಗ್ ರಿಪೋರ್ಟ್ ಕೂಡ ಬರಬೇಕಿದ್ದು, ಹೀಗಾಗಿ ಹನುಮ ವಿಹಾರಿ ಸ್ಥಾನದಲ್ಲಿ ಮಯಾಂಕ್ ಅವರನ್ನು ಆಯ್ಕೆ ಮಾಡುವುದು ಕೂಡ ಪ್ರಶ್ನಾರ್ಥಕವಾಗಿ ಉಳಿದಿದೆ. ಒಟ್ಟಿನಲ್ಲಿ 4ನೇ ಟೆಸ್ಟ್ ಪಂದ್ಯವು ನಿರ್ಣಾಯಕವಾಗಿದ್ದು, ಅದಕ್ಕೂ ಮುನ್ನ ನಾಲ್ವರು ಆಟಗಾರರು ಗಾಯಗೊಂಡಿರುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ನ್ನು ಚಿಂತೆಗೀಡು ಮಾಡಿದೆ.

  3ನೇ ಟೆಸ್ಟ್​ ಪಂದ್ಯದ ವೇಳೆ ರವೀಂದ್ರ ಜಡೇಜಾ ಗಾಯಗೊಂಡು ಹೊರಗುಳಿದರೆ, ಪಂದ್ಯದ ನಡುವೆ ಹನುಮ ವಿಹಾರಿ ಹಾಗೂ ಜಸ್​ಪ್ರೀತ್ ಬುಮ್ರಾ ಗಾಯಗೊಂಡಿದ್ದಾರೆ. ಇನ್ನು ಬದಲಿ ಆಯ್ಕೆಯಾಗಿದ್ದ ಮಯಾಂಕ್ ಕೂಡ ಅಭ್ಯಾಸದ ಗಾಯಕ್ಕೆ ತುತ್ತಾಗಿದ್ದಾರೆ. ಇತ್ತ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಕೂಡ ಇದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

  ಜನವರಿ 15 ರಿಂದ ಭಾರತ-ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಬಿಸ್ಬೇನ್​ನಲ್ಲಿ ಆರಂಭವಾಗಲಿದ್ದು, ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದರಿಂದ ಅಂತಿಮ ಟೆಸ್ಟ್ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ. ಆದರೆ ಇತ್ತ ಅಂತಿಮ ಹಣಾಹಣಿಗೆ ಟೀಮ್​ ಇಂಡಿಯಾ ಆಡುವ ಬಳಗವನ್ನು ರೂಪಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
  Published by:zahir
  First published: