'83' Movie Trailer- ಮೈನವಿರೇಳಿಸುವ '83' ಟ್ರೇಲರ್, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್; ಕನ್ನಡದಲ್ಲಿ ಕಿಚ್ಚನ ವಾಯ್ಸ್

Kichcha Supeepa Voice for Kannada 83 Movie- ಭಾರತ ಕ್ರಿಕೆಟ್ ತಂಡ 1983ರ ವಿಶ್ವಕಪ್ ಚಾಂಪಿಯನ್ ಆದ ಐತಿಹಾಸಿಕ ಘಟನೆಯನ್ನ ಆಧರಿಸಿ ನಿರ್ಮಿಸಲಾಗುತ್ತಿರುವ ‘83’ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆ ಆಗಿದೆ.

ಕಪಿಲ್ ಪಾತ್ರ ನಿರ್ವಹಿಸಿದ ರಣವೀರ್ ಸಿಂಗ್

ಕಪಿಲ್ ಪಾತ್ರ ನಿರ್ವಹಿಸಿದ ರಣವೀರ್ ಸಿಂಗ್

  • News18
  • Last Updated :
  • Share this:
ಬೆಂಗಳೂರು, ನ. 30: ಭಾರತ ಕ್ರಿಕೆಟ್ ತಂಡ ಈವರೆಗೆ ಮೂರು ಬಾರಿ ವಿವಿಧ ವಿಶ್ವಕಪ್ ಗೆದ್ದು ಬೀಗಿದೆ. ಆದರೆ, ಎಲ್ಲಕ್ಕಿಂತ ಬೆಲೆ ಬಾಳುವಂಥದ್ದು 1983ರ ವಿಶ್ವಕಪ್ ಗೆಲುವು (India winning 1983 Cricket World Cup). ಭಾರತೀಯ ಕ್ರಿಕೆಟ್​ನ ಚಹರೆಯನ್ನೇ ಬದಲಿಸಿದ ಮಹಾನ್ ಗೆಲುವು ಅದು. ಅಫ್ಗಾನಿಸ್ತಾನ ಈಗ ವಿಶ್ವಕಪ್ ಗೆದ್ದರೆ ಹೇಗಿದ್ದೀತೋ ಅಂಥ ಸ್ಥಿತಿ ಭಾರತದ್ದಾಗಿತ್ತು. ಭಾರತ ಬಲಿಷ್ಠ ತಂಡವಾಗಿದ್ದರೂ ಯಾರೂ ಅದು ವಿಶ್ವಕಪ್ ಗೆಲ್ಲುತ್ತೆ ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ತಂಡದ ಆಟಗಾರರಲ್ಲೇ ಆ ನಂಬಿಕೆ ಇರಲಿಲ್ಲ. ಕಪಿಲ್ ದೇವ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಹೊಸ ಇತಿಹಾಸ ಪುಟ ತೆರೆಯಿತು. ದೈತ್ಯ ವೆಸ್ಟ್ ಇಂಡೀಸ್ ತಂಡವನ್ನ ಸೋಲಿಸಿ 1983ರ ವಿಶ್ವಕಪ್ ಚಾಂಪಿಯನ್ ಎನಿಸಿತು. ಇದೀಗ ಆ ರೋಚಕ ಅನುಭವವನ್ನು ಪರದೆ ಮೇಲೆ ತರುತ್ತಿದೆ ಬಾಲಿವುಡ್. ಪೋಸ್ಟರ್, ಟೀಸರ್ ಬಳಿಕ ಇದೀಗ ‘83’ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಕೆಲವೇ ಗಂಟೆಯಲ್ಲಿ 2 ಕೋಟಿಗೂ ಅಧಿಕ ವೀಕ್ಷಣೆ: ರಿಲಾಯನ್ಸ್ ಎಂಟರ್ಟೈನ್ಮೆಂಟ್ ನಿರ್ಮಾಣದ 83 ಸಿನಿಮಾದ ಹಿಂದಿ ಟ್ರೇಲರ್ ಇಂದು ಬೆಳಗ್ಗೆ ಯೂಟ್ಯೂಬ್​ನಲ್ಲಿ ಪೋಸ್ಟ್ ಹಾಕಿದೆ. ಅರ್ಧ ದಿನದೊಳಗೆ 2 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ.

ಕನ್ನಡದಲ್ಲಿ ಕಿಚ್ಚನ ವಾಯ್ಸ್: ಹಿಂದಿಯಷ್ಟೇ ಅಲ್ಲ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಕನ್ನಡದ ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರಕ್ಕೆ ಕಿಚ್ಚ ಸುದೀಪ್ ಧ್ವನಿ ನೀಡಿದ್ಧಾರೆ.

ರಣವೀರ್ ಸಿಂಗ್ ನಟನೆ: 1983ರ ವಿಶ್ವಕಪ್ ಚಾಂಪಿಯನ್ ಆದ ಟೀಮ್ ಇಂಡಿಯಾದ ನಾಯಕನಾದ ಕಪಿಲ್ ದೇವ್ ಅವರು ಹಾಗೂ ತಂಡ ಇಲ್ಲಿ ಪ್ರಮುಖ ಪಾತ್ರ. ಕಪಿಲ್ ದೇವ್ ಪಾತ್ರವನ್ನು ರಣವೀರ್ ಸಿಂಗ್ ನಿರ್ವಹಿಸಿದ್ದಾರೆ. ಕಪಿಲ್ ದೇವ್ ಪತ್ನಿ ರೋಮಿದೇವ್ ಪಾತ್ರವನ್ನು ದೀಪಿಕಾ ಪಡುಕೋಣೆ ಮಾಡಿದ್ದಾರೆ. ಕಪಿಲ್ ದಂಪತಿಯ ಪಾತ್ರವನ್ನ ರಣವೀರ್ ದಂಪತಿ ಮಾಡಿದಂತಾಗಿದೆ.

ಇದನ್ನೂ ಓದಿ: ನಟ Kichcha Sudeepಗೆ ದೇವಸ್ಥಾನ ಕಟ್ಟಿದ್ದ ಅಭಿಮಾನಿಗಳು.. ರಾಜ್ಯದಲ್ಲಿ ಏನಿದು ಹೊಸ ಸಂಪ್ರದಾಯ?

ರಿಲಾಯನ್ಸ್ ಎಂಟರ್ಟೈನ್ಮೆಂಟ್ ಜೊತೆಗೆ ದೀಪಿಕಾ ಪಡುಕೋಣೆ, ಕಬೀರ್ ಖಾನ್, ಸಾಜಿದ್ ನಾಡಿಯಾದ್​ವಾಲ, ಇಂದೂರಿ ವಿಷ್ಣುವರ್ಧನ್ ಮೊದಲಾದವರೂ ನಿರ್ಮಾಪಕ ಬಳಗದಲ್ಲಿ ಇದ್ದಾರೆ.

ಟ್ರೇಲರ್ ರೋಚಕ ಅನುಭವ: ವಿವಿಧ ಭಾಷೆಗಳಲ್ಲಿ 1983 ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್​ನ ಒಂದೊಂದು ಕ್ಷಣವೂ ಅವಿಸ್ಮರಣೀಯ ಅನುಭವ ಕೊಡುತ್ತದೆ. ತಮ್ಮ ನಟನಾ ವೃತ್ತಿಜೀವನದಲ್ಲಿ ತುಂಟತನದ ಪಾತ್ರಗಳನ್ನೇ ಹೆಚ್ಚಾಗಿ ಮಾಡುತ್ತಾ ಬಂದಿರುವ ರಣವೀರ್ ಸಿಂಗ್ ಅವರಿಗೆ ಕಪಿಲ್ ದೇವ್ ರೀತಿಯ ಪಾತ್ರ ಹೊಸ ಮಜಲನ್ನು ಒದಗಿಸುತ್ತದೆ. ನೋಡುಗರಿಗೂ ನಿಜಜೀವನದ ಘಟನೆ ಕಣ್ಮುಂದೆ ನಡೆಯುತ್ತಿರುವ ಅನುಭವ ತಂದುಕೊಡುತ್ತದೆ.

ಫ್ಲೈಯಿಂದ ಸಿಖ್ ಮಿಲ್ಖಾ ಸಿಂಗ್ ಅವರ ಸಿನಿಮಾ ಮಾಡಿದ್ದ ಕಬೀರ್ ಖಾನ್ ಅವರು 1983 ಸಿನಿಮಾ ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್ 24ರಂದು ವಿಶ್ವಾದ್ಯಂತ ಸಿನಿಮಾ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: Ranveer Singh :83 ಸಿನಿಮಾದ ಟೀಸರ್ ಝಲಕ್ ಗೆ ಅಭಿಮಾನಿಗಳು ಫಿದಾ

ಟ್ರೇಲರ್ ಹೈಲೈಟ್ಸ್: ಈ ಟ್ರೇಲರ್​ನಲ್ಲಿ 1983ರ ಸಂದರ್ಭವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಲಾಗಿದೆ. ವೆಸ್ಟ್ ಇಂಡೀಸ್ ಆಗಿ ಕಾಲದಲ್ಲಿ ಬೇರೆಲ್ಲಾ ತಂಡಗಳಿಗೆ ಅಕ್ಷರಶಃ ಸಿಂಹಸ್ವಪ್ನ ಎನಿಸಿದ ತಂಡ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಕೆರಿಬಿಯನ್ ದೈತ್ಯರ ಜೊತೆ ಟೂರ್ನಿ ಗೆಲ್ಲುವ ಫೇವರಿಟ್ ಎನಿಸಿದ್ದವು. ಸತತ ಸೋಲುಗಳನ್ನ ಕಂಡು ವಿಶ್ವಕಪ್​ನಿಂದ ಹೊರಬೀಳುವ ಸ್ಥಿತಿಯಲ್ಲಿದ್ದ ಟೀಮ್ ಇಂಡಿಯಾ ಆ ವಿಶ್ವಕಪ್ ಗೆಲ್ಲುತ್ತೆ ಎಂದು ಯಾರೂ ಕೂಡ ಕನಸು ಮನಸಲ್ಲೂ ಎಣಿಸಿರಲಿಲ್ಲ. ಜಿಂಬಾಬ್ವೆ ವಿರುದ್ಧ ಮಾಡು ಇಲ್ಲ ಮಡಿ ಫೈಟ್ ಪಂದ್ಯದಲ್ಲಿ ಕಪಿಲ್ ದೇವ್ ಸಿಡಿಸಿದ ಅಜೇಯ 175 ರನ್​ನ ಇನ್ನಿಂಗ್ಸ್ ಟೀಮ್ ಇಂಡಿಯಾಗೆ ಹೊಸ ಹುಮ್ಮಸ್ಸು ತಂದುಕೊಟ್ಟಿತು. ಅಲ್ಲಿಂದ ಭಾರತ ಹಿಂದಿರುಗಿ ನೋಡಲಿಲ್ಲ. ಫೈನಲ್​ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆದ ಘಟನೆಗೆ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಯಾವತ್ತೂ ಮೊದಲ ಸ್ಥಾನವೇ.

ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅಂದಿನ ಕಪಿಲ್ ದೇವ್ ಅವರೇ ನಮ್ಮ ಮುಂದೆ ಬಂದಂತೆ ಅನಿಸುವಷ್ಟು ರಣವೀರ್ ಈ ಪಾತ್ರವನ್ನು ನಿರ್ವಹಿಸಿದಂತಿದೆ. ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಇತರ ಎಲ್ಲಾ ಆಟಗಾರರೂ ಒಂದೊಂದು ಪಾತ್ರವಾಗಿದ್ದಾರೆ. ತೆರೆಯ ಮೇಲೆ ಸಿನಿಮಾ ಹೇಗೆ ಮೂಡಿಬರಬಹುದು ಎಂದು ಕ್ರಿಕೆಟ್ ಪ್ರೇಮಿಗಳು ಮತ್ತು ಚಿತ್ರರಸಿಕರು ಕಾತರದಿಂದ ಕಾಯುವಂತೆ ಮಾಡುತ್ತದೆ ಈ 83 ಟ್ರೇಲರ್.

ಡಿಸ್​ಲೈಕ್ ಒಂದೂ ಇಲ್ಲ: 

ಇನ್ನೊಂದು ಸೋಜಿಗದ ಸಂಗತಿ ಎಂದರೆ, ಈ ವರದಿ ಬರೆಯುವ ಹೊತ್ತಿಗೆ, ಯೂಟ್ಯೂಬ್​ನಲ್ಲಿ ಟ್ರೇಲರ್​ಗಳಿಗೆ ಒಂದೂ ಡಿಸ್​ಲೈಕ್ ಬಂದಿಲ್ಲ. ಅಷ್ಟರಮಟ್ಟಿಗೆ ನೋಡಿದವರ ಪ್ರತಿಯೊಬ್ಬರ ಮನಸೂರೆ ಮಾಡಿದೆ ಈ ಟ್ರೇಲರ್.
Published by:Vijayasarthy SN
First published: