ನವದೆಹಲಿ, ನ. 16: ನಾಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ 3 ಟಿ20 ಪಂದ್ಯ ಕ್ರಿಕೆಟ್ ಸರಣಿ ಆರಂಭವಾಗುತ್ತಿದೆ. ಮೊನ್ನೆಯಷ್ಟೇ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡಿ ಸುಸ್ತಾಗಿರುವ ನ್ಯೂಜಿಲೆಂಡ್ ತಂಡ ಇದೀಗ ಮೂರೇ ದಿನದ ಅಂತದಲ್ಲಿ ಭಾರತದಲ್ಲಿ ಕ್ರಿಕೆಟ್ ಸರಣಿ ಆಡುವ ಸ್ಥಿತಿ ಇದೆ. ವಿಶ್ವಕಪ್ನಲ್ಲಿ ಗಾಯಗೊಂಡಿರುವ ಹುಲಿಗಳಂತಾಗಿರುವ ಟೀಮ್ ಇಂಡಿಯಾವನ್ನು ಎದುರಿಸುವ ಬಹುದೊಡ್ಡ ಸವಾಲು ಕಿವೀಸ್ ಪಡೆಗೆ ಇದೆ. ಈ ಮಧ್ಯೆ ಆಸ್ಟ್ರೇಲಿಯಾ ವಿರುದ್ಧದ ಫೈನಲ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಅವರು ಟಿ20 ಸರಣಿಗೆ ಅಲಭ್ಯರಿದ್ದಾರೆ. ಕೇನ್ ಸ್ಥಾನದಲ್ಲಿ ಫಾಸ್ಟ್ ಬೌಲರ್ ಟಿಮ್ ಸೌದಿ ಅವರು ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.
ಟಿ20 ಸರಣಿ ಬಳಿಕ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳಿಗೆ ತಯಾರಾಗುವ ದೃಷ್ಟಿಯಿಂದ ಕೇನ್ ವಿಲಿಯಮ್ಸನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಅವರು ಟಿ20 ಪಂದ್ಯಗಳನ್ನ ಆಡುವುದಿಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಿಳಿಸಿದೆ. ಕೇನ್ ವಿಲಿಯಮ್ಸನ್ ಅವರು ಟೆಸ್ಟ್ ಸರಣಿಗೆ ಆದ್ಯತೆ ಕೊಟ್ಟಿದ್ದಾರೆ. ಅದಕ್ಕೆ ಸಜ್ಜುಗೊಳ್ಳುವ ದೃಷ್ಟಿಯಿಂದ ಟಿ20 ಸರಣಿಗೆ ಗೈರಾಗಲಿದ್ದಾರೆನ್ನಲಾಗಿದೆ. ಅಲ್ಲದೇ, ವಿಶ್ವಕಪ್ ವೇಳೆ ಅವರ ಗಾಯದ ಸಮಸ್ಯೆ ಹೆಚ್ಚಾಗಿದ್ದು, ಆ ಕಾರಣದಿಂದಲೂ ಅವರು ಟಿ20 ಸರಣಿಯಿಂದ ಹಿಂದೆ ಸರಿದಿರಬಹುದು.
ಕಾನ್ಪುರ್ನಲ್ಲಿ ನವೆಂಬರ್ 25ರಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗುತ್ತದೆ. ಮುಂಬೈನಲ್ಲಿ ಡಿಸೆಂಬರ್ 3ರಿಂದ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ನಾಳೆಯಿಂದ ಮೂರು ಟಿ20 ಪಂದ್ಯಗಳು ನಡೆಯಲಿವೆ. ನ. 17, 19 ಮತ್ತು 21ರಂದು ಈ ಪಂದ್ಯಗಳು ನಡೆಯಲಿವೆ. ಮೊದಲ ಟಿ20 ಪಂದ್ಯ ಜೈಪುರದಲ್ಲಿ ನಡೆಯಲಿದೆ.
ಮೊನ್ನೆಯಷ್ಟೇ ವಿಶ್ವಕಪ್ ಫೈನಲ್ ಆಡಿ ಸೋತಿರುವ ನ್ಯೂಜಿಲೆಂಡ್ ತಂಡದ ಆಟಗಾರರು ನಿನ್ನೆ ಸಂಜೆಯೇ ದುಬೈನಿಂದ ಚಾರ್ಟರ್ಡ್ ಫ್ಲೈಟ್ ಮೂಲಕ ಜೈಪುರಕ್ಕೆ ಆಗಮಿಸಿದ್ದಾರೆ. ನಿಯಮದ ಪ್ರಕಾರ, ಕೋವಿಡ್ ಪರೀಕ್ಷೆ ಮೊದಲಾದವನ್ನೆಲ್ಲಾ ಮಾಡಲಾಗಿದ್ದು ಇಂದು ಅಭ್ಯಾಸಕ್ಕೂ ಅವಕಾಶ ಕೊಡಲಾಗಿದೆ.
ಟೀಮ್ ಇಂಡಿಯಾದಲ್ಲೂ ಹಲವು ಬದಲಾವಣೆ:
ಟಿ20 ವಿಶ್ವಕಪ್ ಸೆಮಿಫೈನಲ್ ತಲುಪುವ ಮುನ್ನವೇ ನಿರ್ಗಮಿಸಿದ ಟೀಮ್ ಇಂಡಿಯಾದ ಹಲವು ಆಟಗಾರರು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಲಭ್ಯರಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮೊದಲಾದ ಕೆಲವರಿಗೆ ರೆಸ್ಟ್ ಕೊಡಲಾಗಿದೆ. ರೋಹಿತ್ ಶರ್ಮಾ ಅವರು ಟಿ20 ತಂಡಕ್ಕೆ ನಾಯಕರಾಗಿದ್ದಾರೆ. ಕೆಎಲ್ ರಾಹುಲ್ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಐಪಿಎಲ್ನಲ್ಲಿ ಮಿಂಚಿದ್ದ ಋತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್ ಮೊದಲಾದವರು ಟಿ20 ಸರಣಿಗೆ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: Rahul Dravid- ದ್ರಾವಿಡ್ ಮಗನಿಂದ ಬಂತು ಒಂದು ಕಾಲ್; ಅಪ್ಪನಿಗೆ ಸಿಕ್ತಾ ಕೋಚಿಂಗ್ ಜಾಬ್?
ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದು, ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. ಅಲ್ಲಿಯವರೆಗೂ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಇನ್ನು, ರಾಹುಲ್ ದ್ರಾವಿಡ್ ಅವರಿಗೆ ಟೀಮ್ ಇಂಡಿಯಾ ಕೋಚ್ ಆಗಿ ನ್ಯೂಜಿಲೆಂಡ್ ಸರಣಿ ಮೊದಲ ಅಗ್ನಿಪರೀಕ್ಷೆ ಆಗಿದೆ.
ನ್ಯೂಜಿಲೆಂಡ್ ಟಿ20 ತಂಡ: ಟಾಡ್ ಆಸ್ಲೆ, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಲಾಕೀ ಫರ್ಗೂಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮಿಸನ್, ಅಡಮ್ ಮಿಲ್ನೆ, ಡರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್ (ವಿ.ಕೀ.), ಈಶ್ ಸೋಧಿ, ಟಿಮ್ ಸೌದಿ (ನಾಯಕ).
ನ್ಯೂಜಿಲೆಂಡ್ ಟೆಸ್ಟ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್ (ವಿ.ಕೀ.), ಕೈಲ್ ಜೇಮೀಸನ್, ಟಾಮ್ ಲೇತಮ್, ಡರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ವಿಲ್ ಸೋಮರ್ವೆಲೆ, ಟಿಮ್ ಸೌದಿ, ರಾಸ್ ಟೇಲರ್, ನೀಲ್ ವಾಗ್ನರ್, ವಿಲ್ ಯಂಗ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ