• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • WTC Final: ಸಿಕ್ಸರ್ ಸಿಡಿಸುವ ವಿಷಯದಲ್ಲಿ ಹಿಟ್​ಮ್ಯಾನ್, ಕಿಂಗ್ ಕೊಹ್ಲಿಗಿಂತ ಮುಂದಿದ್ದಾರೆ ಈ ಬೌಲರ್..!

WTC Final: ಸಿಕ್ಸರ್ ಸಿಡಿಸುವ ವಿಷಯದಲ್ಲಿ ಹಿಟ್​ಮ್ಯಾನ್, ಕಿಂಗ್ ಕೊಹ್ಲಿಗಿಂತ ಮುಂದಿದ್ದಾರೆ ಈ ಬೌಲರ್..!

Tim Southee

Tim Southee

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 69 ಸಿಕ್ಸರ್ ಬಾರಿಸಿದ್ದಾರೆ. ಅದೇ ರೀತಿ ಏಕದಿನ ಕ್ರಿಕೆಟ್‌ನಲ್ಲಿ ಲಾಂಗ್ ಸಿಕ್ಸರ್‌ಗಳನ್ನು ಬಾರಿಸಿದ ಸೌರವ್ ಗಂಗೂಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 57 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

  • Share this:

ಟಿಮ್ ಸೌಥಿ ಪ್ರಸ್ತುತ ನ್ಯೂಜಿಲೆಂಡ್ ತಂಡದ ಅತ್ಯಂತ ಯಶಸ್ವಿ ಬೌಲರ್. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ಫೈನಲ್‌ನಲ್ಲಿ ಸೌಥಿಯ ಸ್ವಿಂಗ್ ಬೌಲಿಂಗ್ ಮುಂದೆ ಭಾರತೀಯ ಬ್ಯಾಟ್ಸ್‌ಮನ್‌ಗಳು ಪರದಾಡಿದ್ದರು. ಆದರೆ ನ್ಯೂಜಿಲೆಂಡ್‌ನ ಈ ಸ್ಪೆಷಲಿಸ್ಟ್ ಬೌಲರ್ ಬ್ಯಾಟಿಂಗ್‌ನಲ್ಲಿ ದೊಡ್ಡ ದೈತ್ಯರಿಗೆ ಸವಾಲು ಹಾಕುತ್ತಿದ್ದಾರೆ ಎಂದರೆ ನಂಬಲೇಬೇಕು.


ಹೌದು, ಟೆಸ್ಟ್​ ಕ್ರಿಕೆಟ್​ನಲ್ಲಿ ಲಾಂಗ್ ಸಿಕ್ಸರ್‌ಗಳ ವಿಷಯ ಬಂದಾಗ, ಟಿಮ್ ಸೌಥಿ ಹೆಸರು ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರೋಹಿತ್ ಶರ್ಮಾ, ರಿಕಿ ಪಾಂಟಿಂಗ್, ಎಬಿ ಡಿವಿಲಿಯರ್ಸ್ ಅವರೆಲ್ಲರಿಗಿಂತ ಮುಂಚೂಣಿಯಲ್ಲಿದೆ. ಭಾರತ ವಿರುದ್ಧದ ಮೊದಲ ಇನಿಂಗ್ಸ್​ನಲ್ಲಿ 2 ಸಿಕ್ಸರ್ ಬಾರಿಸುವ ಮೂಲಕ ಸೌಥಿ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದರು. ಅಲ್ಲದೆ ಶೀಘ್ರದಲ್ಲೇ ಎಂಎಸ್ ಧೋನಿ ಅವರನ್ನೂ ಹಿಂದಿಕ್ಕಲಿದ್ದಾರೆ.


ಭಾರತ ವಿರುದ್ಧದ ಮೊದಲ ಇನಿಂಗ್ಸ್​ನಲ್ಲಿ 32 ವರ್ಷದ ಟಿಮ್ ಸೌಥಿ 46 ಎಸೆತಗಳಲ್ಲಿ 30 ರನ್ ಗಳಿಸಿದರು. ತಮ್ಮ ಈ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ತನ್ನ ಒಟ್ಟು ಸಿಕ್ಸರ್‌ಗಳ ಸಂಖ್ಯೆಯನ್ನು 75 ಕ್ಕೇರಿಸಿದರು. ಅಲ್ಲದೆ 73 ಸಿಕ್ಸ್ ಬಾರಿಸಿದ್ದ ಪಾಂಟಿಂಗ್ ದಾಖಲೆಯನ್ನು ಹಿಂದಿಕ್ಕಿದರು.


79 ಟೆಸ್ಟ್ ಪಂದ್ಯಗಳಲ್ಲಿ ಟಿಮ್ ಸೌಥಿ 75 ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನ ಸಿಕ್ಸರ್​ಗಳ ಪಟ್ಟಿಯಲ್ಲಿ ಸೌಥಿ ಟಾಪ್ -15 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ 101 ಪಂದ್ಯಗಳಲ್ಲಿ 107 ಸಿಕ್ಸರ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ 100 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.



ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್​ ಸಿಕ್ಸರ್‌ಗಳ ಪಟ್ಟಿಯಲ್ಲಿ 78 ಸಿಕ್ಸರ್‌ಗಳೊಂದಿಗೆ 14ನೇ ಸ್ಥಾನದಲ್ಲಿದ್ದಾರೆ. ಇನ್ನು ಧೋನಿಯ ದಾಖಲೆ ಮುರಿಯಲು ಸೌಥಿಗೆ ಕೇವಲ 4 ಸಿಕ್ಸರ್‌ಗಳ ಅವಶ್ಯಕತೆಯಿದೆ.


ಇನ್ನು ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಅಗ್ರ ಸ್ಥಾನದಲ್ಲಿದ್ದಾರೆ. 104 ಪಂದ್ಯಗಳಲ್ಲಿ ಸೆಹ್ವಾಗ್ 91 ಸಿಕ್ಸರ್ ಬಾರಿಸಿದ್ದಾರೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 69 ಸಿಕ್ಸರ್ ಬಾರಿಸಿದ್ದಾರೆ. ಅದೇ ರೀತಿ ಏಕದಿನ ಕ್ರಿಕೆಟ್‌ನಲ್ಲಿ ಲಾಂಗ್ ಸಿಕ್ಸರ್‌ಗಳನ್ನು ಬಾರಿಸಿದ ಸೌರವ್ ಗಂಗೂಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 57 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.


ಪ್ರಸ್ತುತ ಭಾರತ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದು, ಹಿಟ್​ಮ್ಯಾನ್ ಇದುವರೆಗೆ 59 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇನ್ನು ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿ 22 ಸಿಕ್ಸರ್​ಗಳಿವೆ. ಒಟ್ಟಿನಲ್ಲಿ ಬೌಲಿಂಗ್​ನಲ್ಲಿ ಪರಾಕ್ರಮ ಮೆರೆಯುವ ಟಿಮ್ ಸೌಥಿ, ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಖ್ಯಾತ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಮಿಂಚುತ್ತಿರುವುದು ವಿಶೇಷ.

top videos
    First published: