IPL 2022: 1.70 ಕೋಟಿ ಹಣವನ್ನು ಹೇಗೆ ಖರ್ಚು ಮಾಡುವಿರಿ? ಅಪ್ಪನಿಗೆ ಮನೆ ಕೊಡಿಸುವೆ ಎಂದು ಭಾವುಕನಾದ ಕ್ರಿಕೆಟಿಗ!

ನನ್ನ ತಂದೆ ನಂಬೂರಿ ನಾಗರಾಜು ಅವರು ಎಲೆಕ್ಟ್ರಿಷಿಯನ್. ಮನೆಯ ಖರ್ಚಿಗೆ ಹಣ ಹೊಂದಿಸುವುದು ಕಷ್ಟವಿತ್ತು. ನನ್ನ ಅಣ್ಣನಿಗೆ ಚೆನ್ನಾಗಿ ಓದಿ ಕೆಲಸ ಮಾಡಬೇಕು ಎಂಬ ಆಸೆಯಿತ್ತು...

ತಿಲಕ್ ವರ್ಮಾ

ತಿಲಕ್ ವರ್ಮಾ

  • Share this:
ಐಪಿಎಲ್ ಎಷ್ಟೋ ಪ್ರತಿಭೆಗಳಿಗೆ ಜನ್ಮ ನೀಡುತ್ತದೆ. ಹಳೆ ಆಟಗಾರರಿಗೆ ಮರುಜನ್ಮವನ್ನೂ ನೀಡುತ್ತದೆ. ಬಡತನದಿಂದ ಕ್ರೀಡಾ ಪ್ರತಿಭೆಗಳನ್ನು ಹೊರತಂದು ಅವರಿಗೊಂದು ಅದ್ಭುತ ಜೀವನ ರೂಪಿಸಿಕೊಡುವ ಶಕ್ತಿ ಐಪಿಎಲ್​ಗಿದೆ (IPL) ಆದರೆ ಆಟಗಾರರು ಐಪಿಎಲ್​ನಲ್ಲಿ ಪ್ರದರ್ಶಿಸುವ ಆಟದ ಮೇಲೆ ಎಲ್ಲವೂ ನಿಂತಿರುತ್ತದೆ. ಇದಕ್ಕೆ ಒಂದೊಳ್ಳೆ ಉದಾಹರಣೆ ತಿಲಕ್ ವರ್ಮಾ. ಈವರ್ಷ ಮುಂಬೈ ಇಂಡಿಯನ್ಸ್ ಹೈದರಾಬಾದ್ ಮೂಲದ ತಿಲಕ್ ವರ್ಮಾ ಅವರನ್ನು (Tilak Varma) 1.70 ಕೋಟಿ ರೂ.ಗೆ ಖರೀದಿಸಿದೆ. ತಿಲಕ್ ವರ್ಮಾ ಅವರ ತಂದೆ ಎಲೆಕ್ಟ್ರಿಷಿಯನ್. ಇವರಿಗೆ ಸ್ವಂತ ಮನೆಯೂ ಇಲ್ಲ. ಮನೆಯ ಖರ್ಚು ವೆಚ್ಚಗಳನ್ನು ಕಷ್ಟಪಟ್ಟು ನಿಭಾಯಿಸುತ್ತಿದ್ದರು. ತಿಲಕ್ ವರ್ಮಾ ಅವರನ್ನು  ಮುಂಬೈ ಇಂಡಿಯನ್ಸ್ (Mumbai Indians) 1.70 ಕೋಟಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿರುವುದು ಅವರ ಜೀವನಕ್ಕೆ ಬಹುದೊಡ್ಡ (IPL 2022) ತಿರುವನ್ನೇ ನೀಡಿದೆ!

ತಿಲಕ್ ವರ್ಮಾ ಅವರು 2020 ರ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದರು. ಐಪಿಎಲ್​ 2022ರಲ್ಲಿ ಅವರು ಮುಂಬೈ ಇಂಡಿಯನ್ಸ್ ಪರ ಮಿಂಚುವ ಉತ್ಸಾಹದಲ್ಲಿದ್ದಾರೆ. ತಿಲಕ್ ಅವರು ಐಪಿಎಲ್‌ನಲ್ಲಿ ಗಳಿಸಿದ ಹಣದಿಂದ ಹೊಸ ಮನೆಯನ್ನು ಖರೀದಿಸಿ ತಮ್ಮ ತಂದೆಗೆ ಉಡುಗೊರೆ ನೀಡುವ ಉಮೇದಿನಲ್ಲಿದ್ದಾರೆ. ಈಮೂಲಕ ಸ್ವಂತ ಮನೆಯೂ ಇಲ್ಲದ ತಮ್ಮ ಬಡತನದ ಬೇಗೆಯಿಂದ ಹೊರಬರುವ ಯೋಚನೆ ಅವರದು.

ಅಪ್ಪನ ತ್ಯಾಗ ನೆನೆಸಿಕೊಂಡ ತಿಲಕ್ ವರ್ಮಾ
ನಿಮ್ಮನ್ನು ಮುಂಬೈ ಇಂಡಿಯನ್ಸ್ 1.70 ಕೋಟಿಗೆ ಖರೀದಿಸಿದೆ, ಈ ಮೊತ್ತವನ್ನು ಎಲ್ಲಿ ಖರ್ಚು ಮಾಡುತ್ತೀರಿ?   ಎಂದು ಅವರನ್ನು ಕೇಳಿದರೆ ತಿಲಕ್ ವರ್ಮಾ ಹೇಳುವುದು ಹೀಗೆ:  “ನನ್ನ ತಂದೆ ನಂಬೂರಿ ನಾಗರಾಜು ಅವರು ಎಲೆಕ್ಟ್ರಿಷಿಯನ್. ಮನೆಯ ಖರ್ಚಿಗೆ ಹಣ ಹೊಂದಿಸುವುದು ಕಷ್ಟವಿತ್ತು. ನನ್ನ ಅಣ್ಣನಿಗೆ ಚೆನ್ನಾಗಿ ಓದಿ ಕೆಲಸ ಮಾಡಬೇಕು ಎಂಬ ಆಸೆಯಿತ್ತು.  ನಾನು ಕ್ರಿಕೆಟಿಗನಾಗಬೇಕೆಂದು ಬಯಸಿದ್ದೆ. ನಮ್ಮಿಬ್ಬರ ಕನಸು ನನಸಾಗಿಸಲು ತಂದೆ ಸಾಕಷ್ಟು ತ್ಯಾಗ ಮಾಡಿದ್ದಾರೆ.

ಅಪ್ಪ ಹೀಗೆಲ್ಲ ಮಾಡುತ್ತಿದ್ದರು..
ನಾವು ಕೇಳುವ ವಸ್ತುಗಳನ್ನು ಕೊಡಿಸಲು ಎಂದೇ ನನ್ನ ತಂದೆ ಅನೇಕ ಬಾರಿ ತಮ್ಮಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿರಲಿಲ. ಐಪಿಎಲ್‌ನಿಂದ ಬರುವ ಹಣದಲ್ಲಿ ನನ್ನ ತಂದೆ ಮತ್ತು ತಾಯಿಗೆ ಹೈದರಾಬಾದ್‌ನಲ್ಲಿ ಮನೆ ಖರೀದಿಸಲು ನಾನು ಬಯಸುತ್ತೇನೆ ಎಂದು ತಿಲಕ್ ವರ್ಮಾ ಹೇಳುತ್ತಾರೆ.

ಇದನ್ನು ಓದಿ: ನಮ್ಮ RCB ತಂಡದ ಮಾಲೀಕರು ಯಾರು? ನಿಮಗೆ ಗೊತ್ತಿಲ್ಲದ ಮಾಹಿತಿ ಇದು!

ನನ್ನ ಹೆಸರು ಹರಾಜಿಗೆ ಬಂದಿದ್ದೇ ಆಶ್ಚರ್ಯ!
ನಾನು ಇಷ್ಟು ಮೊತ್ತ ನನಗೆ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ನನ್ನ ತರಬೇತುದಾರ ಸಲಾಮ್ ಬಯಾಶ್ ಅವರೊಂದಿಗೆ ವೀಡಿಯೊ ಕರೆಯಲ್ಲಿ ಹರಾಜನ್ನು ವೀಕ್ಷಿಸುತ್ತಿದ್ದೆ. ಆಗ ನಾನು ರಣಜಿ ಆಡಲು ಒಡಿಶಾಗೆ ಹೋಗಿದ್ದೆ. ನನ್ನ ಹೆಸರು ಹರಾಜಿನ ಪಟ್ಟಿಯಲ್ಲಿ ಬಂದಾಗ ನಾನು ಆಶ್ಚರ್ಯಚಕಿತನಾಗಿದ್ದೆ.

ನನ್ನ ಮೇಲೆ ರಾಜಸ್ಥಾನ್ ರಾಯಲ್ಸ್ ಬಿಡ್ ಅನ್ನು ಹಾಕಿದಾಗ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸಹ ನನ್ನನ್ನು ಖರೀದಿಸಲು ಆಸಕ್ತಿ ತೋರಿಸಿದವು. ಇದು ನನಗೆ ಬಹಳ ಆಶ್ಚರ್ಯ ತಂದಿತ್ತು ಎಂದು ಅವರು ವಿವರಿಸುತ್ತಾರೆ.

ಇದನ್ನೂ ಓದಿ: IPL ಸೃಷ್ಟಿಕರ್ತ ಮೋದಿಗೆ IPLನಿಂದ ನಿಷೇಧ ಹೇರಿದ್ದೇಕೆ? ಇಲ್ಲಿದೆ ಸಂಪೂರ್ಣ ಕಥೆ

ಮುಂಬೈ ಇಂಡಿಯನ್ಸ್ ನನ್ನನ್ನು ತೆಗೆದುಕೊಳ್ಳಬೇಕೆಂದು ನಾನು ಬಯಸಿದ್ದೆ. ಕೊನೆಯ ಬಿಡ್ ಮಾಡುವ ಮೂಲಕ ಮುಂಬೈ ಅವರೊಂದಿಗೆ ಸೇರಿಕೊಂಡಾಗ ನಾನು ತುಂಬಾ ಸಂತೋಷಪಟ್ಟೆ. ನಂತರ ನಾನು ಕುಟುಂಬ ಸದಸ್ಯರೊಂದಿಗೆ ಮಾತನಾಡಿದೆ. ಅವರೆಲ್ಲರೂ ತುಂಬಾ ಸಂತೋಷಪಟ್ಟರು. ಇಷ್ಟು ಮೊತ್ತ ಸಿಗುತ್ತದೆ ಎಂಬ ಖಾತ್ರಿ ಇರಲಿಲ್ಲ. ನನ್ನ ತಂದೆ ಭಾವುಕರಾದರು. ಅವರು ಏನನ್ನೂ ಹೇಳಲು ಸಾಧ್ಯವಾಗಲಿಲ್ಲ ಎಂದು ತಿಲಕ್ ವರ್ಮಾ ಖುಷಿ ವ್ಯಕ್ತಪಡಿಸುತ್ತಾರೆ.
Published by:guruganesh bhat
First published: