ಕ್ರಿಕೆಟ್ ಅಂಗಳದ ಹೊಸ ವಿಶ್ವ ಚಾಂಪಿಯನ್ ಇಂಗ್ಲೆಂಡ್.
ವಿಶ್ವಕಪ್ ಇತಿಹಾಸದಲ್ಲೇ ಅತ್ಯದ್ಭುತ ಫೈನಲ್ ಮೂಲಕ ಕ್ರಿಕೆಟ್ ಜನಕ ಇಂಗ್ಲೆಂಡ್ ಚೊಚ್ಚಲ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಮೆಗಾ ಫೈನಲ್ ಎರೆಡೆರಡು ಬಾರಿ ರೋಚಕ ಟೈನಲ್ಲಿ ಅಂತ್ಯಗೊಂಡು, ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ನೂತನ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
![]()
ನ್ಯೂಜಿಲೆಂಡ್ ನೀಡಿದ 241 ರನ್ಗಳನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಅಷ್ಟೇ ರನ್ಗೆ ಸರ್ವಪತನಗೊಳ್ಳುವ ಮೂಲಕ ಪಂದ್ಯವು ಟೈಯಲ್ಲಿ ಅಂತ್ಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ಏಕದಿನ ವಿಶ್ವಕಪ್ ಫೈನಲ್ ಸೂಪರ್ ಓವರ್ಗೆ ಸಾಕ್ಷಿಯಾಯಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 16 ರನ್ಗಳನ್ನು ಗುರಿ ನೀಡಿತು. ಈ ಸವಾಲನ್ನು ಭರ್ಜರಿಯಾಗಿಯೇ ಚೇಸ್ ಮಾಡಿದ ನ್ಯೂಜಿಲೆಂಡ್ಗೆ ಅಂತಿಮ ಎಸೆತದಲ್ಲಿ 2 ರನ್ಗಳ ಅವಶ್ಯಕತೆಯಿತ್ತು. ಆದರೆ ಇಲ್ಲೂ ಅದೃಷ್ಟ ಲಕ್ಷ್ಮಿಯ ಕಣ್ಣಾ ಮುಚ್ಚಾಲೆ ಆಟ ಆಡಿತ್ತು. ಪರಿಣಾಮ ಮತ್ತೊಮ್ಮೆ ಸೂಪರ್ ಪಂದ್ಯ ಟೈಯಲ್ಲಿ ಅಂತ್ಯವಾಯಿತು. ಈ ಹಿನ್ನೆಲೆಯಲ್ಲಿ ಐಸಿಸಿ ನಿಯಮದ ಪ್ರಕಾರ ಅಧಿಕ ಬೌಂಡರಿ ಬಾರಿಸಿದ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇದರೊಂದಿಗೆ ನ್ಯೂಜಿಲೆಂಡ್ನ ಚೊಚ್ಚಲ ವಿಶ್ವಕಪ್ ಕನಸು ಭಗ್ನಗೊಂಡಿತು.
ಇದಕ್ಕೂ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ
ಇಂಗ್ಲೆಂಡ್ಗೆ 242 ರನ್ಗಳ ಗುರಿ ನೀಡಿತು. ಆರಂಭಿಕ ನಿಕೋಲ್ಸ್ (55) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಲಾಥಮ್ (47) ಅವರ ಉಪಯುಕ್ತ ಕಾಣಿಕೆಯಿಂದ ಕಿವೀಸ್ ಪಡೆ ನಿರ್ಣಾಯಕ ಪಂದ್ಯದಲ್ಲಿ ಸ್ಪರ್ಧಾತ್ಮಕ ಸವಾಲು ನೀಡುವಂತಾಯಿತು.
ಈ ಸಾಧಾರಣ ಸವಾಲನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಯಿತು. ತಂಡದ ಮೊತ್ತ 28 ಆಗಿದ್ದ ವೇಳೆ ಜೇಸನ್ ರಾಯ್(10) ವಿಕೆಟ್ ಒಪ್ಪಿಸಿದರು. ಮ್ಯಾಟ್ ಹೆನ್ರಿ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ರಾಯ್ ಹೊರ ನಡೆದರು.
ಇನ್ನು ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಲು ಪಣತೊಟ್ಟ ಬೈರ್ಸ್ಟೋ ಹಾಗೂ ರೂಟ್ ಕಿವೀಸ್ ವೇಗಿಗಳ ಎದುರು ರಕ್ಷಣಾತ್ಮಕ ಆಟಕ್ಕೆ ಮುಂದಾದರು. ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಹೊಡಿಬಡಿ ದಾಂಡಿಗರು 15 ಓವರ್ಗಳಲ್ಲಿ ತಂಡದ ಮೊತ್ತವನ್ನು 50ರ ಗಡಿದಾಟಿಸಿದರು.
ಆದರೆ 17ನೇ ಓವರ್ನಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ರೂಟ್ (7) ಗ್ರ್ಯಾಂಡ್ಹೋಮ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ರೂಟ್ ಬೆನ್ನಲ್ಲೇ ಬೈರ್ಸ್ಟೋ(36) ಸಹ ಫೆರ್ಗುಸನ್ ಬೌಲಿಂಗ್ನಲ್ಲಿ ಬೌಲ್ಡ್ ಆಗುವ ಮೂಲಕ ಹೊರ ನಡೆದರು.
ಈ ಹಂತದಲ್ಲಿ ಜೊತೆಗೂಡಿ ನಾಯಕ ಮೋರ್ಗನ್ ಹಾಗೂ ಸ್ಟೋಕ್ಸ್ ತಂಡಕ್ಕೆ ಆಧಾರವಾಗುವ ಭರವಸೆ ಮೂಡಿಸಿದರು. ಅತ್ತ ಉತ್ತಮವಾಗಿಯೇ ದಾಳಿ ಮಾಡುತ್ತಿದ್ದ ಕಿವೀಸ್ ವೇಗಿಗಳನ್ನು ರಕ್ಷಣಾತ್ಮಕವಾಗಿ ಎದುರಿಸಿದ ಈ ಜೋಡಿ ಒಂಟಿ ರನ್ಗಳ ಮೂಲಕ ರನ್ ಹೆಚ್ಚಿಸುವ ಕಾಯಕಕ್ಕೆ ಕೈ ಹಾಕಿದರು.
ಈ ವೇಳೆ ಬೌಲಿಂಗ್ನಲ್ಲಿ ಬದಲಾವಣೆ ತಂದ ವಿಲಿಯಮ್ಸನ್ ನೀಶಮ್ ಕೈಗೆ ಬಾಲ್ಯಿತ್ತರು. ಮೀಡಿಯಂ ಪೇಸ್ನಲ್ಲಿ ಮೂಡಿ ಬಂದ ಎಸೆತವನ್ನು ಬೌಂಡರಿ ದಾಟಿಸಲು ಯತ್ನಿಸಿದ ಮೋರ್ಗನ್ (9) ರನ್ನು ಅದ್ಭುತ ಕ್ಯಾಚ್ ಮೂಲಕ ಪೆವಿಲಿಯನ್ಗೆ ಕಳುಹಿಸುವಲ್ಲಿ ಫೆರ್ಗುಸನ್ ಯಶಸ್ವಿಯಾದರು.
5ನೇ ವಿಕೆಟ್ಗೆ ಜೊತೆಗೂಡಿದ ಸ್ಟೋಕ್ಸ್ ಹಾಗೂ ಬಟ್ಲರ್ ಎಚ್ಚರಿಕೆಯ ಆಟದೊಂದಿಗೆ ನ್ಯೂಜಿಲೆಂಡ್ ವೇಗಿಗಳನ್ನು ಎದುರಿಸಿದರು. ಪರಿಣಾಮ ಶತಕದ ಜೊತೆಯಾಟ ಮೂಡಿದಲ್ಲದೆ, ಪಂದ್ಯವನ್ನು ಮತ್ತೊಮ್ಮೆ ಇಂಗ್ಲೆಂಡ್ ಪರ ವಾಲುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದರ ನಡುವೆ 55 ಎಸೆತಗಳಲ್ಲಿ ಬಟ್ಲರ್ ಅರ್ಧಶತಕ ಪೂರೈಸಿದರೆ, ಸ್ಟೋಕ್ಸ್ 80 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದರು. ಅರ್ಧಶತಕದ ಬೆನ್ನಲ್ಲೇ ಭರ್ಜರಿ ಹೊಡೆತಕ್ಕೆ ಮುಂದಾದ ಬಟ್ಲರ್(59) ಟಿಮ್ ಸೌಥಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
ಫೆರ್ಗುಸನ್ ಅವರ 46ನೇ ಓವರ್ನಲ್ಲಿ ವೋಕ್ಸ್ (2) ಹೊರ ನಡೆಯುವುದರೊಂದಿಗೆ ನ್ಯೂಜಿಲೆಂಡ್ ಮತ್ತೊಂದು ಯಶಸ್ಸು ಪಡೆಯಿತು. ಇನ್ನು ಗೆಲುವಿಗೆ 9 ಎಸೆತಗಳಲ್ಲಿ 23 ರನ್ಗಳು ಬೇಕಿದ್ದ ವೇಳೆ ಸ್ಟೋಕ್ಸ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.
ಇನ್ನು ಕೊನೆಯ ಓವರ್ನಲ್ಲಿ 15 ರನ್ಗಳನ್ನು ಗುರಿ ಬೆನ್ನತ್ತಿದ ಸ್ಟೋಕ್ಸ್ 3ನೇ ಎಸೆತದಲ್ಲಿ ಅಮೋಘ ಸಿಕ್ಸ್ ಬಾರಿಸಿದರು. ಇನ್ನು ಕೊನೆಯ ಎಸೆತದಲ್ಲಿ 2 ರನ್ಗಳ ಗುರಿ ಪಡೆದ ಇಂಗ್ಲೆಂಡ್ ಕೇವಲ 1 ರನ್ಗಳಷ್ಟೇ ಗಳಿಸಲು ಶಕ್ತರಾದರು. ರೋಚಕ ಟೈನಲ್ಲಿ ಅಂತ್ಯಗೊಂಡ ಪಂದ್ಯವು ಸೂಪರ್ ಓವರ್ಗಳತ್ತ ಮುಖ ಮಾಡಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 16 ರನ್ಗಳ ಗುರಿ ನೀಡಿತು. ಇದನ್ನು ಚೇಸ್ ಮಾಡಿದ ನ್ಯೂಜಿಲೆಂಡ್ ಸಹ ಅಷ್ಟೇ ರನ್ಗಳಿಸಿ ಮತ್ತೊಮ್ಮೆ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ಈ ಹಿನ್ನೆಲೆಯಲ್ಲಿ ಇನಿಂಗ್ಸ್ನಲ್ಲಿ ಅಧಿಕ ಬೌಂಡರಿ ಬಾರಿಸಿದ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಇನ್ನು ಬೆನ್ ಸ್ಟೋಕ್ಸ್ ಅವರ ಅಜೇಯ 84 ರನ್ ಹಾಗೂ ಸೂಪರ್ ಓವರ್ ಆಟದಿಂದ ಇಂಗ್ಲೆಂಡ್ ಚೊಚ್ಚಲ ಬಾರಿ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ಇದಕ್ಕೂ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.ಅದರಂತೆ ಕಿವೀಸ್ ಆರಂಭಿಕರಾಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ ಹಾಗೂ ನಿಕೋಲ್ಸ್ 6 ಓವರುಗಳವರೆಗೂ ವಿಕೆಟ್ ಕಾಯ್ದುಕೊಳ್ಳುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಸೂಚನೆ ನೀಡಿದ್ದರು. ಆದರೆ ತಂಡದ ಮೊತ್ತ 29 ಇದ್ದಾಗ ವೋಕ್ಸ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಗಪ್ಟಿಲ್ ಹೊರ ನಡೆದರು.
ಆರಂಭಿಕ ಆಘಾತಕ್ಕೆ ಒಳಗಾದ ಕಿವೀಸ್ ತಂಡಕ್ಕೆ ಆಸರೆಯಾದ ನಾಯಕ ವಿಲಿಯಮ್ಸನ್ ನಿಧಾನಗತಿಯ ಆಟಕ್ಕೆ ಒತ್ತು ನೀಡಿದರು. ಮತ್ತೊಂದೆಡೆ ರಕ್ಷಣಾತ್ಮಕ ಆಟದೊಂದಿಗೆ ರನ್ ಕಲೆ ಹಾಕುವಲ್ಲಿ ನಿಕೋಲ್ಸ್ ನಿರತರಾದರು. ಪರಿಣಾಮ 2ನೇ ವಿಕೆಟ್ ಅರ್ಧಶತಕದ ಜೊತೆಯಾಟ ಆಡಿದ ಈ ಜೋಡಿ 20 ಓವರ್ಗೆ ತಂಡದ ಮೊತ್ತವನ್ನು 90ರ ಗಡಿ ದಾಟಿಸಿದರು.
ಈ ಮೊತ್ತಕ್ಕೆ 13 ರನ್ ಸೇರ್ಪಡೆಯಾಗುವಷ್ಟರಲ್ಲಿ ನಾಯಕ ವಿಲಿಯಮ್ಸನ್(30) ಪ್ಲಂಕೆಟ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ 4 ಬೌಂಡರಿಗಳೊಂದಿಗೆ ನಿಕೋಲ್ಸ್ ಅರ್ಧಶತಕ ಪೂರೈಸಿದರು. ಆದರೆ ಪ್ಲಂಕೆಟ್ ಅವರ 27ನೇ ಓವರ್ನ ಕೊನೆಯ ಎಸೆತವನ್ನು ಗುರುತಿಸುವಲ್ಲಿ ಎಡವಿದ ಹೆನ್ರಿ ನಿಕೋಲ್ಸ್(55) ಕ್ಲೀನ್ ಬೌಲ್ಡ್ ಆದರು.
ಇನ್ನು ಭಾರತದ ವಿರುದ್ಧ ಸೆಮಿಫೈನಲ್ನಲ್ಲಿ ಅರ್ಧಶತಕ ಬಾರಿಸಿದ್ದ ರಾಸ್ ಟೇಲರ್ ಈ ಬಾರಿ 15 ರನ್ಗಳಿಸಿ ತಮ್ಮ ಇನಿಂಗ್ಸ್ಗೆ ಅಂತ್ಯವಾಡಿದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ನೀಶಮ್ 3 ಬೌಂಡರಿಗಳೊಂದಿಗೆ ಭರವಸೆ ಮೂಡಿಸಿದರೂ ಪ್ಲಂಕೆಟ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಲಾಥಮ್ 43ನೇ ಓವರ್ನಲ್ಲಿ ತಂಡದ ಮೊತ್ತವನ್ನು 202ರ ಗಡಿ ದಾಟಿಸಿದರು. ಕೆಲವೊತ್ತು ಸಾಥ್ ನೀಡಿದ ಗ್ರ್ಯಾಂಡ್ಹೋಮ್(16) ಸಹ ಹೆಚ್ಚು ಹೊತ್ತು ನಿಲ್ಲದೆ ಹಿಂತಿರುಗಿದರು. ಇನ್ನು 49ನೇ ಓವರ್ನಲ್ಲಿ ಕೀಪರ್ರನ್ನು ವಂಚಿಸಿದ ವೈಡ್ ಬಾಲ್ ಬೌಂಡರಿ ಗೆರೆ ದಾಟಿ ಅತಿರಕ್ತ 5 ರನ್ನ್ನು ನ್ಯೂಜಿಲೆಂಡ್ಗೆ ನೀಡಿತು.
ಬೋನಸ್ ರನ್ ಸಿಕ್ಕಿದ ಬೆನ್ನಲ್ಲೇ ವೋಕ್ಸ್ ಎಸೆತದಲ್ಲಿ ಲಾಥಮ್(47) ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಕೊನೆಯ ಓವರ್ನಲ್ಲಿ ಹೆನ್ರಿಯನ್ನು ಬೌಲ್ಡ್ ಮಾಡಿದ ಜೋಫ್ರಾ ಆರ್ಚರ್ ಕೇವಲ 3 ರನ್ ನೀಡಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್ ನಷ್ಟಕ್ಕೆ 241 ರನ್ಗಳಿಗೆ ಕಟ್ಟಿ ಹಾಕಿದರು. ಇನ್ನು ಇಂಗ್ಲೆಂಡ್ ಪರ ಪ್ಲಂಕೆಟ್ ಹಾಗೂ ಕ್ರಿಸ್ ವೋಕ್ಸ್ ತಲಾ 3 ವಿಕೆಟ್ ಉರುಳಿಸಿ ಯಶಸ್ವಿ ಬೌಲರುಗಳು ಎನಿಸಿಕೊಂಡರು.