ಟೀಮ್ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ಮೂವರ ಹೆಸರು; ಯಾರ ಒಲವು ಯಾರತ್ತ, ಒಂದು ನೋಟ

India Test Team Captaincy: ವಿರಾಟ್ ಕೊಹ್ಲಿ ಅವರಿಂದ ತೆರವಾಗಿರುವ ಟೀಮ್ ಇಂಡಿಯಾ ಟೆಸ್ಟ್ ನಾಯಕ ಸ್ಥಾನಕ್ಕೆ ಯಾರನ್ನ ಕೂರಿಸಬೇಕು ಎಂಬುದು ಇನ್ನೂ ನಿಶ್ಚಿತವಾಗಿಲ್ಲ. ಸದ್ಯಕ್ಕೆ ಮೂವರ ಹೆಸರನ್ನು ಬಿಸಿಸಿಐ ಪರಿಗಣಿಸಿರುವುದು ತಿಳಿದುಬಂದಿದೆ.

ಬಿಸಿಸಿಐ ಲೋಗೊ

ಬಿಸಿಸಿಐ ಲೋಗೊ

 • Share this:
  ನವದೆಹಲಿ, ಜ. 17: ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದಾಗ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಹೊಣೆಗಾರಿಕೆಗೆ ಸಿದ್ಧವಾಗಿದ್ದರು. ಬಿಸಿಸಿಐಗೆ ನಿರ್ಧಾರ ಕೈಗೊಳ್ಳಲು ಕಷ್ಟ ಆಗಲಿಲ್ಲ. ಈಗ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೂ ವಿದಾಯ ಹೇಳಿದ್ದಾರೆ. ಟೆಸ್ಟ್ ಕ್ಯಾಪ್ಟನ್ ಆಗಿ ವಿರಾಟ್ ಕೊಹ್ಲಿ ಸ್ಥಾನ ತುಂಬಿಸುವುದು ಸದ್ಯಕ್ಕೆ ಸುಲಭ ಕೆಲಸವಂತೂ ಅಲ್ಲ. ಟೆಸ್ಟ್ ಕ್ರಿಕೆಟ್ ಮತ್ತು ಸೀಮಿತ ಓವರ್​ಗಳ ಕ್ರಿಕೆಟ್ ತಂಡಗಳಿಗೆ ಒಬ್ಬರೇ ನಾಯಕ ಇರುವುದು ತರವಲ್ಲ ಎಂದು ಬಿಸಿಸಿಐ ಈ ಹಿಂದೆಯೇ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾಗಿದೆ. ಹೀಗಾಗಿ, ರೋಹಿತ್ ಶರ್ಮಾ ಅವರಿಗೆ ಟೆಸ್ಟ್ ಕ್ಯಾಪ್ಟನ್ಸಿ ಕೊಡುವ ಸಾಧ್ಯತೆ ಕಡಿಮೆ. ಬೇರೊಬ್ಬರಿಗೆ ಟೆಸ್ಟ್ ತಂಡದ ನಾಯಕತ್ವ ವಹಿಸಲಾಗುತ್ತದೆ. ಯಾರು ಮುಂದಿನ ನಾಯಕ ಎಂಬುದು ಪ್ರಶ್ನೆ.

  ಟೀಮ್ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ಮೂವರ ಹೆಸರು ಪ್ರಮುಖವಾಗಿ ಚಾಲನೆಯಲ್ಲಿದೆ. ಒಬ್ಬರು ರೋಹಿತ್ ಶರ್ಮಾ, ಮತ್ತೊಬ್ಬರು ಕೆಎಲ್ ರಾಹುಲ್, ಮಗದೊಬ್ಬರು ರಿಷಭ್ ಪಂತ್. ಮೊದಲೇ ಹೇಳಿದ ಹಾಗೆ ಟೀಮ್ ಇಂಡಿಯಾದಲ್ಲಿ ಸ್ಪ್ಲಿಟ್ ಕ್ಯಾಪ್ಟನ್ಸಿ ಜಾರಿಗೆ ತರುವ ಆಲೋಚನೆ ಇದೆ. ಅಂದರೆ ಟೆಸ್ಟ್ ತಂಡಕ್ಕೆ ಬೇರೆ ನಾಯಕರು, ಸೀಮಿತ ಓವರ್​ಗಳ ಕ್ರಿಕೆಟ್ ತಂಡಗಳಿಗೆ ಬೇರೆ ನಾಯಕರನ್ನ ಪ್ರತಿಷ್ಠಾಪಿಸುವುದು ಬಿಸಿಸಿಐ ಯೋಜನೆ. ಈಗಾಗಲೇ ಟಿ20 ಮತ್ತು ಓಡಿಐ ತಂಡಗಳಿಗೆ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ ಅವರನ್ನ ಟೆಸ್ಟ್ ತಂಡದ ನಾಯಕರನ್ನಾಗಿ ಮಾಡುವ ಸಾಧ್ಯತೆ ಕಡಿಮೆ.

  ಕೆಎಲ್ ರಾಹುಲ್ ಸೂಕ್ತ ಆಯ್ಕೆ:

  ಟಿ20 ಮತ್ತು ಓಡಿಐ ತಂಡಗಳಿಗೆ ರೋಹಿತ್ ಶರ್ಮಾ ಅವರಿಗೆ ಉಪನಾಯಕನಾಗಿರುವ, ಹಾಗೂ ರೋಹಿತ್ ಅನುಪಸ್ಥಿತಿಯಲ್ಲಿ ನಾಯಕನೂ ಆಗುವ ಕೆಎಲ್ ರಾಹುಲ್ ಅವರನ್ನ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ಮಾಡುವಂತೆ ಕೆಲವರು ಸಲಹೆ ನೀಡಿದ್ಧಾರೆ. ಬಿಸಿಸಿಐ ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಅವರು ಕೆಎಲ್ ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ.

  ಇದನ್ನೂ ಓದಿ: ಹೀನಾಯ ಸೋಲಿನ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ತೊರೆದ Virat Kohli

  “ಸುದೀರ್ಘ ಕಾಲ ಕ್ಯಾಪ್ಟನ್ಸಿ ಹೊಣೆಯನ್ನು ನಿಭಾಯಿಸಬಲ್ಲಂಥ ಆಟಗಾರ ಭಾರತದ ಮುಂದಿನ ಟೆಸ್ಟ್ ಕ್ಯಾಪ್ಟನ್ ಆಗಬೇಕು ಎಂಬುದು ನನ್ನ ಭಾವನೆ. ಹೀಗಾಗಿ ಮುಂದಿನ ಟೆಸ್ಟ್ ಕ್ಯಾಪ್ಟನ್ ಆಗಲು ಕೆಎಲ್ ರಾಹುಲ್ ಅವರ ಹೆಸರನ್ನ ಶಿಫಾರಸು ಮಾಡಲು ಬಯಸುತ್ತೇನೆ” ಎಂದು ಸಂಜಯ್ ಜಗದಾಳೆ ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

  ರಿಷಭ್ ಪಂತ್ ಕ್ಯಾಪ್ಟನ್ ಆಗಲಿ:

  ಭಾರತದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ, ಹಾಗು ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಮುನ್ನಡೆಸಿದ ಅನುಭವ ಇರುವ ರಿಷಭ್ ಪಂತ್ ಅವರಿಗೆ ಟೆಸ್ಟ್ ಕ್ಯಾಪ್ಟನ್ಸಿ ಕೊಡುವುದು ಸೂಕ್ತ ಎಂದು ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಹೇಳುತ್ತಾರೆ. ಯುವರಾಜ್ ಸಿಂಗ್ ಕೂಡ ಈ ಅಭಿಪ್ರಾಯವನ್ನ ಅನುಮೋದಿಸುತ್ತಾರೆ.

  ಹೊಣೆಗಾರಿಕೆ ಕೊಟ್ಟಷ್ಟೂ ಆಟ ಸುಧಾರಣೆ ಆಗುತ್ತೆ:

  “ನೀವು ನನ್ನ ಅನಿಸಿಕೆ ಕೇಳಿದರೆ, ರಿಷಭ್ ಪಂತ್ ಮುಂದಿನ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಲಿ ಎಂದು ಹೇಳುತ್ತೇನೆ. ಇದಕ್ಕೆ ಒಂದು ಪ್ರಮುಖ ಕಾರಣವೂ ಇದೆ. ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿ ರಿಕಿ ಪಾಂಟಿಂಗ್ ಕೆಳಗಿಳಿದಾಗ ರೋಹಿತ್ ಶರ್ಮಾ ಅವರನ್ನ ನಾಯಕನನ್ನಾಗಿ ಮಾಡಲಾಯಿತು. ಅದಾದ ಬಳಿಕ ರೋಹಿತ್ ಶರ್ಮಾ ಬ್ಯಾಟಿಂಗ್​ನಲ್ಲಿ ಆದ ಬದಲಾವಣೆಯನ್ನ ನೀವು ಗಮನಿಸಿರಬಹುದು. ಕ್ಯಾಪ್ಟನ್ಸಿಯ ಹೊಣೆಗಾರಿಕೆ ಬಂದದ್ದೇ ಬಂತು, ರೋಹಿತ್ ಶರ್ಮಾ ಅವರು 30, 40 ಮತ್ತು 50 ರನ್​ಗಳ ಸ್ಕೋರನ್ನು ಶತಕ, ದ್ವಿಶತಕಗಳಾಗಿ ಪರಿವರ್ತಿಸತೊಡಗಿದರು.

  ಇದನ್ನೂ ಓದಿ: Virat Kohli Steps Down: ಭಾರತದ ಸಕ್ಸಸ್ ಫುಲ್ ನಾಯಕ ಈಗ ತಲೆ ಬಾಗಿದ್ದು ಯಾಕೆ? ನಾಯಕತ್ವದಿಂದ ಕೆಳಗಿಳಿಯಲು ಅಸಲಿ ಕಾರಣ ಏನು?

  ”ರಿಷಭ್ ಪಂತ್ ಅವರಿಗೂ ಹೊಣೆಗಾರಿಕೆ ಕೊಟ್ಟಾಗ ನ್ಯೂಲೆಂಡ್ಸ್​ನಲ್ಲಿ ಅವರಿಂದ ಬಂದ ಶತಕದ ರೀತಿಯಲ್ಲೇ ಇನ್ನೂ ಹಲವು ಇನ್ನಿಂಗ್ಸನ್ನು ಅವರಿಂದ ನಿರೀಕ್ಷಿಸಬಹುದು” ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.

  ರಿಷಭ್ ಪಂತ್ ಬಗ್ಗೆ ಸುನೀಲ್ ಗವಾಸ್ಕರ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಅನುಮೋದಿಸಿ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ. “ನಿಜ… ಸ್ಟಂಪ್ ಹಿಂದೆ ನಿಂತು ಆಟವನ್ನು ಸರಿಯಾಗಿ ಅಂದಾಜು ಮಾಡುತ್ತಾರೆ” ಎಂದು ಯುವರಾಜ್ ಸಿಂಗ್ ಪ್ರತಿಕ್ರಿಯಿಸಿದ್ಧಾರೆ.
  Published by:Vijayasarthy SN
  First published: