ಕ್ರಿಕೆಟ್ ಅಂಗಳದ ಸಿಕ್ಸರ್ ಸರದಾರರ ಪಟ್ಟಿಗೆ ಶ್ರೀಲಂಕಾದ ಎಡಗೈ ದಾಂಡಿಗ ತಿಸಾರ ಪೆರೇರ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ ಚುಟುಕು ಕ್ರಿಕೆಟ್ನಲ್ಲಿ ಯುವರಾಜ್ ಸಿಂಗ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದರು. ಶ್ರೀಲಂಕಾ ಬೌಲರ್ ಅಕಿಲ ಧನಂಜಯ ಓವರ್ನಲ್ಲಿ ಕೀರನ್ ಪೊಲಾರ್ಡ್ ಆರು ಎಸೆತದಲ್ಲಿ ಆರು ಸಿಕ್ಸರ್ ಸಿಡಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನ ಓವರ್ವೊಂದರಲ್ಲಿ ಆರು ಸಿಕ್ಸರ್ ಸಿಡಿಸಿ ಮೊದಲ ವಿಂಡೀಸ್ ಕ್ರಿಕೆಟಿಗ ಎಂಬ ದಾಖಲೆಯನ್ನು ಪೊಲಾರ್ಡ್ ಬರೆದಿದ್ದರು.
ಇದೀಗ ಶ್ರೀಲಂಕಾ ಕ್ರಿಕೆಟ್ನಲ್ಲಿ ತಿಸಾರ ಪೆರೇರ ಆರು ಎಸೆತದಲ್ಲಿ ಆರು ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಈ ಮೂಲಕ ಲಂಕಾ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಲಂಕಾದಲ್ಲಿ ನಡೆದ ದೇಶೀಯ ಟೂರ್ನಿಯಲ್ಲಿ ಪೆರೇರ ಈ ಸಾಧನೆ ಮಾಡಿದ್ದು, ಈ ಮೂಲಕ ಸಿಕ್ಸರ್ ಸರದಾರರ ಪಟ್ಟಿಗೆ ಸೇರ್ಪಡೆಯಾದ 9ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಶ್ರೀಲಂಕಾ ಆರ್ಮಿ ಸ್ಪೋರ್ಟ್ಸ್ ಕ್ಲಬ್ ಮತ್ತು ಬ್ಲೂಮ್‌ಫೀಲ್ಡ್ ಕ್ರಿಕೆಟ್ ಮತ್ತು ಅಥ್ಲೆಟಿಕ್ ಕ್ಲಬ್ ನಡುವಿನ ಮೇಜರ್ ಕ್ಲಬ್ಸ್ ಲಿಮಿಟೆಡ್ ಓವರ್ ಟೂರ್ನಿಯ ಗ್ರೂಪ್ ಎ ಪಂದ್ಯದಲ್ಲಿ 31 ವರ್ಷದ ತಿಸಾರ ಪೆರೇರ ಈ ಸಾಧನೆ ಮಾಡಿದ್ದಾರೆ.
ಶ್ರೀಲಂಕಾದ ಆರ್ಮಿ ಪರ ಕಣಕ್ಕಿಳಿದಿದ್ದ ಎಡಗೈ ಬ್ಯಾಟ್ಸ್ಮನ್ ಕೇವಲ 13 ಎಸೆತಗಳಲ್ಲಿ 52 ರನ್ ಚಚ್ಚಿದರು. ದಿಲ್ಹಾನ್ ಕುರಾ ಓವರ್ನಲ್ಲಿ ಆರು ಸಿಕ್ಸ್ ಬಾರಿಸುವ ಮೂಲಕ ಪೆರೇರಾ ತಮ್ಮ ಇನಿಂಗ್ಸ್ನಲ್ಲಿ ಒಟ್ಟು 8 ಸಿಕ್ಸರ್ಗಳನ್ನು ಸಿಡಿಸಿದರು. ಇದರೊಂದಿಗೆ ಶ್ರೀಲಂಕಾ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಅಲ್ಲದೆ ವಿಶ್ವ ಕ್ರಿಕೆಟ್ನ 9ನೇ ಬ್ಯಾಟ್ಸ್ಮನ್ ಸಿಕ್ಸರ್ ಸರದಾರ ಎಂಬ ಹೆಗ್ಗಳಿಕೆಗೆ ತಿಸರಾ ಪೆರೇರ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಹಾಗೂ ಕೀರನ್ ಪೊಲಾರ್ಡ್ 6 ಎಸೆತಗಳಿಗೆ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಫಸ್ಟ್ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ನ ಗ್ಯಾರಿ ಸೋಬರ್ಸ್, ಭಾರತದ ರವಿ ಶಾಸ್ತ್ರಿ ಆರಕ್ಕೆ ಆರು ಸಿಕ್ಸರ್ ಬಾರಿಸಿ ಸಿಕ್ಸರ್ ಸರದಾರರು ಎನಿಸಿಕೊಂಡಿದ್ದರು.
ಇನ್ನು ಟಿ20 ಲೀಗ್ನಲ್ಲಿ ಅಫ್ಘಾನಿಸ್ತಾನದ ಹಝ್ರತುಲ್ಲಾ ಝಝೈ, ಇಂಗ್ಲೆಂಡ್ನ ರೋಸ್ ವೈಟ್ಲಿ ಹಾಗೂ ನ್ಯೂಜಿಲೆಂಡ್ನ ಲಿಯೊ ಕಾರ್ಟರ್ ಆರು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ್ದರು. ಇದೀಗ ಲೀಸ್ಟ್ ಎ ಕ್ರಿಕೆಟ್ನಲ್ಲಿ ಆರಕ್ಕೆ ಆರು ಸಿಕ್ಸರ್ ಸಿಡಿಸುವ ಮೂಲಕ ಶ್ರೀಲಂಕಾ ಕ್ರಿಕೆಟ್ನಲ್ಲಿ ತಿಸರಾ ಪೆರೇರ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ