ಅತಿ ಹೆಚ್ಚು ಓದಿದ ಭಾರತೀಯ ಕ್ರಿಕೆಟಿಗ ಯಾರು ಗೊತ್ತಾ? ಎಂಜಿನಿಯರ್ಸ್ ಕುಂಬ್ಳೆ, ಶ್ರೀನಾಥ್ ಅಂತೂ ಅಲ್ಲ

ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಎಂಜಿನಿಯರಿಂಗ್ ಓದಿದವರು. ರಾಹುಲ್ ದ್ರಾವಿಡ್ ಎಂಬಿಎ ಮಾಡಿದ್ದಾರೆ. ಆದರೆ, ಇವರೆಲ್ಲರನ್ನೂ ಮೀರಿಸುವಂತೆ ಅತಿ ಹೆಚ್ಚು ಓದಿದ ಭಾರತೀಯ ಕ್ರಿಕೆಟಿಗರೊಬ್ಬರು ಇದ್ದಾರೆ.

ಆವಿಷ್ಕರ್ ಸಾಳ್ವಿ

ಆವಿಷ್ಕರ್ ಸಾಳ್ವಿ

 • Share this:
  ಸಾಮಾನ್ಯವಾಗಿ ಕ್ರೀಡಾಪಟುಗಳ ಶಿಕ್ಷಣ ಸಾಮಾನ್ಯ ಮಟ್ಟದಲ್ಲೇ ಇರುತ್ತದೆ. ಇವರದ್ದು ಕ್ರೀಡಾ ವೃತ್ತಿಯಾದ್ದರಿಂದ ಶಿಕ್ಷಣದತ್ತ ಹೆಚ್ಚು ಗಮನ ಕೊಡಲು ಆಗುವುದಿಲ್ಲ. ಶಿಕ್ಷಣದತ್ತ ಗಮನ ಕೊಟ್ಟರೆ ಕ್ರೀಡೆಯಲ್ಲಿ ಬೆಳವಣಿಗೆ ಸಾಧಿಸಲು ಕಷ್ಟಸಾಧ್ಯ. ಇದಕ್ಕೆ ಕ್ರಿಕೆಟ್ ಹೊರತಲ್ಲ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕಾಲೇಜು ಮೆಟ್ಟಿಲು ಹತ್ತಿದವರೇ ಅಲ್ಲ. ಅಂಥ ಅನೇಕ ಅದ್ಭುತ ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅತೀ ಹೆಚ್ಚು ಓದಿದ ಕ್ರಿಕೆಟಿಗ ಯಾರು ಎಂಬ ಪ್ರಶ್ನೆ ಎದ್ದರೆ ಥಟ್ಟನೆ ಅನೇಕರ ಮನಸಿಗೆ ಬರುವುದು ಉತ್ತಮ ಶಿಕ್ಷಣ ಮಾಡಿರುವ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಆರ್ ಅಶ್ವಿನ್ ಮೊದಲಾದವರ ಹೆಸರು. ಇವರೆಲ್ಲರೂ ಭಾರತ ಕ್ರಿಕೆಟ್ ತಂಡಕ್ಕೆ ಬರುವ ಮುನ್ನ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿಕೊಂಡು ಬಂದವರೇ. ಕುಂಬ್ಳೆ ಮೊದಲಾದವರು ಎಂಜಿನಿಯರಿಂಗ್ ಕೂಡ ಮಾಡಿದ್ದಾರೆ. ರಾಹುಲ್ ದ್ರಾವಿಡ್ ಎಂಬಿಎ ಮಾಡಿದ್ದಾರೆ. ಆದರೆ, ಇವರೆಲ್ಲರಿಗಿಂತ ಹೆಚ್ಚು ಓದಿದ ಕ್ರಿಕೆಟಿಗರೊಬ್ಬರು ಭಾರತ ತಂಡದಲ್ಲಿ ಆಡಿದ್ದಾರೆ. ಅವರೇ ವೇಗದ ಬೌಲರ್ ಆವಿಷ್ಕರ್ ಸಾಳವಿ.

  ಇವರ ಹೆಸರು ಹೆಚ್ಚು ಮಂದಿಗೆ ಗೊತ್ತಿಲ್ಲದೇ ಇರಬಹುದು. ಗ್ಲೆನ್ ಮೆಕ್​ರಾಥ್ ಅವರ ರೀತಿಯ ಬೌಲಿಂಗ್ ಶೈಲಿ ಹೊಂದಿದ ಕಾರಣಕ್ಕೆ ಸಾಕಷ್ಟು ಗಮನ ಸೆಳೆದಿದ್ದ ಆವಿಷ್ಕರ್ ಸಾಳವಿ ಅವರು ಆಸ್ಟ್ರೋಫಿಸಿಕ್ಸ್ (ಖಗೋಲ ವಿಜ್ಞಾನ) ವಿಷಯದಲ್ಲಿ ಪಿಎಚ್​ಡಿ ಮಾಡಿದ್ಧಾರೆ. 2003ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾದ ಇವರು ನಾಲ್ಕು ಏಕದಿನ ಪಂದ್ಯಗಳನ್ನೂ ಆಡಿ 4 ವಿಕೆಟ್ ಪಡೆದಿದ್ದಾರೆ. ಆದರೆ, ಗಾಯದ ಸಮಸ್ಯೆಯಿಂದಾಗಿ ಇವರ ಕ್ರಿಕೆಟ್ ವೃತ್ತಿ ಜೀವನ ಬೇಗನೇ ಅಂತ್ಯಗೊಂಡಿತು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 62 ಪಂದ್ಯಗಳಿಂದ 169 ವಿಕೆಟ್ ಗಳಿಸಿರುವುದು ಇವರ ಪ್ರತಿಭೆಗೆ ಸಾಕ್ಷಿಯಾಗಿದೆ. ಈಗ ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಸುಶಿಕ್ಷಿತ ಕ್ರಿಕೆಟಿಗ ಎಂಬ ದಾಖಲೆಯಂತೂ ಸದ್ಯಕ್ಕೆ ಇವರ ಹೆಸರಿನಲ್ಲಿದೆ.

  ಟಿ20 ವಿಶ್ವಕಪ್: 

  ಇದೇ ವೇಳೆ, ಟಿ20 ವಿಶ್ವಕಪ್​ನತ್ತ ಎಲ್ಲರ ಚಿತ್ತ ನೆಟ್ಟಿದೆ. ದುಬೈನಲ್ಲಿ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್​ನ ವೇಳಾಪಟ್ಟಿಯನ್ನು ಐಸಿಸಿ ನಿನ್ನೆ ಬಿಡುಗಡೆ ಮಾಡಿದೆ. ಅಕ್ಟೋಬರ್ 17ರಂದು ಪ್ರಾರಂಭವಾಗಲಿರುವ ಈ ಮೆಗಾ ಕ್ರಿಕೆಟ್ ಟೂರ್ನಿ ನವೆಂಬರ್ 14ಕ್ಕೆ ಮುಕ್ತಾಯವಾಗಲಿದೆ. ಒಟ್ಟು 16 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಎರಡು ಹಂತದಲ್ಲಿ ಟೂರ್ನಿ ನಡೆಯಲಿದ್ದು, ಮೊದಲನೆಯದ್ದು ಅರ್ಹತಾ ಹಂತವಾಗಿದೆ. ಈ ಹಂತದ ಪಂದ್ಯಗಳು ಅಕ್ಟೋಬರ್ 17ರಿಂದ ಅಕ್ಟೋಬರ್ 22ರವರೆಗೆ ನಡೆಯಲಿವೆ. ಅದಾದ ಬಳಿಕ ಸೂಪರ್12 ಹಂತ ಇರಲಿದೆ. ಅರ್ಹತಾ ಹಂತದಲ್ಲಿ ಎಂಟು ತಂಡಗಳು ಸ್ಪರ್ಧಿಸಲಿವೆ. ಈ ಎಂಟು ತಂಡಗಳನ್ನ ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಒಂದೊಂದು ಗುಂಪಿನಿಂದ ಟಾಪ್ 2 ತಂಡಗಳಂತೆ ಒಟ್ಟು ಅರ್ಹತಾ ಹಂತದಿಂದ ನಾಲ್ಕು ತಂಡಗಳು ಸೂಪರ್12 ಹಂತಕ್ಕೆ ಅರ್ಹತೆ ಪಡೆಯಲಿವೆ.

  ಟಿ20 ಕ್ರಿಕೆಟ್​ನಲ್ಲಿ ವಿಶ್ವ ರ್ಯಾಂಕಿಂಗ್​ನಲ್ಲಿ ಅಗ್ರ 8 ಸ್ಥಾನದಲ್ಲಿರುವ ತಂಡಗಳು ನೇರವಾಗಿ ಸೂಪರ್12 ಹಂತ ಪ್ರವೇಶ ಪಡೆಯುತ್ತವೆ. ಈ 12 ತಂಡಗಳ ಜೊತೆಗೆ ಅರ್ಹತಾ ಹಂತದಿಂದ ನಾಲ್ಕು ತಂಡಗಳು ಕ್ವಾಲಿಫೈ ಆಗಲಿವೆ. ಟೆಸ್ಟ್ ಆಡುವ ತಂಡಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಅರ್ಹತಾ ಹಂತದಲ್ಲಿ ಆಡುತ್ತಿವೆ. ಎ ಗುಂಪಿನಲ್ಲಿ ಶ್ರೀಲಂಕಾ, ಐರ್​ಲೆಂಡ್, ನೆದರ್​ಲೆಂಡ್ಸ್ ಮತ್ತು ನಮೀಬಿಯಾ ತಂಡಗಳಿವೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಓಮನ್ ತಂಡಗಳಿವೆ.

  ಇದನ್ನೂ ಓದಿ: Sachin on Virat: ವಿರಾಟ್ ಕೊಹ್ಲಿ ರನ್​ ಹೊಡೆಯದಿರಲು ಈ ಅಂಶವೇ ಕಾರಣ ಎಂದ ಸಚಿನ್ ತೆಂಡೂಲ್ಕರ್​

  ಸೂಪರ್12 ಹಂತದಲ್ಲೂ ಎರಡು ಗುಂಪುಗಳನ್ನ ಮಾಡಲಾಗಿದೆ. ಒಂದನೇ ಗುಂಪಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಅರ್ಹತಾ ಹಂತದಿಂದ ಬಂದ 2 ತಂಡಗಳು ಇರಲಿವೆ. ಎರಡನೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಆಫ್ಘಾನಿಸ್ತಾನ ಹಾಗೂ ಅರ್ಹತಾ ಹಂತದಿಂದ ಬಂದ ಎರಡು ತಂಡಳು ಇರಲಿವೆ. ಅರ್ಹತಾ ಹಂತದಲ್ಲಿರುವ ಗ್ರೂಪ್ ಎನಲ್ಲಿ ಮೊದಲ ಸ್ಥಾನ ಪಡೆದ ತಂಡ ಹಾಗೂ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡ ಸೂಪರ್12 ಹಂತದಲ್ಲಿ ಒಂದನೇ ಗುಂಪಿನಲ್ಲಿ ಆಡಲಿವೆ. ಹಾಗೆಯೇ, ಅರ್ಹತಾ ಹಂತದಲ್ಲಿ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡ ಹಾಗೂ ಬಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡಗಳು ಸೂಪರ್12 ಹಂತದಲ್ಲಿ ಎರಡನೇ ಗುಂಪಿನಲ್ಲಿ ಆಡಲಿವೆ.
  Published by:Vijayasarthy SN
  First published: