ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಐತಿಹಾಸಿಕ ಜಯ ಸಾಧಿಸಿದೆ. ಅನಾನುಭವಿ ಆಟಗಾರರ ಕೆಚ್ಚೆದೆಯ ಪ್ರದರ್ಶನದ ಮುಂದೆ ಅಂತಿಮ ಟೆಸ್ಟ್ನಲ್ಲಿ ಆಸೀಸ್ ಪಡೆ ಮಂಡಿಯೂರಿದೆ. ಇದರೊಂದಿಗೆ ಬಾರ್ಡರ್-ಗವಾಸ್ಕರ್ ಸರಣಿಯನ್ನು ಭಾರತ 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.
ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 369 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಟೀಮ್ ಇಂಡಿಯಾ 336 ರನ್ಗಳಿಸಲಷ್ಟೇ ಶಕ್ತರಾಗಿದ್ದರು. 2ನೇ ಇನಿಂಗ್ಸ್ನಲ್ಲಿ ಆಸೀಸ್ ಬ್ಯಾಟ್ಸ್ಮನ್ಗಳನ್ನು ಮೊಹಮ್ಮದ್ ಸಿರಾಜ್ (5 ವಿಕೆಟ್) ಹಾಗೂ ಶಾರ್ದುಲ್ ಠಾಕೂರ್ (4 ವಿಕೆಟ್) 294 ರನ್ಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು.
ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ 328 ರನ್ಗಳ ಗುರಿ ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿತ್ತು. ಕೊನೆಯ ದಿನ ಭಾರತಕ್ಕೆ ಗೆಲ್ಲಲು 325 ರನ್ಗಳ ಅವಶ್ಯಕತೆಯಿತ್ತು. ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರ ಮನಮೋಹಕ 91 ರನ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಅವರ ಬಿರುಸಿನ 89 ರನ್ಗಳ ಸಹಾಯದಿಂದ ಟೀಮ್ ಇಂಡಿಯಾ 3 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಇತಿಹಾಸ ಬರೆಯಿತು.
ಈ ಐತಿಹಾಸಿಕ ಗೆಲುವಿಗೆ ಟೀಮ್ ಇಂಡಿಯಾವನ್ನು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿನಂದಿಸಿದ್ದಾರೆ. ಅದು ಕೂಡ ಪಂಚಿಂಗ್ ಡೈಲಾಗ್ ಮೂಲಕ ಎಂಬುದು ವಿಶೇಷ. ಈ ಬಗ್ಗೆ ಟ್ವೀಟ್ ಮಾಡಿರುವ ವೀರು, ಇದು ಹೊಸ ಭಾರತ. ಮನೆಗೆ ನುಗ್ಗಿ ಹೊಡಿತೀವಿ. ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಏನಾಯಿತು ಎಂಬುದರಿಂದ ಹಿಡಿದು, ಯುವ ಆಟಗಾರರು ಇಲ್ಲಿಯವರೆಗೂ ಜೀವಮಾನಕ್ಕೆ ಸಾಕಾಗುವುಷ್ಟು ಸಂತೋಷ ನೀಡಿದ್ದಾರೆ. ಇದು ವಿಶ್ವಕಪ್ ಗೆಲುವುಗಿಂತಲೂ ತುಂಬಾ ವಿಶೇಷವಾಗಿದೆ.ಇದಕ್ಕೆಲ್ಲಾ ಕಾರಣ ಪಂತ್ ಎಂಬುದೇ ಮತ್ತೊಂದು ವಿಶೇಷ ಎಂದು ಸೆಹ್ವಾಗ್ ಹೇಳಿದ್ದಾರೆ.
ಇನ್ನು ಈ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, "ಇದೊಂದು ಅವಿಸ್ಮರಣೀಯ ಗೆಲುವು. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದಿರುವುದು ನಿಜಕ್ಕೂ ಅದ್ಭುತ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಈ ಗೆಲುವು ಎಂದೆಂದಿಗೂ ನೆನಪಿನಲ್ಲಿ ಇರಲಿದೆ. ಇದೇ ಖುಷಿಯಲ್ಲಿ ತಂಡಕ್ಕೆ ಬಿಸಿಸಿಐ 5 ಕೋಟಿ ರೂ. ಬೋನಸ್ ನೀಡುತ್ತಿರುವುದಾಗಿ ಘೋಷಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ