Prakash Bhagat| ಒಂದು ಕಾಲದಲ್ಲಿ ಗಂಗೂಲಿ ಜೊತೆ ಆಟವಾಡಿದ್ದ ಕ್ರಿಕೆಟರ್ ಇಂದು ಜೀವನಕ್ಕಾಗಿ ರಸ್ತೆಬದಿ ಪಾನಿಪುರಿ ವ್ಯಾಪಾರ!

34 ವರ್ಷದ ಪ್ರಕಾಶ್ ಭಗತ್ ಎಡಗೈ ಸ್ಪಿನ್ನರ್ ಮತ್ತು ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಈಗ ಅಸ್ಸಾಂನ ಸಿಲ್ಚಾರ್ ಮುನ್ಸಿಪಲ್ ಬೋರ್ಡ್‌ನೊಳಗಿನ ಇಟ್ಖೋಲಾದ ರಸ್ತೆಬದಿಯ ಸ್ಟಾಲ್‌ನಲ್ಲಿ 'ಪಾನಿಪುರಿ' ಮಾರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಸೌರವ್ ಗಂಗೂಲಿ ಜೊತೆಗೆ ಪ್ರಕಾಶ್ ಭಗತ್.

ಸೌರವ್ ಗಂಗೂಲಿ ಜೊತೆಗೆ ಪ್ರಕಾಶ್ ಭಗತ್.

 • Share this:
  ಪ್ರಕಾಶ್ ಭಗತ್​ (Prakash Bhagat) ಈತ ಒಂದು ಕಾಲದಲ್ಲಿ ಅಸ್ಸಾಂ ಕ್ರಿಕೆಟ್ (Assam cricket) ತಂಡದ ಸ್ಟಾರ್​ ಆಲ್​ರೌಂಡರ್ ಎಂದು ಗುರುತಿಸಿಕೊಂಡಿದ್ದರು. ತಮ್ಮ ಪ್ರತಿಭೆಯ ಮೂಲಕ ಅಸ್ಸಾಂ ರಣಜಿ ಟ್ರೋಫಿಗೂ ತಂಡದಲ್ಲಿ ಆಯ್ಕೆಯಾಗಿದ್ದರು. ಇಂದಿನ ಬಿಸಿಸಿಐ ಅಧ್ಯಕ್ಷ ಮಾಜಿ ಭಾರತ ತಂಡದ ನಾಯಕ ಸೌರವ್ ಗಂಗೂಲಿ (Sourav Gangully) ಮತ್ತು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಜೊತೆ ಆಟವಾಡಿದ ಗರಿಮೆಯೂ ಪ್ರಕಾಶ ಭಗತ್​ಗೆ ಇದೆ. ಆದರೆ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೆರೆಯಬೇಕಾಗಿದ್ದ ಪ್ರಕಾಶ್ ಭಗತ್ ಇಂದು ಅಸ್ಸಾಂನ ಸಿಲ್ಚಾರ್ ನಲ್ಲಿ ತನ್ನ ಜೀವನೋಪಾಯಕ್ಕಾಗಿ ರಸ್ತೆ ಬದಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

  34 ವರ್ಷದ ಪ್ರಕಾಶ್ ಭಗತ್ ಎಡಗೈ ಸ್ಪಿನ್ನರ್ ಮತ್ತು ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಈಗ ಅಸ್ಸಾಂನ ಸಿಲ್ಚಾರ್ ಮುನ್ಸಿಪಲ್ ಬೋರ್ಡ್‌ನೊಳಗಿನ ಇಟ್ಖೋಲಾದ ರಸ್ತೆಬದಿಯ ಸ್ಟಾಲ್‌ನಲ್ಲಿ 'ಪಾನಿಪುರಿ' ಮಾರಾಟ ಮಾಡುತ್ತಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಭಗತ್ 2009/10 ಮತ್ತು 2010/11 ರಲ್ಲಿ ಅಸ್ಸಾಂ ತಂಡದ ಸದಸ್ಯರಾಗಿ ರೈಲ್ವೇಸ್ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡಗಳ ವಿರುದ್ಧ ರಣಜಿ ಪಂದ್ಯಗಳನ್ನು ಆಡಿದ್ದರು.

  ಪ್ರಕಾಶ್ ಭಗತ್ 2003 ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಒಂದು ತಿಂಗಳ ತರಬೇತಿಯನ್ನು ಪಡೆದಿದ್ದರು. ಅವರು NCA ಸಮಯದಲ್ಲಿದ್ದಾಗ ಆಗಿನ ನಾಯಕ ಗಂಗೂಲಿಗೆ ಬೌಲಿಂಗ್ ಮಾಡಿದ್ದರು ಮತ್ತು ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಹರಭಜನ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು.

  "ನನ್ನ ಎನ್‌ಸಿಎ ತರಬೇತಿಯ ಸಮಯದಲ್ಲಿ, ನ್ಯೂಜಿಲ್ಯಾಂಡ್‌ಗೆ ಹೋಗುವ ಭಾರತೀಯ ತಂಡವು ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಗ ನಾನು ಸೌರವ್ ಗಂಗೂಲಿಗೆ ಬೌಲಿಂಗ್ ಮಾಡಿದೆ. ಆ ಸಮಯದಲ್ಲಿ, ಸಚಿನ್ ತೆಂಡೂಲ್ಕರ್, ಜಹೀರ್ ಖಾನ್, ಹರಭಜನ್ ಸಿಂಗ್, ವೀರೇಂದ್ರ ಶೆವಾಗ್ ಮತ್ತು ಸೌರವ್ ಗಂಗೂಲಿ ಅವರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು" ಎಂದು ಭಗತ್ ತಿಳಿಸಿದ್ದಾರೆ.

  "2011 ರಲ್ಲಿ ನನ್ನ ತಂದೆ (ಗಜಧರ್ ಭಗತ್) 65 ನೇ ವಯಸ್ಸಿನಲ್ಲಿ ಭಾರೀ ಹೃದಯಾಘಾತದಿಂದ ನಿಧನರಾದ ನಂತರ ನಾನು ಅನಿವಾರ್ಯವಾಗಿ ಕ್ರಿಕೆಟ್ ಅನ್ನು ಬಿಡಬೇಕಾಯಿತು. ನನ್ನ ತಂದೆ ಮತ್ತು ಹಿರಿಯ ಸಹೋದರ ದೀಪಕ್ ಭಗತ್ ತಳ್ಳುವ ಗಾಡಿಯಲ್ಲಿ 'ಚಾಟ್ ಫುಡ್' ಮಾರುತ್ತಿದ್ದರು. ನನ್ನ ತಂದೆಯ ಮರಣದ ನಂತರ ನನ್ನ ಅಣ್ಣ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಆ ಉದ್ಯೋಗವನ್ನು ಇದೀಗ ನಾನು ಮುಂದುವರೆಸುತ್ತಿದ್ದೇನೆ "ಎಂದು ಪ್ರಕಾಶ್ ಭಗತ್ ತಿಳಿಸಿದ್ದಾರೆ.

  ಮಾಜಿ ಕ್ರಿಕೆಟಿಗ ಭಗತ್ ಇದೀಗ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ​​(ಎಸಿಎ) ಅಥವಾ ಯಾವುದೇ ಇತರ ಸಂಸ್ಥೆಯಿಂದ ಹಣಕಾಸಿನ ನೆರವು ಪಡೆದರೆ ತನ್ನ ಕ್ರಿಕೆಟ್ ವೃತ್ತಿಜೀವನವನ್ನು ಪುನರಾರಂಭಿಸಬಹುದು ಎಂದು ಹೇಳಿದ್ದಾರೆ.

  "ನನ್ನ ಕುಟುಂಬವನ್ನು ಪೋಷಿಸಲು ನಾನು ಕ್ರಿಕೆಟ್ ಆಡುವುದನ್ನು ಬಿಟ್ಟ ನಂತರ  ಖಾಸಗಿ ಮೊಬೈಲ್ ಕಂಪನಿಯನ್ನು ಸೇರಿಕೊಂಡಿದ್ದೆ. ಆದರೆ ಕೋವಿಡ್-ಪ್ರೇರಿತ ಲಾಕ್‌ಡೌನ್‌ನಿಂದಾಗಿ ನಾನು ಕಳೆದ ವರ್ಷ ನನ್ನ ಉದ್ಯೋಗವನ್ನು ಕಳೆದುಕೊಂಡಿದ್ದೇನೆ" ಎಂದು ಭಗತ್ ತಿಳಿಸಿದ್ದಾರೆ.

  1999 ರಲ್ಲಿ ಸಿಲ್ಚಾರ್ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಅಸೋಸಿಯೇಶನ್ ನ ಅಂಡರ್ -13 ಟೂರ್ನಮೆಂಟ್ ನಲ್ಲಿ ಭಗತ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಸಿದರು. ಅವರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಂಡರ್ 16, ಅಂಡರ್ 19 ಮತ್ತು ಅಂಡರ್ 23 ವಿಭಾಗಗಳಲ್ಲಿ ಹಲವಾರು ಪಂದ್ಯಾವಳಿಗಳನ್ನು ಆಡಿದ್ದಾರೆ.

  ಇದನ್ನೂ ಓದಿ: Chris Gayle Pulls Out Of IPL 2021| ಐಪಿಎಲ್​ ಟೂರ್ನಿಯಿಂದ ದಿಢೀರ್ ಹೊರ ನಡೆದ ಸ್ಟಾರ್ ಬ್ಯಾಟ್ಸ್​ಮನ್ ಕ್ರಿಸ್​ ಗೇಲ್!

  "ಕೆಳ ಹಂತದ ವಿವಿಧ ಪಂದ್ಯಗಳಲ್ಲಿ ನನ್ನ ಸ್ಥಿರ ಪ್ರದರ್ಶನಗಳು ಅಸ್ಸಾಂನ ರಣಜಿ ತಂಡದಲ್ಲಿ ಸ್ಥಾನ ಪಡೆಯಲು ನನಗೆ ಸಹಾಯ ಮಾಡಿದೆ. ನಾನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ತಂಡದಲ್ಲಿದ್ದೆ. ನಾನು ನನ್ನ ಕುಟುಂಬಕ್ಕಾಗಿ ಆರ್ಥಿಕ ಬೆಂಬಲವನ್ನು ಪಡೆದರೆ, ನಾನು ಮತ್ತೊಮ್ಮೆ ಕ್ರಿಕೆಟ್ ಮೈದಾನಕ್ಕೆ ಮರಳಲು ಉತ್ಸುಕನಾಗಿದ್ದೇನೆ. ನನ್ನ ಮಾಜಿ ತಂಡದ ಅನೇಕ ಆಟಗಾರರಿಗೆ ಸರ್ಕಾರಿ ಉದ್ಯೋಗಗಳು ಅಥವಾ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಹಣಕಾಸಿನ ನೆರವು ಸಿಕ್ಕಿತು, ಆದರೆ ಈ ಯಾವುದನ್ನೂ ಪಡೆಯಲು ಸಾಧ್ಯವಾಗಲಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
  Published by:MAshok Kumar
  First published: