ಬೆಂಗಳೂರು (ಮಾ. 17): ಆಧುನಿಕ ಕ್ರಿಕೆಟ್ ಕಾಲಘಟ್ಟದಲ್ಲಿ ಅತ್ಯಂತ ಅಗ್ರೆಸಿವ್ ಕ್ರಿಕೆಟಿಗ ಯಾರು? ಈ ಪ್ರಶ್ನೆಗೆ ಥಟ್ ಅಂತ ಹೊಳೆಯುವ ಉತ್ತರ ರನ್ ಮೆಷಿನ್ ವಿರಾಟ್ ಕೊಹ್ಲಿ. ಕ್ರಿಕೆಟ್ ಆಡುವಾಗ ಮೈದಾನದಲ್ಲಿ ಎದುರಾಳಿ ಏನಾದರೂ ಅಪ್ಪಿ ತಪ್ಪಿ ಕೆಣಕಿದರೆ ಮುಟ್ಟಿ ನೋಡುವಂತಹ ತಿರುಗೇಟು ನೀಡುವುದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಎತ್ತಿದ ಕೈ.
ಇತ್ತೀಚೆಗೆ ವೆಸ್ಟ್ ಇಂಡೀಸ್ ಎದುರಿನ ಟಿ-20 ಸರಣಿಯ ವೇಳೆ ವಿಂಡೀಸ್ ವೇಗದ ಬೌಲರ್ ಕ್ರಿಕ್ ವಿಲಿಯಮ್ಸ್ ವಿರಾಟ್ ಕೊಹ್ಲಿಯನ್ನು ಸುಖಾಸುಮ್ಮನೆ ಕೆಣಕಿ ನಂತರ ಕೈ ಸುಟ್ಟುಕೊಂಡ ಪ್ರಸಂಗವನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕದಿನ, ಟೆಸ್ಟ್ ಮತ್ತು ಟಿ-20 ಕ್ರಿಕೆಟ್ನಲ್ಲಿ ರನ್ ಮಳೆಯನ್ನೇ ಸುರಿಸುತ್ತಿರುವ ಕಿಂಗ್ ಕೊಹ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಲೇ ಇದ್ದಾರೆ. ಇದರ ಜೊತೆಗೆ ಅನೇಕ ವಿವಾದಗಳನ್ನು ಸುಖಾಸುಮ್ಮನೆ ಮೈಮೇಲೆ ಎಳೆದುಕೊಳ್ಳುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳೂ ಇವೆ. ಇದರಿಂದಲೇ ವಿರಾಟ್ ಕೊಹ್ಲಿ ಇಂದು ಎದುರಾಳಿ ಆಟಗಾರರ ಪಾಲಿಗೆ ವಿಲನ್ ರೀತಿಯಲ್ಲಿ ಬಿಂಬಿಸಲಾಗುತ್ತಿದೆಯೇನೋ?
ಭಾವಿ ಹೆಂಡತಿ ವಿನಿ ರಾಮನ್ ಜೊತೆ ಮ್ಯಾಕ್ಸ್ವೆಲ್ ಲಿಪ್-ಲಾಕ್; ಇಲ್ಲಿವೆ ಎಕ್ಸ್ಕ್ಲೂಸಿವ್ ಚಿತ್ರ
ಇದಕ್ಕೆ ಸಾಕ್ಷಿ ಕ್ರಿಕೆಟ್ ಆಸ್ಟ್ರೇಲಿಯಾ ಇತ್ತೀಚೆಗೆ ಬಿಡುಗಡೆ ಮಾಡಿರುವ ಡಾಕ್ಯುಮೆಂಟರಿಯಲ್ಲಿ ವಿರಾಟ್ ಕೊಹ್ಲಿಯನ್ನು ವಿಲನ್ ಎಂಬಂತೆ ಬಿಂಬಿಸಲಾಗಿದೆ.
2018-19 ಕ್ರಿಕೆಟ್ ಆಸ್ಟ್ರೇಲಿಯಾ ಪಾಲಿಗೆ ಮರೆಯಲಾಗದ ಸಂದಿಗ್ಧ ಕಾಲ. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸಿದ ಪ್ರಕರಣದಲ್ಲಿ ನಾಯಕ ಸ್ಟೀವ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್ ಮತ್ತು ಆರಂಭಿಕ ಆಟಗಾರ ಕ್ಯಾಮೆರೂನ್ ಬ್ಯಾಂಕ್ರಾಫ್ಟ್ ಅವರನ್ನು ರಾಷ್ಟ್ರೀಯ ತಂಡದಿಂದ ಒಂದು ವರ್ಷ ನಿಷೇಧ ಹೇರಲಾಗಿತ್ತು. ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆ ಆಸ್ಟ್ರೇಲಿಯಾ ಪಾಲಿಗೆ ಅವಮಾನಕಾರಿ ಘಟನೆಯಾಗಿತ್ತು. ಈ ಘಟನೆ ನಂತರ ಆಸ್ಟ್ರೇಲಿಯಾ ಸಾಲು ಸಾಲು ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿತ್ತು.
ಆದರೆ, 2019ರ ವಿಶ್ವಕಪ್ಗೆ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ತಮ್ಮ ಶಿಕ್ಷೆಯ ಅವಧಿ ಮುಗಿಸಿ ತಂಡಕ್ಕೆ ಮರಳಿದರು. ಇವರ ಆಗಮನದ ನಂತರ ಆಸ್ಟ್ರೇಲಿಯಾ ಮತ್ತೆ ಗೆಲುವಿನ ಲಯಕ್ಕೆ ಮರಳಿತು. ಸಾಲು ಸಾಲು ಟೆಸ್ಟ್ ಪಂದ್ಯಗಳಲ್ಲಿ ಸರಣಿಗಳಲ್ಲಿ ಜಯಗಳಿಸಿತು. ಸ್ಮಿತ್ ದ್ವಿಶತಕ ಸಿಡಿಸಿ ತಾವು ಎಂತಹ ಅಪಾಯಕಾರಿ ಆಟಗಾರ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದರು.
ಈ ಒಂದು ವರ್ಷಗಳ ಕಾಲದ ಆಸ್ಟ್ರೇಲಿಯಾ ಕ್ರಿಕೆಟ್ ಕಥೆಯನ್ನು ಹೇಳುವ ರೀತಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ "ದಿ ಟೆಸ್ಟ್" ಎಂಬ ಒಂದು ಡಾಕ್ಯುಮೆಂಟರಿಯನ್ನು ಸಿದ್ದಪಡಿಸಿದೆ. ಅಲ್ಲದೆ, ಅದನ್ನು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡಿದೆ. ಆದರೆ, ಈ ಡಾಕ್ಯುಮೆಂಟರಿಯಲ್ಲಿ ವಿರಾಟ್ ಕೊಹ್ಲಿಯನ್ನು ವಿಲನ್ ರೀತಿ ತೋರಿಸಲಾಗಿದೆ ಎಂಬ ಆರೋಪಗಳು ಇದೀಗ ಡಾಕ್ಯುಮೆಂಟರಿ ವೀಕ್ಷಕರಿಂದ ಕೇಳಿ ಬರುತ್ತಿದೆ.
ಬರಲಿದೆ ಯುವರಾಜ್ ಸಿಂಗ್ ಬಯೋಪಿಕ್ ಸಿನಿಮಾ; ಹೀರೋ ಇವರೇ ಆಗಬೇಕೆಂದ ಸಿಕ್ಸರ್ ಕಿಂಗ್
ಆಸ್ಟ್ರೇಲಿಯಾ ಕೊಹ್ಲಿಯನ್ನು ಈ ರೀತಿ ಕಟುವಾಗಿ ಟೀಕಿಸಲು ಪ್ರಮುಖ ಕಾರಣ 2018-19 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ್ದ ವೇಳೆ ಟೀಂ ಇಂಡಿಯಾ 2-1 ಅಂತರದಿಂದ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಆದರೆ, ಆ ಸರಣಿಯಲ್ಲಿ ವಿರಾಟ್ ಕೊಹ್ಲಿ ವರ್ತನೆ ಕಂಡು ಆಸ್ಟ್ರೇಲಿಯಾನ್ನರು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರಂತೆ. ಇದೇ ಕಾರಣಕ್ಕೆ ಈ ಡಾಕ್ಯುಮೆಂಟರಿಯಲ್ಲಿ ಕೊಹ್ಲಿಯನ್ನು ಟೀಕೆ ಮಾಡಲಾಗಿದೆ ಎನ್ನಲಾಗಿದೆ.
ಆಸ್ಟ್ರೇಲಿಯಾ ತಂಡದ ಕೋಚ್ ಜಸ್ಟಿನ್ ಲಾಂಗರ್ 'ದಿ ಟೆಸ್ಟ್' ಡಾಕ್ಯುಮೆಂಟರಿಯಲ್ಲಿ ಕೊಹ್ಲಿಯನ್ನು ನೇರವಾಗಿ ಟೀಕಿಸಿದ್ದಾರೆ ಎನ್ನಲಾಗಿದೆ. ಆದರೆ, ಜಂಟಲ್ಮನ್ ಗೇಮ್ ಕ್ರಿಕೆಟ್ನಲ್ಲಿ ಅಂಗಳದ ಆಚೆಗೂ ಹೀಗೆ ಡಾಕ್ಯುಮೆಂಟರಿ ಹೆಸರಿನಲ್ಲಿ ಮತ್ತೊಂದು ದೇಶದ ಆಟಗಾರನನ್ನು ಟೀಕೆ ಮಾಡುವುದು ಎಷ್ಟು ಸರಿ? ಎಂಬ ವಿಚಾರ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಬಹು ಚರ್ಚಿತ ವಿಷಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ