ಐಸಿಸಿ ನಿಯಮದ ಪ್ರಕಾರ ಪುರುಷರ ಕ್ರಿಕೆಟ್ಗೆ ಮಾನ್ಯತೆ ಪಡೆದಿರುವ ಎಲ್ಲಾ ದೇಶಗಳೂ ಕಡ್ಡಾಯವಾಗಿ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡವನ್ನೂ ಹೊಂದಿರಲೇಬೇಕು. ಇಲ್ಲದಿದ್ದರೆ, ಅಂತಹ ಪುರುಷರ ತಂಡಗಳ ಮಾನ್ಯತೆಯನ್ನು ರದ್ದು ಮಾಡಲಾಗುತ್ತದೆ.
ಅಫ್ಘಾನಿಸ್ತಾನ...ಮಧ್ಯ ಪ್ರಾಚ್ಯದ ಈ ದೇಶ ಕ್ರೀಡೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ತೀರಾ ಹಿಂದುಳಿದ ದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಇಲ್ಲಿನ ಕ್ರೀಡಾ ವಿಭಾಗದ ಅಲ್ಪ ಮಟ್ಟದಲ್ಲಿ ಸುಧಾರಿಸಿತ್ತು. ಅದರಲ್ಲೂ ಕಳೆದ 5 ವರ್ಷದಲ್ಲಿ ಅಫ್ಘನ್ ಕ್ರಿಕೆಟ್ ಮುಟ್ಟಿದ ಎತ್ತರ ಭಾರೀ ದೊಡ್ಡದು. ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ಮುಜೀಬುರ್ ರೆಹಮಾನ್ ನಂತರ ಆಟಗಾರರು ಭಾರತದ ಐಪಿಎಲ್ನಲ್ಲಿ ಆಡುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅಲ್ಲದೆ, ವಿಶ್ವದ ಎಲ್ಲಾ ಕ್ರಿಕೆಟ್ ಲೀಗ್ನಲ್ಲೂ ಈ ಮೂವರ ಹೆಸರು ಹಾಟ್ ಫೇವರಿಟ್ ಎಂದರೇ ಅತಿಶಯೋಕ್ತಿ ಅಲ್ಲ. ಆದರೆ, ಇದೀಗ ತಾಲಿಬಾನ್ನ ಆ ಒಂದು ಧೋರಣೆಯಿಂದಾಗಿ ಅಫ್ಘನ್ ಕ್ರಿಕೆಟ್ ಅಸ್ತಂಗತವಾಗಲಿದೆಯೇ? ಐಸಿಸಿ (ವಿಶ್ವಕ್ರಿಕೆಟ್ ಮಂಡಳಿ) ಅಫ್ಘನ್ ನನ್ನು ಕ್ರಿಕೆಟ್ನಿಂದ ದೂರವಿಡಲಿದೆಯೇ? ಎಂಬ ಪ್ರಶ್ನೆ ಇದೀಗ ಮೂಡಿದೆ.
ಅಕ್ಟೋಬರ್ ತಿಂಗಳಿನಿಂದ ಯುಎಇಯಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಟೂರ್ನಿಗೆ ಅಫ್ಘನ್ ಕ್ರಿಕೆಟ್ ಮಂಡಳಿ ಸಹ ರಶೀದ್ ಖಾನ್ ನಾಯಕತ್ವದಲ್ಲಿ 16 ಜನರ ತಂಡವನ್ನು ಪ್ರಕಟಿಸಿದೆ. ಈ ಮೂಲಕ ಅಫ್ಘನ್ ತಂಡ ಈ ಭಾರಿ ವಿಶ್ವಕಪ್ ಆಡುವುದು ಖಚಿತವಾಗಿದೆ. ಆದರೆ, ಭವಿಷ್ಯದಲ್ಲೂ ಅಫ್ಘನ್ ತಂಡ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದೆಯೇ? ಎಂಬ ಪ್ರಶ್ನೆಗೆ ಉತ್ತರ ಐಸಿಸಿ ತೆಗೆದುಕೊಳ್ಳುವ ಆ ಒಂದು ತೀರ್ಮಾನದಲ್ಲಿದೆ.
ಏಕೆಂದರೆ, ಐಸಿಸಿ ನಿಯಮದ ಪ್ರಕಾರ ಪುರುಷರ ಕ್ರಿಕೆಟ್ಗೆ ಮಾನ್ಯತೆ ಪಡೆದಿರುವ ಎಲ್ಲಾ ದೇಶಗಳೂ ಕಡ್ಡಾಯವಾಗಿ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡವನ್ನೂ ಹೊಂದಿರಲೇಬೇಕು. ಇಲ್ಲದಿದ್ದರೆ, ಅಂತಹ ಪುರುಷರ ತಂಡಗಳ ಮಾನ್ಯತೆಯನ್ನು ರದ್ದು ಮಾಡಲಾಗುತ್ತದೆ. ಆದರೆ, ಮತ್ತೊಂದೆಡೆ ತಾಲಿಬಾನ್ ಮಹಿಳೆಯರಿಗೆ ಕಟ್ಟುನಿಟ್ಟಿನ ಕಾನೂನು ವಿಧಿಸಿದೆ. ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದಿರಲಿ ಅವರ ಶಿಕ್ಷಣ ಮತ್ತು ಉದ್ಯೋಗಕ್ಕೂ ತಾಲಿಬಾನ್ ಕೊಳ್ಳಿ ಇಟ್ಟಿದೆ.
ತಾಲಿಬಾನ್ನ ಈ ನಡೆಯಿಂದ ಅಫ್ಘನ್ ಪುರುಷರ ಕ್ರಿಕೆಟ್ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ನವೆಂಬರ್ನಲ್ಲಿ ಐಸಿಸಿ ವಾರ್ಷಿಕ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಫ್ಘನ್ ಕ್ರಿಕೆಟ್ ಭವಿಷ್ಯದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಚರ್ಚೆಯಲ್ಲಿ ಅಫ್ಘನ್ ಪರಿಸ್ಥಿತಿ ಬಗ್ಗೆ ಚರ್ಚೆಯಾದರೆ ಅಫ್ಘನ್ ಪುರುಷರ ತಂಡವನ್ನು ಕ್ರಿಕೆಟ್ನಿಂದಲೇ ದೂರ ಇಡುವ ಸಾಧ್ಯತೆಯೂ ಇರುತ್ತದೆ. ಇದು ಸಾಧ್ಯವಾದರೆ, ಅಫ್ಘನ್ ಆಟಗಾರರು ಅಂಗಳದಿಂದ ದೂರ ಉಳಿಯಬೇಕಾಗುತ್ತದೆ. ಆದರೆ, ಐಸಿಸಿಯ ಈ ನಿರ್ಧಾರದಲ್ಲಿ ಬಿಸಿಸಿಐ ಪ್ರಭಾವವೂ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗುತ್ತಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ