ಎರಡು ದಶಕಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಬ್ಯಾಟ್ ಬೀಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ವಿಶ್ವದ ವೇಗದ ಬೌಲರ್ ಶೊಯೇಬ್ ಅಖ್ತರ್, ಮ್ಯಾಜಿಕಲ್ ಸ್ಪಿನ್ನರ್ ಶೇನ್ ವಾರ್ನ್, ಸ್ವಿಂಗ್ ಕಿಂಗ್ ವಾಸಿಂ ಅಕ್ರಂ, ಸ್ಪಿನ್ ಮೋಡಿಗಾರ ಮುತ್ತಯ್ಯ ಮುರಳೀಧರನ್, ನಿಖರ ದಾಳಿಗಾರ ಮೆಕ್ಗ್ರಾಥ್ ಅವರಂತ ಶ್ರೇಷ್ಠ ಬೌಲರುಗಳನ್ನು ಎದುರಿಸಿದ್ದಾರೆ. ಇಂತಹ ಅತಿರಥ ಮಹಾರಥರನ್ನು ಎದುರಿಸಿರುವ ಕ್ರಿಕೆಟ್ ದೇವರಿಗೆ ಪ್ರಸ್ತುತ ಬೌಲರೊಬ್ಬರನ್ನು ಎದುರಿಸುವ ಬಯಕೆ ಇದೆ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಸಚಿನ್ ಅವರಿಗೆ ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ನೀವು ಯಾವ ಬೌಲರನ್ನು ಎದುರಿಸಲು ಬಯಸುತ್ತೀರಿ ಎಂಬ ಪ್ರಶ್ನೆ ಕೇಳಲಾಗಿತ್ತು. ಅದರೊಂದಿಗೆ ಆಯ್ಕೆಗಳನ್ನು ಸಹ ನೀಡಲಾಗಿತ್ತು. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ಇಂಗ್ಲೆಂಡ್ನ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್? ಇವರಲ್ಲಿ ಯಾರು?. ಆದರೆ ಸಚಿನ್ ನೀಡಿದ ಉತ್ತರದಲ್ಲಿ ಈ ಮೂವರ ಹೆಸರುಗಳು ಇರಲಿಲ್ಲ ಎಂಬುದು ವಿಶೇಷ.
ನಾನು ಪ್ರಸ್ತುತ ಬೌಲರುಗಳಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಎದುರಿಸಲು ಬಯಸುತ್ತೇನೆ. ರಶೀದ್ ಖಾನ್ ಬೌಲಿಂಗ್ ಬಗ್ಗೆ ಅನೇಕರು ನನ್ನೊಂದಿಗೆ ಮಾತನಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಬ್ಯಾಟ್ ಬೀಸಬೇಕು ಎಂಬ ಬಯಕೆ ನನ್ನಲ್ಲಿ ಮೂಡಿತ್ತು. ಹೀಗಾಗಿ ಅವರನ್ನು ಎದುರಿಸಲು ಬಯಸುತ್ತೇನೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ರಶೀದ್ ಖಾನ್ ತಮ್ಮ ಎಸೆತಗಳನ್ನು ಆಗಾಗ್ಗೆ ಬದಲಿಸುತ್ತಾರೆ. ಗೂಗ್ಲಿ, ಲೆಗ್ ಸ್ಪಿನ್, ಟಾಪ್ ಸ್ಪಿನ್ ಎಲ್ಲವನ್ನು ಎಸೆಯುವಲ್ಲಿ ನಿಪುಣರು. ಹೀಗಾಗಿ ಅವರನ್ನು ಎದುರಿಸುವುದು ಉತ್ತಮ ಎಂದು ಸಚಿನ್ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ